ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಮೆರಿಕದ ಬಲಿಷ್ಠ ಯುದ್ಧ ನೌಕೆ ಅಬ್ರಹಾಂ ಲಿಂಕನ್ ಮೇಲೆ ಇರಾನ್‌ ಕ್ಷಿಪಣಿ ದಾಳಿ; ಮುರಿದು ಬಿತ್ತಾ ಕದನ ವಿರಾಮ?

Iran launches a missile: ಯುಎಸ್ಎಸ್ ಅಬ್ರಹಾಂ ಲಿಂಕನ್ ವಿಮಾನವಾಹಕ ನೌಕೆಯ ಕಡೆಗೆ ಕ್ರೂಸ್ ಕ್ಷಿಪಣಿಯನ್ನು ಹಾರಿಸಿರುವುದಾಗಿ ಇರಾನ್ ಹೇಳಿದೆ. ಅಮೆರಿಕದ ವಿಮಾನವಾಹಕ ನೌಕೆಯ ದಿಕ್ಕಿನಲ್ಲಿ ಕರಾವಳಿ ಕ್ರೂಸ್ ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಇರಾನ್ ತಿಳಿಸಿದೆ. ಈ ಬಗ್ಗೆ ಯುಎಸ್ ಅಧಿಕಾರಿಗಳು ಯಾವುದೇ ಸ್ಪಷ್ಟಣೆ ಇನ್ನೂ ನೀಡಿಲ್ಲ.

ಯುಎಸ್ಎಸ್ ಅಬ್ರಹಾಂ ಲಿಂಕನ್ ಮೇಲೆ ಕ್ಷಿಪಣಿ ಹಾರಿಸಿದ ಇರಾನ್

ಯುಎಸ್ಎಸ್ ಅಬ್ರಹಾಂ ಲಿಂಕನ್ ನೌಕೆ -

Priyanka P
Priyanka P Mar 25, 2026 6:33 PM

ಟೆಹರಾನ್, ಮಾ.25: ಯುಎಸ್ಎಸ್ ಅಬ್ರಹಾಂ ಲಿಂಕನ್ (USS Abraham Lincoln) ವಿಮಾನವಾಹಕ ನೌಕೆಯ ಕಡೆಗೆ ಕ್ರೂಸ್ ಕ್ಷಿಪಣಿಯನ್ನು ಹಾರಿಸಿರುವುದಾಗಿ ಇರಾನ್ (Iran) ಹೇಳಿದೆ. ಆದರೆ, ಈ ಬಗ್ಗೆ ಯುಎಸ್ ಅಧಿಕಾರಿಗಳು ಯಾವುದೇ ಸ್ಪಷ್ಟಣೆ ಇನ್ನೂ ನೀಡಿಲ್ಲ. ಅಮೆರಿಕದ ವಿಮಾನವಾಹಕ ನೌಕೆಯ ದಿಕ್ಕಿನಲ್ಲಿ ಕರಾವಳಿ ಕ್ರೂಸ್ ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಇರಾನಿನ ಸೇನೆಯ ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.

ಯುಎಸ್ಎಸ್ ಅಬ್ರಹಾಂ ಲಿಂಕನ್ ನೌಕೆಯ ಮೇಲೆ ತೀವ್ರ ನಿಗಾ ಇಡಲಾಗಿದ್ದು, ಅದು ಇರಾನ್ ಪ್ರದೇಶವನ್ನು ಸಮೀಪಿಸಿದರೆ ಅದನ್ನು ಗುರಿಯಾಗಿಸಬಹುದು ಎಂದು ಇರಾನ್ ನೌಕಾಪಡೆ ಅಮೆರಿಕಕ್ಕೆ ನೇರ ಎಚ್ಚರಿಕೆ ನೀಡಿದ ನಂತರ ಈ ಬೆಳವಣಿಗೆ ಸಂಭವಿಸಿದೆ.

ವರದಿಯ ಪ್ರಕಾರ, ಇರಾನ್ ನೌಕಾಪಡೆಯ ಕಮಾಂಡರ್ ರಿಯರ್ ಅಡ್ಮಿರಲ್ ಶಹರಾಮ್ ಇರಾನಿ, ವಿಮಾನವಾಹಕ ನೌಕೆಯು ಇರಾನ್‌ನ ಕ್ಷಿಪಣಿ ವ್ಯವಸ್ಥೆಗಳ ವ್ಯಾಪ್ತಿಯನ್ನು ಪ್ರವೇಶಿಸಿದರೆ ಸೇನಾ ನೌಕಾಪಡೆಯು ಅದರ ಮೇಲೆ ದಾಳಿ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ. ಹಡಗಿನ ಮೇಲೆ ನಿರಂತರವಾಗಿ ನಿಗಾ ಇಡಲಾಗುತ್ತಿದೆ ಎಂದು ಅವರು ಹೇಳಿದರು.

"ನಿಮ್ಮ ಸೋಲನ್ನು ರಾಜತಾಂತ್ರಿಕ ಒಪ್ಪಂದವೆಂದು ಕರೆಯಬೇಡಿ"; ಟ್ರಂಪ್‌ ಹೇಳಿಕೆಗೆ ಖಡಕ್‌ ಎಚ್ಚರಿಕೆ ನೀಡಿದ ಇರಾನ್‌

ಈ ಎಚ್ಚರಿಕೆಗೆ ಜೊತೆಯಾಗಿ, ಹಿರಿಯ ಇರಾನ್ ಸೈನಿಕ ಅಧಿಕಾರಿಗಳು ಅಮೆರಿಕದ ಪ್ರಭಾವವನ್ನು ತಳ್ಳಿಹಾಕುವ ಹೇಳಿಕೆಗಳನ್ನು ನೀಡಿದ್ದಾರೆ. ಈ ಹಿಂದೆ ಅಮೆರಿಕ ಹೇಳಿಕೊಂಡಿದ್ದ ಕಾರ್ಯತಂತ್ರದ ಶಕ್ತಿ ಈಗ ಕಾರ್ಯತಂತ್ರದ ಸೋಲಾಗಿ ಮಾರ್ಪಟ್ಟಿದೆ ಎಂದು ಖತಮ್ ಅಲ್-ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಇಬ್ರಾಹಿಂ ಝೋಲ್ಫಾಕರಿ ಹೇಳಿದ್ದಾರೆ.

ಇರಾನಿನ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ನಡೆಸಲು 48 ಗಂಟೆಗಳ ಅಂತಿನ ಗಡುವು ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸಂಘರ್ಷಕ್ಕೆ ವಿರಾಮ ನೀಡುವ ಸೂಚನೆ ನೀಡಿದ್ದಾರೆ ಎನ್ನಲಾಗಿದೆ . ಅಂತಹ ಯಾವುದೇ ದಾಳಿಗೆ ಪ್ರದೇಶದಾದ್ಯಂತ ಇಂಧನ ಮತ್ತು ವಿದ್ಯುತ್ ಮೂಲಸೌಕರ್ಯಗಳ ಮೇಲೆ ಪ್ರತಿಯಾಗಿ ದಾಳಿ ನಡೆಸಲಾಗುವುದು ಎಂದು ಇರಾನ್ ಎಚ್ಚರಿಸಿದ ನಂತರ ಈ ಬದಲಾವಣೆ ಬಂದಿದೆ ಎಂದು ವರದಿಯಾಗಿದೆ.

ಅಮೆರಿಕದ ನಿಲುವಿನಲ್ಲಿನ ಬದಲಾವಣೆಗೆ ಪ್ರತಿಕ್ರಿಯಿಸಿದ ಝೋಲ್ಫಾಕರಿ, ಸ್ವಯಂ ಘೋಷಿತ ವಿಶ್ವದ ಮಹಾಶಕ್ತಿ ಈ ಸಂಕಷ್ಟದಿಂದ ಪಾರಾಗಲು ಸಾಧ್ಯವಿದ್ದರೆ, ಇಷ್ಟೊತ್ತಿಗಾಗಲೇ ಅದು ಪಾರಾಗಿರುತ್ತಿತ್ತು. ನಿಮ್ಮ ಸೋಲನ್ನು ಒಪ್ಪಂದ ಎಂದು ಕರೆಯಬೇಡಿ ಎಂದು ಹೇಳಿದರು.

ಪಶ್ಚಿಮ ಏಷ್ಯಾದಲ್ಲಿನ ದ್ವೇಷವನ್ನು ಪರಿಹರಿಸುವ ನಿಟ್ಟಿನಲ್ಲಿ ಕಳೆದ ಎರಡು ದಿನಗಳಲ್ಲಿ ಎರಡೂ ದೇಶಗಳು ಉತ್ತಮ ಮತ್ತು ರಚನಾತ್ಮಕ ಸಂಭಾಷಣೆಗಳನ್ನು ನಡೆಸಿವೆ ಎಂದು ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ ಹೇಳಿಕೊಂಡಿದ್ದರು. ಆದರೆ, ಇರಾನ್ ಮಾತ್ರ ಇದನ್ನು ತಳ್ಳಿಹಾಕಿದೆ. ಎರಡೂ ಕಡೆಯವರ ನಡುವೆ ಯಾವುದೇ ಅಧಿಕೃತ ಮಾತುಕತೆ ನಡೆದಿಲ್ಲ ಎಂದು ಟೆಹರಾನ್‌ ತಿಳಿಸಿದೆ. ಅಮೆರಿಕವನ್ನು ಅವಲಂಬಿಸುವ ಯುಗ ಮುಗಿದಿದೆ ಎಂದು ಹೇಳುವ ಮೂಲಕ ಝೋಲ್ಫಾಕರಿ ಈ ನಿಲುವನ್ನು ಪ್ರತಿಧ್ವನಿಸಿದರು.