ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಖಮೇನಿ ಹತ್ಯೆ ಬಳಿಕ ಇರಾನ್‌ನ ಸುಪ್ರೀಂ ಲೀಡರ್ ಆಫರ್ ಬಂದಿತ್ತು, ಆದರೆ ನಾನೇ ಬೇಡ ಎಂದೆ: ಡೊನಾಲ್ಡ್ ಟ್ರಂಪ್‌ನಿಂದ ಅಚ್ಚರಿ ಹೇಳಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನಿಂದ ‘ಸುಪ್ರೀಂ ಲೀಡರ್’ ಸ್ಥಾನಕ್ಕೆ ಅನೌಪಚಾರಿಕ ಆಫರ್ ಬಂದಿತ್ತು ಎಂದು ಹೇಳಿಕೆ ನೀಡಿದ್ದು, ಅದನ್ನು ತಾವು ತಿರಸ್ಕರಿಸಿದ್ದಾಗಿ ಹೇಳಿದ್ದಾರೆ. ಇತ್ತೀಚಿನ ಯುದ್ಧದ ನಡುವೆ ಅಮೆರಿಕ-ಇರಾನ್ ಮಾತುಕತೆ ನಡೆಯುತ್ತಿದೆ ಎಂದು ಟ್ರಂಪ್ ಹೇಳಿದರೂ, ಇರಾನ್ ಇದನ್ನು ಸಂಪೂರ್ಣವಾಗಿ ನಿರಾಕರಿಸಿದೆ. ಎರಡೂ ದೇಶಗಳ ನಡುವೆ ಕದನ ವಿರಾಮದ ಪ್ರಸ್ತಾವನೆಗಳ ಕುರಿತು ಗೊಂದಲ ಮುಂದುವರಿದಿದೆ.

ಇರಾನ್‌ ಆಫರ್ ತಿರಸ್ಕರಿಸಿದ ಅಮೆರಿಕ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ -

Profile
Sushmitha Jain Mar 26, 2026 5:29 PM

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಗುರುವಾರದಂದು ಮತ್ತೊಂದು ಅಚ್ಚರಿಯ ಹೇಳಿಕೆ ನೀಡಿದ್ದು, ಒಂದು ತಿಂಗಳಿನಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗಾಣಿಸಲು ತಾವು ಇರಾನ್ (Iran) ಜೊತೆ ಮಾತುಕತೆ ನಡೆಸುತ್ತಿರುವುದಾಗಿ ಪುನರುಚ್ಚರಿಸಿದ್ದಾರೆ. ಆದರೆ ಇರಾನ್ ಈ ಮಾತುಕತೆಯ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ. ರಿಪಬ್ಲಿಕನ್ ಪಕ್ಷದ ನಿಧಿ ಸಂಗ್ರಹಣಾ ಕಾರ್ಯಕ್ರಮ (Republican fundraiser) ವೊಂದರಲ್ಲಿ ಮಾತನಾಡಿದ ಟ್ರಂಪ್, ಇರಾನ್ ನಾಯಕತ್ವವು ತಮಗೆ ಆ ದೇಶದ ಮುಂದಿನ 'ಸುಪ್ರೀಂ ಲೀಡರ್' ಆಗುವಂತೆ ಅನೌಪಚಾರಿಕ ಪ್ರಸ್ತಾಪವನ್ನೂ ಮುಂದಿಟ್ಟಿತ್ತು, ಆದರೆ ತಾವದನ್ನು ನಯವಾಗಿ ತಿರಸ್ಕರಿಸಿದ್ದಾಗಿ ಹೇಳಿಕೊಂಡಿದ್ದಾರೆ. "ಇರಾನ್‌ನ ಮುಖ್ಯಸ್ಥನಾಗಲು ಜಗತ್ತಿನ ಯಾವುದೇ ನಾಯಕ ಬಯಸುವುದಿಲ್ಲ, ನನಗೂ ಆ ಹುದ್ದೆಯ ಅಗತ್ಯವಿಲ್ಲ ಎಂದು ನಾನು ಅವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ" ಎಂದು ಟ್ರಂಪ್ ಎನ್‌ಆರ್‌ಸಿಸಿ (NRCC) ಔತಣಕೂಟದಲ್ಲಿ ತಿಳಿಸಿದರು.

ಕಳೆದ ತಿಂಗಳು ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯಾದ ನಂತರ ಇರಾನ್‌ನಲ್ಲಿ ಅಧಿಕಾರದ ಶೂನ್ಯತೆ ಸೃಷ್ಟಿಯಾಗಿದೆ. ಅವರ ಪುತ್ರ ಮೊಜ್ತಾಬಾ ಖಮೇನಿ ಅವರನ್ನು ಉತ್ತರಾಧಿಕಾರಿಯಾಗಿ ಘೋಷಿಸಲಾಗಿದೆಯಾದರೂ, ಯುದ್ಧ ಆರಂಭವಾದಾಗಿನಿಂದ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರು ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂಬ ವರದಿಗಳೂ ಇವೆ.

ಹೊರ್ಮುಜ್ ಜಲಸಂಧಿ ದಾಟಲು ಭಾರತ ಸೇರಿ 5 ರಾಷ್ಟ್ರಗಳಿಗೆ ಇರಾನ್‌ನಿಂದ ಅನುಮತಿ

ಈ ಪರಿಸ್ಥಿತಿಯ ನಡುವೆ ಟ್ರಂಪ್, ಇರಾನ್ ವಿರುದ್ಧದ ಕಾರ್ಯಾಚರಣೆಯನ್ನು "ಸಂಪೂರ್ಣ ಮಿಲಿಟರಿ ವಿನಾಶ" ಎಂದು ಬಣ್ಣಿಸಿದ್ದು, ಮಧ್ಯಪ್ರಾಚ್ಯದಲ್ಲಿ ಅಮೆರಿಕ ದೊಡ್ಡ ಮಟ್ಟದ ಜಯ ಸಾಧಿಸುತ್ತಿದೆ ಎಂದು ಘೋಷಿಸಿದ್ದಾರೆ. ಇರಾನ್ ಆಂತರಿಕವಾಗಿ ಕದನ ವಿರಾಮಕ್ಕಾಗಿ ಹಂಬಲಿಸುತ್ತಿದೆ, ಆದರೆ ಜನರಿಂದ ಅಥವಾ ಅಮೆರಿಕದಿಂದ ಕೊಲ್ಲಲ್ಪಡುವ ಭಯದಿಂದ ಅವರು ಮಾತುಕತೆಗೆ ಒಪ್ಪುತ್ತಿಲ್ಲ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.

ಈ ನಡುವೆ, ವಾಷಿಂಗ್ಟನ್ ಪಾಕಿಸ್ತಾನದಂತಹ ಮಧ್ಯವರ್ತಿಗಳ ಮೂಲಕ ಇರಾನ್‌ಗೆ 15 ಅಂಶಗಳ ಕದನ ವಿರಾಮ ಪ್ರಸ್ತಾವನೆಯನ್ನು ಕಳುಹಿಸಿದೆ ಎಂದು ವರದಿಯಾಗಿದೆ. ಈ ಯೋಜನೆಯು ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಸ್ಥಗಿತಗೊಳಿಸುವುದು ಮತ್ತು ಹಾರ್ಮುಜ್ ಜಲಸಂಧಿಯನ್ನು ಮರುಪರಿಶೀಲಿಸುವಂತಹ ಕಠಿಣ ನಿಬಂಧನೆಗಳನ್ನು ಒಳಗೊಂಡಿದೆ. ಆದರೆ ಇರಾನ್‌ನ ಜಂಟಿ ಮಿಲಿಟರಿ ಕಮಾಂಡ್ ವಕ್ತಾರ ಇಬ್ರಾಹಿಂ ಝೋಲ್ಫಾಕರಿ ಅವರು ಟ್ರಂಪ್ ಅವರ ಹೇಳಿಕೆಗಳನ್ನು ಲೇವಡಿ ಮಾಡಿದ್ದು, "ಟ್ರಂಪ್ ತಮ್ಮಷ್ಟಕ್ಕೆ ತಾವೇ ಮಾತುಕತೆ ನಡೆಸುತ್ತಿದ್ದಾರೆಯೇ?" ಎಂದು ಪ್ರಶ್ನಿಸಿದ್ದಾರೆ. ಇರಾನ್ ಎಂದಿಗೂ ಟ್ರಂಪ್ ಜೊತೆ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಇರಾನ್ ತನ್ನದೇ ಆದ 5 ಅಂಶಗಳ ಪರ್ಯಾಯ ಪ್ರಸ್ತಾವನೆಯನ್ನು ಮುಂದಿಟ್ಟಿದ್ದು, ಯುದ್ಧವು ತನ್ನದೇ ಷರತ್ತುಗಳ ಮೇಲೆ ಅಂತ್ಯಗೊಳ್ಳಬೇಕೆಂದು ಪಟ್ಟು ಹಿಡಿದಿದೆ.