ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇಸ್ರೇಲ್ ಕಾರಾಗೃಹಗಳಲ್ಲಿ ಪ್ಯಾಲೆಸ್ತೀನಿಯರ ಮೇಲೆ ಅತ್ಯಾಚಾರ ಎಸಗಲು ಶ್ವಾನಗಳ ಬಳಕೆ: ಬೆಚ್ಚಿಬೀಳಿಸುವ ವರದಿ ಬಹಿರಂಗ

ಹಮಾಸ್ ದಾಳಿಯ ಬಳಿಕ ಬಂಧಿತ ಪ್ಯಾಲೆಸ್ತೀನಿಯರ ಮೇಲೆ ಇಸ್ರೇಲ್ ಜೈಲುಗಳಲ್ಲಿ ಲೈಂಗಿಕ ಕಿರುಕುಳ, ದೈಹಿಕ ಹಿಂಸೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಬಿಡುಗಡೆಯಾದ ಕೈದಿಗಳು ಶ್ವಾನಗಳ ಬಳಕೆ ಸೇರಿ ನಡೆದ ಕ್ರೂರ ದೌರ್ಜನ್ಯಗಳ ಬಗ್ಗೆ ಆಘಾತಕಾರಿ ಹೇಳಿಕೆಗಳನ್ನು ನೀಡಿದ್ದು, ಈ ವರದಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.

ಬೆಳಕಿಗೆ ಬಂತು ಇಸ್ರೇಲ್ ಜೈಲುಗಳ ಕರಾಳ ಸತ್ಯ

ಸಾಂದರ್ಭಿಕ ಚಿತ್ರ -

Profile
Sushmitha Jain Jun 10, 2026 10:41 PM

ಜೆರುಸಲೇಂ, ಜೂ. 10: ಅಕ್ಟೋಬರ್ 2023ರ ಹಮಾಸ್ ದಾಳಿಯ ನಂತರ ಇಸ್ರೇಲ್ ಪಡೆಗಳಿಂದ ಬಂಧನಕ್ಕೊಳಗಾದ ಪ್ಯಾಲೆಸ್ತೀನಿಯರಿಗೆ ಅಲ್ಲಿನ ಜೈಲುಗಳು ಜೀವಂತ ನರಕವಾಗಿ ಮಾರ್ಪಟ್ಟಿದ್ದವು ಎಂಬ ಅತ್ಯಂತ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಈ ಬಂಧನ ಶಿಬಿರಗಳಲ್ಲಿ ಕಾವಲು ನಾಯಿಗಳು ಮತ್ತು ಕಬ್ಬಿಣದ ಕೈಕೋಳಗಳನ್ನು ಬಳಸಿ ಕೈದಿಗಳ ಮೇಲೆ ಭೀಕರ ದೌರ್ಜನ್ಯ ಎಸಗಲಾಗುತ್ತಿತ್ತು. ಅಷ್ಟೇ ಅಲ್ಲದೆ, ಪ್ಯಾಲೆಸ್ತೀನ್ ಕೈದಿಗಳ ಮಾನವ ಹಕ್ಕುಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ಅವರ ಹೆಸರಿನ ಬದಲಿಗೆ ಕೇವಲ ಸಂಖ್ಯೆಗಳನ್ನು ನೀಡಿ ಕರೆಯಲಾಗುತ್ತಿತ್ತು. ಈ ಅಮಾನವೀಯ ಪದ್ಧತಿಯನ್ನು ವಿರೋಧಿಸಿದವರ ಮೇಲೆ ಜೈಲು ಸಿಬ್ಬಂದಿ ಕ್ರೂರವಾಗಿ ಮುಗಿಬಿದ್ದು, ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಅಲ್ ಜಜೀರಾ ಸಂಸ್ಥೆಯ ಸವಿಸ್ತಾರ ತನಿಖೆಯ ಪ್ರಕಾರ, ಬಿಡುಗಡೆಯಾದ ಕೈದಿಗಳು ತಾವು ಅನುಭವಿಸಿದ ಕ್ರೂರ ಹಿಂಸೆಯನ್ನು ವಿವರಿಸಿದ್ದಾರೆ. ಹಮಾಸ್ ದಾಳಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲದಿದ್ದರೂ ತಮಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಮಾಜಿ ಕೈದಿಗಳು ಸಾಕ್ಷ್ಯ ನುಡಿದಿದ್ದಾರೆ.

ಮಾಜಿ ಕೈದಿಯೊಬ್ಬರು ಮಾತನಾಡಿ, 2024ರ ಏಪ್ರಿಲ್‌ನಲ್ಲಿ ರಂಜಾನ್ ಮುಗಿಯುವ ಸಮಯದಲ್ಲಿ, ಸುಮಾರು 12 ಸೈನಿಕರು ಮತ್ತು ಕಾವಲು ನಾಯಿಗಳು ತಮ್ಮನ್ನು ಸುತ್ತುವರಿದವು ಎಂದಿದ್ದಾರೆ. "ನಮ್ಮ ಬಟ್ಟೆಗಳನ್ನು ಬಿಚ್ಚಿ ಅತ್ಯಾಚಾರ ಮಾಡಲಾಯಿತು" ಎಂದು ನೆನಪಿಸಿಕೊಂಡ ಅವರು, ಈ ಪ್ರಕ್ರಿಯೆಯಲ್ಲಿ ಅಧಿಕಾರಿಗಳ ಆಜ್ಞೆ ಪಾಲಿಸುವ ನಾಯಿಗಳನ್ನು ಬಳಸಿಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ. "ನಾವು ಕಿರುಚುತ್ತಿದ್ದರೂ ಅವರು ನಗುತ್ತಾ ವಿಡಿಯೋ ಮಾಡುತ್ತಿದ್ದರು" ಎಂದು ಗಾಜಾ ನಿವಾಸಿ ತಿಳಿಸಿದ್ದಾರೆ. ಕಬ್ಬಿಣದ ರಾಡ್‌ಗಳು, ಲೋಹದ ಡಿಟೆಕ್ಟರ್‌ಗಳು ಮತ್ತು ಬಾಟಲಿಗಳಂತಹ ಅಪಾಯಕಾರಿ ವಸ್ತುಗಳನ್ನು ಲೈಂಗಿಕ ದೌರ್ಜನ್ಯಕ್ಕೆ ಬಳಸಲಾಗುತ್ತಿತ್ತು ಎಂದು ಅವರು ವಿವರಿಸಿದ್ದಾರೆ.

ಅತಿ ದೀರ್ಘಾವಧಿ ಸೇವೆ ಸಲ್ಲಿಸಿದ ಪ್ರಧಾನಿ; ಮೋದಿ ಸಾಧನೆಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅಭಿನಂದನೆ

ಗಾಜಾದ ಮತ್ತೊಬ್ಬ ಕಾರ್ಮಿಕ ಕೂಡ ತಮಗಾದ ಇಂತಹದೇ ಭೀಕರ ಅನುಭವವನ್ನು ಹಂಚಿಕೊಂಡಿದ್ದಾರೆ. ಮಹಿಳಾ ಅಧಿಕಾರಿಗಳು ಕೃತಕ ವಸ್ತುಗಳನ್ನು ಬಳಸಿ ಲೈಂಗಿಕ ದೌರ್ಜನ್ಯ ಎಸಗಿದ್ದನ್ನು ಅವರು ಉಲ್ಲೇಖಿಸಿದ್ದಾರೆ. ಸೈನಿಕರು ಬೆನ್ನಿನ ಮೇಲೆ ಬೂಟುಗಳನ್ನು ಇಟ್ಟು ಒತ್ತಿ ಹಿಡಿದಾಗ, ಸುತ್ತಲಿದ್ದವರು ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಾ ಚಿತ್ರೀಕರಿಸುತ್ತಿದ್ದರು. ತಮಗೆ ಈ ದಾಳಿಯ ಬಗ್ಗೆ ಏನೂ ತಿಳಿಯದು ಎಂದು ಕೈದಿಗಳು ಪದೇ ಪದೆ ಹೇಳುತ್ತಿದ್ದರೂ ಸೈನಿಕರು ಮಾತ್ರ ಅವರ ಮೇಲಿನ ಹಲ್ಲೆಯನ್ನು ನಿಲ್ಲಿಸಲಿಲ್ಲ.

2024ರಲ್ಲಿ ದಕ್ಷಿಣ ಇಸ್ರೇಲ್‌ನ ಬಂಧನ ಕೇಂದ್ರವೊಂದರಲ್ಲಿ ನಡೆದ ಅತ್ಯಾಚಾರದ ವಿಡಿಯೊ ಬಹಿರಂಗಗೊಂಡು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದಾಗಿ ಕೆಲವು ಐಡಿಎಫ್ ಸದಸ್ಯರನ್ನು ಬಂಧಿಸಿದಾಗ, ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ಪಕ್ಷದ ಸಂಸದ ಹನೋಚ್ ಮಿಲ್ವಿಡ್ಸ್ಕಿ ಹಾಗೂ ರಾಷ್ಟ್ರೀಯ ಭದ್ರತಾ ಸಚಿವ ಇತಾಮರ್ ಬೆನ್ ಗವಿರ್ ಸೇರಿದಂತೆ ಹಲವು ಬಲಪಂಥೀಯ ರಾಷ್ಟ್ರೀಯವಾದಿಗಳು ಇವರನ್ನು ಬಹಿರಂಗವಾಗಿ ಬೆಂಬಲಿಸಿದ್ದರು. ಹಮಾಸ್ ಉಗ್ರರ ವಿರುದ್ಧ ಇಂತಹ ಯಾವುದೇ ಕೃತ್ಯ ಎಸಗುವುದು ಕಾನೂನುಬದ್ಧ ಎಂದು ಅವರು ಸಮರ್ಥಿಸಿಕೊಂಡಿದ್ದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಷ್ಟೆಲ್ಲಾ ಮಾನವ ಹಕ್ಕುಗಳ ಉಲ್ಲಂಘನೆಯ ಕ್ರೌರ್ಯದ ವರದಿಗಳು ಹೊರಬಂದಿದ್ದರೂ, ಇಸ್ರೇಲ್ ಇದುವರೆಗೆ ಯಾವುದೇ ಕಠಿಣ ನಿರ್ಬಂಧಗಳನ್ನು ಎದುರಿಸಿಲ್ಲ.