ಪಾಕಿಸ್ತಾನದಲ್ಲಿ ಉಲ್ಬಣಿಸಿದ ಇಂಧನ ಬಿಕ್ಕಟ್ಟು; ಸುದೀರ್ಘ ವಿದ್ಯುತ್ ಕಡಿತದಿಂದ ಬೀದಿಗಿಳಿದ ಜನಸಾಮಾನ್ಯರು
Electricity outage: ಪಾಕಿಸ್ತಾನದಲ್ಲಿ ತೀವ್ರಗೊಂಡಿರುವ ಇಂಧನ ಬಿಕ್ಕಟ್ಟಿನಿಂದ ದೀರ್ಘ ವಿದ್ಯುತ್ ಕಡಿತ ಮತ್ತು ಗ್ಯಾಸ್ ಬೆಲೆ ಏರಿಕೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಅಡುಗೆ ಅನಿಲದ ಬೆಲೆ ಪ್ರತಿ ಕೆಜಿಗೆ ಅಂದಾಜು 430ರಿಂದ 450 ಪಾಕಿಸ್ತಾನಿ ರುಪಾಯಿಗೆ ಏರಿಕೆಯಾಗಿದ್ದು, ಬಡ ಕುಟುಂಬಗಳಿಗೆ ಗಗನಕುಸುಮವಾಗಿದೆ. ಲಾಹೋರ್ ಮತ್ತು ಕರಾಚಿ ಸೇರಿದಂತೆ ಹಲವು ನಗರಗಳಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಸಾಂದರ್ಭಿಕ ಚಿತ್ರ -
ಇಸ್ಲಾಮಾಬಾದ್, ಏ. 14: ಪಾಕಿಸ್ತಾನದಲ್ಲಿ (Pakistan) ಇಂಧನ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸುದೀರ್ಘ ಅವಧಿಯ ವಿದ್ಯುತ್ ಕಡಿತ (Electricity outage) ಮತ್ತು ಗ್ಯಾಸ್ ಬೆಲೆ (Gas Price) ಏರಿಕೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ಈ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಇದರೊಂದಿಗೆ ಹಳೆಯದಾದ ಮೂಲಸೌಕರ್ಯಗಳು, ಬೇಸಗೆಯ ಕಾರಣ ಹೆಚ್ಚಾದ ವಿದ್ಯುತ್ ಬಳಕೆ ಮತ್ತು ದೇಶದ ಆರ್ಥಿಕ ಸಂಕಷ್ಟಗಳು ಈ ಪರಿಸ್ಥಿತಿಗೆ ಪ್ರಮುಖ ಕಾರಣ.
ಲಾಹೋರ್ ಮತ್ತು ಕರಾಚಿಯಂತಹ ಪ್ರಮುಖ ನಗರಗಳಲ್ಲಿ ಪರಿಸ್ಥಿತಿ ಅತ್ಯಂತ ಭೀಕರವಾಗಿದೆ. ಲಾಹೋರ್‌ನಲ್ಲಿ ಗ್ಯಾಸ್ ಕೊರತೆಯಿಂದಾಗಿ ಲೋಡ್ ಶೆಡ್ಡಿಂಗ್ ಪ್ರಮಾಣ ಹೆಚ್ಚಾಗಿದ್ದರೆ, ಕರಾಚಿಯ ಶಾದ್ಮನ್ ಟೌನ್‌ನಲ್ಲಿ ಜನರು ನಿರಂತರ ವಿದ್ಯುತ್ ಕಡಿತದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅಬೋಟಾಬಾದ್‌ನಲ್ಲಿ ಅನಿಲ ಪೂರೈಕೆ ಮಾಡುವ ಸರ್ಕಾರಿ ಕಚೇರಿಗಳ ಮುಂದೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದ ಹಲವು ಭಾಗಗಳಲ್ಲಿ ದಿನಕ್ಕೆ ಸುಮಾರು 15 ಗಂಟೆಗಳ ಕಾಲ ವಿದ್ಯುತ್ ಕಡಿತವಾಗುತ್ತಿದ್ದು, ಇದರಿಂದ ಸಣ್ಣ ಕೈಗಾರಿಕೆಗಳು ಮತ್ತು ವ್ಯಾಪಾರ ವಹಿವಾಟುಗಳು ನೆಲಕಚ್ಚಿವೆ. ಅಡುಗೆ ಅನಿಲದ (LPG) ಬೆಲೆ ಪ್ರತಿ ಕೆಜಿಗೆ ಅಂದಾಜು 430ರಿಂದ 450 ಪಾಕಿಸ್ತಾನಿ ರುಪಾಯಿಗೆ ಏರಿಕೆಯಾಗಿದ್ದು, ಬಡ ಕುಟುಂಬಗಳಿಗೆ ಗಗನಕುಸುಮವಾಗಿದೆ.
ಪಾಕಿಸ್ತಾನದಲ್ಲಿ ಭುಗಿಲೆದ್ದ ಆಕ್ರೋಶ:
Fuel crisis was already choking daily life in Pakistan—now even gas has disappeared.
— Palki Aggarwal (@PalkiAggarwal_) April 14, 2026
People are forced to struggle for essentials while those,from corrupt Pak military and leadership, in power remain insulated.@ajaykraina @danvir_chauhan @CestMoiz @rishi_suri @InsightGL pic.twitter.com/p8IyiTFxnt
ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ಪಾಕಿಸ್ತಾನದ ಆಡಳಿತಾರೂಢರು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ತಮ್ಮ ದೇಶದಲ್ಲಿ ಇಂಧನ ಕೊರತೆ ಇರುವುದನ್ನೇ ನಿರಾಕರಿಸಿದ್ದಾರೆ.
ಕದನ ವಿರಾಮ: ಹಾರ್ಮುಜ್ ಜಲಸಂಧಿ ದಾಟಿದ ಮೊದಲ ಭಾರತೀಯ ಗ್ಯಾಸ್ ಟ್ಯಾಂಕರ್ ‘ಜಗ್ ವಿಕ್ರಮ್’
ಬದಲಾಗಿ, "ಭಾರತವು ಇಂಧನ ಅಭಾವವನ್ನು ಎದುರಿಸುತ್ತಿದೆ" ಎಂಬ ವಿಲಕ್ಷಣ ಹೇಳಿಕೆ ನೀಡುವ ಮೂಲಕ ಜನರ ಗಮನ ಬೇರೆಡೆಗೆ ಸೆಳೆಯಲು ಪ್ರಯತ್ನಿಸಿದ್ದಾರೆ. ಆದರೆ, ವಾಸ್ತವದಲ್ಲಿ ಪಾಕಿಸ್ತಾನದ ಇಂಧನ ಬಿಕ್ಕಟ್ಟು ಕೇವಲ ಮೂಲಸೌಕರ್ಯದ ಸಮಸ್ಯೆಯಾಗಿ ಉಳಿಯದೆ, ಗಂಭೀರ ಸಾಮಾಜಿಕ ಮತ್ತು ಆರ್ಥಿಕ ಸವಾಲಾಗಿ ರೂಪಾಂತರಗೊಂಡಿದೆ. ಬದುಕು ಸಾಗಿಸಲು ಕನಿಷ್ಠ ಸೌಲಭ್ಯಗಳಿಲ್ಲದೆ ಅಲ್ಲಿನ ಜನರು ಹತಾಶರಾಗಿದ್ದಾರೆ. ಸರ್ಕಾರದ ತಕ್ಷಣದ ಹಸ್ತಕ್ಷೇಪಕ್ಕಾಗಿ ಕೂಗು ಎಲ್ಲೆಡೆ ಕೇಳಿಬರುತ್ತಿದೆ.