Amla Beniftits: ಚಳಿಗಾಲದಲ್ಲಿ ನೆಲ್ಲಿಕಾಯಿ ತಿನ್ನುವ ಪ್ರಯೋಜನಗಳು ಗೊತ್ತೇ?
Gooseberry for Winter: ಚಳಿಗಾಲದಲ್ಲಿ ಸಂಕೀರ್ಣ ಪಿಷ್ಟಗಳು ಹೆಚ್ಚಿರುವ ಗಡ್ಡೆ ಗೆಣಸುಗಳು ಮತ್ತು ವಿಟಮಿನ್ ಸಿ ಹೆಚ್ಚಿರುವ ಫಲಗಳು ದೊರೆಯುತ್ತವೆ. ಈ ಕಾಲದಲ್ಲಿ ಸಹಜವಾಗಿ ದೊರೆಯುವ ಬೆಟ್ಟದ ನೆಲ್ಲಿಕಾಯಿ ಶ್ರೇಷ್ಠ ಮಟ್ಟದ್ದು ಎನ್ನಲಾಗುತ್ತದೆ. ನೆಲ್ಲಿಕಾಯಿ ಕೆಲವೊಮ್ಮೆ ವರ್ಷದ ಬೇರೆ ದಿನಗಳಲ್ಲಿ ದೊರೆತರೂ ಈ ಚಳಿಯ ಋತುವಿನಲ್ಲಿ ದೊರೆಯುವ ನೆಲ್ಲಿಕಾಯಿಯ ಪ್ರಯೋಜನಗಳೇನು ಮತ್ತು ಇದನ್ನು ಏಕೆ ಸೇವಿಸಬೇಕು ಎಂಬುದನ್ನು ತಿಳಿಯೋಣ.
ಸಂಗ್ರಹ ಚಿತ್ರ -
ನವದೆಹಲಿ, ಡಿ.17: ಕಾಲಕ್ಕೆ ತಕ್ಕಂತೆ ತಿನ್ನಬೇಕು ಎನ್ನುವುದು ಅನುಭವದ ನುಡಿ. ಆಯಾ ಋತುಮಾನದಲ್ಲಿ ದೊರೆಯುವ ತರಕಾರಿ ಮತ್ತು ಹಣ್ಣುಗಳು ಯಾವತ್ತಿಗೂ ಶ್ರೇಷ್ಠ. ಬೇಸಿಗೆಯಲ್ಲಿ ಕಲ್ಲಂಗಡಿ, ಕರಬೂಜದಂಥ ನೀರಿರುವ ಹಣ್ಣುಗಳು ಹೆಚ್ಚಾಗಿ ದೊರೆತರೆ, ಚಳಿಗಾಲದಲ್ಲಿ ಸಂಕೀರ್ಣ ಪಿಷ್ಟಗಳು ಹೆಚ್ಚಿರುವ ಗಡ್ಡೆ ಗೆಣಸುಗಳು ಮತ್ತು ವಿಟಮಿನ್ ಸಿ ಹೆಚ್ಚಿರುವ ಫಲಗಳು ದೊರೆಯುತ್ತವೆ. ಈ ಕಾಲದಲ್ಲಿ ಸಹಜವಾಗಿ ದೊರೆಯುವ ಬೆಟ್ಟದ ನೆಲ್ಲಿಕಾಯಿ ಶ್ರೇಷ್ಠ ಮಟ್ಟದ್ದು ಎನ್ನಲಾಗುತ್ತದೆ. ನೆಲ್ಲಿಕಾಯಿ (Gooseberry for Winter) ಕೆಲವೊಮ್ಮೆ ವರ್ಷದ ಬೇರೆ ದಿನಗಳಲ್ಲಿ ದೊರೆತರೂ ಈ ಚಳಿಯ ಋತುವಿನಲ್ಲಿ ದೊರೆಯುವ ನೆಲ್ಲಿ ಕಾಯಿಯ ಪ್ರಯೋಜನ ಗಳೇನು ಮತ್ತು ಇದನ್ನು ಏಕೆ ಸೇವಿಸಬೇಕು ಎಂಬುದನ್ನು ತಿಳಿಯೋಣ.
ವಿಟಮಿನ್ ಸಿ: ನೆಲ್ಲಿಕಾಯನ್ನು ಆದಷ್ಟೂ ತಾಜಾ ಮತ್ತು ಹಸಿಯಾಗಿಯೇ ಸೇವಿಸುವುದು ಸೂಕ್ತ. ಜ್ಯೂಸ್ ಇಲ್ಲವೇ ಪಾನಕ ಮಾಡಿ ಸವಿಯುವುದರಿಂದ ಹಿಡಿದು ಚಟ್ನಿ, ತಂಬುಳಿ, ಚಿತ್ರಾನ್ನ ಎಂದೆಲ್ಲಾ ಹಸಿಯಾಗಿ ಸೇವಿಸುವ ಆಯ್ಕೆಗಳನ್ನು ಹುಡುಕ ಬಹುದು. ಕಾರಣ, ಇದರಲ್ಲಿ ಅತಿ ಉತ್ಕೃಷ್ಟ ಪ್ರಮಾಣದಲ್ಲಿ ವಿಟಮಿನ್ ಸಿ ಲಭ್ಯವಿದೆ. ಈ ಸತ್ವವು ಬೇಯಿಸಿದಷ್ಟೂ ನಷ್ಟವಾಗಿ ಹೋಗುತ್ತದೆ. ಹಾಗಾಗಿ ನೆಲ್ಲಿಯಾಯನ್ನು ಹಸಿಯಾಗಿ ತಿನ್ನುವುದು ಒಳ್ಳೆಯದು. ದೇಹದ ಒಟ್ಟಾರೆ ಸ್ವಾಸ್ಥ್ಯಕ್ಕೆ ಅತ್ಯಂತ ಮಹತ್ವದ್ದು ಸಿ ಜೀವಸತ್ವ. ಚಳಿಗಾಲದಲ್ಲಿ ಕಾಡುವ ಹಲವು ರೀತಿಯ ಜ್ವರ, ನೆಗಡಿ, ಕೆಮ್ಮಿನಂಥ ಸೋಂಕುಗಳನ್ನು ದೂರ ಇರಿಸಲು ಇದರ ಸೇವನೆ ಪ್ರಯೋಜನಕಾರಿ.
ಚಯಾಪಚಯ ಹೆಚ್ಚಳ: ಚಳಿಗಾಲದಲ್ಲಿ ತೂಕ ಹೆಚ್ಚುತ್ತದೆ ಎನ್ನುವ ಗೋಳು ಹಲವರದ್ದು. ಬೆಳಗಿನ ಖಾಲಿ ಹೊಟ್ಟೆಯಲ್ಲಿ ನೆಲ್ಲಿ ಕಾಯಿಯ ಜ್ಯೂಸ್ ಕುಡಿಯುವುದರಿಂದ ದೇಹದ ಚಯಾಪಚಯ ವನ್ನು ಹೆಚ್ಚಿಸಬಹುದು. ಪಚನ ಸುಲಭವಾಗಿ, ಸತ್ವಗಳನ್ನು ಹೀರಿಕೊಳ್ಳುವ ದೇಹದ ಸಾಮರ್ಥ್ಯವೂ ವೃದ್ಧಿಸುತ್ತದೆ. ಜೀರ್ಣಾಂಗಗಳ ಕಾರ್ಯವೂ ಹೆಚ್ಚಿ, ಉರಿದು ಹೋಗುವ ಕ್ಯಾಲರಿಗಳ ಪ್ರಮಾಣ ದ್ವಿಗುಣಗೊಳ್ಳುತ್ತದೆ. ತೂಕ ಏರುವುದು ಕಡಿಮೆಯಾಗುತ್ತದೆ.
ಡಿಟಾಕ್ಸ್: ನೆಲ್ಲಿಕಾಯಿಯ ಬಳಕೆಯಿಂದ ಜೀರ್ಣಾಂಗಗಳನ್ನು ಶುದ್ಧಗೊಳಿಸಬಹುದು. ದೇಹದಲ್ಲಿನ ಕಶ್ಮಲಗಳನ್ನು ದೂರ ಮಾಡಿ, ಡಿಟಾಕ್ಸ್ ಮಾಡಬಹುದು. ಇದಕ್ಕಾಗಿ ಬೆಳಗಿನ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಸೇವನೆ ಒಳ್ಳೆಯ ಉಪಾಯ. ಜೊತೆಗೆ ಆಸಿಡಿಟಿ, ಅಜೀರ್ಣ, ಹೊಟ್ಟೆಯುಬ್ಬರದಂಥ ಸಮಸ್ಯೆಗಳಿಗೂ ಇದು ಪರಿಹಾರ ಒದಗಿಸುತ್ತದೆ.
Health Tips: ಚಳಿಗಾಲದಲ್ಲಿ ಸಪೋಟ ಹಣ್ಣಿನ ಆರೋಗ್ಯ ಪ್ರಯೋಜನಗಳು: ರೋಗನಿರೋಧಕ ಶಕ್ತಿ ಹೆಚ್ಚಿಸಿ, ಹೃದಯವನ್ನು ಕಾಪಾಡಿ
ಮಧುಮೇಹ ನಿಯಂತ್ರಣ: ದೇಹದ ಚಯಾಮಚಯವನ್ನು ಹೆಚ್ಚಿಸಿ, ಜೀರ್ಣ ವ್ಯವಸ್ಥೆಯನ್ನು ದಾರಿಗೆ ತರುವ ಆಮ್ಲದಿಂದ ಮಧುಮೇಹವನ್ನೂ ನಿಯಂತ್ರಣದಲ್ಲಿ ಇರಿಸಬಹುದು. ಊಟದ ಮೊದಲಿನ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಸೇವಿಸಿದರೆ ರಕ್ತದಲ್ಲಿ ಸಕ್ಕರೆಯ ಮಟ್ಟ ಏರದಂತೆ ತಡೆಯಬಹುದು ಎನ್ನುತ್ತವೆ ಅಧ್ಯಯನಗಳು.
ತ್ವಚೆಯ ಆರೋಗ್ಯ: ಇದರಲ್ಲಿರುವ ವಿಟಮಿನ್ ಸಿ ಅಂಶದಿಂದ ದೇಹದಲ್ಲಿ ಹೆಚ್ಚಿನ ಪ್ರಮಾಣದ ಕೊಲಾಜಿನ್ ಉತ್ಪಾದನೆಗೆ ಪ್ರಚೋದನೆ ದೊರೆಯುತ್ತದೆ. ಇದರಿಂದ ಚರ್ಮ ಸುಕ್ಕಾಗುವುದು, ನೆರಿಗೆ ಮೂಡುವುದು ಮುಂತಾದ ವಯೋಸಹಜ ಬೆಳವಣಿಗೆ ಗಳನ್ನು ಮುಂದೂಡಿ, ಕಾಂತಿಯುಕ್ತ, ತಾರುಣ್ಯಭರಿತ ತ್ವಚೆ ಹೊಂದುವುದಕ್ಕೆ ಸಾಧ್ಯವಿದೆ.
ಕೂದಲಿನ ಆರೋಗ್ಯ: ಚಳಿಗಾಲದಲ್ಲಿ ಕೂದಲು ಉದುರುವ ದೂರುಗಳು ಎಲ್ಲೆಡೆಯಿಂದ ಕೇಳುತ್ತವೆ. ತ್ವಚೆ ಒಣಗಿ ಹೊಟ್ಟಾ ಗುವ ಸಂದರ್ಭವೂ ಉಂಟು. ಈ ದಿನಗಳಲ್ಲಿ ಕೂದಲಿನ ಆರೋಗ್ಯ ರಕ್ಷಣೆಯನ್ನು ಮಾಡಬಲ್ಲ ಸಾಧ್ಯತೆ ನೆಲ್ಲಿಕಾಯಿ ಗಳಿಗಿದೆ. ಕೂದಲಿನ ಕೋಶಗಳನ್ನು ಬಲಗೊಳಿಸಿ, ಉದುರುವು ದನ್ನು ನಿಲ್ಲಿಸಿ, ಹೊಟ್ಟಾಗುವುದನ್ನು ತಡೆಗಟ್ಟುತ್ತದೆ. ಮಾತ್ರವಲ್ಲ, ತಲೆಯ ಚರ್ಮದ ಆರೋಗ್ಯವನ್ನೂ ಸುಧಾರಿಸುತ್ತದೆ.
ಉರಿಯೂತ: ದೇಹದಲ್ಲಿ ಕಾಣಬಹುದಾದ ಯಾವುದೇ ಬಗೆಯ ಉರಿಯೂತವನ್ನು ಶಮನ ಮಾಡುವ ಸಾಮರ್ಥ್ಯ ನೆಲ್ಲಿಕಾಯಿ ಗಳಿಗೆ. ಇದರಲ್ಲಿರುವ ವಿಟಮಿನ್ ಸಿ ಉತ್ತಮವಾದ ಉತ್ಕರ್ಷಣ ನಿರೋಧಕ. ಹಾಗಾಗಿ ಆರ್ಥರೈಟಿಸ್‌ನಂತ ಉರಿಯೂತ ಸಂಬಂಧಿ ರೋಗಗಳನ್ನು ತಹಬಂದಿಗೆ ತರಲು ಇದು ನೆರವಾಗುತ್ತದೆ. ಚಳಿಗಾಲದಲ್ಲಿ ಸಹಜವಾಗಿ ಹೆಚ್ಚಾಗುವ ನೋವುಗಳಿಗೆ ನೆಲ್ಲಿಕಾಯಿ ಸೇವನೆ ಒಳ್ಳೆಯ ಮದ್ದಾಗಬಲ್ಲದು.