ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕತ್ತಲಲ್ಲಿ ಪಾಕಿಸ್ತಾನ; ಇಂಧನ ಬೆಲೆ ನಿಯಂತ್ರಿಸಲು ವಿದ್ಯುತ್ ಕಡಿತ ಘೋಷಣೆ

ಕಳೆದ ವಾರ ಇರಾನ್ ಯುದ್ಧವನ್ನು ನಿಲ್ಲಿಸಲು ಶಾಂತಿ ಧೂತನಾಗಿ ಕೆಲಸ ಮಾಡಿದ್ದ ಪಾಕಿಸ್ತಾನದಲ್ಲಿ ಇದೀಗ ಕತ್ತಲು ಆವರಿಸಿದೆ. ಇರಾನ್ ಯುದ್ಧದ ಪರಿಣಾಮ ಹೆಚ್ಚುತ್ತಿರುವ ತೈಲ ಬೆಲೆ ಏರಿಕೆಯನ್ನು ನಿಯಂತ್ರಿಸಲು ಪಾಕಿಸ್ತಾನವು ದೇಶದ ಹೆಚ್ಚಿನ ಭಾಗಗಳಲ್ಲಿ ವಿದ್ಯುತ್ ಕಡಿತವನ್ನು ಘೋಷಣೆ ಮಾಡಿದೆ. ಪ್ರತಿದಿನ ಸಂಜೆ ವೇಳೆಗೆ ವಿದ್ಯುತ್ ಸ್ಥಗಿತಗೊಳಿಸುವುದಾಗಿ ತಿಳಿಸಿದೆ.

ಪಾಕಿಸ್ತಾನದಲ್ಲಿ ವಿದ್ಯುತ್ ಕಡಿತ ಘೋಷಣೆ

ಸಂಗ್ರಹ ಚಿತ್ರ -

ಇಸ್ಲಾಮಾಬಾದ್: ಯುಎಸ್ ಮತ್ತು ಇರಾನ್ ನಡುವಿನ ಸಂಘರ್ಷವನ್ನು (Iran war) ನಿಲ್ಲಿಸಲು ಕಳೆದ ವಾರ ಇಸ್ಲಾಮಾಬಾದ್ (Islamabad) ನಲ್ಲಿ ಕದನ ವಿರಾಮ ಮಾತುಕತೆಗೆ ವ್ಯವಸ್ಥೆ ಮಾಡಿದ್ದ ಪಾಕಿಸ್ತಾನದಲ್ಲಿ (Pakistan) ಈಗ ಕತ್ತಲು ಆವರಿಸಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಪರಿಣಾಮ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ (Oil price) ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಇಂಧನ ಬೆಲೆಗಳನ್ನು ನಿಯಂತ್ರಿಸಲು ಪಾಕಿಸ್ತಾನ ಸರ್ಕಾರವು ವಿದ್ಯುತ್ ಕಡಿತಕ್ಕೆ ನಿರ್ಧರಿಸಿದೆ. ದೇಶದ ವಿವಿಧ ಭಾಗಗಳಲ್ಲಿ ವಿದ್ಯುತ್ ಕಡಿತವನ್ನು ಘೋಷಿಸಿದ್ದು, ಪ್ರತಿದಿನ ಸಂಜೆ ವೇಳೆಗೆ ವಿದ್ಯುತ್ ಸ್ಥಗಿತಗೊಳಿಸುವುದಾಗಿ ತಿಳಿಸಿದೆ.

ಅಮೆರಿಕವು ಹೊರ್ಮುಜ್ ಜಲಮಾರ್ಗದಲ್ಲಿ ದಿಗಬಂಧನ ವಿಧಿಸಿದ್ದು, ಇದರ ಪರಿಣಾಮ ಮಧ್ಯಪ್ರಾಚ್ಯ ಭಾಗದಲ್ಲಿ ಉದ್ವಿಗ್ನತೆ ತೀವ್ರಗೊಂಡಿದೆ. ದೇಶದಲ್ಲಿ ಇಂಧನ ಬೆಲೆ ನಿಯಂತ್ರಿಸಲು ಪಾಕಿಸ್ತಾನವು ಪ್ರತಿದಿನ ಸಂಜೆ ಗರಿಷ್ಠ ಬಳಕೆಯ ಸಮಯದಲ್ಲಿ ಸುಮಾರು ಎರಡು ಗಂಟೆಗಳ ಕಾಲ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ.

ಅಮೆರಿಕಕ್ಕೆ ಅನಿವಾಸಿ ಭಾರತೀಯರ ಕೊಡುಗೆ ಅಪಾರ: ಭಾರತೀಯ ಮೂಲದ ಅತ್ತೆ-ಮಾವಂದಿರನ್ನು ಕೊಂಡಾಡಿದ ಜೆಡಿ ವ್ಯಾನ್ಸ್

ಈ ಕುರಿತು ಇಂಧನ ಸಚಿವಾಲಯ ಮಂಗಳವಾರ ಪ್ರಕಟಣೆ ಬಿಡುಗಡೆ ಮಾಡಿದ್ದು, ದೇಶದ ಹೆಚ್ಚಿನ ಭಾಗಗಳಲ್ಲಿ ಸಂಜೆ 5ರಿಂದ ಬೆಳಗಿನ ಜಾವ 1 ಗಂಟೆಯವರೆಗೆ ಸುಮಾರು ಎರಡೂವರೆ ಗಂಟೆಗಳ ಕಾಲ ವಿದ್ಯುತ್ ಸ್ಥಗಿತಗೊಳಿಸಲಾಗುವುದು. ಈ ಸಮಯದಲ್ಲಿ ಹೆಚ್ಚಾಗಿ ವಿದ್ಯುತ್ ಬಳಕೆ ಮಾಡಲಾಗುತ್ತದೆ. ಹೀಗಾಗಿ ವಿದ್ಯುತ್ ಉಳಿತಾಯ ಮಾಡುವ ಸಲುವಾಗಿ ಈ ಸಂದರ್ಭದಲ್ಲಿ ವಿದ್ಯುತ್ ಕಡಿತಕ್ಕೆ ನಿರ್ಧರಿಸಲಾಗಿದೆ ಎಂದು ತಿಳಿಸಿದೆ.

ಜಲ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದ್ದು, ಈ ಕೊರತೆಯನ್ನು ನೀಗಿಸಲು ವಿದ್ಯುತ್ ಕಡಿತಗೊಳಿಸುವುದು ಅನಿವಾರ್ಯವಾಗಿದೆ. ಏಕ ಕಾಲಕ್ಕೆ ದೇಶಾದ್ಯಂತ ವಿದ್ಯುತ್ ಕಡಿತ ಮಾಡಲಾಗುವುದಿಲ್ಲ. ಆದರೆ ನಿರ್ದಿಷ್ಟ ಅವಧಿಯವರೆಗೆ ವಿದ್ಯುತ್ ಕಡಿತಗೊಳಿಸಲಾಗುತ್ತದೆ. ದೇಶದ ಅತಿದೊಡ್ಡ ನಗರವಾದ ಕರಾಚಿಯಲ್ಲಿ ವಿದ್ಯುತ್ ಕಡಿತ ಮಾಡುವುದಿಲ್ಲ ಎಂದು ತಿಳಿಸಿದೆ.

ಕಳೆದ ಫೆಬ್ರವರಿ 28ರಂದು ಇರಾನ್ ಮೇಲೆ ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯು ದಾಳಿ ನಡೆಸಿದ ಬಳಿಕ ಮಧ್ಯಪ್ರಾಚ್ಯ ಭಾಗದಲ್ಲಿ ಉದ್ವಿಗ್ನತೆ ತೀವ್ರಗೊಂಡಿದೆ. ಹೊರ್ಮುಜ್ ಜಲ ಮಾರ್ಗವನ್ನು ಇರಾನ್ ನಿರ್ಬಂಧಿಸಿರುವುದು ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗಲು ಪ್ರಮುಖ ಕಾರಣವಾಗಿದೆ. ವಿಶ್ವದ ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆಯ ಸುಮಾರು ಐದನೇ ಒಂದು ಭಾಗವು ಈ ಜಲ ಮಾರ್ಗದಲ್ಲಿ ಹಾದು ಹೋಗುತ್ತದೆ. ಅದರಲ್ಲೂಏಷ್ಯಾ ಭಾಗದ ದೇಶಗಳು ಹೆಚ್ಚಿನ ತೈಲ ಮತ್ತು ಅನಿಲ ಪೂರೈಕೆಗಾಗಿ ಇದೇ ಮಾರ್ಗವನ್ನು ಅವಲಂಬಿಸಿದೆ.

ಅಮೆರಿಕ-ಇರಾನ್ ನಡುವೆ ಶಾಶ್ವತ ಶಾಂತಿಗಾಗಿ ಚೀನಾ ಮಂತ್ರ; ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಂಡಿಸಿದ ನಾಲ್ಕು ಅಂಶವೇನು?

ಪಾಕಿಸ್ತಾನವು ಇಂಧನಕ್ಕಾಗಿ ಇದೇ ಜಲಮಾರ್ಗವನ್ನು ಅವಲಂಬಿಸಿದೆ. ಹೀಗಾಗಿ ಜಾಗತಿಕ ಇಂಧನ ಬೆಲೆ ಏರಿಕೆಯಿಂದಾಗಿ ದೇಶಾದ್ಯಂತ ಸರಕುಗಳು ದುಬಾರಿಯಾಗಿವೆ. ಹೀಗಾಗಿ ಪಾಕಿಸ್ತಾನದ ಇಂಧನ ಸಚಿವಾಲಯವು ಇಂಧನ ಬೆಲೆ ಏರಿಕೆಯನ್ನು ನಿಯಂತ್ರಿಸುವ ಗುರಿ ಹೊಂದಿದೆ ಎಂದು ಹೇಳಿದೆ.