ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಮಣ್ಣು ಮುಕ್ಕಿಸಿದ ಭಾರತೀಯ ಮೂಲದ ವಕೀಲ; ತೆರಿಗೆ ವಿರುದ್ಧ ಕೋರ್ಟ್‌ನಲ್ಲಿ ವಾದಿಸಿದ ನೀಲ್ ಕತ್ಯಾಲ್ ಯಾರು?

Indian-origin American wins: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ ವಿವಾದಾತ್ಮಕ ಸುಂಕಗಳ ವಿರುದ್ಧ ನಡೆದ ಪ್ರಮುಖ ಕಾನೂನು ಹೋರಾಟದಲ್ಲಿ ಭಾರತೀಯ ಮೂಲದ ಅಮೆರಿಕ ಪ್ರಜೆ ನೀಲ್ ಕತ್ಯಾಲ್ ಪ್ರಮುಖ ಪಾತ್ರವಹಿಸಿ ಜಯ ಸಾಧಿಸಿದ್ದಾರೆ. ಈ ಐತಿಹಾಸಿಕ ತೀರ್ಪು ಅಧ್ಯಕ್ಷೀಯ ಅಧಿಕಾರಗಳ ಮಿತಿಯನ್ನು ಮತ್ತೊಮ್ಮೆ ಸ್ಪಷ್ಟಪಡಿಸುವುದರ ಜತೆಗೆ, ಸಂವಿಧಾನದ ಮಹತ್ವವನ್ನು ಎತ್ತಿ ತೋರಿಸಿದೆ.

ಟ್ರಂಪ್ ತೆರಿಗೆ ವಿರುದ್ಧದ ಕಾನೂನು ಹೋರಾಟದಲ್ಲಿ ಜಯ

ಟ್ರಂಪ್ ತೆರಿಗೆಗಳ ವಿರುದ್ಧ ವಾದಿಸಿ ಗೆದ್ದ ಭಾರತೀಯ ಮೂಲದ ಅಮೆರಿಕ ಪ್ರಜೆ ನೀಲ್ ಕತ್ಯಾಲ್ -

Priyanka P
Priyanka P Feb 21, 2026 6:41 PM

ವಾಷಿಂಗ್ಟನ್, ಫೆ. 21: ಕೆಲವು ವರ್ಷಗಳ ಹಿಂದೆ ಅಮೆರಿಕದ ಉನ್ನತ ನ್ಯಾಯಾಲಯದ ವಕೀಲರಾಗಿ ಸೇವೆ ಸಲ್ಲಿಸಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಇದೀಗ ಸುದ್ದಿಯಲ್ಲಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ವ್ಯಾಪಕ ಸುಂಕಗಳನ್ನು ರದ್ದುಪಡಿಸಿದ ಐತಿಹಾಸಿಕ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಮುಖ ವಾದಿಯಾಗಿ ಹೊರ ಹೊಮ್ಮಿದ್ದಾರೆ (Indian-origin American wins). ಅವರನ್ನು ಅಮೆರಿಕದ ಮಾಜಿ ಆ್ಯಕ್ಟಿಂಗ್ ಸಾಲಿಸಿಟರ್ ಜನರಲ್ ನೀಲ್ ಕತ್ಯಾಲ್ (Neal Katyal) ಎಂದು ಗುರುತಿಸಲಾಗಿದೆ.

ಟ್ರಂಪ್ 1977ರ ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ(IEEPA)ಯನ್ನು ಬಳಸಿಕೊಂಡು ಬಹುತೇಕ ಎಲ್ಲ ವ್ಯಾಪಾರ ಪಾಲುದಾರ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಅನ್ಯಾಯದ ಮತ್ತು ಸಂವಿಧಾನ ವಿರೋಧಿ ತೆರಿಗೆಗಳನ್ನು ವಿಧಿಸಿರುವುದನ್ನು ನೀಲ್ ಕತ್ಯಾಲ್ ವಿರೋಧಿಸಿದರು.

ನೀಲ್ ಕತ್ಯಾಲ್ ಅವರ ಹಿನ್ನೆಲೆ:



ಇಂದು ಅಮೆರಿಕದ ಸುಪ್ರಿಂ ಕೋರ್ಟ್ ನ್ಯಾಯ ಮತ್ತು ಅಮೆರಿಕದ ಜನರ ಪರವಾಗಿ ನಿಂತಿದೆ. ಇದರ ಸಂದೇಶ ಸರಳವಾಗಿದೆ. ಅಧ್ಯಕ್ಷರು ಶಕ್ತಿಶಾಲಿಗಳಾಗಿದ್ದರೂ, ನಮ್ಮ ಸಂವಿಧಾನ ಅದಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಅಮೆರಿಕದಲ್ಲಿ ಜನರ ಮೇಲೆ ತೆರಿಗೆ ವಿಧಿಸುವ ಅಧಿಕಾರವು ಕೇವಲ ಕಾಂಗ್ರೆಸ್‌ಗಷ್ಟೇ ಇದೆ ಎಂದು ತೀರ್ಪಿನ ಬಳಿಕ ನೀಲ್ ಕತ್ಯಾಲ್ ಹೇಳಿದರು.

ಮತ್ತೆ ಭಾರತ- ಪಾಕ್‌ ಕದನದ ಕುರಿತು ಡೊನಾಲ್ಡ್‌ ಟ್ರಂಪ್‌ ಹೇಳಿಕೆ; ಈ ಬಾರಿ ಹೇಳಿದ್ದೇನು?

ಈ ತೀರ್ಪನ್ನು ಸಾಂವಿಧಾನಿಕ ಮೈಲಿಗಲ್ಲು ಎಂದು ಕತ್ಯಾಲ್ ಬಣ್ಣಿಸಿದರು. ಈ ಪ್ರಕರಣ ಯಾವುದೇ ಒಬ್ಬ ಅಧ್ಯಕ್ಷನ ಬಗ್ಗೆ ಅಲ್ಲ. ಅಧ್ಯಕ್ಷೀಯ ವ್ಯವಸ್ಥೆಯ ಬಗ್ಗೆ ಆಗಿದೆ. ಸುಮಾರು 250 ವರ್ಷಗಳಿಂದ ಭದ್ರ ಆಧಾರಸ್ತಂಭವಾಗಿರುವ ಅಮೆರಿಕದ ಸುಪ್ರಿಂ ಕೋರ್ಟ್ ನಮ್ಮ ಮೂಲಭೂತ ಮೌಲ್ಯಗಳನ್ನು ರಕ್ಷಿಸಿರುವುದನ್ನು ನೋಡಿ ನನಗೆ ಸಂತೋಷವಾಗಿದೆ ಎಂದು ಕತ್ಯಾಲ್ ಹೇಳಿದ್ದಾರೆ.

ಚಿಕಾಗೋದಲ್ಲಿ ಭಾರತೀಯ ವಲಸಿಗ ವೈದ್ಯ ಮತ್ತು ಎಂಜಿನಿಯರ್‌ ದಂಪತಿಗೆ ಜನಿಸಿದ ಕತ್ಯಾಲ್, ಸಾಂವಿಧಾನಿಕ ಹೋರಾಟಗಳ ಸುತ್ತ ವೃತ್ತಿ ಜೀವನವನ್ನು ನಿರ್ಮಿಸಿದ್ದಾರೆ. ಅವರು ಡಾರ್ಟ್ಮೌತ್ ಕಾಲೇಜು ಮತ್ತು ಯೇಲ್ ಕಾನೂನು ಶಾಲೆಯ ಪದವೀಧರರಾಗಿದ್ದಾರೆ. ಅವರು ಅಮೆರಿಕ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸ್ಟೀಫನ್ ಬ್ರೇಯರ್ ಅವರ ಬಳಿ ಗುಮಾಸ್ತರಾಗಿ ಕೆಲಸ ಮಾಡಿದ್ದಾರೆ.

2010ರಲ್ಲಿ ಅಧ್ಯಕ್ಷ ಬರಾಕ್ ಒಬಾಮಾ ಅವರಿಂದ ಆ್ಯಕ್ಟಿಂಗ್ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡ ಕತ್ಯಾಲ್, ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರವ್ಯಾಪಿ ಮೇಲ್ಮನವಿ ನ್ಯಾಯಾಲಯಗಳಲ್ಲಿ ಫೆಡರಲ್ ಸರ್ಕಾರವನ್ನು ಪ್ರತಿನಿಧಿಸಿದರು. ಅಲ್ಪಸಂಖ್ಯಾತ ವಕೀಲರ ದಾಖಲೆಗಳನ್ನು ಮುರಿದು ಸುಪ್ರೀಂ ಕೋರ್ಟ್‌ನಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳನ್ನು ವಾದಿಸಿದ್ದಾರೆ.

ಪ್ರಸ್ತುತ ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ಕಾನೂನು ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿರುವ ಕತ್ಯಾಲ್, ಸಾಂವಿಧಾನಿಕ ಮತ್ತು ಸಂಕೀರ್ಣ ಮೇಲ್ಮನವಿ ಮೊಕದ್ದಮೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಅವರ ಹಿಂದಿನ ಪ್ರಕರಣಗಳಲ್ಲಿ 1965ರ ಮತದಾನದ ಹಕ್ಕು ಕಾಯ್ದೆಯ ಸಾಂವಿಧಾನಿಕತೆಯನ್ನು ಸಮರ್ಥಿಸುವುದು, ಟ್ರಂಪ್‌ ಅವರ 2017ರ ಪ್ರಯಾಣ ನಿಷೇಧವನ್ನು ಪ್ರಶ್ನಿಸುವುದು ಮತ್ತು ಪ್ರಮುಖ ಪರಿಸರ ಮತ್ತು ರಾಷ್ಟ್ರೀಯ ಭದ್ರತಾ ವಿವಾದಗಳಲ್ಲಿ ಸರ್ವಾನುಮತದ ತೀರ್ಪುಗಳನ್ನು ಗೆದ್ದಿರುವುದು ಸೇರಿದೆ.

ಕತ್ಯಾಲ್ ಅಮೆರಿಕ ನ್ಯಾಯ ಇಲಾಖೆಯ ಅತ್ಯುನ್ನತ ನಾಗರಿಕ ಗೌರವ ಎಡ್ಮಂಡ್ ರಾಂಡೋಲ್ಫ್ ಪ್ರಶಸ್ತಿಯನ್ನು ಪಡೆದಿದ್ದಾರೆ. 2017 ಮತ್ತು 2023ರಲ್ಲಿ ದಿ ಅಮೆರಿಕನ್ ಲಾಯರ್‌ನಿಂದ ವರ್ಷದ ಲಿಟಿಗೇಟರ್ ಎಂದು ಹೆಸರಿಸಲ್ಪಟ್ಟಿದ್ದಾರೆ. ಫೋರ್ಬ್ಸ್ ಅವರನ್ನು 2024 ಮತ್ತು 2025ರಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಟಾಪ್ 200 ವಕೀಲರಲ್ಲಿ ಪಟ್ಟಿ ಮಾಡಿದೆ.