ಟಿಬೆಟ್ನಲ್ಲಿ ಭಾರೀ ಭೂಕಂಪ: 18 ಮಂದಿ ಸಾವು, 300ಕ್ಕೂ ಹೆಚ್ಚು ಮನೆಗಳು ಕುಸಿತ
ನೇಪಾಳ- ಟಿಬೆಟ್ ಗಡಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಬಳಿಕ ಇದೀಗ ಟಿಬೆಟ್ನಲ್ಲಿ 7.0 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಇದರ ಪರಿಣಾಮ 18 ಮಂದಿ ಸಾವನ್ನಪ್ಪಿದ್ದು, 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 300ಕ್ಕೂ ಹೆಚ್ಚು ಮನೆಗಳು ಕುಸಿತವಾಗಿದೆ.
ಸಂಗ್ರಹ ಚಿತ್ರ -
ಟಿಬೆಟ್: ಚೀನಾ ಮತ್ತು ನೇಪಾಳದ ಗಡಿ ಭಾಗದಲ್ಲಿರುವ ಟಿಬೆಟ್ನಲ್ಲಿ ಗುರುವಾರ ರಾತ್ರಿ ತೀವ್ರ ಭೂಕಂಪ ಸಂಭವಿಸಿದೆ. 18 ಮಂದಿ ಸಾವನ್ನಪ್ಪಿದ್ದು, 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 300ಕ್ಕೂ ಹೆಚ್ಚು ಮನೆಗಳು ಕುಸಿತವಾಗಿದೆ. ಭೂಕಂಪದ ಕೇಂದ್ರಬಿಂದು ಉತ್ತರ ಟಿಬೆಟ್ನ 'ನಾಗ್ಕು' ಪ್ರದೇಶದ ಸುಮಾರು 10 ಕಿ.ಮೀ ಆಳವಾಗಿತ್ತು. ಭೂಕಂಪನದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆಗಾಗಿ 300ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಸ್ಥಳೀಯಾಡಳಿತ ತಿಳಿಸಿದೆ.
ಟಿಬೆಟ್ ಪ್ರದೇಶದಲ್ಲಿ ಉಂಟಾದ ಭೂಕಂಪನದ ತೀವ್ರತೆ 7.0 ಆಗಿದೆ. ಈ ಕುರಿತು ಮಾಹಿತಿ ನೀಡಿರುವ ಯುಎಸ್ ಜಿಯೋಲಾಜಿಕಲ್ ಸರ್ವೆ, ಭೂಕಂಪವು ಗುರುವಾರ ರಾತ್ರಿ 10.33ಕ್ಕೆ ಸಂಭವಿಸಿದೆ. ಇದರ ಕೇಂದ್ರಬಿಂದುವು ನಾಗ್ಕುಗೆ ಪೂರ್ವ-ಈಶಾನ್ಯ ದಿಕ್ಕಿನಲ್ಲಿ ಸುಮಾರು 190 ಕಿ.ಮೀ ದೂರದಲ್ಲಿರುವ ಪರ್ವತ ಪ್ರದೇಶದಲ್ಲಿದೆ. ಇದು ಪ್ರಾದೇಶಿಕ ರಾಜಧಾನಿ ಲಾಸಾದಿಂದ ಈಶಾನ್ಯಕ್ಕೆ 390 ಕಿ.ಮೀ. ದೂರದಲ್ಲಿದೆ ಎಂದು ಹೇಳಿದೆ.
ಫ್ರಾನ್ಸ್ನಲ್ಲಿ ಉಗ್ರ ಪ್ರತಿಭಟನೆ: ಪಕ್ಕದಲ್ಲೇ ಬೆಂಕಿ ಹೊತ್ತಿ ಉರಿಯುತ್ತಿದ್ದರೂ ಕ್ಯಾರೇ ಎನ್ನದೆ ಕಾಫಿ ಸವಿದ ಜೋಡಿ
ಚೀನಾ ಸೆಂಟ್ರಲ್ ಟೆಲಿವಿಷನ್ ನೀಡಿರುವ ವರದಿ ಪ್ರಕಾರ ಟಿಬೆಟ್ನಲ್ಲಿ ಗುರುವಾರ ರಾತ್ರಿ ಉಂಟಾದ ಭೂಕಂಪನದಿಂದಾಗಿ 46 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ 11 ಮಂದಿಯ ಸ್ಥಿತಿ ಗಂಭೀರವಾಗಿದೆ. 339 ಮನೆಗಳು ಕುಸಿದಿವೆ. ಟಿಬೆಟ್ ಪ್ರಾದೇಶಿಕ ವಿಪತ್ತು ತಡೆಗಟ್ಟುವಿಕೆ, ಅಪಾಯ ತಗ್ಗಿಸುವಿಕೆ ಮತ್ತು ಪರಿಹಾರ ಸಮಿತಿಯು ತುರ್ತು ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಹೇಳಿದೆ.
JUST IN: At least 16 dead, 32 injured and hundreds of homes collapsed after a magnitude 7.0 earthquake struck Tibet, China, officials say. https://t.co/2nTZ5BL4CU
— Scope Report (@ScopeReport_) October 22, 2026
ಟಿಬೆಟ್ ನಲ್ಲಿ ಭೂಕಂಪ ಉಂಟಾದ ವೇಳೆಯಲ್ಲಿ ಚೀನಾದಲ್ಲಿ 5.2 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ. ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಲಜಿ ನೀಡಿರುವ ಮಾಹಿತಿ ಪ್ರಕಾರ ಇದು ಸ್ಥಳೀಯ ಕಾಲಮಾನ ಗುರುವಾರ ರಾತ್ರಿ 8.29ಕ್ಕೆ ಉಂಟಾಗಿದೆ. ಇದರ ಕೇಂದ್ರ ಬಿಂದು ಅರುಣಾಚಲ ಪ್ರದೇಶದ ಪಾಂಗಿನ್ನಿಂದ ಉತ್ತರ-ವಾಯುವ್ಯಕ್ಕೆ ಸುಮಾರು 505 ಕಿ.ಮೀ ದೂರದಲ್ಲಿ, 15 ಕಿ.ಮೀ ಆಳದಲ್ಲಿ ದಾಖಲಾಗಿದೆ.
ಈ ಹಿಂದೆ 2025ರ ಜನವರಿಯಲ್ಲಿ ಟಿಬೆಟ್ನ ಗ್ರಾಮೀಣ ಟಿಂಗ್ರಿ ಕೌಂಟಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ ಸುಮಾರು 126 ಮಂದಿ ಸಾವನ್ನಪ್ಪಿದ್ದರು. ಅದರ ಬಳಿಕ ಕಳೆದ ಆಗಸ್ಟ್ ತಿಂಗಳಲ್ಲಿ ನೇಪಾಳ-ಟಿಬೆಟ್ ಗಡಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ 1,400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಟಿಬೆಟ್ ನಲ್ಲಿ ಉಂಟಾಗಿರುವ ಭೂಕಂಪನದ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ಭೂಕಂಪ ಸಂಭವಿಸಿದಾಗ ರೆಸ್ಟೋರೆಂಟ್ಗಳಿಂದ ಜನರು ಹೊರಗೆ ಓಡಿಹೋಗುತ್ತಿರುವುದು ಮತ್ತು ಸೂಪರ್ ಮಾರ್ಕೆಟ್ಗಳಲ್ಲಿ ಕಪಾಟುಗಳ ಮೇಲಿದ್ದ ವಸ್ತುಗಳು ಕೆಳಗೆ ಬೀಳುತ್ತಿರುವುದನ್ನು ಕಾಣಬಹುದಾಗಿದೆ.