Health Tips: ಅಗಸೆ ಬೀಜಗಳಿಂದ ಕೂದಲಿನ ಆರೈಕೆ ಹೇಗೆ ಗೊತ್ತೆ?
Flax Seeds: ಚಳಿಗಾಲ ಮುಗಿಯುವಷ್ಟರಲ್ಲಿ ತಲೆಯಲ್ಲಿ ಕೂದಲೂ ಮುಗಿದುಹೋಗಬಹುದು ಎಂದು ಆತಂಕಪಡುವವರೂ ಇದ್ದಾರೆ. ಕೂದಲಿಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಣ್ಣೆ, ಶಾಂಪುಗಳು ಕೆಲಸ ಮಾಡದಿದ್ದಾಗ ಕೆಲವು ಸರಳ ಸೂತ್ರಗಳನ್ನು ಬಳಸಿ ನಾವೇ ಕೂದಲಿನ ಆರೈಕೆ ಮಾಡಿ ಕೊಳ್ಳಬಹುದು. ಅಂದಹಾಗೆ, ಅಗಸೆ ಬೀಜ ಗೊತ್ತಲ್ಲವೇ? ಇದನ್ನು ಬಳಸಿ ಕೂದಲನ್ನು ಆರೋಗ್ಯ ಪೂರ್ಣವಾಗಿಸಲು ಸಾಧ್ಯವಿದೆ.
ಅಗಸೆ ಬೀಜ -
ನವದೆಹಲಿ, ಡಿ. 24: ಚಳಿಗಾಲದ ಹಲವು ಸಮಸ್ಯೆಗಳಲ್ಲಿ ಕೂದಲಿನದ್ದೂ ಒಂದು. ಸಿಕ್ಕುಸಿಕ್ಕಾಗಿ, ಒಣಗಿ, ಹೊಟ್ಟಾಗಿ, ತುಂಡಾಗಿ, ಉದುರಿ, ಬೋಳಾಗುವುದನ್ನು ತಪ್ಪಿಸುವುದು ಚಳಿಗಾಲದಲ್ಲಿ ಹರ ಸಾಹಸ. ಚಳಿಗಾಲ ಮುಗಿಯುವಷ್ಟರಲ್ಲಿ ತಲೆಯಲ್ಲಿ ಕೂದಲೂ ಮುಗಿದುಹೋಗಬಹುದು ಎಂದು ಆತಂಕಪಡುವವರೂ ಇದ್ದಾರೆ. ಕೂದಲಿಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಣ್ಣೆ, ಶಾಂಪುಗಳು ಕೆಲಸ ಮಾಡದಿದ್ದಾಗ ಕೆಲವು ಸರಳ ಸೂತ್ರಗಳನ್ನು ಬಳಸಿ ನಾವೇ ಕೂದಲಿನ ಆರೈಕೆ ಮಾಡಿ ಕೊಳ್ಳಬಹುದು. ಅಂದಹಾಗೆ ಅಗಸೆ ಬೀಜ (Flax Seeds) ಗೊತ್ತಲ್ಲವೇ? ಇದನ್ನು ಬಳಸಿ ಕೂದಲನ್ನು ಆರೋಗ್ಯಪೂರ್ಣವಾಗಿಸಲು ಸಾಧ್ಯವಿದೆ.
ಒಮೇಗಾ 3 ಕೊಬ್ಬಿನಾಮ್ಲ, ಪ್ರೊಟೀನ್, ವಿಟಮಿನ್ ಇ ಮತ್ತು ಹಲವು ಬಿ ವಿಟಮಿನ್‌ಗಳು ಹಾಗೂ ಸೂಕ್ಷ್ಮ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಅಗಸೆ ಬೀಜವನ್ನು ನಿತ್ಯದ ಅಡುಗೆಯಲ್ಲಿ ಉಪಯೋಗಿಸಬಹುದು. ಇದರಿಂದ ಇಡೀ ದೇಹದ ಸ್ವಾಸ್ಥ್ಯ ಹೆಚ್ಚುತ್ತದೆ. ಆದರೆ ಇದನ್ನು ನೇರವಾಗಿ ಕೂದಲಿಗೆ ಉಪಯೋಗಿಸಬಹುದೆ? ಕೂದಲು ಉದುರದಂತೆ ತಡೆಯಲು ಅಗಸೆ ಬೀಜ ಹೇಗೆ ನೆರವಾಗುತ್ತದೆ? ಇದರಿಂದ ಎಣ್ಣೆ ಮಾಡಬಹುದೆ? ಮುಂತಾದ ಹಲವು ಪ್ರಶ್ನೆಗಳು ಮನದಲ್ಲಿ ಬಂದೀತು. ಅವುಗಳಿಗೆಲ್ಲ ಇಲ್ಲಿದೆ ಉತ್ತರ:
ಅಗಸೆ ಬೀಜವನ್ನು ಎಣ್ಣೆ ಮಾಡಿ ಕೂದಲಿಗೆ ಉಪಯೋಗಿಸಬಹುದು. ಇದನ್ನು ರುಬ್ಬಿ ಜೆಲ್‌ನಂತೆ ಮಾಡಿ ಹೇರ್‌ಪ್ಯಾಕ್‌ಗೆ ಬಳಸಬಹುದು. ಪುಡಿ ಮಾಡಿ, ಮೊಸರಿನಲ್ಲಿ ಕಲೆಸಿ ಕೂದಲಿಗೆ ಹಚ್ಚಬಹುದು. ಇದು ಎಣ್ಣೆ ಬೀಜವೇ ಆದ್ದರಿಂದ ಅಗಸೆ ಎಣ್ಣೆ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಇದರ ಜೆಲ್‌ಗಳೂ ಲಭ್ಯವಿವೆ. ಸ್ವಲ್ಪ ಸಮಯ ಹೊಂದಿಸಿಕೊಂಡರೆ, ನಾವೇ ಮಾಡಿಕೊಳ್ಳುವುದು ಸಹ ಕಷ್ಟವಲ್ಲ. ಕೂದಲಿಗೆ ಅಗಸೆ ಬೀಜವನ್ನು ಉಪಯೋಗಿಸುವುದರಿಂದ ಆಗುವ ಪ್ರಯೋಜನಗಳೇನು ಎಂಬ ಮಾಹಿತಿ ಇಲ್ಲಿದೆ.
ತಲೆಯ ಚರ್ಮಕ್ಕೆ ಲಾಭ
ತಲೆಯ ಚರ್ಮದಲ್ಲಿನ ಕಿರಿಕಿರಿಯನ್ನು ಕಡಿಮೆ ಮಾಡುವ ಸಾಧ್ಯತೆ ಅಗಸೆಬೀಜಕ್ಕಿದೆ. ಕೂದಲ ಬುಡದಲ್ಲಿ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡಿ, ಬುಡಕ್ಕೆ ಪೋಷಣೆ ಒದಗಿಸುತ್ತದೆ. ತಲೆಯ ಚರ್ಮದಲ್ಲಿರುವ ತೈಲ ಗ್ರಂಥಿಗಳು ಸಮರ್ಪಕವಾಗಿ ಕೆಲಸ ಮಾಡುವಂತೆ ಪ್ರಚೋದಿಸಿ, ಅತಿಯಾಗಿ ಎಣ್ಣೆ ಜಿಡ್ಡಾಗದಂತೆ ತಡೆಯುತ್ತವೆ.
ಯಾವ ರೀತಿಯ ಕೂದಲು?
ಎಲ್ಲ ರೀತಿಯ ಕೂದಲುಗಳಿಗೂ ಅಗಸೆ ಬೀಜ ಉಪಯುಕ್ತ. ಒಣಗಿದ ಶುಷ್ಕ ಕೂದಲು, ಎಣ್ಣೆ ಜಿಡ್ಡಿನ ಎಣ್ಣೆ ಕೂದಲು, ನೇರ ವೇಣಿ, ಸುರುಳಿ ಕೇಶಗಳು- ಹೀಗೆ ಎಲ್ಲ ರೀತಿಯ ಕೂದಲುಗಳಿಗೂ ಇದು ಉಪಯುಕ್ತ. ಕೂದಲನ್ನು ನಯವಾಗಿಸಿ, ಹೊಳಪು ನೀಡುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತದೆ ಅಗಸೆ ಬೀಜ.
ಕಟ್ಟಿದ ಮೂಗಿನ ಸಮಸ್ಯೆಯಿಂದ ಪರಿಹಾರ ಬೇಕೆ? ಇಲ್ಲಿದೆ ಟಿಪ್ಸ್
ಬಲಗೊಳಿಸುತ್ತದೆ
ಕೂದಲು ಬಲಹೀನವಾಗಿ ತುಂಡಾಗುವುದನ್ನು ತಪ್ಪಿಸುವಂಥ ಉತ್ತಮ ಕೊಬ್ಬು ಮತ್ತು ವಿಟಮಿನ್ ಇ ಜೀವಸತ್ವ ಅಗಸೆಯಲ್ಲಿದೆ. ಕೂದಲ ಬುಡದಲ್ಲಿರುವ ಉರಿಯೂತ ಕಡಿಮೆಯಾಗುತ್ತಿದ್ದಂತೆ, ಸತ್ವಗಳನ್ನು ಹೀರಿಕೊಳ್ಳಲು ಕೂದಲಿಗೆ ಸಾಧ್ಯವಾಗುತ್ತದೆ. ಇದರಿಂದ ಸಹಜವಾಗಿ ಕೂದಲು ಶಕ್ತಿ ಯುತವಾಗುತ್ತದೆ. ಇದರಿಂದ ಒರಟಾದ ಕೂದಲುಗಳನ್ನೂ ನಯವಾಗಿಸಿ, ಮೃದುವಾಗಿಸಬಹುದು.
ರಿಪೇರಿ ಕೆಲಸ
ಇದರಲ್ಲಿರುವ ಜೀವಸತ್ವಗಳಲ್ಲಿ ಮುಖ್ಯವಾದವು ವಿಟಮಿನ್ ಇ ಮತ್ತು ಬಿ ಜೀವಸತ್ವಗಳು. ಹಲವು ರೀತಿಯ ಬಿ ವಿಟಮಿನ್‌ಗಳು ಅಗಸೆ ಬೀಜದಲ್ಲಿ ಇರುವುದರಿಂದ, ಕೂದಲಿಗೆ ಆಗಿರುವ ಹಾನಿಯನ್ನು ಸರಿ ಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಕೂದಲ ಬೆಳವಣಿಗೆಗೂ ಈ ಜೀವಸತ್ವಗಳು ನೆರವಾಗುತ್ತವೆ. ಇನ್ನು ವಿಟಮಿನ್ ಇ ಎಂಬುದು ಪ್ರಬಲ ಉತ್ಕರ್ಷಣ ನಿರೋಧಕವೂ ಹೌದು. ಇವೆಲ್ಲವುಗಳ ಫಲವಾಗಿ, ಕೂದಲ ಹಾನಿ ಕಡಿಮೆಯಾಗಿ, ಕೇಶ ಸಶಕ್ತವಾಗುತ್ತದೆ.
ಹೇಗೆಲ್ಲ ಉಪಯೋಗಿಸಬಹುದು?
ಇದೊಂದು ಎಣ್ಣೆ ಬೀಜವಾದ್ದರಿಂದ, ಅಗಸೆಯ ಎಣ್ಣೆ ಲಭ್ಯವಿದೆ. ಇದನ್ನು ಆಹಾರವಾಗಿ ಉಪಯೋಗಿಸಬಹುದು. ಬೀಜಗಳನ್ನಂತೂ ನಾನಾ ರೀತಿಯಲ್ಲಿ ತಿನ್ನುವುದಕ್ಕೆ ಬಳಸಲಾಗುತ್ತದೆ. ಹಾಗಿಲ್ಲದಿದ್ದರೆ, ಕೊಬ್ಬರಿ ಎಣ್ಣೆಯಂಥ ಬೇರೆ ತೈಲದ ಜತೆ ಸೇರಿಸಿಕೊಂಡು, ಈ ಎಣ್ಣೆಯನ್ನು ತಲೆಗೆ ಮಸಾಜ್ ಮಾಡಬಹುದು. ಇದರ ಜೆಲ್ ಲಭ್ಯವಿದ್ದು, ಇದನ್ನು ತಲೆಗೆ ಹಚ್ಚಿದ ಮೇಲೆ ಒಂದೆರಡು ದಿನಗಳ ಕಾಲ ಹಾಗೆಯೇ ಬಿಡಬಹುದು, ಥೇಟ್ ಎಣ್ಣೆಯಂತೆ. ಬೇಕಾದಾಗ ತಲೆಸ್ನಾನ ಮಾಡಿದರಾಯಿತು.