ಇಸ್ರೇಲ್ ಸ್ವಾತಂತ್ರ್ಯೋತ್ಸವಕ್ಕೆ ನರೇಂದ್ರ ಮೋದಿ, ಕ್ಯಾಪ್ಟನ್ ಸ್ಮಿತ್ ಮಚ್ಚಾರ್ಗೆ ಆಹ್ವಾನ ನೀಡಿದ ಬೆಂಜಮಿನ್ ನೆತನ್ಯಾಹು
Benjamin Netanyahu: ಬೆಂಜಮಿನ್ ನೆತನ್ಯಾಹು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಯಂದು ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಅವರೊಂದಿಗೆ ಸಾಂಕೇತಿಕ ಜ್ಯೋತಿ ಬೆಳಗಿಸಲು ಆಹ್ವಾನಿಸಿದ್ದಾರೆ. ಉಭಯ ನಾಯಕರು ದೂರವಾಣಿ ಮಾತುಕತೆ ನಡೆಸಿ ಭಾರತ–ಇಸ್ರೇಲ್ ಸಂಬಂಧಗಳು ಹಾಗೂ ಪಶ್ಚಿಮ ಏಷ್ಯಾದ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ.
ಜೆರುಸಲೇಂ, ಅ. 22: ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆ (Israel Independence Day) ಸಂದರ್ಭದಲ್ಲಿ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಅವರೊಂದಿಗೆ ಸಾಂಕೇತಿಕ ಜ್ಯೋತಿ ಬೆಳಗಿಸುವಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಆಹ್ವಾನ ನೀಡಿದ್ದಾರೆ. ಗುರುವಾರ (ಅಕ್ಟೋಬರ್ 22) ಉಭಯ ನಾಯಕರು ದೂರವಾಣಿ ಮಾತುಕತೆ ನಡೆಸಿದ್ದು, ಭಾರತ–ಇಸ್ರೇಲ್ ಸಂಬಂಧಗಳ ಬಲವರ್ಧನೆ ಹಾಗೂ ಪಶ್ಚಿಮ ಏಷ್ಯಾದ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ.
ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಸೆಪ್ಟೆಂಬರ್ 30ರಂದು ದುಬೈಯಿಂದ ಇಸ್ರೇಲ್ನ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದಿದ್ದ ಘಟನೆಯ ವೇಳೆ ಧೈರ್ಯ ಪ್ರದರ್ಶಿಸಿದ್ದರು. ವಿಮಾನದಲ್ಲಿ 174 ಪ್ರಯಾಣಿಕರಿದ್ದರು. ಸಹ-ಪೈಲಟ್ ವಿಮಾನವನ್ನು ಅಪಹರಿಸಲು ಅಥವಾ ಅಪಘಾತಕ್ಕೀಡು ಮಾಡಲು ಯತ್ನಿಸಿ ಮಚ್ಚಾರ್ ಅವರ ಮೇಲೆ ಕಾಕ್ಪಿಟ್ನಲ್ಲಿ ಹಲ್ಲೆ ನಡೆಸಿದ್ದ.
ನರೇಂದ್ರ ಮೋದಿ ಅವರ ಎಕ್ಸ್ ಪೋಸ್ಟ್:
Received a phone call from Israeli Prime Minister Benjamin Netanyahu. We reviewed the sustained momentum in our bilateral ties and reaffirmed our commitment to further strengthening our partnership. We also exchanged views on recent developments in West Asia and underscored the urgent need to restore peace and stability in the region. @netanyahu
— Narendra Modi (@narendramodi) October 22, 2026
ಗಂಭೀರ ಗಾಯಗಳ ನಡುವೆಯೂ ಮಚ್ಚಾರ್ ಕಾಕ್ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ ಇತರ ಸಿಬ್ಬಂದಿ ಮತ್ತು ಪ್ರಯಾಣಿಕರು ಒಳನುಗ್ಗಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದರು. ಬಳಿಕ ವಿಮಾನವನ್ನು ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿ ಇಸ್ರೇಲ್ ತಲುಪಿದರು. ಪ್ರಸ್ತುತ ಮಚ್ಚಾರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಧೈರ್ಯವನ್ನು ಮೆಚ್ಚಿರುವ ನೆತನ್ಯಾಹು, ಇಸ್ರೇಲ್ ಸ್ವಾತಂತ್ರ್ಯ ದಿನದ ಸಮಾರಂಭದಲ್ಲಿ ಅವರಿಗೆ ಗೌರವ ಸಲ್ಲಿಸುವ ಮುಂದಾಗಿದ್ದಾರೆ.
ಟೈಗರ್ ಶ್ರಾಫ್ ಮೇಲೆ ದಾಳಿ ನಡೆಸಿದ ಆರೋಪಿ ಪಿಸ್ತೂಲ್, ಬ್ಯಾಗ್ ಹಿಡಿದು ಹೊಟೇಲ್ನಿಂದ ಹೊರಬಂದ ವಿಡಿಯೊ ವೈರಲ್
ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟ: ಮೋದಿ
ಮಾತುಕತೆಯ ಬಳಿಕ ನೆತನ್ಯಾಹು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪ್ರಧಾನಿ ಮೋದಿ ಆಹ್ವಾನಕ್ಕೆ ಧನ್ಯವಾದ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಭೂಮಿಯ ಮೇಲೆಯೂ ಆಕಾಶದಲ್ಲಿಯೂ ಭಾರತ ಮತ್ತು ಇಸ್ರೇಲ್ ಭಯೋತ್ಪಾದನೆ ವಿರುದ್ಧ ಒಟ್ಟಾಗಿ ಹೋರಾಡುತ್ತಿವೆ ಎಂಬ ಸಂದೇಶವನ್ನು ಮೋದಿ ನೀಡಿದ್ದಾರೆ ಎಂದು ನೆತನ್ಯಾಹು ಹೇಳಿದ್ದಾರೆ.
ಇದೇ ವೇಳೆ, ಉಭಯ ದೇಶಗಳ ನಡುವಿನ ದಶಕಗಳಷ್ಟು ಹಳೆಯ ಸ್ನೇಹ ಮತ್ತು ಬಲವಾದ ಸಂಬಂಧಗಳನ್ನು ಇಬ್ಬರೂ ನಾಯಕರು ಸ್ಮರಿಸಿದ್ದಾರೆ.
ಪಶ್ಚಿಮ ಏಷ್ಯಾದ ಪರಿಸ್ಥಿತಿ ಕುರಿತು ಚರ್ಚೆ
ಮಾತುಕತೆಯಲ್ಲಿ ಭಾರತ–ಇಸ್ರೇಲ್ ನಡುವಿನ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಉಭಯ ನಾಯಕರು ಬದ್ಧತೆ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಇತ್ತೀಚಿನ ಬೆಳವಣಿಗೆಗಳು ಹಾಗೂ ಆ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸುವ ತುರ್ತು ಅಗತ್ಯದ ಬಗ್ಗೆಯೂ ಚರ್ಚಿಸಿದ್ದಾರೆ.
ಸಮಸ್ಯೆಗಳಿಗೆ ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂಬ ಭಾರತದ ನಿಲುವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ. ಎರಡೂ ದೇಶಗಳ ನಡುವಿನ ಸಹಕಾರವನ್ನು ಮುಂದುವರಿಸುವುದರ ಜೊತೆಗೆ, ಪ್ರಾದೇಶಿಕ ಪರಿಸ್ಥಿತಿಗಳ ಕುರಿತು ಸಂಪರ್ಕದಲ್ಲಿರಲು ನಾಯಕರು ಒಪ್ಪಿಕೊಂಡಿದ್ದಾರೆ.