Health Tips: ನಮಗೆ ಒಆರ್‌ಎಸ್ ಅಗತ್ಯ ಬೀಳುವುದು ಯಾವಾಗ?
ನಿರ್ಜಲೀಕರಣಕ್ಕೆ ತುತ್ತಾಗದಂತೆ ಕಾಪಾಡಿಕೊಳ್ಳಲು ಹಲವು ಪ್ರಯತ್ನಗಳನ್ನು ಮಾಡುವುದು ಅನಿವಾರ್ಯ. ಅವುಗಳಲ್ಲಿ ಪ್ರಮುಖವೆಂದರೆ ಒಆರ್‌ಎಸ್ ಅಥವಾ ಒರಲ್ ರಿಹೈಡ್ರೇಶನ್ ಸೊಲ್ಯೂಶನ್ ಕುಡಿಯುವುದು. ದೇಹಕ್ಕೆ ಅಗತ್ಯವಾದ ನೀರು, ಸಕ್ಕರೆ ಮತ್ತು ಲವಣಗಳನ್ನು ಹೊಂದಿರುವ ಈ ದ್ರಾವಣದ ಸೇವನೆಯಿಂದ ನಿರ್ಜಲೀಕರಣಕ್ಕೆ ತುತ್ತಾಗಿ ಪ್ರಾಣಾಪಾಯ ಆಗುವುದರಿಂದ ಪಾರಾಗಬಹುದು. ಆದರೆ ಇದನ್ನು ಯಾರು, ಎಷ್ಟು ಕುಡಿಯಬಹುದು? ಒಆರ್‌ಎಸ್ ಪುಡಿ ಒಳ್ಳೆಯದೋ ಅಥವಾ ಜ್ಯೂಸ್ ರೀತಿಯಲ್ಲಿರುವ ಒಆರ್‌ಎಸ್‌ಎಲ್ ಒಳ್ಳೆಯದೋ? ಮುಂತಾದ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ORS

ನವದೆಹಲಿ: ಬಿಸಿಲು, ಧಗೆ ಏರುತ್ತಿದ್ದಂತೆ ನಿರ್ಜಲೀಕರಣಕ್ಕೆ ತುತ್ತಾಗದಂತೆ ಕಾಪಾಡಿಕೊಳ್ಳಲು ಹಲವು ಪ್ರಯತ್ನಗಳನ್ನು ಮಾಡುವುದು ಅನಿವಾರ್ಯವಾಗಿದೆ. ಅವುಗಳಲ್ಲಿ ಪ್ರಮುಖವೆಂದರೆ ಒಆರ್‌ಎಸ್ (ORS) ಅಥವಾ ಒರಲ್ ರಿಹೈಡ್ರೇಶನ್ ಸೊಲ್ಯೂಶನ್ ಕುಡಿಯುವುದು. ದೇಹಕ್ಕೆ ಅಗತ್ಯವಾದ ನೀರು, ಸಕ್ಕರೆ ಮತ್ತು ಲವಣಗಳನ್ನು ಹೊಂದಿರುವ ಈ ದ್ರಾವಣದ ಸೇವನೆಯಿಂದ ನಿರ್ಜಲೀಕರಣಕ್ಕೆ ತುತ್ತಾಗಿ ಪ್ರಾಣಾಪಾಯ ಆಗುವುದರಿಂದ ಪಾರಾಗಬಹುದು. ಆದರೆ ಇದನ್ನು ಯಾರು, ಎಷ್ಟು ಕುಡಿಯಬಹುದು? ಮಧುಮೇಹ ಇದ್ದವರೂ ಇದನ್ನು ಕುಡಿಯಬಹುದೇ? ಮಕ್ಕಳಿಗೂ ಸೂಕ್ತವೇ? ಒಆರ್‌ಎಸ್ ಪುಡಿ ಒಳ್ಳೆಯದೋ ಅಥವಾ ಜ್ಯೂಸ್ ರೀತಿಯಲ್ಲಿರುವ ಒಆರ್‌ಎಸ್‌ಎಲ್ ಒಳ್ಳೆಯದೋ? ಮುಂತಾದ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಏನಿದು ಒಆರ್‌ಎಸ್ ?: ರಾಬರ್ಟ್ ಕ್ರೇನ್ ಎಂಬಾತ ಇದರ ಮಹತ್ವವನ್ನು ತಿಳಿಸಿಕೊಟ್ಟವ. 1960ರ ಸುಮಾರಿಗೆ ವಾಂತಿ, ಅತಿಸಾರದಿಂದ ಆಗುತ್ತಿದ್ದ ಪ್ರಾಣಾಪಾಯಗಳನ್ನು ತಡೆಯುವುದಕ್ಕೆ ಈ ದ್ರಾವಣದ ಸೇವನೆಯನ್ನು ಜಾರಿಗೆ ತರಲಾಗಿತ್ತು. ವಾಂತಿ-ಭೇದಿಯಿಂದ ಆಗುತ್ತಿದ್ದ ನಿರ್ಜಲೀಕರಣ ತಪ್ಪಿಸಲು ರಕ್ತನಾಳಕ್ಕೆ ಗ್ಲೂಕೋಸ್ ಕೊಡುವ ಪದ್ಧತಿ ಆಗ ಚಾಲ್ತಿಯಲ್ಲಿತ್ತು. ಆದರೆ ಎಲ್ಲ ಕಡೆಯೂ ಈ ಚಿಕಿತ್ಸೆಯನ್ನು ನೀಡಲಾಗುತ್ತಿರಲಿಲ್ಲ. ಆಗ ಒಆರೆಸ್ ಎಂಬ ಜೀವಜಲದ ಸೇವನೆ ವರದಾನವಾಗಿ ಪರಿಣಮಿಸಿತ್ತು.
ಇದು ಗ್ಲೂಕೋಸ್, ಸೋಡಿಯಂ ಕ್ಲೋರೈಡ್, ಪೊಟಾಶಿಯಂ ಕ್ಲೋರೈಡ್ ಮತ್ತು ಸೋಡಿಯಂ ಸಿಟ್ರೇಟ್‌ಗಳ ಮಿಶ್ರಣವಾಗಿದೆ. ಜತೆಗೆ ಜಿಂಕ್ ಸಹ ಸೇರಿರುವುದರಿಂದ ವಾಂತಿ- ಅತಿಸಾರದ ಲಕ್ಷಣಗಳ ಉಪಶಮನಕ್ಕೆ ನೆರವಾಗುತ್ತದೆ. ನಿರ್ಜಲೀಕರಣದಿಂದ ಕಳೆದುಕೊಂಡ ಖನಿಜಾಂಶಗಳನ್ನು ಮತ್ತು ನೀರನ್ನು ದೇಹಕ್ಕೆ ಮರಳಿ ಒದಗಿಸಿಕೊಡುವ ವ್ಯವಸ್ಥಿತವಾದ ಮಾರ್ಗವಿದು. ವಾಂತಿ, ಡಯರಿಯಾ, ಸುಸ್ತು ಮತ್ತು ನಿರ್ಜಲೀಕರಣದ ಲಕ್ಷಣಗಳು ಕಾಣುತ್ತಿದ್ದಂತೆ ನೀರಿಗೆ ಒಂದು ಸ್ಯಾಶೆ ಒಆರ್‌ಎಸ್ ಬೆರೆಸಿ ಕುಡಿದರೆ, ಜೀವಕ್ಕೆ ತಂಪಾಗುತ್ತದೆ ಎಂಬುದು ಬಹುತೇಕ ಮಂದಿಗೆ ಅನುಭವಕ್ಕೆ ಬಂದಿದೆ. ಆದರೆ ನಮಗೆ ನಿಜಕ್ಕೂ ಒಆರ್‌ಎಸ್ ಅಗತ್ಯ ಬೀಳುವುದು ಯಾವಾಗ?
ಯಾವಾಗ ಕುಡಿಯಬೇಕು?: ನಿರ್ಜಲೀಕರಣದ ಪ್ರಾರಂಭಿಕ ಲಕ್ಷಣಗಳು ಗೋಚರವಾಗುತ್ತಿದ್ದಂತೆ ಒಆರ್‌ಎಸ್ ಸೇವನೆಯನ್ನು ಪ್ರಾರಂಭಿಸುವುದು ಸೂಕ್ತ. ಅಂದರೆ ತೀವ್ರ ಬಾಯಾರಿಕೆ, ತುಟಿಗಳೆಲ್ಲ ಒಣಗಿದಂತಾಗುವುದು, ಮೂತ್ರ ಕಡಿಮೆಯಾಗುವುದು, ಮೂತ್ರದ ಬಣ್ಣ ಗಾಢವಾಗುವುದು, ಸುಸ್ತು, ಆಯಾಸ, ತಲೆ ಸುತ್ತುವುದು, ತಲೆಯೊಳಗೆ ನೋವು… ಇಂಥ ಯಾವುದೇ ಅನುಭವಕ್ಕೆ ಬಂದರೂ ಒಆರ್‌ಎಸ್ ಸೇವನೆಯನ್ನು ಆರಂಭಿಸಬಹುದು. ಬಿಸಿಲಿನ ತೀವ್ರತೆ ಸಿಕ್ಕಾಪಟ್ಟೆ ಇರುವ ದಿನಗಳಲ್ಲಿ, ಮನೆಯೊಳಗಿದ್ದರೂ ಸುಸ್ತು, ಆಯಾಸ, ಸಂಕಟ ಕಾಡುತ್ತಿರುವ ಹೊತ್ತಿನಲ್ಲಿ ಒಂದು ಲೋಟ ಒಆರ್‌ಎಸ್ ನೀರು ಕುಡಿಯುವುದು ಜೀವವನ್ನು ತಂಪಾಗಿಸುತ್ತದೆ.
ಎಷ್ಟು ಕುಡಿಯಬೇಕು?: ಇದು ಆ ವ್ಯಕ್ತಿಯ ದೇಹಸ್ಥಿತಿಯನ್ನು ಅವಲಂಬಿಸಿದೆ. ನಿರ್ಜಲೀಕರಣದ ಲಕ್ಷಣಗಳು ಸ್ವಲ್ಪ ಅಥವಾ ಮಧ್ಯಮ ಪ್ರಮಾಣದಲ್ಲಿದ್ದರೆ, ಸುಮಾರು 20-25 ಎಂ.ಎಲ್.ನಷ್ಟು ಒಆರ್‌ಎಸ್ ದ್ರಾವಣವನ್ನು ಒಮ್ಮೆ ಗುಟುಕರಿಸಬೇಕು. ಪ್ರತಿ 10-15 ನಿಮಿಷಗಳಿಗೆ ಇದನ್ನೇ ನಿಯಮಿತವಾಗಿ ಮುಂದುವರಿಸಬೇಕು. ದಾಹ ಕಡಿಮೆಯಾಗಿ, ಬಾಯಿ ಒಣಗುವುದು ನಿಂತು, ಮೂತ್ರ ಹೆಚ್ಚಾಗಿ, ಮೂತ್ರದ ಬಣ್ಣ ತಿಳಿಯಾಗಿ, ಸುಸ್ತು ಕಡಿಮೆಯಾಗುವವರೆಗೂ ಇದನ್ನೇ ಮುಂದುವರಿಸಬೇಕು. ಅಗತ್ಯವಿದ್ದರೆ ಇದನ್ನು ದಿನವಿಡೀ ಮಾಡಬಹುದು. ಆದರೆ ನಿರ್ಜಲೀಕರಣ ತೀವ್ರವಾಗಿದ್ದರೆ ಒಆರೆಸ್ ಪ್ರಮಾಣ ಹೆಚ್ಚು ಬೇಕಾಗುತ್ತದೆ. ಇದಕ್ಕೆ ವೈದ್ಯರಲ್ಲಿ ಸಲಹೆ ಕೇಳುವುದು ಒಳಿತು.
ಯಾರೆಲ್ಲ ಕುಡಿಯಬಹುದು?: ಬೇಸಿಗೆಯ ಹೊಡೆತ ತೀವ್ರವಾಗಿರುವ ಈ ದಿನಗಳಲ್ಲಿ ಬಹುತೇಕ ಎಲ್ಲರೂ ಇದನ್ನು ಸೇವಿಸಬಹುದು. ಆದರೆ ಹೃದ್ರೋಗಿಗಳು, ಕಿಡ್ನಿ ಸಮಸ್ಯೆ ಇರುವವರು ವೈದ್ಯರ ಸಲಹೆಯನ್ನು ತೆಗೆದುಕೊಳ್ಳಬೇಕು. ಅಗತ್ಯವಿದ್ದಾಗ ಮಧುಮೇಹಿಗಳು ಸಹ ಇದನ್ನು ಸೇವಿಸಬಹುದು. ಆದರೆ ನಿಯಮಿತವಾಗಿ ಸೇವಿಸುವ ಅಗತ್ಯವಿದ್ದರೆ ಸಕ್ಕರೆಯಂಶದ ಮೇಲೆ ಕಣ್ಣಿಡಬೇಕಾಗುತ್ತದೆ. ಹಾಗಾಗಿ ಅವರೂ ವೈದ್ಯರಲ್ಲಿ ಸಮಾಲೋಚನೆ ಮಾಡುವುದು ಕ್ಷೇಮ. ಇದರಿಂದ ಯಾವಾಗ, ಎಷ್ಟು ಕುಡಿಯಬಹುದು ಎಂಬುದು ಸ್ಪಷ್ಟವಾಗುತ್ತದೆ.
ಇದನ್ನು ಓದಿ: Healthy Food: ಹಸಿ ತರಕಾರಿ ಅಥವಾ ಬೇಯಿಸಿದ ತರಕಾರಿ! ಯಾವುದು ಆರೋಗ್ಯಕ್ಕೆ ಉತ್ತಮ?
ಮಕ್ಕಳಿಗೆ ನೀಡಬಹುದೇ?: ಖಂಡಿತ. ಆರು ತಿಂಗಳ ನಂತರದ ಶಿಶುಗಳಿಗೂ ಒಆರ್‌ಎಸ್‌ನಿಂದ ಅನುಕೂಲವಾಗುತ್ತದೆ. ಬಿಸಿಲ ದಿನಗಳಲ್ಲಿ, 6-24 ತಿಂಗಳ ಮಕ್ಕಳಿಗೆ, ದಿನಕ್ಕೆ 20 ಚಮಚ ಒಆರ್‌ಎಸ್ ನೀಡಬಹುದು. 2-5 ವರ್ಷದ ಮಕ್ಕಳಿಗೆ 40 ಚಮಚ ಒಆರೆಸ್ ನೀಡಬಹುದು. 5 ವರ್ಷಕ್ಕೆ ಮೇಲ್ಪಟ್ಟ ಮಕ್ಕಳಿಗೆ ಅವು ಕುಡಿದು ತಡೆಯುವಷ್ಟು ನೀಡಬಹುದು. ವಯಸ್ಕರಿಗಿಂತ ಮಕ್ಕಳೇ ಹೆಚ್ಚು ನಿರ್ಜಲೀಕರಣಕ್ಕೆ ತುತ್ತಾಗುವುದರಿಂದ ಒಆರೆಸ್ ದ್ರಾವಣ ಎಳೆಯರ ಪಾಲಿನ ಜೀವಜಲ.
ಯಾವುದು ಸೂಕ್ತ?: ವಾಂತಿ, ಅತಿಸಾರದಂಥ ತೊಂದರೆ ಇರುವಾಗ ಒಆರ್‌ಎಸ್ ಪುಡಿಯೇ ಸೂಕ್ತವಾದದ್ದು. ಅದರ ಮೇಲೆ ನಮೂದಿಸಿರುವ ಪ್ರಮಾಣವನ್ನು ತಪ್ಪದೆ ಪಾಲಿಸಬೇಕು. ಒಆರ್‌ಎಸ್‌ಎಲ್‌ನಲ್ಲಿ ಬಣ್ಣ ಮತ್ತು ಸುವಾಸನೆಯನ್ನು ಸೇರಿಸಿರುವ ಸಾಧ್ಯತೆ ಹೆಚ್ಚಿರುವುದರಿಂದ, ಚಿಕಿತ್ಸೆಗೆ ಪುಡಿಯೇ ಸೂಕ್ತ. ಹಾಗಲ್ಲದೆ ಬೇಸಿಗೆಯ ಹೊಡೆತ ತಡೆಯುವಾಗ, ಸಾಮಾನ್ಯ ಸುಸ್ತು, ಆಯಾಸಗಳ ಪರಿಹಾರಕ್ಕಾದರೆ ಯಾವುದನ್ನಾದರೂ ಬಳಸಬಹುದು.