ʻವಿರೋಶ್ʼ ಮದುವೆ ಸಂಭ್ರಮಕ್ಕೆ ಒಂದು ತಿಂಗಳು; ಈ ಖುಷಿಯ ಕ್ಷಣದ ಬಗ್ಗೆ ವಿಜಯ್ ದೇವರಕೊಂಡ - ರಶ್ಮಿಕಾ ಹೇಳಿದ್ದೇನು?
Rashmika Mandanna Vijay Deverakonda Wedding: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತಮ್ಮ ವಿವಾಹದ ಒಂದು ತಿಂಗಳ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ಈ ಸುಂದರ ಪಯಣಕ್ಕೆ ಕಾರಣರಾದ ಆಪ್ತ ಗೆಳತಿ ಐಶ್ವರ್ಯಾ ಮತ್ತು ವೆಡ್ಡಿಂಗ್ ಪ್ಲಾನರ್ ಪ್ರಿಯಾ ಮಗಂತಿ ಅವರಿಗೆ ಈ ಜೋಡಿ ಧನ್ಯವಾದ ಅರ್ಪಿಸಿದೆ.
-
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ದಾಂಪತ್ಯಕ್ಕೆ ಈಗ ಒಂದು ತಿಂಗಳ ಸಂಭ್ರಮ. ರಾಜಸ್ಥಾನದ ಉದಯಪುರದಲ್ಲಿ ಈ ಜೋಡಿಯು ಕಂಡ ಕನಸಿನಂತೆ ಮದುವೆ ಆಗಿತ್ತು. ಬಹಳ ಅದ್ದೂರಿಯಾಗಿ ಮತ್ತು ಅಷ್ಟೇ ವ್ಯವಸ್ಥಿತವಾಗಿ ನಡೆದ ಈ ಮದುವೆ ಬಗ್ಗೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಈಗ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಈ ಮದುವೆಯು ಇಷ್ಟೊಂದು ಅದ್ಭುತವಾಗಿ ನಡೆಯುವುದಕ್ಕೆ ಕಾರಣರಾದವರನ್ನು ಈ ಜೋಡಿ ನೆನಪು ಮಾಡಿಕೊಂಡಿದೆ.
ನಟಿ ರಶ್ಮಿಕಾ ಮಂದಣ್ಣ ಹೇಳಿದ್ದೇನು?
"ನಾವು ಮದುವೆಯಾಗಿ ಆಗಲೇ ಒಂದು ತಿಂಗಳು ಕಳೆಯಿತು ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಮದುವೆ ಎಂಬುದು ದೂರದ ಆಲೋಚನೆಯಂತಿತ್ತು, ಆದರೆ ಈಗ ಮದುವೆಯಾಗಿ ಒಂದು ತಿಂಗಳು ತುಂಬಿದೆ.. ಇದು ನಿಜಕ್ಕೂ ಅದ್ಭುತ. ಮದುವೆಯ ನಿರ್ಧಾರ ಮಾಡಿದಾಗಿನಿಂದ ಇಲ್ಲಿಯವರೆಗೆ ಈ ಮಹಿಳೆಯರು ನನಗೆ ಬೆನ್ನೆಲುಬಾಗಿ ನಿಂತಿದ್ದಾರೆ. ನಾನು ಅವರಿಗೆ ಎಂದೆಂದಿಗೂ ಋಣಿಯಾಗಿರುತ್ತೇನೆ" ಎಂದು ರಶ್ಮಿಕಾ ಹೇಳಿದ್ದಾರೆ.
Rashmika Mandanna: ಹನಿಮೂನ್ ಮೂಡ್ನಲ್ಲಿ ರಶ್ಮಿಕಾ-ವಿಜಯ್; ಕ್ಯೂಟ್ ಫೋಟೊ ವೈರಲ್
ನಮ್ಮ ಕೆಲಸಗಳಿಗೆ ಮರಳುತ್ತಿದ್ದೇವೆ
"ನಮ್ಮೆಲ್ಲರ ಜೀವನದಲ್ಲಿ ಕೆಲವು ದೊಡ್ಡ ಕ್ಷಣಗಳು ಬರುತ್ತವೆ, ಯಾವುದೋ ಒಂದು ಹಂತದಲ್ಲಿ ನಾವೆಲ್ಲರೂ ಆ ಕ್ಷಣಗಳನ್ನು ಎದುರಿಸುತ್ತೇವೆ ಮತ್ತು ನಮಗರಿವಿಲ್ಲದಂತೆಯೇ ಅವುಗಳನ್ನು ದಾಟಿ ಮುಂದೆ ಸಾಗುತ್ತೇವೆ. ಆದರೆ ಆ ಕ್ಷಣಗಳನ್ನು ನೀವು ಸರಿಯಾದ ರೀತಿಯಲ್ಲಿ ಕಳೆದರೆ, ಅವುಗಳ ನೆನಪುಗಳು ನಿಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತವೆ. ನಿಮಗೂ ಹಾಗೂ ಎಲ್ಲರಿಗೂ ಸದಾ ಸಂತೋಷವನ್ನು ನೀಡುತ್ತವೆ. ಈಗ ನಾನು ಮತ್ತು ರಶ್ಮಿಕಾ ಮತ್ತೆ ನಮ್ಮ ಕೆಲಸಗಳಿಗೆ ಮರಳುತ್ತಿರುವ ಈ ಸಮಯದಲ್ಲಿ, ನಮ್ಮ ಮದುವೆ ಅತ್ಯಂತ ಸಂಭ್ರಮದಿಂದ ನಡೆಯುವಂತೆ ನೋಡಿಕೊಂಡ ಕೆಲವು ಅದ್ಭುತ ಮಹಿಳೆಯರಿಗೆ ನನ್ನ ಪ್ರೀತಿಯನ್ನು ಅರ್ಪಿಸಲು ಬಯಸುತ್ತೇನೆ" ಎಂದು ವಿಜಯ್ ದೇವರಕೊಂಡ ತಿಳಿಸಿದ್ದಾರೆ.
ಐಶ್ವರ್ಯಾ ಎಂಬುವವರು ವಿರೋಶ್ ಮದುವೆ ನಡೆಯುವುದಕ್ಕೆ ಮುಖ್ಯ ಕಾರಣರಾಗಿದ್ದಾರೆ. ಅವರನ್ನು ಹೊಗಳಿರುವ ರಶ್ಮಿಕಾ, "ನಿನ್ನ ಮೇಲೆ ನನಗಿರುವ ಕೃತಜ್ಞತೆ, ಪ್ರೀತಿ ಮತ್ತು ಅಭಿಮಾನದ ಮುಂದೆ ಧನ್ಯವಾದಗಳು ಎಂಬ ಪದಕ್ಕೆ ಅರ್ಥವೇ ಇಲ್ಲ. ಸಾರ್ವಜನಿಕವಾಗಿ ಹಂಚಿಕೊಳ್ಳಲಾಗದ ಎಷ್ಟೋ ವಿಚಾರಗಳಲ್ಲಿ ನೀನು ನನಗೆ ಸಾಥ್ ನೀಡಿದ್ದೀಯಾ. ನನ್ನ ಮದುವೆ ಇಷ್ಟು ಸುಂದರವಾಗಿ ನಡೆಯಲು ನೀನೇ ಕಾರಣ... ಕೆಲವು ದಿನ ನಾನು ಆಡುವ ಮಾತುಗಳಿಗೆ ಅರ್ಥವೇ ಇಲ್ಲದಿದ್ದರೂ, ಹೇಗೋ ಎಲ್ಲವೂ ಸುಲಭವಾಗಿಬಿಡುತ್ತದೆ... ಏಕೆಂದರೆ ನೀನು ನನ್ನ ಜೊತೆ ಇರುತ್ತೀಯ. ನನ್ನ ಜೀವನದಲ್ಲಿ ನೀನಿರುವುದಕ್ಕೆ ನಾನು ಚಿರಋಣಿ. ನೀನಿದ್ದರೆ ಜೀವನ ಅತೀ ಅತೀ ಹೆಚ್ಚು ಸುಂದರವಾಗಿರುತ್ತದೆ" ಎಂದು ರಶ್ಮಿಕಾ ಹೇಳಿದ್ದಾರೆ.
ಐಶ್ವರ್ಯಾರನ್ನು ಹೊಗಳಿರುವ ವಿಜಯ್ ದೇವರಕೊಂಡ, "ನನ್ನ ಗೆಳತಿ ಐಶ್ವರ್ಯಾ.. ಪ್ರತಿಯೊಬ್ಬರಿಗೂ ಇವಳಂತಹ ಒಬ್ಬ ಗೆಳತಿ ಇರಲೇಬೇಕು. ಅವಳು ಒಂದು ವರವೇ ಸರಿ. ನಾನು ಮದುವೆಯಾಗಲು ನಿರ್ಧರಿಸಿದ ಕ್ಷಣದಿಂದ, ನಾನು ಕೇಳದೆಯೇ ಅವಳು ನನ್ನ ಮತ್ತು ರಶ್ಮಿಕಾ ಜೊತೆಗಿದ್ದು ಎಲ್ಲವೂ ಸುಸೂತ್ರವಾಗಿ ನಡೆಯುವಂತೆ ನೋಡಿಕೊಂಡಳು. ಪ್ರವಾಸಗಳಿಂದ ಹಿಡಿದು ಮದುವೆಯ ಜಾಗ ಆರಿಸುವವರೆಗೆ, ಊಟದ ರುಚಿ ನೋಡುವುದರಿಂದ ಹಿಡಿದು ಬಟ್ಟೆ, ಆಭರಣ, ಆಮಂತ್ರಣ ಪತ್ರಿಕೆ, ಅಲಂಕಾರ ಮತ್ತು ಪ್ರಯಾಣದವರೆಗೆ.. ಪ್ರತಿಯೊಂದರಲ್ಲೂ ಅವಳು ನಮ್ಮಿಬ್ಬರ ಜೊತೆಗಿದ್ದಳು. ರಿಸೆಪ್ಷನ್‌ನಲ್ಲಿ ನಾನು ಧರಿಸಿದ ಎಲ್ಲಾ ಆಭರಣಗಳು ಅವಳದ್ದೇ ಆಗಿರಲಿ ಎಂದು ನಿರ್ಧರಿಸಿದೆ. ನಾನು ಅವಳ ಕಾಲಿನ ಗೆಜ್ಜೆಯನ್ನು ಹಾರವಾಗಿ, ಅವಳ ಗೆಜ್ಜೆಯನ್ನು ಕೈಬಳೆ ಹಾಗೂ ಕಾಲಿನ ಗೆಜ್ಜೆಯನ್ನಾಗಿಯೇ ಧರಿಸಿದೆ" ಎಂದು ವಿಜಯ್ ದೇವರಕೊಂಡ ತಿಳಿಸಿದ್ದಾರೆ.
ವಿರೋಶ್ ದಂಪತಿಯ ಪೋಸ್ಟ್
ವೆಡ್ಡಿಂಗ್ ಪ್ಲಾನರ್‌ಗೆ ಮೆಚ್ಚುಗೆ ಸೂಚಿಸಿದ ವಿರೋಶ್ ಜೋಡಿ
"ಈ ಪಯಣದಲ್ಲಿ ನಮ್ಮ ಜೊತೆ ಕೈಜೋಡಿಸಿದ್ದಕ್ಕೆ ಧನ್ಯವಾದಗಳು, ಈಗ ನೀನು ನಮ್ಮ ಕುಟುಂಬದ ಸದಸ್ಯೆ.. ನಮ್ಮ ಮೇಲಿದ್ದ ನಿನ್ನ ಪ್ರೀತಿಯೇ ನಿನ್ನ ಕೆಲಸದಲ್ಲಿ ಎದ್ದು ಕಾಣುತ್ತಿತ್ತು... ನಮ್ಮ ಪ್ರತಿಯೊಬ್ಬ ಕುಟುಂಬದವರು, ಸ್ನೇಹಿತರು ನಿನ್ನ ಹಾಗೂ ನಿನ್ನ ಇಡೀ ತಂಡದ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ" ಎಂದು ವೆಡ್ಡಿಂಗ್ ಪ್ಲಾನರ್ ಪ್ರಿಯಾ ಅವರಿಗೆ ರಶ್ಮಿಕಾ ಹೊಗಳಿದರೆ, "ಪ್ರಿಯಾ ನಮ್ಮ ಮದುವೆಯ ಪ್ಲಾನರ್ ಆಗಿ ಬಂದರು, ಆದರೆ ನಮ್ಮ ಕುಟುಂಬದ ಸದಸ್ಯರಾದರು. ನಾನು ಮತ್ತು ರಶ್ಮಿಕಾ ನಮ್ಮ ಮಾತುಕತೆಗಳಲ್ಲಿ ಹಲವು ಬಾರಿ "ಅವಳು ಇಲ್ಲದಿದ್ದರೆ ಈ ಮದುವೆ ಈ ರೀತಿ ಇರುತ್ತಿರಲಿಲ್ಲ" ಎಂದು ಹೇಳಿಕೊಂಡಿದ್ದೇವೆ. ಪ್ರಿಯಾ, ನಾವು ನಿನ್ನನ್ನು ಪ್ರೀತಿಸುತ್ತೇವೆ ಮತ್ತು ಇಂದಿನಿಂದ ನಮ್ಮ ಮನೆಯ ಪ್ರತಿಯೊಂದು ಸಂಭ್ರಮದ ಜವಾಬ್ದಾರಿಯೂ ನಿನ್ನದೇ ಎಂದು ನೆನಪಿರಲಿ" ಎಂದು ಪ್ರೀತಿಪೂರ್ವ ಎಚ್ಚರಿಕೆ ನೀಡಿದ್ದಾರೆ ವಿಜಯ್ ದೇವರಕೊಂಡ.