ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಆರೋಗ್ಯ ಸ್ಥಿರ: ನಗುತ್ತ ಮಾತನಾಡುತ್ತಿದ್ದಾರೆ ಎಂದ ಭಾರತದ ರಾಯಭಾರಿ
Smith Machchhar in Stable Condition: ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮತ್ತು ಅವರ ಕುಟುಂಬವನ್ನು ಆಸ್ಪತ್ರೆಯಲ್ಲಿ ಯುಎಇಯಲ್ಲಿನ ಭಾರತದ ರಾಯಭಾರಿ ದೀಪಕ್ ಮಿತ್ತಲ್ ಭೇಟಿಯಾದರು. ಪೈಲಟ್ ಅವರ ಆರೋಗ್ಯ ಸ್ಥಿರವಾಗಿದ್ದು, ಉತ್ತಮ ವೈದ್ಯಕೀಯ ಆರೈಕೆ ಪಡೆಯುತ್ತಿದ್ದಾರೆ ಎಂದು ಹೇಳಿದರು. ಅಸ್ವಸ್ಥತೆಯ ಹೊರತಾಗಿಯೂ, ಪೈಲಟ್ ಅವರ ನೈತಿಕ ಸ್ಥೈರ್ಯ ಹೆಚ್ಚಾಗಿದೆ ಎಂದು ರಾಯಭಾರಿ ಹೇಳಿದರು.
ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (ಸಂಗ್ರಹ ಚಿತ್ರ) -
ದುಬೈ, ಅ. 1: ಫ್ಲೈದುಬೈ ವಿಮಾನದಲ್ಲಿ ಇರಿತಕ್ಕೊಳಗಾಗಿದ್ದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Smith Machchhar) ಸೌದಿ ಅರೇಬಿಯಾದಿಂದ ಯುಎಇ (UAE) ಆಸ್ಪತ್ರೆಗೆ ಶಿಫ್ಟ್ ಆಗಿದ್ದಾರೆ. ಅಬುಧಾಬಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು, ನಗುತ್ತ ಮಾತನಾಡುತ್ತಿದ್ದಾರೆ ಎಂದು ಯುಎಇಯಲ್ಲಿನ ಭಾರತದ ರಾಯಭಾರಿ ದೀಪಕ್ ಮಿತ್ತಲ್ ಹೇಳಿದ್ದಾರೆ.
ಮಚ್ಚಾರ್ ಮತ್ತು ಅವರ ಕುಟುಂಬವನ್ನು ಆಸ್ಪತ್ರೆಯಲ್ಲಿ ದೀಪಕ್ ಮಿತ್ತಲ್ ಭೇಟಿಯಾದರು. ಪೈಲಟ್ ಅವರ ಆರೋಗ್ಯ ಸ್ಥಿರವಾಗಿದ್ದು, ಉತ್ತಮ ವೈದ್ಯಕೀಯ ಆರೈಕೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅಸ್ವಸ್ಥತೆಯ ಹೊರತಾಗಿಯೂ, ಪೈಲಟ್ ಅವರ ನೈತಿಕ ಸ್ಥೈರ್ಯ ಹೆಚ್ಚಾಗಿದೆ ಎಂದು ರಾಯಭಾರಿ ಹೇಳಿದ್ದಾರೆ.
“ನಾನು ಇದೀಗ ಯುಎಇಯ ಆಸ್ಪತ್ರೆಯಲ್ಲಿ ಅವರ ಕುಟುಂಬದೊಂದಿಗೆ ಅವರನ್ನು ಭೇಟಿಯಾಗಿದ್ದೇನೆ. ಅವರು ಚೆನ್ನಾಗಿದ್ದಾರೆ. ಅವರನ್ನು ನೋಡಿ ಸಮಾಧಾನವಾಯಿತು. ಅವರ ಆರೋಗ್ಯ ಉತ್ತಮವಾಗಿದೆ ಎಂಬುದು ತಿಳಿದು ನೆಮ್ಮದಿ ಎನಿಸಿತು. ಅವರು ನಗುತ್ತ ಮಾತನಾಡುತ್ತಿದ್ದರು, ಸಂಭಾಷಣೆ ನಡೆಸುತ್ತಿದ್ದರು. ಯುಎಇಯಲ್ಲಿ ಅವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ದೊರೆಯುತ್ತಿದೆ” ಎಂದು ಮಿತ್ತಲ್ ಅವರು ತಿಳಿಸಿದ್ದಾರೆ.
ರಣಧೀರ್ ಜೈಸ್ವಾಲ್ ಪೋಸ್ಟ್:
Statement on the health condition of Captain Smit Machchhar
— Randhir Jaiswal (@MEAIndia) October 1, 2026
🔗 https://t.co/AMmrEo1rAX pic.twitter.com/Js6hJX3WjG
ವಿದೇಶಾಂಗ ಸಚಿವಾಲಯವು ಮಚ್ಚಾರ್ ಅವರ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಅವರ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದೆ. ಘಟನೆಯ ನಂತರ ಪೈಲಟ್ ಅನ್ನು ಮೊದಲು ಸೌದಿ ಅರೇಬಿಯಾದ ತಬೂಕ್‌ನಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ಮತ್ತು ಚೇತರಿಕೆಗಾಗಿ ಅಬುಧಾಬಿಗೆ ಸ್ಥಳಾಂತರಿಸಲಾಯಿತು.
ಫ್ಲೈದುಬೈ ವಿಮಾನದಲ್ಲಿ ಇರಿತಕ್ಕೊಳಗಾದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ನೊಂದಿಗೆ ಪ್ರಧಾನಿ ಮೋದಿ ಮಾತುಕತೆ
“ಸೌದಿ ಅರೇಬಿಯಾದ ತಬೂಕ್‌ನ ಆಸ್ಪತ್ರೆಯಲ್ಲಿ ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆ ಪಡೆದ ಬಳಿಕ, ಹೆಚ್ಚಿನ ವೈದ್ಯಕೀಯ ಆರೈಕೆ ಮತ್ತು ಚೇತರಿಕೆಗಾಗಿ ಅವರನ್ನು ಇದೀಗ ಅಬುಧಾಬಿಗೆ ಸ್ಥಳಾಂತರಿಸಲಾಗಿದೆ. ಯುಎಇಯಲ್ಲಿರುವ ನಮ್ಮ ರಾಯಭಾರಿ, ಆಸ್ಪತ್ರೆಗೆ ತೆರಳಿ ಕ್ಯಾಪ್ಟನ್ ಮಚ್ಚಾರ್ ಅವರನ್ನು ಭೇಟಿಯಾಗಿ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ದುಬೈಯಲ್ಲಿರುವ ಕಾನ್ಸುಲೇಟ್ ಈ ವಿಷಯದ ಬಗ್ಗೆ ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿವೆ. ವಿದೇಶಾಂಗ ಸಚಿವಾಲಯವು ಮಚ್ಚಾರ್ ಅವರ ಶೌರ್ಯ ಮತ್ತು ಧೈರ್ಯವನ್ನು ಶ್ಲಾಘಿಸಿದೆ. ಘಟನೆಯ ನಂತರ ಪೈಲಟ್‌ಗೆ ನೀಡಿದ ಬೆಂಬಲ ಮತ್ತು ಮೆಚ್ಚುಗೆಗಾಗಿ ಪ್ರಪಂಚದಾದ್ಯಂತದ ಜನರಿಗೆ ಧನ್ಯವಾದಗಳನ್ನು ಅರ್ಪಿಸಿದೆ.
ಪ್ರಧಾನಿ ನರೇಂದ್ರ ಮೋದಿ ಕೂಡ ಪೈಲಟ್ ಸ್ಮಿತ್ ಮಚ್ಚಾರ್ ಅವರನ್ನು ಹೀರೋ ಎಂದು ಕರೆದಿದ್ದಾರೆ. ʼʼಮಚ್ಚಾರ್ ಗಂಭೀರವಾಗಿ ಗಾಯಗೊಂಡರೂ ಸಹ ಧೈರ್ಯವನ್ನು ಪ್ರದರ್ಶಿಸಿದ್ದಾರೆ. ಆಗಬಹುದಾಗಿದ್ದ ದೊಡ್ಡ ದುರಂತವನ್ನು ತಪ್ಪಿಸಲು ಸಹಾಯ ಮಾಡಿದ್ದಾರೆʼʼ ಎಂದು ಮೋದಿ ಶ್ಲಾಘಿಸಿದ್ದಾರೆ.