Imran Khan: ಪಹಲ್ಗಾಮ್ ದಾಳಿ ಬಗ್ಗೆ ನಾಲಗೆ ಹರಿಬಿಟ್ಟ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್
Pahalgam Attack: ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು "ದುರಂತ" ಎಂದು ಕರೆದಿರುವ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಭಾರತವು ಜವಾಬ್ದಾರಿಯುತವಾಗಿ ವರ್ತಿಸಬೇಕೆಂದು ಆಗ್ರಹಿಸಿದ್ದಾರೆ. ಭಾರತ ಆಧಾರ ರಹಿತವಾಗಿ ಪಾಕ್ ವಿರುದ್ಧ ಆರೋಪ ಹೊರಿಸುತ್ತಿದೆ ಎಂದು ನಾಲಗೆ ಹರಿಬಿಟ್ಟಿದ್ದಾರೆ.

ಇಮ್ರಾನ್ ಖಾನ್.

ಇಸ್ಲಾಮಾಬಾದ್: ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ (Pahalgam Attack) ನಡೆಸಿದ ಪಾಕ್ ಉಗ್ರರು 26 ಪ್ರವಾಸಿಗರು ಹತ್ಯೆಗೈದಿದ್ದು, ಇದರ ವಿರುದ್ಧ ಭಾರತ ಶಕ್ತವಾಗಿ ಪ್ರತಿಕ್ರಿಯಿಸುತ್ತಿದೆ. ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಇತ್ತ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು "ದುರಂತ" ಎಂದು ಕರೆದಿದ್ದಾರೆ. ಜತೆಗೆ ಭಾರತವು ಜವಾಬ್ದಾರಿಯುತವಾಗಿ ವರ್ತಿಸಬೇಕೆಂದು ಆಗ್ರಹಿಸಿದ್ದಾರೆ. ಭಾರತ ಆಧಾರರಹಿತವಾಗಿ ಪಾಕ್ ವಿರುದ್ಧ ಆರೋಪ ಹೊರಿಸುತ್ತಿದೆ ಎಂದಿದ್ದಾರೆ.
"ಪಹಲ್ಗಾಮ್ ಘಟನೆಯಲ್ಲಿ ಮುಗ್ಧ ಜನರು ಜೀವ ಕಳೆದುಕೊಂಡಿದ್ದು ತೀವ್ರ ಕಳವಳ ಉಂಟು ಮಾಡಿದೆ ಮತ್ತು ಇದು ಘೋರ ದುರಂತ. ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ" ಎಂದು ಇಮ್ರಾನ್ ಖಾನ್ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪೋಸ್ಟ್:
“Loss of human life in Pahlgam incident is deeply disturbing and tragic. I extend my deepest condolences to the victims and their families.
— Imran Khan (@ImranKhanPTI) April 29, 2025
When the False Flag Palwama Operation incident happened, we offered to extend all-out cooperation to India but India failed to produce any…
ಈ ಸುದ್ದಿಯನ್ನೂ ಓದಿ: Pak PM Shahbaz Sharif:ಭಾರತದ ಸಖತ್ ಠಕ್ಕರ್‌ಗೆ ಪಾಕ್ ವಿಲವಿಲ- ಪ್ರಧಾನಿ ಷರೀಫ್ ಆಸ್ಪತ್ರೆಗೆ ದಾಖಲು
ʼʼ2019ರಲ್ಲಿ ಪುಲ್ವಾಮಾ ದಾಳಿ ನಡೆದಾಗ ಭಾರತ ಸೂಕ್ತ ಸಾಕ್ಷ್ಯ ನೀಡಿಲಿಲ್ಲ. ಇದೀಗ ಪಹಲ್ಗಾಮ್ ದಾಳಿ ಕುರಿತು ಪಾಕಿಸ್ತಾನದ ಮೇಲೆ ಸುಳ್ಳು ಆರೋಪ ಮಾಡುತ್ತಿದೆ. ಪುಲ್ವಾಮಾ ಘಟನೆ ವೇಳೆ ನಾವು ಭಾರತಕ್ಕೆ ಸಂಪೂರ್ಣ ಸಹಕಾರವನ್ನು ನೀಡಲು ಮುಂದಾದೆವು. ಆದರೆ ಭಾರತವು ಯಾವುದೇ ದೃಢವಾದ ಪುರಾವೆಗಳನ್ನು ಒದಗಿಸಲು ವಿಫಲವಾಗಿತ್ತು. ಪಹಲ್ಗಾಮ್ ಘಟನೆಯ ನಂತರ ಮತ್ತೆ ಅದೇ ನಡೆಯುತ್ತಿದೆ. ಆತ್ಮಾವಲೋಕನ ಮತ್ತು ತನಿಖೆಯ ಬದಲು, ಮೋದಿ ಸರ್ಕಾರ ಮತ್ತೆ ಪಾಕಿಸ್ತಾನದ ಮೇಲೆ ಆರೋಪ ಹೊರಿಸುತ್ತಿದೆ" ಎಂದು ಹೇಳಿದ್ದಾರೆ.
ʼʼ1.5 ಬಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಭಾರತ ಜವಾಬ್ದಾರಿಯುತವಾಗಿ ವರ್ತಿಸಬೇಕು. ಶಾಂತಿ ನಮ್ಮ ಆದ್ಯತೆ. ಅದನ್ನು ಹೇಡಿತನ ಎಂದು ತಪ್ಪಾಗಿ ಭಾವಿಸಬಾರದು. 2019ರಲ್ಲಿ ಇಡೀ ರಾಷ್ಟ್ರದ ಬೆಂಬಲದೊಂದಿಗೆ ನನ್ನ ಸರ್ಕಾರ ಮಾಡಿದಂತೆ, ಯಾವುದೇ ಭಾರತೀಯ ದಾಳಿಗೆ ಸೂಕ್ತ ಉತ್ತರ ನೀಡುವ ಎಲ್ಲ ಸಾಮರ್ಥ್ಯಗಳನ್ನು ಪಾಕಿಸ್ತಾನ ಹೊಂದಿದೆ. ವಿಶ್ವಸಂಸ್ಥೆಯ ನಿರ್ಣಯಗಳು ಖಾತರಿಪಡಿಸಿದಂತೆ ಕಾಶ್ಮೀರಿಗಳ ಸ್ವಯಂ ನಿರ್ಣಯದ ಹಕ್ಕಿನ ಮಹತ್ವವನ್ನು ನಾನು ಯಾವಾಗಲೂ ಒತ್ತಿ ಹೇಳಿದ್ದೇನೆ" ಎಂದು ಅವರು ಹೇಳಿದ್ದಾರೆ. ವಿವಿಧ ಪ್ರಕರಣಗಳನ್ನು ಎದುರಿಸುತ್ತಿರುವ ಇಮ್ರಾನ್ ಖಾನ್ 2023ರಿಂದ ಜೈಲಿನಲ್ಲಿದ್ದಾರೆ.
"ಆರ್‌ಎಸ್‌ಎಸ್ ಸಿದ್ಧಾಂತ ಭಾರತಕ್ಕೆ ಮಾತ್ರವಲ್ಲದೆ ಅದರಾಚೆಗೂ ಗಂಭೀರ ಬೆದರಿಕೆ ಎನಿಸಿಕೊಂಡಿದೆ. 370ನೇ ವಿಧಿಯನ್ನು ಕಾನೂನುಬಾಹಿರವಾಗಿ ರದ್ದುಪಡಿಸಿದ ನಂತರ ಕಾಶ್ಮೀರದಲ್ಲಿ ಭಾರತದ ದಬ್ಬಾಳಿಕೆ ತೀವ್ರಗೊಂಡಿದೆ. ಇದು ಕಾಶ್ಮೀರಿ ಜನರ ಸ್ವಾತಂತ್ರ್ಯದ ಬಯಕೆಯನ್ನು ಮತ್ತಷ್ಟು ಹೆಚ್ಚಿಸಿದೆʼʼ ಎಂದು ಅವರು ನಾಲಗೆ ಹರಿಯಬಿಟ್ಟಿದ್ದಾರೆ.
"ಮೋದಿ ಅವರ ಯುದ್ಧೋತ್ಸಾಹ ಮತ್ತು ಪ್ರಾದೇಶಿಕ ಶಾಂತಿಗೆ ಬೆದರಿಕೆಯೊಡ್ಡುವ ಅವರ ಅಪಾಯಕಾರಿ ಮಹತ್ವಾಕಾಂಕ್ಷೆಗಳನ್ನು ಬಲವಾಗಿ ಖಂಡಿಸುತ್ತೇವೆ. ಬಾಹ್ಯ ಶತ್ರುವಿನ ವಿರುದ್ಧದ ಯುದ್ಧವನ್ನು ಗೆಲ್ಲಲು, ರಾಷ್ಟ್ರವು ಮೊದಲು ಒಂದಾಗಬೇಕುʼʼ ಎಂದು ಖಾನ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರನ್ನು ಬಲಿ ತೆಗೆದುಕೊಂಡ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಈ ದಾಳಿಯ ಹಿಂದಿನ ಪಾಕ್‌ನ ಕೈವಾಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕ್ಷಿ ಸಮೇತ ಬೆಳಕಿಗೆ ತರುವುದಾಗಿ ಭಾರತ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಕಾರ್ಯಾಚರಣೆ ಕೈಗೊಳ್ಳಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು, ಸದ್ಯ ಎರಡೂ ದೇಶಗಳ ನಡುವೆ ಯುದ್ಧದ ಕಾರ್ಮೋಡ ಕವಿದಿದೆ.