ಪಾಕಿಸ್ತಾನ ಜತೆಗಿನ ಸ್ನೇಹದಿಂದ ಭಾರತದ ಹಿತಾಸಕ್ತಿಗೆ ಧಕ್ಕೆಯಿಲ್ಲ: ಅಮೆರಿಕದ ನಿಲುವು ಸ್ಪಷ್ಟಪಡಿಸಿದ ಮಾರ್ಕೊ ರೂಬಿಯೋ
Marco Rubio: ಪಾಕಿಸ್ತಾನದ ಜತೆಗಿನ ಸಂಬಂಧವನ್ನು ಉತ್ತಮಗೊಳಿಸಿದರೂ ಅದರಿಂದ ಭಾರತದೊಂದಿಗಿನ ಸ್ನೇಹ ಮತ್ತು ಸಹಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಹೇಳಿದ್ದಾರೆ. ಪಾಕಿಸ್ತಾನ ಸೇರಿ ವಿಶ್ವಾದ್ಯಂತ ದೇಶಗಳೊಂದಿಗೆ ಸಂಬಂಧವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ರೂಬಿಯೋ ಹೇಳಿದರು.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ -
ನವದೆಹಲಿ, ಅ. 22: ಪಾಕಿಸ್ತಾನದ (Pakistan) ಜತೆಗಿನ ಸಂಬಂಧವನ್ನು ಉತ್ತಮಗೊಳಿಸಿದರೂ, ಅದರಿಂದ ಭಾರತದೊಂದಿಗಿನ ಸ್ನೇಹ ಮತ್ತು ಸಹಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ (Marco Rubio) ಹೇಳಿದ್ದಾರೆ. ಭಯೋತ್ಪಾದನೆಯ ವಿಚಾರದಲ್ಲಿ ಭಾರತ ಮತ್ತು ಅಮೆರಿಕ ಎರಡೂ ಒಂದೇ ರೀತಿಯ ಕಳವಳಗಳನ್ನು ಹೊಂದಿವೆ ಎಂದು ಅವರು ಒತ್ತಿ ಹೇಳಿದ್ದಾರೆ. ಪ್ರಸ್ತುತ ಭಾರತ ಪ್ರವಾಸದಲ್ಲಿರುವ ರೂಬಿಯೋ ಮುಂಬೈಯ ತಾಜ್ ಮಹಲ್ ಪ್ಯಾಲೇಸ್ ಹೊಟೇಲ್‌ನಲ್ಲಿ ಈ ಹೇಳಿಕೆ ನೀಡಿದ್ದಾರೆ. 2008ರ ನವೆಂಬರ್ 26ರಂದು ನಡೆದ 26/11 ಭಯೋತ್ಪಾದಕ ದಾಳಿಯಲ್ಲಿ ಭಯೋತ್ಪಾದಕರ ಗುರಿಯಾಗಿದ್ದ ಸ್ಥಳಗಳಲ್ಲಿ ಈ ಹೊಟೇಲ್ ಕೂಡ ಒಂದಾಗಿತ್ತು.
ಅಮೆರಿಕವು ಪಾಕಿಸ್ತಾನದ ಜತೆ ಉತ್ತಮ ಸಂಬಂಧ ಬೆಳೆಸುತ್ತಿದೆ. ಆದರೆ ಪಾಕಿಸ್ತಾನದ ಜತೆಗಿನ ಈ ಸ್ನೇಹದಿಂದ ಭಯೋತ್ಪಾದನೆಯ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ಯಾವುದೇ ತೊಂದರೆಯಾಗಬಾರದು. ಇದನ್ನು ಅಮೆರಿಕ ಹೇಗೆ ಖಾತ್ರಿಪಡಿಸುತ್ತದೆ ಎಂಬ ಪ್ರಶ್ನೆಗೆ ಮಾರ್ಕೊ ರೂಬಿಯೋ ಈ ಹೇಳಿಕೆ ನೀಡಿದ್ದಾರೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಜತೆಗಿನ ಸಂದರ್ಶನ:
Journalist: You once promised to cut US security aid to Pakistan if it sponsored terrorism against India Rubio: We're against anybody who sponsors terrorism. In the case of Pakistan, it's a country that we have to have a relationship with https://t.co/ZAcrIj3F8O
— Shashank Mattoo (@MattooShashank) October 20, 2026
ಪಾಕಿಸ್ತಾನ ಸೇರಿ ವಿಶ್ವದಾದ್ಯಂತದ ದೇಶಗಳೊಂದಿಗೆ ಸಂಬಂಧವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ರೂಬಿಯೋ ಹೇಳಿದರು. ಪಾಕಿಸ್ತಾನದೊಂದಿಗೆ ಅಮೆರಿಕ ಉತ್ತಮ ಸಂಬಂಧವನ್ನು ಮುಂದುವರಿಸುವುದರಿಂದ, ಪಾಕಿಸ್ತಾನಕ್ಕೆ ಸಂಬಂಧಿಸಿದ ಹಲವು ವಿಷಯಗಳ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ಅಮೆರಿಕಕ್ಕೆ ಹೆಚ್ಚಿನ ಅವಕಾಶ ಸಿಗುತ್ತದೆ ಎಂದು ಅವರು ವಾದಿಸಿದರು.
ಅಂತಿಮ ಹಂತದಲ್ಲಿ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ; ಇದು ಹಿಂದಿಗಿಂತ ಭಿನ್ನ ಎಂದ ಡೊನಾಲ್ಡ್ ಟ್ರಂಪ್
ಭಾರತ ಮತ್ತು ಪಾಕಿಸ್ತಾನದೊಂದಿಗಿನ ಅಮೆರಿಕದ ಸಂಬಂಧಗಳು ನೆರೆಹೊರೆಯ ದೇಶಗಳ ನಡುವಿನ ಉದ್ವಿಗ್ನತೆಗಳು ವ್ಯಾಪಕ ಸಂಘರ್ಷಕ್ಕೆ ತಿರುಗುವುದನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದೊಂದಿಗಿನ ಸಂಬಂಧಗಳು ಸುಧಾರಿಸಿವೆ. ಅಮೆರಿಕವು ಭಾರತ ಮತ್ತು ಪಾಕಿಸ್ತಾನ ಎರಡರೊಂದಿಗೂ ಉತ್ತಮ ಸಂಬಂಧ ಇಟ್ಟುಕೊಂಡು, ಎರಡೂ ದೇಶಗಳ ಜತೆ ಮಾತುಕತೆ ನಡೆಸಲು ಬಯಸುತ್ತದೆ ಎಂದು ಹೇಳಿದರು.
ಇನ್ನು ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಬಂಧಗಳು ಹದಗೆಟ್ಟಿವೆ ಎಂಬುದನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಒಪ್ಪಿಕೊಂಡಿದ್ದಾರೆ. ಈ ಎರಡು ದೇಶಗಳ ನಡುವೆ ಮತ್ತೊಂದು ಯುದ್ಧ ನಡೆಯುವುದನ್ನು ಅಮೆರಿಕ ಬಯಸುವುದಿಲ್ಲ. ಎರಡೂ ದೇಶಗಳ ನಡುವಿನ ಪರಿಸ್ಥಿತಿ ಶಾಂತವಾಗಿರಲು ಅಮೆರಿಕ ಸಹಕರಿಸಲು ಸಿದ್ಧವಿದೆ ಎಂದು ರೂಬಿಯೋ ಹೇಳಿದರು.
ಎರಡೂ ದೇಶಗಳು ವ್ಯಾಪಾರ ಮತ್ತು ವಾಣಿಜ್ಯದ ಮೇಲೆ ಗಮನಹರಿಸುವುದನ್ನು ಅಮೆರಿಕ ಬಯಸುತ್ತದೆ. ಹೆಚ್ಚಿನ ಸಹಕಾರವು ಸಮೃದ್ಧಿ ಮತ್ತು ಭದ್ರತೆಗೆ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ರೂಬಿಯೊ ಹೇಳಿದರು.