ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಕೊಲೆ ಪ್ರಕರಣ: ದೀಪು ಚಂದ್ರದಾಸ್‍ಗೆ ಬೆಂಕಿ ಹಚ್ಚಿದ ಭೀಕರ ದೃಶ್ಯ ಕ್ಯಾಮರಾದಲ್ಲಿ ಸೆರೆ
Bangladesh Unrest: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ನಡೆಯುತ್ತಿರುವ ಹಿಂಸಾಚಾರದ ಮತ್ತೊಂದು ಕಳವಳಕಾರಿ ಘಟನೆ ಬೆಳಕಿಗೆ ಬಂದಿದೆ. ಹಿಂದೂ ಯುವಕ ದೀಪು ಚಂದ್ರದಾಸ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರನ್ನು ಬೆಂಕಿ ಹಚ್ಚಿದ ಭೀಕರ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಭೀಕರ ಹತ್ಯೆ -
ಢಾಕಾ: ಬಾಂಗ್ಲಾದೇಶದ (Bangladesh) ಮೈಮೆನ್ಸಿಂಗ್ ಪ್ರದೇಶದಲ್ಲಿ ಕಳೆದ ವಾರ ಗುಂಪೊಂದು ಹಿಂದೂ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಭಯಾನಕ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹಿಂದೂ ಬಂಗಾಳಿ ಗಾರ್ಮೆಂಟ್ ಕಾರ್ಮಿಕ ದೀಪು ಚಂದ್ರದಾಸ್ (Deepu Chandra Das) ಅವರ ಅಂತಿಮ ಕ್ಷಣಗಳನ್ನು ಬಾಂಗ್ಲಾದೇಶದ ಸುದ್ದಿ ಪ್ರಸಾರಕ ಜಮುನಾ ಟಿವಿ ಬಿಡುಗಡೆ ಮಾಡಿದೆ. ಹಿಂದೂ ಯುವಕನನ್ನು ಮರಕ್ಕೆ ಕಟ್ಟಿ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ.
ವಿಡಿಯೊದಲ್ಲಿ ಜನಸಮೂಹ ಜಮಾಯಿಸಿದ್ದು, ದೀಪುನನ್ನು ಕಟ್ಟಿ ಹಾಕಲಾಗಿತ್ತು. ದೀಪುನನ್ನು ಹಸ್ತಾಂತರಿಸಲು ಸಿದ್ಧವಾಗುತ್ತಿದ್ದಂತೆ ಜನರು ಕೂಗುತ್ತಾ ಕಾಯುತ್ತಿರುವುದನ್ನು ತೋರಿಸುತ್ತದೆ. ಕೆಲವು ಕ್ಷಣಗಳ ನಂತರ, ಜನಸಮೂಹವು ದೀಪುನನ್ನು ಕರೆದುಕೊಂಡು ಹೋಗುವುದನ್ನು ಕಾಣಬಹುದು.
ಹಿಂದೂ ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿ ಜೀವಂತವಾಗಿ ಸುಟ್ಟಿರುವುದಕ್ಕೆ ತಸ್ಲೀಮಾ ನಸ್ರೀನ್ ಖಂಡನೆ
ಇಸ್ಲಾಂ ಬಗ್ಗೆ ಅಸಭ್ಯ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದ ಮೇಲೆ ದೀಪು ಅವರನ್ನು ಗುಂಪು ಥಳಿಸಿ, ಬೆಂಕಿ ಹಚ್ಚಿ ಕೊಂದಿದ್ದಾರೆ. ಆದರೆ, ಗುಂಪು ಮಾಡಿದ ಆರೋಪಗಳ ಬಗ್ಗೆ ಸಾಬೀತುಪಡಿಸಲು ತೋರಿಸಲು ಯಾವುದೇ ಸಾಕ್ಷ್ಯ ಇರಲಿಲ್ಲ ಎಂದು ಬಾಂಗ್ಲಾದೇಶದ ಅಧಿಕಾರಿಗಳು ಹೇಳಿದ್ದಾರೆ. ಹಲ್ಲೆಯ ನಂತರ ದೀಪುವನ್ನು ವಿವಸ್ತ್ರಗೊಳಿಸಿ, ಮರಕ್ಕೆ ಕಟ್ಟಿ ಬೆಂಕಿ ಹಚ್ಚಲಾಯಿತು. ಈ ಭೀಕರ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ.
ತನ್ನ ಬರಹಗಳ ಕುರಿತು ಇಸ್ಲಾಮಿಸ್ಟ್ ಗುಂಪುಗಳಿಂದ ಬೆದರಿಕೆ ಬಂದ ನಂತರ ಬಾಂಗ್ಲಾದೇಶದಿಂದ ಪಲಾಯನ ಮಾಡಿದ ಪ್ರಖ್ಯಾತ ಲೇಖಕಿ ತಸ್ಲಿಮಾ ನಸ್ರಿನ್ ಈ ವಿಡಿಯೊವನ್ನು ಹಂಚಿಕೊಂಡ ನಂತರ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಕಾಣಿಸಿಕೊಂಡಿತು. ದೀಪು ಅವರನ್ನು ಧಾರ್ಮಿಕ ಅಪರಾಧಕ್ಕಿಂತ ಹಳೆಯ ದ್ವೇಷದಿಂದ ಗುರಿಯಾಗಿಸಿಕೊಂಡಿರಬಹುದು ಎಂದು ನಸ್ರಿನ್ ಆರೋಪಿಸಿದ್ದಾರೆ.
ಇಲ್ಲಿದೆ ಭಯಾನಕ ವಿಡಿಯೊ:
Innocent Hindu factory worker Dipu Chandra Das has been lynched by Islamic terrorist in name of blasphemy. Bangladesh is now a highly radicalized country. Jamaat Terrorists have taken over it. US and puppet Yunus is responsible for allowing the Hindu massacre. #BangladeshCrisis pic.twitter.com/CzsQ18Fmcp
— Ganesh (@me_ganesh14) December 19, 2025
ಹಿಂದೂ ದ್ವೇಷಿಗಳಾದ ಈ ಮುಸ್ಲಿಮರು ದೀಪು ಚಂದ್ರದಾಸ್ ಅವರನ್ನು ನೇರವಾಗಿ ಅವರ ಕಾರ್ಖಾನೆಯಿಂದ ಕರೆದೊಯ್ದರು. ದೀಪು ಯಾವುದೇ ಅಪರಾಧ ಮಾಡಿರಲಿಲ್ಲ. ಬದಲಾಗಿ, ಜಿಹಾದಿ ಮನಸ್ಥಿತಿಯುಳ್ಳವರು ಹರಡಿದ ವದಂತಿಗಳಿಂದಾಗಿ, ಗಾರ್ಮೆಂಟ್ ವ್ಯವಸ್ಥಾಪಕರು ಕೂಡ ದೀಪು ಅವರಿಂದ ರಾಜೀನಾಮೆ ಪಡೆದುಕೊಂಡರು. ಹಸಿದ ರಣಹದ್ದುಗಳು ಹೊರಗೆ ಕಾಯುತ್ತಿವೆ ಎಂದು ವ್ಯವಸ್ಥಾಪಕರಿಗೆ ತಿಳಿದಿದ್ದರೂ ಸಹ ಅವರು ಪೊಲೀಸರಿಗೆ ತಿಳಿಸದೆ, ದೀಪುವನ್ನು ಕರೆದೊಯ್ಯಲು ಬಿಟ್ಟರು. ನಂತರ ರಣಹದ್ದುಗಳು ಅವರನ್ನು ಹರಿದು ಹಾಕಿದವು ಎಂದು ವಿಡಿಯೊವನ್ನು ಹಂಚಿಕೊಳ್ಳುವಾಗ ನಸ್ರಿನ್ X ನಲ್ಲಿ ಬರೆದಿದ್ದಾರೆ.
ಏಪ್ರಿಲ್ 2024 ರಲ್ಲಿ ಇಸ್ಲಾಂ ಧರ್ಮವನ್ನು ಅವಮಾನಿಸಿದ ಆರೋಪದ ಮೇಲೆ ಪೊಲೀಸರು ಯುವಕನೊಬ್ಬನನ್ನು ಬಂಧಿಸಿದ್ದರು. ನೈಋತ್ಯ ಬಾಂಗ್ಲಾದೇಶದ ಖುಲ್ನಾ ಜಿಲ್ಲೆಯ ಪೊಲೀಸ್ ಠಾಣೆಗೆ ಕರೆದೊಯ್ಯಲಾದ ಹಿಂದೂ ಯುವಕ ಉತ್ಶೋಬ್ ಮಂಡಲ್ ಪ್ರಕರಣವನ್ನು ನಸ್ರಿನ್ ತಮ್ಮ ವ್ಯಾಖ್ಯಾನದಲ್ಲಿ ಉಲ್ಲೇಖಿಸಿದ್ದಾರೆ. ನಸ್ರಿನ್ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರ ಪ್ರಕಾರ, ಆ ನಂತರ ಠಾಣೆಯ ಹೊರಗೆ ಜಮಾಯಿಸಿದ ಉದ್ರಿಕ್ತ ಗುಂಪು, ಮಂಡಲ್‌ನನ್ನು ಹಸ್ತಾಂತರಿಸುವಂತೆ ಒತ್ತಾಯಿಸಿತ್ತು.
ಪೊಲೀಸರಿಗೆ ಮಾಹಿತಿ ನೀಡಿದ್ದರೆ ಏನಾಗುತ್ತಿತ್ತು? ಉತ್ಶಾಬ್ ಮಂಡೋಲ್ ನೆನಪಿದೆಯೇ? ಉತ್ಶಾಬ್‌ನನ್ನು ಪೊಲೀಸ್ ಠಾಣೆಗೆ ಕರೆತರಲಾಯಿತು. ಹೊರಗೆ ಉಗ್ರ ಕತ್ತೆಕಿರುಬಗಳ ಗುಂಪೊಂದು ಕಾಯುತ್ತಿತ್ತು. ಅಂತಿಮವಾಗಿ ಪೊಲೀಸರೇ ಉತ್ಶಾಬ್‌ನನ್ನು ಕತ್ತೆಕಿರುಬಗಳಿಗೆ ಒಪ್ಪಿಸಿದರು. ಪೊಲೀಸರ ಮುಂದೆಯೇ ಅವರು ಉತ್ಶಾಬ್‌ನ ಕಣ್ಣುಗಳನ್ನು ಕಿತ್ತುಹಾಕಲಿಲ್ಲವೇ? ದಿನದಿಂದ ದಿನಕ್ಕೆ ಜಿಹಾದಿಗಳು ದೇಶದಲ್ಲಿ ಹೆಚ್ಚುತ್ತಿದ್ದಾರೆ. ದಿನದಿಂದ ದಿನಕ್ಕೆ ಹಿಂದೂಗಳ ವಿರುದ್ಧ ದ್ವೇಷ ಹೆಚ್ಚುತ್ತಿದೆ. ಕುತಂತ್ರ, ಮನವೊಲಿಕೆ ಮತ್ತು ತಂತ್ರದಿಂದ ಅವರು ಹಿಂದೂಗಳನ್ನು ಕೊಲ್ಲಲು ಬಯಸುತ್ತಾರೆ. ಹಿಂದೂಗಳನ್ನು ಕೊಲ್ಲುವ ಮೂಲಕ ಅವರಿಗೆ ಸ್ವರ್ಗದ ದ್ವಾರಗಳು ತೆರೆದುಕೊಳ್ಳುತ್ತವೆ ಎಂದು ಅವರು ನಂಬುತ್ತಾರೆ ಎಂದು ನಸ್ರಿನ್ ಹೇಳಿದರು.
ಇನ್ನು ದೀಪುವನ್ನು ಡಿಸೆಂಬರ್ 18 ರಂದು ರಾತ್ರಿ 8:30 ರ ಸುಮಾರಿಗೆ (BST) ಹತ್ಯೆ ಮಾಡಲಾಗಿರುವ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ. ದೀಪು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 12 ಜನರನ್ನು ಬಾಂಗ್ಲಾದೇಶದ ಕ್ಷಿಪ್ರ ಕಾರ್ಯಾಚರಣೆ ಬೆಟಾಲಿಯನ್ (RAB) ಬಂಧಿಸಿದೆ. ದೀಪು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಹೇಳಿಕೆ ನೀಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಹೇಳಿದೆ.
ಗುರುವಾರ (ಡಿಸೆಂಬರ್ 18) ರಾತ್ರಿ, ಮೈಮೆನ್ಸಿಂಗ್‌ನ ಭಾಲುಕಾ ಉಪಜಿಲ್ಲಾದ ದುಬಲಿಪಾರ ಪ್ರದೇಶದಲ್ಲಿರುವ ಪಯೋನೀರ್ ನಿಟ್ ಕಾಂಪೋಸಿಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ದೀಪು ಚಂದ್ರದಾಸ್ ಅವರನ್ನು ಗುಂಪೊಂದು ಹೊಡೆದು ಕೊಲೆ ಮಾಡಿದೆ. ಆತನನ್ನು ಹತ್ಯೆ ಮಾಡಿದ ನಂತರ, ಆ ಗುಂಪು ದೀಪು ಅವರ ದೇಹವನ್ನು ಢಾಕಾ-ಮೈಮೆನ್ಸಿಂಗ್ ಹೆದ್ದಾರಿಗೆ ಕೊಂಡೊಯ್ದು, ಬೆತ್ತಲೆ ಮಾಡಿ ಬೆಂಕಿ ಹಚ್ಚಿ, ಸುಟ್ಟು ಹಾಕಿದೆ.