ಅಮೆರಿಕ-ಇರಾನ್ ಒಪ್ಪಂದಕ್ಕೆ ಇಸ್ರೇಲ್‌ನಲ್ಲಿ ಭಾರಿ ವಿರೋಧ: ಡೊನಾಲ್ಡ್ ಟ್ರಂಪ್ ಘೋಷಣೆಗೆ ಸಚಿವ ಬೆನ್-ಗ್ವಿರ್ ಕಿಡಿ
US-Iran Peace Agreement: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಇರಾನ್ ಒಪ್ಪಂದಕ್ಕೆ ಇಸ್ರೇಲ್‌ನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ರಾಷ್ಟ್ರೀಯ ಭದ್ರತಾ ಸಚಿವ ಇಟಮಾರ್ ಬೆನ್-ಗ್ವಿರ್ ಈ ಒಪ್ಪಂದ ಇಸ್ರೇಲ್‌ಗೆ ಭಾದಕವಲ್ಲ ಎಂದು ಸ್ಪಷ್ಟಪಡಿಸಿದ್ದು, ದೇಶದ ಭದ್ರತೆಗೆ ಧಕ್ಕೆಯಾಗುವ ಯಾವುದೇ ಒಪ್ಪಂದವನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ) -
ಜೆರುಸಲೇಮ್, ಜೂ. 15: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇರಾನ್‌ನೊಂದಿಗೆ ಒಪ್ಪಂದ ಪೂರ್ಣಗೊಂಡಿದೆ ಎಂದು ಘೋಷಿಸಿದ ಬೆನ್ನಲ್ಲೇ ಇಸ್ರೇಲ್‌ನಲ್ಲಿ ತೀವ್ರ ರಾಜಕೀಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಚಿವ ಇಟಮಾರ್ ಬೆನ್-ಗ್ವಿರ್ (Itamar Ben-Gvir), "ಟ್ರಂಪ್ ಅವರ ಒಪ್ಪಂದ ನಮಗೆ ಅನ್ವಯವಾಗುವುದಿಲ್ಲ. ಇಸ್ರೇಲ್ ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರ" ಎಂದು ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಅವರು, "ನಾವು ಅಮೆರಿಕವನ್ನು ಗೌರವಿಸುತ್ತೇವೆ ಮತ್ತು ಟ್ರಂಪ್ ಅವರಿಗೆ ಕೃತಜ್ಞರಾಗಿದ್ದೇವೆ. ಆದರೆ ಇಸ್ರೇಲ್ ಯಾವುದೇ ಬಾಳೆಹಣ್ಣು ಗಣರಾಜ್ಯವಲ್ಲ" ಎಂದು ಹೇಳಿದ್ದಾರೆ.
ಇಸ್ರೇಲ್‌ನ ನಾಗರಿಕರು, ಸೈನಿಕರು ಮತ್ತು ದೇಶದ ಭದ್ರತೆಯೇ ತಮ್ಮ ಮೊದಲ ಕರ್ತವ್ಯ ಎಂದು ಬೆನ್-ಗ್ವಿರ್ ಒತ್ತಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದಾಗಲೆಲ್ಲ ಇಸ್ರೇಲ್ ಭಾರಿ ಬೆಲೆ ತೆತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ʼಧುರಂಧರ್ʼ ಚಿತ್ರದ ಹಾಡು ಬಳಸಿ ವಿಡಿಯೊ ಶೇರ್ ಮಾಡಿದ ಎಮ್ಯಾನುಯೆಲ್ ಮ್ಯಾಕ್ರೋನ್
ಈ ಒಪ್ಪಂದದ ಭಾಗಿಗಳಲ್ಲ
ʼʼಇಸ್ರೇಲ್‌ನ ಭದ್ರತೆಯನ್ನು ಖಚಿತಪಡಿಸದ ಯಾವುದೇ ಒಪ್ಪಂದವನ್ನು ನಾವು ಒಪ್ಪುವುದಿಲ್ಲʼʼ ಎಂದು ಹೇಳಿದ ಅವರು, ʼʼಹೆಜ್ಬೊಲ್ಲಾ ಸಂಪೂರ್ಣವಾಗಿ ನಾಶವಾಗುವವರೆಗೂ ಯಾವುದೇ ರಾಜಿ ಮಾಡಿಕೊಳ್ಳಬಾರದುʼʼ ಎಂದು ಆಗ್ರಹಿಸಿದ್ದಾರೆ.
ವಿರೋಧ ಪಕ್ಷದಿಂದಲೂ ಟೀಕೆ
ಇಸ್ರೇಲ್‌ನ ಮಾಜಿ ರಕ್ಷಣಾ ಸಚಿವ ಬೆನ್ನಿ ಗಾಂಟ್ಸ್ ಕೂಡ ಈ ಒಪ್ಪಂದದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ʼʼಲೆಬನಾನ್‌ನಲ್ಲಿ ಇಸ್ರೇಲ್‌ನ ಸೇನಾ ಕಾರ್ಯಾಚರಣೆಯ ಸ್ವಾತಂತ್ರ್ಯಕ್ಕೆ ಯಾವುದೇ ನಿರ್ಬಂಧ ಹೇರಬಾರದುʼʼ ಎಂದು ಅವರು ಹೇಳಿದ್ದಾರೆ.
ಟ್ರಂಪ್ ಘೋಷಣೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ, "ಇರಾನ್‌ನೊಂದಿಗೆ ಒಪ್ಪಂದ ಈಗ ಪೂರ್ಣಗೊಂಡಿದೆ" ಎಂದು ಘೋಷಿಸಿದ್ದಾರೆ. ಜತೆಗೆ ಅಮೆರಿಕದ ನೌಕಾ ನಿರ್ಬಂಧವನ್ನು ತೆಗೆದುಹಾಕುವುದಾಗಿ ಹಾಗೂ ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಅನುಮತಿ ನೀಡಿರುವುದಾಗಿ ತಿಳಿಸಿದ್ದಾರೆ. ಈ ಬೆಳವಣಿಗೆಯು ಇಸ್ರೇಲ್ ರಾಜಕೀಯ ವಲಯದಲ್ಲಿ ಭಿನ್ನಾಭಿಪ್ರಾಯಗಳನ್ನು ಮತ್ತಷ್ಟು ತೀವ್ರಗೊಳಿಸಿದ್ದು, ದೇಶದ ಭದ್ರತೆಗೆ ಧಕ್ಕೆಯಾಗುವ ಯಾವುದೇ ಒಪ್ಪಂದವನ್ನು ಒಪ್ಪುವುದಿಲ್ಲ ಎಂಬ ಸಂದೇಶವನ್ನು ಆಡಳಿತ ಮತ್ತು ವಿರೋಧ ಪಕ್ಷದ ನಾಯಕರು ನೀಡಿದ್ದಾರೆ.