ಪ್ರಧಾನಿಯಾಗಿದ್ದ ಶೇಖ್ ಹಸೀನಾಗೆ ಅವರಿಗೆ ಆಶ್ರಯ ನೀಡುವುದು ನಮ್ಮ ಕರ್ತವ್ಯವಾಗಿತ್ತು: ಸ್ಪಷ್ಟನೆ ನೀಡಿದ ಭಾರತ
2024ರಲ್ಲಿ ಭಾರತಕ್ಕೆ ಪಲಾಯನ ಮಾಡಿ ಬಂದಿದ್ದ ಶೇಖ್ ಹಸೀನಾ ಅವರು ಬಾಂಗ್ಲಾದೇಶದ ಪ್ರಧಾನಿಯಾಗಿದ್ದರು. ಅವರನ್ನು ಭಾರತೀಯ ಸೇನೆ ಹೋಗಿ ಕರೆದುಕೊಂಡು ಬಂದಿರಲಿಲ್ಲ. ಭಾರತಕ್ಕೆ ಬಂದ ಮೇಲೆ ಅವರಿಗೆ ಆಶ್ರಯ ನೀಡುವುದು ನಮ್ಮ ಕರ್ತವ್ಯವಾಗಿತ್ತು ಎಂದು ಬಾಂಗ್ಲಾದೇಶದಲ್ಲಿರುವ ಭಾರತದ ಹೈಕಮಿಷನರ್ ದಿನೇಶ್ ತ್ರಿವೇದಿ ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ಢಾಕಾ: ಶೇಖ್ ಹಸೀನಾ (Sheikh Hasina) ಅವರಿಗೆ ಆಶ್ರಯ ನೀಡುವುದು ನಮ್ಮ ಕರ್ತವ್ಯವಾಗಿತ್ತು. ಯಾಕೆಂದರೆ ಭಾರತಕ್ಕೆ ಆಗಮಿಸಿದ್ದಾಗ ಅವರು ಬಾಂಗ್ಲಾದೇಶದ ಪ್ರಧಾನಿಯಾಗಿದ್ದರು (Bangladesh prime minister) ಎಂದು ಭಾರತದ ಹೈಕಮಿಷನರ್ ದಿನೇಶ್ ತ್ರಿವೇದಿ (Dinesh Trivedi) ಹೇಳಿದ್ದಾರೆ. ಢಾಕಾದಲ್ಲಿ ಶನಿವಾರ ನಡೆದ 'ಬೇ ಆಫ್ ಬೆಂಗಾಲ್ ಕನ್ವರ್ಸೇಷನ್ 2026' (Bay of Bengal Conversation 2026) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಾಂಗ್ಲಾದೇಶದಲ್ಲಿ ಸರ್ಕಾರ ಪತನಗೊಂಡ ಬಳಿಕ ಆಗ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರು ಢಾಕಾದಿಂದ ಪಲಾಯನ ಮಾಡಿ ಭಾರತಕ್ಕೆ ಆಗಮಿಸಿದ್ದರು.
2024ರ ಆಗಸ್ಟ್ ತಿಂಗಳಲ್ಲಿ ತಮ್ಮ ದೇಶದಿಂದ ಪಲಾಯನ ಮಾಡಿದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಆಶ್ರಯ ನೀಡುವುದು ನೆರೆಯ ರಾಷ್ಟ್ರವಾಗಿ ಭಾರತದ ಕರ್ತವ್ಯವಾಗಿತ್ತು ಎಂದ ಅವರು ಆಗ ಭಾರತಕ್ಕೆ ಬೇರೆ ಆಯ್ಕೆಗಳೇ ಇರಲಿಲ್ಲಎಂದರು.
ಗಡಿಯಾಚೆಗಿನ ಒಳನುಸುಳುವಿಕೆ: ಪಾಕಿಸ್ತಾನಿ ರಾಜತಾಂತ್ರಿಕರಿಗೆ ಸಮನ್ಸ್ ಜಾರಿಗೊಳಿಸಿದ ಭಾರತ
ಅವಾಮಿ ಲೀಗ್ ನಾಯಕಿ ಹಸೀನಾ ಅವರನ್ನು ಭಾರತೀಯ ವಾಯುಪಡೆ ಅಥವಾ ಸೇನೆಯು ಭಾರತಕ್ಕೆ ಕರೆತಂದಿಲ್ಲ. ವಾಸ್ತವವನ್ನು ಒಪ್ಪಿಕೊಂಡು ನಾವು ನಮ್ಮ ಕರ್ತವ್ಯ ಮಾಡಿದೆವು. ಕೆಲವೊಮ್ಮೆ ಪರಿಸ್ಥಿತಿಗಳು ನಾವು ನಿರೀಕ್ಷಿಸದ ರೀತಿಯಲ್ಲಿರುತ್ತವೆ. ನಮಗಿದ್ದ ಆಯ್ಕೆ ಏನು? ಒಂದು ವೇಳೆ ನಾವು ಇಲ್ಲ ಅವರನ್ನು ಸ್ವೀಕರಿಸುವುದಿಲ್ಲ, ಲ್ಯಾಂಡಿಂಗ್‌ಗೆ ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದರೆ ಪರಿಸ್ಥಿತಿ ಏನಾಗುತ್ತಿತ್ತೋ ನನಗಂತೂ ತಿಳಿಯದು ಎಂದು ತಿಳಿಸಿದರು.
ಮಾಜಿ ಪ್ರಧಾನಿಯನ್ನು ಹಸ್ತಾಂತರಿಸುವಂತೆ ಢಾಕಾ ಪದೇ ಪದೇ ಮಾಡುತ್ತಿರುವ ಮನವಿಗಳಿಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ತ್ರಿವೇದಿ, ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವ ಕುರಿತು ಕಾನೂನು ಪ್ರಕ್ರಿಯೆಯ ಭಾಗವನ್ನು ಪರಿಶೀಲಿಸಲಾಗುತ್ತಿದೆ. ಅವರ ವಾಪಸಾತಿಗೆ ನವದೆಹಲಿಯು ಯಾವುದೇ ಗಡುವನ್ನು ನಿಗದಿಪಡಿಸಲು ಸಾಧ್ಯವಿಲ್ಲ. ಬಾಂಗ್ಲಾದೇಶದಲ್ಲಿನ ಪರಿಸ್ಥಿತಿಯ ಕಾರಣದಿಂದ ಅವರು ಭಾರತಕ್ಕೆ ಬಂದರು. ಇಂತಹ ಸನ್ನಿವೇಶಗಳು ಜಗತ್ತಿನ ಎಲ್ಲಿಯೂ ಮರುಕಳಿಸಬಾರದು ಎಂದು ಹೇಳಿದರು.
ಢಾಕಾದಲ್ಲಿ ನಡೆದ ಬೇ ಆಫ್ ಬೆಂಗಾಲ್ ಕನ್ವರ್ಸೇಷನ್ 2026 ಕಾರ್ಯಕ್ರಮದ ಐದನೇ ಆವೃತ್ತಿಯಲ್ಲಿ ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ ಆರಂಭಿಕ ಭಾಷಣ ಮಾಡಿದ್ದರು. ಆದರೆ ದಿನೇಶ್ ತ್ರಿವೇದಿ ಅವರು ಮಾತನಾಡಿದಾಗ ಅವರು ಅಲ್ಲಿ ಉಪಸ್ಥಿತರಿರಲಿಲ್ಲ.
ವಿದ್ಯಾರ್ಥಿ ನೇತೃತ್ವದ ಪ್ರತಿಭಟನೆಗಳ ನಡುವೆ ಶೇಖ್ ಹಸೀನಾ ಅವರು ಬಾಂಗ್ಲಾದೇಶದಿಂದ ಪಲಾಯನ ಮಾಡಿ ಬಂದು ಭಾರತದಲ್ಲಿ ವಾಸಿಸುತ್ತಿದ್ದಾರೆ. ಬಳಿಕ ಅಧಿಕಾರಕ್ಕೆ ಬಂಡ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಅವರನ್ನು ಹಸ್ತಾಂತರಿಸುವಂತೆ ಕೋರಿತ್ತು. ಇದರ ಬಳಿಕ ಚುನಾವಣೆ ನಡೆದು ಅಧಿಕಾರಕ್ಕೆ ಬಂದ ರೆಹಮಾನ್ ನೇತೃತ್ವದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಕೂಡ ಭಾರತಕ್ಕೆ ಈ ಬೇಡಿಕೆಯನ್ನು ಇರಿಸಿದೆ.
ಅನುಮತಿ ನಿರಾಕರಿಸಿದರೂ ಮುಂಬೈ ಶಿವಾಜಿ ಪಾರ್ಕ್‌ನಲ್ಲಿ ಪ್ರತಿಭಟನೆ: ಸಿಜೆಪಿ ನಾಯಕರ ವಿರುದ್ಧ ಪ್ರಕರಣ
ಶೇಖ್ ಹಸೀನಾ ಅವರು ಭಾರತದಲ್ಲಿ ಇರುವುದರಿಂದ ಎರಡು ರಾಷ್ಟ್ರಗಳ ಸಂಬಂಧಗಳ ಮೇಲೆ ಪರಿಣಾಮ ಬಿದ್ದಿದೆ. ಈ ವರ್ಷದ ಆರಂಭದಲ್ಲಿ ತಾರಿಕ್ ರೆಹಮಾನ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ ಸ್ವಲ್ಪ ಸುಧಾರಣೆ ಕಾಣುತ್ತಿದೆ. ಶೇಖ್ ಹಸೀನಾ ಅವರು ಕಳೆದ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳುವ ಕುರಿತು ಘೋಷಣೆ ಮಾಡಿದ್ದು ಅಲ್ಲಿ ಅವರು ತೆರಳಿದ ಮೇಲೆ ವಿಚಾರಣೆಗೆ ಒಳಪಡಬೇಕಾಗುವುದು. ಈಗಾಗಲೇ ನ್ಯಾಯಾಲಯವು ಅವರಿಗೆ ಮರಣದಂಡನೆಯನ್ನು ವಿಧಿಸಿದೆ.