ಜೋರ್ಡನ್‌ನಲ್ಲಿರುವ ಅಮೆರಿಕ ಸೇನಾ ನೆಲೆ ಮೇಲೆ ಇರಾನ್ ದಾಳಿ? F-35 ಸೇರಿ ಹಲವು ಯುದ್ಧವಿಮಾನಗಳು ಧ್ವಂಸ!
ಜೋರ್ಡನ್‌ನ ಅಲ್-ಅಜ್ರಾಕ್ ವಾಯುನೆಲೆಯಲ್ಲಿರುವ ಅಮೆರಿಕ ಸೇನಾ ವಿಭಾಗದ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿರುವುದಾಗಿ ಇರಾನ್ ಹೇಳಿಕೊಂಡಿದೆ. ಈ ದಾಳಿಯಲ್ಲಿ F-35, F-16 ಸೇರಿದಂತೆ ಹಲವು ಯುದ್ಧವಿಮಾನಗಳು ಮತ್ತು ಸೇನಾ ಉಪಕರಣಗಳು ನಾಶವಾಗಿದ್ದು, ಅಮೆರಿಕದ ಸೈನಿಕರಿಗೆ ಸಾವುನೋವು ಸಂಭವಿಸಿದೆ ಎಂದು ಇರಾನ್ ಹೇಳಿಕೊಂಡಿದೆ.
ಜೋರ್ಡನ್‌ನಲ್ಲಿ ಅಮೆರಿಕ ನೆಲೆ ಮೇಲೆ ಇರಾನ್ ದಾಳಿ -
ಟೆಹರಾನ್: ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ. ಶುಕ್ರವಾರ ಜೋರ್ಡನ್‌ನ ಪೂರ್ವ ಭಾಗದಲ್ಲಿರುವ ಅಲ್-ಅಜ್ರಾಕ್ (Al-Azraq) ವಾಯುನೆಲೆಯಲ್ಲಿನ ಅಮೆರಿಕದ ಸೇನಾ ವಿಭಾಗದ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿಕೆ ನೀಡಿದೆ.
ಇರಾನ್ ಸರ್ಕಾರಿ ಮಾಧ್ಯಮಗಳ ಪ್ರಕಾರ, ಈ ದಾಳಿಯಲ್ಲಿ ಅಮೆರಿಕದ F-16 ಹಾಗೂ F-35 ಯುದ್ಧವಿಮಾನಗಳು, ಇಂಧನ ತುಂಬುವ ಟ್ಯಾಂಕರ್ ವಿಮಾನಗಳು ಮತ್ತು ಹಲವು ಸೇನಾ ಡ್ರೋನ್‌ಗಳಿಗೆ ಭಾರೀ ಹಾನಿಯಾಗಿದೆ. ಕೆಲ ಯುದ್ಧವಿಮಾನಗಳು ಸಂಪೂರ್ಣ ನಾಶವಾಗಿದ್ದು, ವಾಯುನೆಲೆಯಲ್ಲಿನ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎಂದು ಇರಾನ್ ಹೇಳಿಕೊಂಡಿದೆ. ಅಲ್ಲದೆ, ಅಮೆರಿಕದ ಸೈನಿಕರಿಗೆ ಸಾವುನೋವು ಸಂಭವಿಸಿದೆ ಎಂಬ ದಾವೆಯನ್ನೂ ಮಾಡಿದೆ.
ದಾಳಿಯ ಬಳಿಕ ಜೋರ್ಡನ್‌ನ ಅಲ್-ಅಜ್ರಾಕ್ ಪ್ರದೇಶದಲ್ಲಿ ಭಾರೀ ಸ್ಫೋಟಗಳ ಸದ್ದು ಕೇಳಿಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋಗಳಲ್ಲಿ ಆಕಾಶದಲ್ಲಿ ಬೆಳಕಿನ ಕಿರಣಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳು ಕ್ಷಿಪಣಿಗಳನ್ನು ತಡೆಯುವ ದೃಶ್ಯಗಳು ಕಂಡುಬಂದಿವೆ. ಜೋರ್ಡನ್ ತನ್ನ ವಾಯುಪ್ರದೇಶಕ್ಕೆ ಪ್ರವೇಶಿಸಿದ್ದ ಹಲವು ಕ್ಷಿಪಣಿಗಳನ್ನು ತಡೆದಿರುವುದಾಗಿ ಹೇಳಿದರೂ, ವಾಯುನೆಲೆಗೆ ನೇರ ಹಾನಿಯಾಗಿದೆಯೇ ಎಂಬುದನ್ನು ಬಹಿರಂಗಪಡಿಸಿಲ್ಲ.
ಅಮೆರಿಕ ಮತ್ತು ಜೋರ್ಡನ್ ಈವರೆಗೆ ಇರಾನ್‌ನ ಯಾವುದೇ ಪ್ರಮುಖ ಆರೋಪಗಳನ್ನು ಅಧಿಕೃತವಾಗಿ ದೃಢಪಡಿಸಿಲ್ಲ. ಹೀಗಾಗಿ, ಯುದ್ಧವಿಮಾನಗಳ ನಾಶ ಹಾಗೂ ಅಮೆರಿಕ ಸೈನಿಕರ ಸಾವಿನ ಕುರಿತ ಮಾಹಿತಿ ಸ್ವತಂತ್ರವಾಗಿ ಪರಿಶೀಲನೆಯಾಗಿಲ್ಲ.
ಅಮೆರಿಕದ ದಾಳಿಗೆ ಪ್ರತೀಕಾರ?
ಇದಕ್ಕೂ ಕೆಲವೇ ಗಂಟೆಗಳ ಮೊದಲು ಅಮೆರಿಕ, ದಕ್ಷಿಣ ಇರಾನ್‌ನಲ್ಲಿರುವ ಸೇನಾ ತಾಣಗಳು ಹಾಗೂ ಪ್ರಮುಖ ಮೂಲಸೌಕರ್ಯಗಳ ಮೇಲೆ ಮತ್ತೊಂದು ಸುತ್ತಿನ ವಾಯುದಾಳಿ ನಡೆಸಿತ್ತು. ಹೋರ್ಮುಜ್ ಜಲಸಂಧಿಯ ಸಮೀಪದ ಪ್ರದೇಶಗಳೂ ದಾಳಿಗೆ ಗುರಿಯಾಗಿವೆ ಎಂದು ವರದಿಯಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಇರಾನ್, "ಇಸ್ಲಾಮಿಕ್ ಗಣರಾಜ್ಯದ ಮೂಲಸೌಕರ್ಯಗಳ ಮೇಲೆ ಅಮೆರಿಕ ದಾಳಿ ಮುಂದುವರಿಸಿದರೆ, ಮಧ್ಯಪ್ರಾಚ್ಯದ ಎಲ್ಲ ಅಮೆರಿಕ ಸೇನಾ ನೆಲೆಗಳೂ ಇರಾನ್‌ಗೆ ನ್ಯಾಯಸಮ್ಮತ ಗುರಿಯಾಗುತ್ತವೆ" ಎಂದು ಕಠಿಣ ಎಚ್ಚರಿಕೆ ನೀಡಿದೆ.
ಅಮೆರಿಕ-ಇರಾನ್ ನಡುವಿನ ಕದನ ವಿರಾಮ ವಿಫಲ: ಮತ್ತೆ ಮುಚ್ಚಿದ ಹೊರ್ಮುಜ್ ಜಲಸಂಧಿ, ಭಾರತಕ್ಕೆ ಇಂಧನ ಕೊರತೆಯ ಆತಂಕ
ನಾಗರಿಕ ಮೂಲಸೌಕರ್ಯಗಳ ಮೇಲೂ ದಾಳಿ ಆರೋಪ
ಅಮೆರಿಕ ನಡೆಸಿದ ಇತ್ತೀಚಿನ ದಾಳಿಯಲ್ಲಿ ವಿಮಾನ ನಿಲ್ದಾಣ, ರೈಲು ನಿಲ್ದಾಣ, ಎರಡು ಸೇತುವೆಗಳು ಸೇರಿದಂತೆ ಹಲವು ನಾಗರಿಕ ಮೂಲಸೌಕರ್ಯಗಳು ಹಾನಿಗೊಳಗಾಗಿವೆ ಎಂದು ಇರಾನ್ ಆರೋಪಿಸಿದೆ. ಈ ದಾಳಿಯಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ಓಮನ್ ಮತ್ತು ಸಿರಿಯಾದಲ್ಲೂ ದಾಳಿ
ಅಲ್-ಅಜ್ರಾಕ್ ವಾಯುನೆಲೆಯ ಮೇಲಿನ ದಾಳಿಯ ಜೊತೆಗೆ, ಓಮನ್‌ನಲ್ಲಿರುವ ಎರಡು ಅಮೆರಿಕದ ರಾಡಾರ್ ಕೇಂದ್ರಗಳು ಹಾಗೂ ಸಿರಿಯಾದ ಅಲ್-ತನ್‌ಫ್ (Al-Tanf) ಸೇನಾ ನೆಲೆಯ ಮೇಲೂ ಕ್ಷಿಪಣಿ ದಾಳಿ ನಡೆಸಿರುವುದಾಗಿ ಐಆರ್‌ಜಿಸಿ ಹೇಳಿಕೊಂಡಿದೆ. ಆದರೆ ಈ ದಾಳಿಗಳ ಪರಿಣಾಮದ ಬಗ್ಗೆ ಅಮೆರಿಕ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಸಂಘರ್ಷಕ್ಕೆ ಅಂತ್ಯ ಕಾಣದ ಸ್ಥಿತಿ
ಫೆಬ್ರವರಿಯಲ್ಲಿ ಆರಂಭವಾದ ಸಂಘರ್ಷಕ್ಕೆ ತೆರೆ ಎಳೆಯಲು ಉಭಯ ರಾಷ್ಟ್ರಗಳು ಒಂದು ತಿಂಗಳ ಹಿಂದೆ ಒಪ್ಪಂದದ ತಿಳಿವಳಿಕೆ ಪತ್ರ (MoU) ಮಾಡಿಕೊಂಡಿದ್ದರೂ, ಇತ್ತೀಚಿನ ವಾರಗಳಲ್ಲಿ ಪರಿಸ್ಥಿತಿ ಮತ್ತೆ ಉಲ್ಬಣಗೊಂಡಿದೆ. ಎರಡೂ ರಾಷ್ಟ್ರಗಳು ಪರಸ್ಪರ ಸೇನಾ ನೆಲೆಗಳು ಮತ್ತು ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಮತ್ತಷ್ಟು ಹೆಚ್ಚಾಗಿದೆ.