ಫ್ರಾನ್ಸ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಗೆ ಭರ್ಜರಿ ಸ್ವಾಗತ; ʼಧುರಂಧರ್ʼ ಚಿತ್ರದ ಹಾಡು ಬಳಸಿ ವಿಡಿಯೊ ಶೇರ್ ಮಾಡಿದ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್
Emmanuel Macron: ಫ್ರಾನ್ಸ್‌ನ ನೈಸ್ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಲ್ಲಿನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಭೇಟಿಯ ಬಳಿಕ ಇಬ್ಬರೂ ನಾಯಕರು ಸೆಲ್ಫಿ ಹಂಚಿಕೊಂಡಿದ್ದು, ಭಾರತ–ಫ್ರಾನ್ಸ್ ಸಂಬಂಧಗಳು ಮತ್ತಷ್ಟು ಬಲಗೊಳ್ಳಲಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ವ್ಯಾಪಾರ, ರಕ್ಷಣಾ, ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಗೆ ಉಭಯ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ.
ಪ್ರಧಾನಿ ನರೇಂದ್ರ ಮೋದಿ - ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ -
ಪ್ಯಾರಿಸ್, ಜೂ. 15: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ (Emmanuel Macron) ನಡುವಿನ ಮಹತ್ವದ ದ್ವಿಪಕ್ಷೀಯ ಮಾತುಕತೆ ಫ್ರಾನ್ಸ್‌ನ ಸಮುದ್ರ ತೀರದ ನಗರ ನೈಸ್‌ನಲ್ಲಿ ನಡೆಯಿತು. ಫ್ರಾನ್ಸ್ ಪ್ರವಾಸದ ಮೊದಲ ಹಂತದಲ್ಲಿ ನಡೆದ ಈ ಭೇಟಿಯು ಭಾರತ–ಫ್ರಾನ್ಸ್ ಸಂಬಂಧಗಳಿಗೆ ಹೊಸ ಚೈತನ್ಯ ನೀಡಿದೆ. ಭೇಟಿಯ ಬಳಿಕ ಪ್ರಧಾನಿ ಮೋದಿ ಮ್ಯಾಕ್ರೋನ್ ಜತೆಗಿನ ಸೆಲ್ಫಿಯನ್ನು ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಹಂಚಿಕೊಂಡು, "ನೈಸ್‌ನಲ್ಲಿ ನಿಮ್ಮನ್ನು ಭೇಟಿ ಮಾಡಿದ್ದು ಸಂತೋಷ. ಮೊದಲ ಹಂತದ ಮಾತುಕತೆ ಅತ್ಯಂತ ಫಲಪ್ರದವಾಗಿತ್ತು. ಭಾರತ–ಫ್ರಾನ್ಸ್ ಸಹಭಾಗಿತ್ವ ಇನ್ನಷ್ಟು ಎತ್ತರಕ್ಕೆ ಏರಲಿದೆ" ಎಂದು ಬರೆದುಕೊಂಡಿದ್ದಾರೆ. ಮ್ಯಾಕ್ರೋನ್ ಕೂಡ ಅದೇ ಚಿತ್ರವನ್ನು "Nice" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದರು. ಮೋದಿ ಜತೆಗಿನ ವಿಡಿಯೊ ಶೇರ್ ಮಾಡಿದ ಮ್ಯಾಕ್ರೋನ್ ಇದಕ್ಕೆ ʼಧುರಂಧರ್ʼ ಚಿತ್ರದ ʼಆರಿʼ ಹಾಡು ಬಳಸಿಕೊಂಡಿದ್ದಾರೆ.
ಇಬ್ಬರು ನಾಯಕರು ನಡೆಸಿದ ಸಮಗ್ರ ಮಾತುಕತೆಯಲ್ಲಿ ರಕ್ಷಣಾ ಸಹಕಾರ, ನಾಗರಿಕ ಅಣುಶಕ್ತಿ, ಬಾಹ್ಯಾಕಾಶ, ಭದ್ರತೆ, ವ್ಯಾಪಾರ ಮತ್ತು ಹೂಡಿಕೆ, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI), ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜನರ ನಡುವಿನ ಸಂಪರ್ಕ ಸೇರಿ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಮಾತುಕತೆಯ ನಂತರ ಭಾರತ ಮತ್ತು ಫ್ರಾನ್ಸ್ ಮುಂದಿನ ಐದು ವರ್ಷಗಳಲ್ಲಿ ದ್ವಿಪಕ್ಷೀಯ ವಾರ್ಷಿಕ ವ್ಯಾಪಾರವನ್ನು ಈಗಿನ 16 ಬಿಲಿಯನ್ ಡಾಲರ್‌ನಿಂದ 32 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ಮಹತ್ವಾಕಾಂಕ್ಷಿ ಗುರಿಯನ್ನು ಘೋಷಿಸಿವೆ.
ವಿಡಿಯೊ ಇಲ್ಲಿದೆ:
ಉಭಯ ರಾಷ್ಟ್ರಗಳು ನವೋದ್ಯಮ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರ ವೃದ್ಧಿಸಲು ಹೊಸ ಇನೋವೇಷನ್ ರೋಡ್‌ಮ್ಯಾಪ್ ಹಾಗೂ ಕೃತಕ ಬುದ್ಧಿಮತ್ತೆ ಅಭಿವೃದ್ಧಿಗೆ ಜಂಟಿ ಚೌಕಟ್ಟನ್ನು ಅನಾವರಣಗೊಳಿಸಿವೆ. ಜತೆಗೆ ಉನ್ನತ ವೇಗದ ರೈಲು ಯೋಜನೆಗೆ ಸಹಕಾರ, ರಹಸ್ಯ ಮಾಹಿತಿಯ ಭದ್ರತಾ ಒಪ್ಪಂದ, ವೈಜ್ಞಾನಿಕ ಸಂಶೋಧನೆ ಮತ್ತು ಡಿಜಿಟಲ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಯೋಗ ಹೆಚ್ಚಿಸಲು ನಿರ್ಧರಿಸಲಾಗಿದೆ.
ಮಾತುಕತೆಯಿಂದ ಒಟ್ಟು 13 ಪ್ರಮುಖ ಫಲಿತಾಂಶಗಳು ಹೊರಬಂದಿದ್ದು, ಪ್ಯಾರಿಸ್ ಹಾಗೂ ನೈಸ್ ವಿಮಾನ ನಿಲ್ದಾಣಗಳಲ್ಲಿ ಭಾರತದ ಯುಪಿಐ (UPI) ಡಿಜಿಟಲ್ ಪಾವತಿ ವ್ಯವಸ್ಥೆ ವಿಸ್ತರಣೆಗೆ ಒಪ್ಪಂದವಾಗಿರುವುದು ಗಮನಾರ್ಹ. ಇದರಿಂದ ಭಾರತೀಯ ಪ್ರವಾಸಿಗರು ಮತ್ತು ಉದ್ಯಮಿಗಳಿಗೆ ಫ್ರಾನ್ಸ್‌ನಲ್ಲಿ ಡಿಜಿಟಲ್ ಪಾವತಿ ಇನ್ನಷ್ಟು ಸುಲಭವಾಗಲಿದೆ.
ಅಮೆರಿಕ-ಇರಾನ್ ಶಾಂತಿ ಒಪ್ಪಂದ ಅಂತಿಮ; ಕುಸಿದ ತೈಲದ ದರ
ಭಾರತದ 114 ರಫೇಲ್ ಯುದ್ಧ ವಿಮಾನಗಳ ಖರೀದಿ ಯೋಜನೆಯೂ ಚರ್ಚೆಯ ಪ್ರಮುಖ ಅಂಶವಾಗಿತ್ತು. ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಸಂಸ್ಥೆಯೊಂದಿಗೆ ನಡೆಯಲಿರುವ ಈ ಯೋಜನೆಯಲ್ಲಿ ಭಾರತದಲ್ಲಿ ಹೆಚ್ಚಿನ ಪ್ರಮಾಣದ ಸ್ಥಳೀಯ ಉತ್ಪಾದನೆ ಹಾಗೂ ‘ಮೇಕ್ ಇನ್ ಇಂಡಿಯಾ’ಗೆ ಉತ್ತೇಜನ ನೀಡುವ ಬಗ್ಗೆ ಒತ್ತು ನೀಡಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರ ವಾರದ ಅವಧಿಯ ಫ್ರಾನ್ಸ್–ಸ್ಲೋವಾಕಿಯಾ ಪ್ರವಾಸದ ಅಂಗವಾಗಿ ನಡೆದ ಈ ಭೇಟಿ, ಇಂಡೋ-ಪೆಸಿಫಿಕ್ ಪ್ರದೇಶದ ಭದ್ರತೆ, ಜಾಗತಿಕ ಸವಾಲುಗಳು, ಹವಾಮಾನ ಬದಲಾವಣೆ ಮತ್ತು ತಂತ್ರಜ್ಞಾನ ಸಹಭಾಗಿತ್ವದ ವಿಚಾರದಲ್ಲೂ ಉಭಯ ರಾಷ್ಟ್ರಗಳ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದೆ. ಭಾರತ–ಫ್ರಾನ್ಸ್ ವ್ಯೂಹಾತ್ಮಕ ಸಹಭಾಗಿತ್ವವನ್ನು ಹೊಸ ಹಂತಕ್ಕೆ ಕೊಂಡೊಯ್ಯುವ ಮಹತ್ವದ ಸಭೆಯಾಗಿ ಈ ಮಾತುಕತೆ ಪರಿಗಣಿಸಲಾಗಿದೆ.