ʼʼಭಾರತೀಯ ಸಂಸ್ಕೃತಿ ಅದ್ಭುತ": ಭಾಷಾ ವೈವಿಧ್ಯತೆಗೆ ಮನಸೋತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
Vladimir Putin: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೊದಲಿನಿಂದಲೂ ಭಾರತದ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ಸಂಭಾಷಣೆಯೊಂದನ್ನು ಉಲ್ಲೇಖಿಸಿದ ಅವರು, ಭಾರತದ ಭಾಷಾ ವೈವಿಧ್ಯತೆಯನ್ನು ಶ್ಲಾಘಿಸಿದ್ದಾರೆ.
ನರೇಂದ್ರ ಮೋದಿ ಮತ್ತು ವ್ಲಾಡಿಮಿರ್ ಪುಟಿನ್ (ಸಂಗ್ರಹ ಚಿತ್ರ) -
ದೆಹಲಿ, ನ. 22: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಮೊದಲಿನಿಂದಲೂ ಭಾರತದ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅಲ್ಲದೆ ಭಾರತದ ಸಾಂಸ್ಕೃತಿಕ ವೈವಿಧ್ಯತೆ ಅವರನ್ನು ಅಪಾರವಾಗಿ ಸೆಳೆದಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೊಂದಿಗೆ ನಡೆದ ಸಂಭಾಷಣೆಯೊಂದನ್ನು ಉಲ್ಲೇಖಿಸಿದ ಅವರು, ಭಾರತದ ಭಾಷಾ ವೈವಿಧ್ಯತೆಯನ್ನು ಶ್ಲಾಘಿಸಿದ್ದಾರೆ. ದೇಶದ ಅರ್ಧಕ್ಕಿಂತ ಹೆಚ್ಚು ಜನರು ತಮ್ಮದೇ ಆದ ಭಾಷೆಗಳನ್ನು ಮಾತನಾಡುತ್ತಾರೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ. ಆ ಮೂಲಕ ಭಾರತದ ಜತೆಗಿನ ಬಾಂಧವ್ಯವನ್ನು ಮತ್ತಷ್ಟು ಗಾಢಗೊಳಿಸಿದ್ದಾರೆ.
"ಉದಾಹರಣೆಗೆ ಅತ್ಯಂತ ಹಳೆಯದಾದ ಭಾರತೀಯ ನಾಗರಿಕತೆಯನ್ನೇ ತೆಗೆದುಕೊಳ್ಳಿ. ಇದರ ಬಗ್ಗೆ ನಾನು ಎಷ್ಟು ಹೆಚ್ಚು ತಿಳಿದುಕೊಳ್ಳುತ್ತೇನೋ ಅಷ್ಟು ಆಕರ್ಷಿತನಾಗುತ್ತಿದ್ದೇನೆ" ಎಂದು ಪುಟಿನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಎಂದು 'ಸ್ಪುಟ್ನಿಕ್' ವರದಿ ಮಾಡಿದೆ.
ಪುಟಿನ್ ಅವರ ಸಂದರ್ಶನ:
Russian President Vladimir Putin called India’s linguistic diversity "simply amazing" during an interview with Emir Kusturica, noting how nearly 600 million of its 1.5 billion people speak its main language while hundreds of millions speak others. 🇮🇳🇷🇺 https://t.co/qHQYXdqbQR
— Backchod Indian (@IndianBackchod) November 21, 2026
ಇತ್ತೀಚೆಗೆ ಪ್ರಧಾನಿ ಮೋದಿ ಅವರೊಂದಿಗಿನ ಸಂಭಾಷಣೆಯ ಸಮಯದಲ್ಲಿ ಎಷ್ಟು ಜನರು ಭಾರತದ ಅಧಿಕೃತ ಭಾಷೆಯನ್ನು ಮಾತನಾಡುತ್ತಾರೆ ಎಂದು ಕೇಳಿದ್ದಾಗಿ ಅವರು ನೆನಪಿಸಿಕೊಂಡಿದ್ದಾರೆ. "ಸ್ವಲ್ಪ ಸಮಯದ ಹಿಂದೆ ನಾನು ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡುತ್ತ, ದೇಶದ ಎಷ್ಟು ನಾಗರಿಕರು ಅಧಿಕೃತ ಭಾಷೆಯನ್ನು ಮಾತನಾಡುತ್ತಾರೆ? ಎಂದು ಕೇಳಿದ್ದೆ. ಅದಕ್ಕೆ ಅವರು, ಸುಮಾರು 60 ಕೋಟಿ ಎಂದು ಉತ್ತರಿಸಿದ್ದರು. ಹಾಗಾದರೆ ದೇಶದ ಒಟ್ಟು ಜನಸಂಖ್ಯೆ ಎಷ್ಟು? ಎಂದು ಕೇಳಿದಾಗ 150 ಕೋಟಿ ಎಂದು ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದರುʼʼ ಎಂಬುದಾಗಿ ಹೇಳಿದ್ದಾರೆ.
ವ್ಲಾಡಿಮಿರ್ ಪುಟಿನ್ ಭೇಟಿ ವೇಳೆ ಶಾಂತಿ ಮಂತ್ರ ಜಪಿಸಿದ ನರೇಂದ್ರ ಮೋದಿ
''ಇದನ್ನು ಕೇಳಿ ಅಚ್ಚರಿಯಾಯ್ತು. ಅಂದರೆ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಮಾತ್ರ ಆ ರಾಷ್ಟ್ರದ ಅಧಿಕೃತ ಭಾಷೆಯನ್ನು ಮಾತನಾಡುತ್ತಾರೆ" ಎಂದಿದ್ದಾರೆ. ʼʼಉಳಿದವರು ಯಾವ ಭಾಷೆ ಮಾತನಾಡುತ್ತಾರೆ ಎಂದು ಕೇಳಿದಾಗ ಅವರದ್ದೇ ಭಾಷೆ ಮಾತನಾಡುತ್ತಾರೆ ಎಂದು ಮೋದಿ ಉತ್ತರಿಸಿದ್ದರುʼʼ ಎಂದು ಪುಟಿನ್ ವಿವರಿಸಿದ್ದಾರೆ. ಜತೆಗೆ ಇದು ಅದ್ಭುತ ಎಂದು ಹೇಳಿದ್ದಾರೆ.
ವಿಡಿಯೊ ವೈರಲ್
ಸದ್ಯ ಪುಟಿನ್ ಅವರ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಳೆದ ತಿಂಗಳು ಕೂಡ ಪುಟಿನ್ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಗಳಿದ್ದರು. ಭಾರತ ಅನನ್ಯ ಮತ್ತು ವೈವಿಧ್ಯಮಯ ದೇಶ ಎಂದಿದ್ದರು. "ಭಾರತವು ತನ್ನ ವ್ಯಾಪ್ತಿ ಮತ್ತು ವೈವಿಧ್ಯತೆಯ ಮೂಲಕ ಎಲ್ಲರನ್ನೂ ಬೆರಗುಗೊಳಿಸುತ್ತದೆ" ಎಂದು ಪುಟಿನ್ ಹೇಳಿದ್ದರು. ಆ ಸಂದರ್ಭದಲ್ಲೂ ಅವರು ಭಾರತದ ಭಾಷಾ ವೈವಿಧ್ಯತೆಯ ಬಗ್ಗೆಯೂ ಪ್ರಸ್ತಾಪಿಸಿದ್ದರು. ಈ ವರ್ಷ ಮೋದಿ ಮತ್ತು ಪುಟಿನ್ 2 ಬಾರಿ ಭೇಟಿಯಾಗಿದ್ದರು.
“ಯುದ್ಧ ನಿಲ್ಲಿಸಲು ಭಾರತ ಬಯಸುತ್ತದೆ”: ಪ್ರಧಾನಿ ಮೋದಿಯನ್ನು ಶ್ಲಾಘಿಸಿದ ಪುಟಿನ್
ಭಾರತದ ಭಾಷಾ ವೈವಿಧ್ಯತೆ
ಭಾರತಕ್ಕೆ ಯಾವುದೇ ರಾಷ್ಟ್ರೀಯ ಭಾಷೆ ಇಲ್ಲದಿದ್ದರೂ, ಹಿಂದಿ ಮತ್ತು ಇಂಗ್ಲಿಷ್ ಇಲ್ಲಿನ ಅಧಿಕೃತ ಭಾಷೆಗಳಾಗಿವೆ. ಭಾರತದ ಸಂವಿಧಾನವು ತನ್ನ 8ನೇ ಅನುಸೂಚಿಯಲ್ಲಿ 22 ಭಾಷೆಗಳನ್ನು ಗುರುತಿಸಿದೆ. ಇವುಗಳಲ್ಲಿ ಕನ್ನಡ, ಅಸ್ಸಾಮಿ, ಬಂಗಾಳಿ, ಬೋಡೋ, ಡೋಗ್ರಿ, ಗುಜರಾತಿ, ಹಿಂದಿ, ಪಂಜಾಬಿ, ತಮಿಳು, ತೆಲುಗು, ಮಲಯಾಳಂ, ಉರ್ದು ಮತ್ತಿತರ ಭಾಷೆಗಳಿವೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.