Makhana Benefits: ಮಖನಾ ಲಾಭಗಳನ್ನು ತಿಳಿಯುವುದಕ್ಕೆ ತಿಂದು ನೋಡಿ!
ಮಖನಾ ಎಂದೇ ಕರೆಯಲ್ಪಡುವ ತಾವರೆ ಬೀಜ ಸೂಪರ್ ಫುಡ್ ಎನಿಸಿಕೊಂಡಿವೆ. ಉಳಿದೆಲ್ಲ ಬೀಜಗಳಂತೆಯೇ ಇದನ್ನು ಸ್ವಲ್ಪ ಹುರಿದು ಬಾಯಿಗೆ ಹಾಕಿದರಾಯ್ತು. ಹೊಟ್ಟೆಯಲ್ಲಿ ಲೀನವಾಗುತ್ತವೆ. ರುಚಿಯಲ್ಲಿ ಯಾವ ಪಾಪ್‌ಕಾರ್ನ್‌ಗೂ ಕಡಿಮೆಯಿಲ್ಲದ ಇವುಗಳ ಬಳಕೆ ಬಹಳ ಹಿಂದಿನಿಂದ ಇದ್ದರೂ, ಬಳಕೆಯ ಅರಿವು ಮಾತ್ರ ಇತ್ತೀಚೆಗೆ ಹೆಚ್ಚಿದೆ. ಪ್ರೊಟೀನ್ ಮತ್ತು ನಾರಿನಾಂಶ ಭರಪೂರ ಇದರಲ್ಲಿದೆ.

-

ಬೆಂಗಳೂರು: ಆಹಾರದಲ್ಲಿ ಉಪಯೋಗವಾಗುವ ಹಲವು ರೀತಿಯ ಬೀಜಗಳು ಕಡಿಮೆ ಕ್ಯಾಲರಿಯಲ್ಲಿ ಹೆಚ್ಚಿನ ಸತ್ವಗಳನ್ನು ನೀಡಬಲ್ಲವು. ದೇಹಕ್ಕೆ ಅತ್ಯಗತ್ಯವಾದ ಸೂಕ್ಷ್ಮ ಪೌಷ್ಟಿಕಾಂಶಗಳನ್ನು, ಆರೋಗ್ಯಕರ ಕೊಬ್ಬು ಮತ್ತು ಪ್ರೊಟೀನ್‌ಗಳನ್ನು ಒದಗಿಸಬಲ್ಲವು. ವ್ರತ, ಉಪವಾಸದ ದಿನಗಳಲ್ಲಿ ದೇಹ ಬಳಲದಂತೆ ಸಲಹಬಲ್ಲವು. ಮಧುಮೇಹದಂಥ ಸಮಸ್ಯೆಗಳಿರುವವರಿಗೂ ಉಪಕಾರ ಮಾಡಬಲ್ಲವು. ಇಂಥ ಹಲವು ಬೀಜಗಳಲ್ಲಿ ಫಾಕ್ಸ್ ನಟ್ ಅಥವಾ ತಾವರೆ ಬೀಜಗಳು (Makhana Benefits) ಇತ್ತೀಚೆಗೆ ಬಹಳಷ್ಟು ಪ್ರಚಾರ ಪಡೆಯುತ್ತಿವೆ.
ಮಖನಾ (Makhana) ಎಂದೇ ಕರೆಯಲ್ಪಡುವ ಇವುಗಳನ್ನು ಉಳಿದೆಲ್ಲ ಬೀಜಗಳಂತೆಯೇ ಸ್ವಲ್ಪ ಹುರಿದು ಬಾಯಿಗೆ ಒಗೆದರಾಯಿತು… ಹೊಟ್ಟೆಯಲ್ಲಿ ಲೀನವಾಗುತ್ತವೆ. ರುಚಿಯಲ್ಲಿ ಯಾವ ಪಾಪ್‌ಕಾರ್ನ್‌ಗೂ ಕಡಿಮೆಯಿಲ್ಲದ ಇವುಗಳ ಬಳಕೆ ಬಹಳ ಹಿಂದಿನಿಂದ ಇದ್ದರೂ, ಬಳಕೆಯ ಅರಿವು ಮಾತ್ರ ಇತ್ತೀಚೆಗೆ ಹೆಚ್ಚಿದೆ. ಪ್ರೊಟೀನ್ ಮತ್ತು ನಾರಿನಾಂಶ ಭರಪೂರ ಇರುವ ಇದರಲ್ಲಿ ಕ್ಯಾಲರಿ ಕಡಿಮೆ. ನೂರು ಗ್ರಾಂ ಮಖನಾದಿಂದ ಸುಮಾರು 350 ಕ್ಯಾಲರಿ ಶಕ್ತಿ ದೊರೆಯುತ್ತದೆ. ಮಾತ್ರವಲ್ಲ, ದೇಹದಲ್ಲಿರುವ ಬೇಡದ ಅಂಶಗಳು ಅಂದರೆ ಟಾಕ್ಸಿನ್‌ಗಳನ್ನು ಹೊರದಬ್ಬಲು ಇದು ನೆರವಾಗುತ್ತದೆ. ಕ್ಯಾಲ್ಶಿಯಂ ಹೆಚ್ಚಿರುವುದರಿಂದ ಮೂಳೆಗಳನ್ನು ಬಲಗೊಳಿಸುತ್ತವೆ. ಮೆಗ್ನೀಶಿಯಂ, ಪೊಟಾಶಿಯಂ, ಫಾಸ್ಫರಸ್ ಮುಂತಾದ ಖನಿಜಗಳ ಗಣಿಯಂತಿರುವ ತಾವರೆ ಬೀಜಗಳನ್ನು ಆಗೀಗ ಮೆಲ್ಲುತ್ತಿದ್ದರೆ ಆರೋಗ್ಯಕ್ಕೆ ಬಹಳಷ್ಟು ಲಾಭಗಳುಂಟು. ಏನೆಲ್ಲ ಪ್ರಯೋಜನಗಳಿವೆ ಮಖನಾ ಮೆಲ್ಲುವುದರಲ್ಲಿ?
ಈ ಸುದ್ದಿಯನ್ನೂ ಓದಿ: Side Effect Of Coffee : ಎನರ್ಜಿ ಬೂಸ್ಟ್ ಮಾಡೋಕೆ ಕಾಫಿ ಕುಡಿಯುತ್ತಿದ್ದೀರಾ? ಸೈಡ್ ಎಫೆಕ್ಟ್ ಬಗ್ಗೆ ಡಾಕ್ಟರ್ ಏನು ಹೇಳುತ್ತಿದ್ದಾರೆ ನೋಡಿ

ಚರ್ಮಕ್ಕೆ ಲಾಭ
ಉತ್ಕರ್ಷಣ ನಿರೋಧಕಗಳು ಹೇರಳವಾಗಿರುವ ಮಖನಾ ಸೇವನೆಯಿಂದ ಚರ್ಮದ ಮೇಲೆ ಸುಕ್ಕುಗಳು ಬರುವುದು ಮುಂದೂಡಲ್ಪಡುತ್ತದೆ. ಚರ್ಮದ ಕಾಂತಿ ಹೆಚ್ಚಿ, ನಯವಾದ ಹೊಳೆಯುವ ತಾರುಣ್ಯಭರಿತ ತ್ವಚೆ ದೊರೆಯುತ್ತದೆ. ಕಾಂತಿಯುಕ್ತ ಚರ್ಮ ಹೊಂದಲು ರುಚಿಕರವಾದ ಆಯ್ಕೆ ಇದು.
ನಾರು ಹೇರಳ
ನೋಡುವುದಕ್ಕೆ ಮಾತ್ರವಲ್ಲ. ರುಚಿಯಲ್ಲೂ ಪಾಪ್ ಕಾರ್ನ್ ನೆನಪಿಸುವ ಈ ಬೀಜಗಳಲ್ಲಿ ನಾರು ಸಮೃದ್ಧವಾಗಿದೆ. ಇದರಿಂದ ಜೀರ್ಣಾಂಗಗಳ ಆರೋಗ್ಯ ಸುಧಾರಿಸಿ, ಮಲಬದ್ಧತೆಯಂಥ ಕಿರಿಕಿರಿಯ ಸಮಸ್ಯೆ ನಿವಾರಣೆ ಆಗುತ್ತದೆ. ಹಾಗಾಗಿ ಆಗೀಗ ಒಂದಿಷ್ಟು ಮಖನಾ ಮೆಲ್ಲಬಹುದು.
ಹೃದಯದ ಆರೋಗ್ಯಕ್ಕೆ ಪೂರಕ
ಆಲ್ಕಲಾಯ್ಡ್ ಮತ್ತು ಗಾಲಿಕ್ ಆಮ್ಲದಂಥ ಫೈಟೋನ್ಯೂಟ್ರಿಯೆಂಟ್‌ಗಳು ಮಖನಾದಲ್ಲಿದ್ದು, ಮಾರಕ ರೋಗಗಳನ್ನು ದೂರ ಇರಿಸುತ್ತವೆ. ಮೆಗ್ನೀಶಿಯಂ ಹೇರಳವಾಗಿರುವ ತಾವರೆ ಬೀಜಗಳ ಸೇವನೆಯಿಂದ ರಕ್ತ ಸಂಚಾರ ಸುಗಮವಾಗಿ, ರಕ್ತದಲ್ಲಿ ಆಮ್ಲಜನಕದ ಮಟ್ಟ ಹೆಚ್ಚಿ, ಕಿಡ್ನಿ, ಹೃದಯ ಮತ್ತಿತರ ಅಂಗಾಗಗಳ ರೋಗಗಳು ದೂರವಾಗುತ್ತವೆ
ನರಗಳ ಆರೋಗ್ಯ
ಥಿಯಾಮಿನ್ ಅಂಶ ವಿಫುಲವಾಗಿರುವ ಈ ಬೀಜಗಳು ನರಗಳ ಆರೋಗ್ಯಕ್ಕೆ ಬೇಕಾದವು. ನರಗಳ ಸಂವಾಹಕಗಳ ಕ್ಷಮತೆ ಹೆಚ್ಚಿಸುವಂಥ ಅಸೆಟೈಲ್‌ಕೋಲಿನ್ ಇದರಲ್ಲಿದೆ. ನರಗಳ ಆರೋಗ್ಯ ವೃದ್ಧಿಗೆ, ಬುದ್ಧಿಶಕ್ತಿ ಹೆಚ್ಚಳಕ್ಕೆ ಮಖನಾ ಸೇವನೆ ಈ ರೀತಿಯಲ್ಲಿ ನೆರವಾಗುತ್ತದೆ.
ಮಧುಮೇಹಿಗಳಿಗೆ ಪೂರಕ
ಇದರಲ್ಲಿರುವ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ. ಅಂದರೆ ಇದನ್ನು ಸೇವಿಸಿದ ಮೇಲೆ ಶಕ್ತಿಯು ನಿಧಾನವಾಗಿ ರಕ್ತದೊಂದಿಗೆ ಸೇರಿಕೊಳ್ಳುತ್ತದೆ ಮತ್ತು ಸಕ್ಕರೆಯ ಮಟ್ಟ ದಿಢೀರ್ ಏರದಂತೆ ತಡೆಯುತ್ತದೆ. ನಾರಿನಾಂಶವೂ ಹೆಚ್ಚಿರುವುದರಿಂದ ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.

ಗ್ಲೂಟೆನ್ ರಹಿತ
ಊಟಗಳ ನಡುವೆ ಕಾಡುವ ಕಳ್ಳ ಹಸಿವೆಗೆ ಇದು ಒಳ್ಳೆಯ ಮದ್ದು. ಇದರಲ್ಲಿ ಸೋಡಿಯಂ, ಕೊಲೆಸ್ಟ್ರಾಲ್ ಮತ್ತು ಕೊಬ್ಬು ಕಡಿಮೆಯಿದ್ದು, ಪ್ರೊಟೀನ್ ಮತ್ತು ಪಿಷ್ಟದ ಅಂಶಗಳು ಹೆಚ್ಚಿವೆ. ಗ್ಲೂಟೆನ್ ಅಲರ್ಜಿ ಇರುವವರಿಗೂ ಇದು ಒಳ್ಳೆಯ ತಿನಿಸು. ಹುರಿದರೆ ಬೇಸರವಿಲ್ಲದೆ ಬಾಯಿಗೆಸೆದುಕೊಳ್ಳಬಹುದು.
ಫಲವಂತಿಕೆ ವೃದ್ಧಿ
ಸಂತಾನಹೀನತೆಯಿಂದ ಬಳಲುತ್ತಿರುವವರಿಗೆ ಇದು ನೆರವಾಗುತ್ತದೆ. ಪುರುಷರು ಮತ್ತು ಮಹಿಳೆಯರಿಬ್ಬರ ಫಲವಂತಿಕೆಯನ್ನೂ ಇದು ಹೆಚ್ಚಿಸುತ್ತದೆ. ಇದೊಂದರಿಂದಲೇ ಸಂತಾನಹೀನತೆಯ ಸಮಸ್ಯೆ ದೂರವಾಗುತ್ತದೆ ಎಂದಲ್ಲ. ಆದರೆ ಈ ದಿಸೆಯಲ್ಲಿ ತಾವರೆ ಬೀಜಗಳು ನೆರವಾಗಬಹುದು ಎನ್ನಲಾಗುತ್ತದೆ.