ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hafiz Saeed: 26/11 ಮುಂಬೈ, ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ನ ಅಡಗುತಾಣ ಪತ್ತೆ

26/11 ಮುಂಬೈ ಭಯೋತ್ಪಾದಕ ದಾಳಿ, ಪಹಲ್ಗಾಮ್‌ ದಾಳಿಯ ಮಾಸ್ಟರ್‌ ಮೈಂಡ್‌, ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್‌ನ ಅಡುಗುತಾಣವನ್ನು ಪತ್ತೆ ಹಚ್ಚಿರುವುದಾಗಿ ಇಂಡಿಯಾ ಟುಡೇ ವೆಬ್‌ಸೈಟ್‌ ತಿಳಿಸಿದೆ. ಪಾಕಿಸ್ತಾನದ ಲಾಹೋರ್‌ನ ಜನ ನಿಬಿಡ ಪ್ರದೇಶವೊಂದರಲ್ಲಿ ಸರ್ಕಾರದ ಭದ್ರತೆಯಲ್ಲಿ ವಾಸಿಸುತ್ತಿದ್ದಾನೆ ಎಂದು ಹೇಳಿದೆ.

ಮೋಸ್ಟ್‌ ವಾಂಟೆಡ್‌ ಹಫೀಜ್ ಸಯೀದ್‌ನ ಅಡಗುತಾಣ ಪತ್ತೆ

ಹಫೀಜ್ ಸಯೀದ್‌.

Profile Ramesh B Apr 30, 2025 5:20 PM

ಇಸ್ಲಾಮಾಬಾದ್‌: ಮಹತ್ವದ ಬೆಳವಣಿಗೆಯೊಂದರಲ್ಲಿ 26/11 ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್, ಲಷ್ಕರ್-ಎ-ತೊಯ್ಬಾ (Lashkar-e-Taiba) ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್‌ (Hafiz Saeed)ನ ಅಡುಗುತಾಣವನ್ನು ಪತ್ತೆ ಹಚ್ಚಿರುವುದಾಗಿ ಇಂಡಿಯಾ ಟುಡೇ ವೆಬ್‌ಸೈಟ್‌ ತಿಳಿಸಿದೆ. ಇತ್ತೀಚೆಗೆ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ಸೂತ್ರಧಾರನೂ ಈತನೇ ಎನ್ನುವ ಸಂಶಯ ಬಲವಾಗಿದ್ದು, ಪಾಕಿಸ್ತಾನದ ಲಾಹೋರ್‌ನ ಜನ ನಿಬಿಡ ಪ್ರದೇಶವೊಂದರಲ್ಲಿ ಸರ್ಕಾರದ ಭದ್ರತೆಯಲ್ಲಿ ವಾಸಿಸುತ್ತಿದ್ದಾನೆ ಎಂದು ಇಂಡಿಯಾ ಟುಡೇ ಹೇಳಿದೆ.

ಮುಂಬೈನಲ್ಲಿ 2008ರ ನ. 26ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಯೀದ್, ಏ. 22ರಂದು 26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಹತ್ಯಾಕಾಂಡದ ಮಾಸ್ಟರ್ ಮೈಂಡ್ ಎಂದು ಶಂಕಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸಿದ ಈ ದಾಳಿಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಶಾಖೆ ರೆಸಿಸ್ಟೆನ್ಸ್ ಫ್ರಂಟ್ (TRF) ವಹಿಸಿಕೊಂಡಿತ್ತು.

ಹಫೀಜ್ ಸಯೀದ್‌ ಅಡಗು ತಾಣವನ್ನು ತೋರಿಸುವ ವಿಡಿಯೊ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Imran Khan: ಪಹಲ್ಗಾಮ್ ದಾಳಿ ಬಗ್ಗೆ ನಾಲಗೆ ಹರಿಬಿಟ್ಟ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್ ಖಾನ್

ಸಯೀದ್‌ ಅಡಗು ತಾಣ ಎಲ್ಲಿದೆ?

ಸಯೀದ್ ನಗರದ ಮಧ್ಯದಲ್ಲಿ ಸಾಮಾನ್ಯ ಜನರ ನಡುವೆ ವಾಸಿಸುತ್ತಿದ್ದಾನೆ ಎಂದು ವರದಿ ತಿಳಿಸಿದೆ. ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಹೇಗೆ, ಯಾವ ರೀತಿ ತನ್ನ ಅಡಗುತಾಣವನ್ನು ನಿರ್ಮಿಸಿಕೊಂಡಿದ್ದಾನೆ ಎಂಬುದನ್ನು ತೋರಿಸುವ ಉಪಗ್ರಹ ಚಿತ್ರಗಳು ಮತ್ತು ವಿಡಿಯೊಗಳನ್ನು ಇಂಡಿಯಾ ಟುಡೇ ಪ್ರಕಟಿಸಿದೆ. ಹಫೀಜ್‌ನನ್ನು ರಕ್ಷಿಸಲು ವೈಯಕ್ತಿಕ ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಈ ಸ್ಥಳವು 24×7 ಭದ್ರತೆಯಲ್ಲಿದೆ ಎಂದು ಮೂಲಗಳು ದೃಢಪಡಿಸಿವೆ.

ಇಂಡಿಯಾ ಟುಡೇಗೆ ಲಭ್ಯವಾದ ಉಪಗ್ರಹ ಚಿತ್ರದಲ್ಲಿ ಹಫೀಜ್‌ ಅಡಗಿರುವ 3 ಅಂತಸ್ತಿನ ಕಟ್ಟಡ ಕಂಡು ಬಂದಿದೆ. ಆತನ ನಿವಾಸವು ಮಸೀದಿ ಮತ್ತು ಮದರಸಾವನ್ನೂ ಒಳಗೊಂಡಿದೆ. ಜತೆಗೆ ಖಾಸಗಿ ಉದ್ಯಾನವನವೂ ಇಲ್ಲಿದೆ. ವಿಡಿಯೊದಲ್ಲಿ ಹಫೀಜ್‌ ಪಾಕಿಸ್ತಾನ ಸರ್ಕಾರದ ಸಂಪೂರ್ಣ ಭದ್ರತೆಯೊಂದಿಗೆ ಹೇಗೆ ಐಷರಾಮಿಯಾಗಿ ಜೀವಿಸುತ್ತಿದ್ದಾನೆ ಎನ್ನುವ ವಿಚಾರ ಬಹಿರಂಗಗೊಂಡಿದೆ. ಆರ್ಥಿಕ ವಂಚನೆ ಪ್ರಕರಣದಲ್ಲಿ ಹಫೀಜ್‌ ಜೈಲಿನಲ್ಲಿದ್ದಾನೆ ಎಂದು ಪಾಕಿಸ್ತಾನ ಹಲವು ವರ್ಷಗಳಿಂದ ಸುಳ್ಳು ಹೇಳುತ್ತಲೇ ಬಂದಿದೆ. ಇದೀಗ ಪಾಕ್‌ನ ಮುಖವಾಡ ಕಳಚಿ ಬಿದ್ದಂತಾಗಿದೆ.

ಹಫೀಜ್ ಸಯೀದ್ ಅಡಗುತಾಣದ ಬಗ್ಗೆ ಭಾರತೀಯ ಏಜೆನ್ಸಿಗಳಿಗೆ ತಿಳಿದಿದೆ ಎಂದು ಮೂಲಗಳು ಹೇಳಿದ್ದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. ಹಫೀಜ್ ಸಯೀದ್‌ನ ನಿಕಟವರ್ತಿ ಅಬು ಖತಾಲ್ ಹತ್ಯೆಯ ನಂತರ ಪಾಕಿಸ್ತಾನವು ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಿದೆ ಎಂದು ಇಂಡಿಯಾ ಟುಡೇ ಕಳೆದ ತಿಂಗಳು ವರದಿ ಮಾಡಿತ್ತು. ಪಾಕ್‌ನ ಗುಪ್ತಚರ ಸಂಸ್ಥೆ ಐಎಸ್ಐ ಕೂಡ ಸಯೀದ್‌ನ ಭದ್ರತೆಯನ್ನು ಪರಿಶೀಲಿಸಿದೆ. ಯಾವುದೇ ಸಮಾರಂಭದಲ್ಲಿ ಭಾಗವಹಿಸದಂತೆ ಸಯೀದ್‌ಗೆ ಸೂಚಿಸಲಾಗಿದೆ.

ಫಾರೂಕ್ ಅಹ್ಮದ್ ನೆರವು

ಪಹಲ್ಗಾಮ್‌ ದಾಳಿ ನಡೆಸಿದ ಪಾಕಿಸ್ತಾನ ಮೂಲದ ಭಯೋತ್ಪಾದಕರಿಗೆ ಲಷ್ಕರ್-ಎ-ತೈಬಾದ ಉನ್ನತ ಕಮಾಂಡರ್ ಫಾರೂಕ್ ಅಹ್ಮದ್ ಕೂಡ ನೆರವು ನೀಡಿದ್ದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯ ಮೂಲಗಳು ತಿಳಿಸಿವೆ. ಪ್ರಸ್ತುತ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (Pok) ಇದ್ದಾನೆ ಎನ್ನಲಾದ ಅಹ್ಮದ್, ತನ್ನ ಸ್ಲೀಪರ್ ಸೆಲ್ ನೆಟ್‌ವರ್ಕ್‌ ಮೂಲಕ ಕಳೆದ 2 ವರ್ಷಗಳಲ್ಲಿ ಕಾಶ್ಮೀರದಲ್ಲಿ ಅನೇಕ ಭಯೋತ್ಪಾದಕ ದಾಳಿಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ.