ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜಿಮ್‌ನಲ್ಲಿ ಬೆವರು ಹರಿಸಲು ಹೆಚ್ಚು ಎನರ್ಜಿ ಬೇಕಾ? ವರ್ಕೌಟ್‌ಗೂ ಮುನ್ನ ಈ ಆಹಾರ ಸೇವಿಸಿ

Diet and Health Tips: ಜಿಮ್‌ಗೆ ಹೋಗುವ ಮುನ್ನ ಏನು ತಿನ್ನಬೇಕು ಎಂಬುದು ಫಿಟ್‌ನೆಸ್ ಪ್ರಿಯರನ್ನು ಸದಾ ಕಾಡುವ ಗೊಂದಲ. ಖಾಲಿ ಹೊಟ್ಟೆಯಲ್ಲಿ ವರ್ಕೌಟ್ ಮಾಡಬೇಕೇ ಅಥವಾ ಕಾಫಿ, ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳಲ್ಲಿ ಯಾವುದನ್ನು ಸೇವಿಸುವುದು ಉತ್ತಮ ಎಂಬುದರ ಮೇಲೆ ನಮ್ಮ ವ್ಯಾಯಾಮದ ಸಾಮರ್ಥ್ಯ ಮತ್ತು ಫಲಿತಾಂಶ ನಿಂತಿರುತ್ತದೆ. ನಿಮ್ಮ ಫಿಟ್‌ನೆಸ್ ಗುರಿಗೆ ಅನುಗುಣವಾಗಿ ವರ್ಕೌಟ್‌ಗೂ ಮುನ್ನ ಯಾವ ಆಹಾರವನ್ನು ಯಾವಾಗ ಸೇವಿಸಬೇಕು ಎನ್ನುವ ವಿವರ ಇಲ್ಲಿದೆ.

ವರ್ಕೌಟ್‌ ಹೋಗೋ ಮುನ್ನ ಏನು ತಿನ್ನಬೇಕು ಗೊತ್ತಾ? ಇಲ್ಲಿದೆ ನೋಡಿ ಟಿಪ್ಸ್‌

ಸಾಂದರ್ಭಿಕ ಚಿತ್ರ -

Profile
Jyoti S Nov 20, 2026 7:00 AM

ಬೆಂಗಳೂರು: ಇಂದಿನ ದಿನಗಳಲ್ಲಿ ಆರೋಗ್ಯ ಮತ್ತು ಫಿಟ್‌ನೆಸ್ ಬಗ್ಗೆ ಕಾಳಜಿ ಹೆಚ್ಚಾಗಿದ್ದು, ಪ್ರತಿದಿನ ಜಿಮ್‌ಗೆ ಹೋಗುವವರ ಸಂಖ್ಯೆ ದೊಡ್ಡದಾಗಿದೆ. ಆದರೆ ಜಿಮ್‌ನಲ್ಲಿ ಬೆವರು ಹರಿಸುವುದಷ್ಟೇ ಮುಖ್ಯವಲ್ಲ, ವರ್ಕೌಟ್‌ಗೂ ಮುನ್ನ (Pre-Workout) ದೇಹಕ್ಕೆ ಯಾವ ರೀತಿಯ ಇಂಧನ ನೀಡುತ್ತೇವೆ ಎಂಬುದು ಅಷ್ಟೇ ಮುಖ್ಯ. ಸಾಮಾನ್ಯವಾಗಿ ಅನೇಕರಿಗೆ ಜಿಮ್‌ಗೆ ಹೋಗುವ ಮುನ್ನ ಕಾಫಿ ಕುಡಿಯಬೇಕೇ, ಪ್ರೋಟೀನ್ ಶೇಕ್ ತೆಗೆದುಕೊಳ್ಳಬೇಕೇ, ಬಾಳೆಹಣ್ಣಿನಂತಹ ಕಾರ್ಬ್ಸ್ ತಿನ್ನಬೇಕೇ ಅಥವಾ ಏನನ್ನೂ ತಿನ್ನದೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಬೇಕೇ ಎಂಬ ಗೊಂದಲವಿರುತ್ತದೆ.

ತಜ್ಞರ ಪ್ರಕಾರ, ಈ ನಾಲ್ಕಕ್ಕೂ ತನ್ನದೇ ಆದ ಮಹತ್ವವಿದ್ದು, ನಿಮ್ಮ ವ್ಯಾಯಾಮದ ಸಮಯ, ಜೀರ್ಣಶಕ್ತಿ ಮತ್ತು ಫಿಟ್‌ನೆಸ್ ಗುರಿಯನ್ನು ಆಧರಿಸಿ ಸರಿಯಾದ ಆಯ್ಕೆ ಮಾಡಿಕೊಳ್ಳಬೇಕು. ಭಾರವಾದ ತೂಕ ಎತ್ತುವ ಅಥವಾ ಹೆಚ್ಚು ಶ್ರಮದಾಯಕ ವ್ಯಾಯಾಮ ಮಾಡುವವರಿಗೆ ಕಾರ್ಬೋಹೈಡ್ರೇಟ್‌ಗಳು ತಕ್ಷಣದ ಶಕ್ತಿ ನೀಡಿದರೆ, ಸ್ನಾಯುಗಳ ಬಲವರ್ಧನೆಗೆ ಪ್ರೋಟೀನ್ ನೆರವಾಗುತ್ತದೆ. ಹಾಗೆಯೇ ಏಕಾಗ್ರತೆ ಮತ್ತು ಕೊಬ್ಬು ಕರಗಿಸುವ ಉದ್ದೇಶಕ್ಕೆ ಬ್ಲ್ಯಾಕ್ ಕಾಫಿ ಸಹಕಾರಿಯಾದರೆ, ಬೆಳಿಗ್ಗೆ ಲಘು ಕಾರ್ಡಿಯೋ ಅಥವಾ ವಾಕಿಂಗ್ ಮಾಡುವವರಿಗೆ ಖಾಲಿ ಹೊಟ್ಟೆಯ ವರ್ಕೌಟ್ ಸೂಕ್ತವಾಗಬಹುದು.

ಜಿಮ್‌ಗೆ ಹೋಗದೆ ಬ್ಲ್ಯಾಕ್ ಟೀ ಕುಡಿದು ತೂಕ ಇಳಿಸುವುದು ಹೇಗೆ?

ಜಿಮ್‌ಗೆ ಹೋಗುವ ಮುನ್ನ ಸೇವಿಸಬೇಕಾದ ಆಹಾರಗಳು

ಕಾರ್ಬೋಹೈಡ್ರೇಟ್‌ಗಳು: ನೀವು ಜಿಮ್‌ನಲ್ಲಿ ಭಾರ ಎತ್ತುವ ಅಥವಾ ಹೆಚ್ಚು ಶ್ರಮದಾಯಕ ವ್ಯಾಯಾಮ ಮಾಡುತ್ತಿದ್ದರೆ, ಕಾರ್ಬೋಹೈಡ್ರೇಟ್‌ಗಳು ನಿಮ್ಮ ದೇಹಕ್ಕೆ ಪ್ರಮುಖ ಇಂಧನವಾಗಿ ಕೆಲಸ ಮಾಡುತ್ತವೆ. ಕಾರ್ಬ್ಸ್ ಸೇವನೆಯಿಂದ ದೇಹದಲ್ಲಿ ಗ್ಲೈಕೋಜನ್ ಮಟ್ಟ ಹೆಚ್ಚಾಗಿ, ವ್ಯಾಯಾಮದ ವೇಳೆ ಸುಸ್ತಾಗದಂತೆ ತಡೆಯುತ್ತದೆ. ಜಿಮ್‌ಗೆ ಹೋಗುವ 30ರಿಂದ 45 ನಿಮಿಷಗಳ ಮೊದಲು ಒಂದು ಬಾಳೆಹಣ್ಣು, ಓಟ್ಸ್, ಬ್ರೌನ್ ಬ್ರೆಡ್ ಅಥವಾ ಒಂದೆರಡು ಖರ್ಜೂರ ತಿನ್ನುವುದು ಅತ್ಯುತ್ತಮ ಆಯ್ಕೆ.

ಪ್ರೋಟೀನ್: ಮಸಲ್ ಬಿಲ್ಡಿಂಗ್ ಗುರಿ ಹೊಂದಿರುವವರಿಗೆ ವರ್ಕೌಟ್‌ಗೂ ಮುನ್ನ ಪ್ರೋಟೀನ್ ಸೇವನೆ ಬಹಳ ಮುಖ್ಯ. ವ್ಯಾಯಾಮದ ಸಮಯದಲ್ಲಿ ಸ್ನಾಯುಗಳಿಗೆ ಆಗುವ ಹಾನಿಯನ್ನು ತಡೆಯಲು ಮತ್ತು ನಂತರ ಸ್ನಾಯುಗಳು ವೇಗವಾಗಿ ಚೇತರಿಸಿಕೊಳ್ಳಲು ಪ್ರೋಟೀನ್ ನೆರವಾಗುತ್ತದೆ. ಜಿಮ್‌ಗೆ ಹೋಗುವ 1 ರಿಂದ 2 ಗಂಟೆ ಮೊದಲು ಬೇಯಿಸಿದ ಮೊಟ್ಟೆ, ಮೊಸರು, ಪನೀರ್, ಮೊಳಕೆ ಕಾಳು ಅಥವಾ ವೇ ಪ್ರೋಟೀನ್ ಸೇವಿಸಬಹುದು.

ಬ್ಲ್ಯಾಕ್ ಕಾಫಿ: ಕಾಫಿಯಲ್ಲಿರುವ ಕೆಫೀನ್ ಅಂಶವು ನರಮಂಡಲವನ್ನು ಚುರುಕುಗೊಳಿಸಿ, ವರ್ಕೌಟ್ ಮಾಡುವಾಗ ಹೆಚ್ಚಿನ ಏಕಾಗ್ರತೆ ಮತ್ತು ಉತ್ಸಾಹ ನೀಡುತ್ತದೆ. ಅಲ್ಲದೆ, ಇದು ದೇಹದ ಮೆಟಬಾಲಿಸಂ ಅನ್ನು ವೇಗಗೊಳಿಸಿ, ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ಜಿಮ್‌ಗೆ ಹೋಗುವ 20-30 ನಿಮಿಷಗಳ ಮುನ್ನ ಸಕ್ಕರೆ ಮತ್ತು ಹಾಲು ಬೆರೆಸದ ಒಂದು ಕಪ್ ಬ್ಲ್ಯಾಕ್ ಕಾಫಿ ಕುಡಿಯುವುದು ಉತ್ತಮ ಫಲಿತಾಂಶ ನೀಡುತ್ತದೆ. ಆದರೆ, ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಅಥವಾ ಎಸಿಡಿಟಿ ಸಮಸ್ಯೆ ಉಂಟಾಗುವವರು ಇದನ್ನು ತಪ್ಪಿಸುವುದು ಒಳ್ಳೆಯದು.

ಖಾಲಿ ಹೊಟ್ಟೆಯಲ್ಲಿ ವರ್ಕೌಟ್ ಯಾರಿಗೆ ಸೂಕ್ತ?

ನೀವು ಬೆಳಗ್ಗೆ ಎದ್ದ ತಕ್ಷಣ ಕೇವಲ 30ರಿಂದ 40 ನಿಮಿಷಗಳ ಕಾಲ ಸಾಧಾರಣ ವಾಕಿಂಗ್, ಜಾಗಿಂಗ್, ಯೋಗ ಅಥವಾ ಲಘು ಕಾರ್ಡಿಯೋ ವ್ಯಾಯಾಮ ಮಾಡುವುದಾದರೆ ಖಾಲಿ ಹೊಟ್ಟೆಯಲ್ಲಿ ಅಥವಾ ನೀರು ಕುಡಿದು ಮಾಡಬಹುದು. ಇದರಿಂದ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬು ಕರಗುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ ಭಾರವಾದ ತೂಕ ಎತ್ತುವ ವ್ಯಾಯಾಮ ಮಾಡುವುದರಿಂದ ತಲೆತಿರುಗುವಿಕೆ, ಸುಸ್ತು ಮತ್ತು ಸ್ನಾಯುಗಳ ಕ್ಷೀಣತೆ ಉಂಟಾಗುವ ಅಪಾಯವಿದೆ.