ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಶಾಕ್‌; ಬಸ್‌ ಪ್ರಯಾಣ ದರ ಹೆಚ್ಚಳ ಇಂದು ಮಧ್ಯರಾತ್ರಿಯಿಂದಲೇ ಜಾರಿ

Bus Fare Hike in Karnataka: ಬೆಲೆ ಹೆಚ್ಚಳದಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಆಘಾತ ಎದುರಾಗಿದೆ. ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸೇರಿ ನಾಲ್ಕೂ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. ಬಿಎಂಟಿಸಿ ಬಸ್‌ಗೆ ಸ್ಟೇಜ್‌ಗೆ ಇದ್ದ 6 ರೂಪಾಯಿಯನ್ನು 10 ರೂಪಾಯಿಗೆ ಏರಿಕೆ ಮಾಡಲಾಗಿದೆ.

ರಾಜ್ಯದಲ್ಲಿ ಬಸ್‌ ಪ್ರಯಾಣ ದರ ಹೆಚ್ಚಳ; ಇಂದು ಮಧ್ಯರಾತ್ರಿಯಿಂದಲೇ ಜಾರಿ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Nov 4, 2026 12:29 PM

ಬೆಂಗಳೂರು, ನ. 4: ಕೆಎಸ್‌ಆರ್‌ಟಿಸಿ (KSRTC), ಬಿಎಂಟಿಸಿ (BMTC), ಎನ್‌ಡಬ್ಲ್ಯುಕೆಆರ್‌ಟಿಸಿ (NWKRTC) ಮತ್ತು ಕೆಕೆಆರ್‌ಟಿಸಿ (KKRTC) ಸೇರಿ ನಾಲ್ಕೂ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ (Bus Fare Hike in Karnataka). ಆ ಮೂಲಕ ಬೆಲೆ ಹೆಚ್ಚಳದಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಬರೆ ಎಳೆದಿದೆ. ಕೆಎಸ್​​​ಆರ್​​​ಟಿಸಿಯಲ್ಲಿ ಟಿಕೆಟ್​​​ ದರ 9 ರೂಪಾಯಿ ಏರಿಕೆ ಆಗಲಿದೆ. ಬಿಎಂಟಿಸಿ ಬಸ್‌ಗೆ ಸ್ಟೇಜ್‌ಗೆ ಇದ್ದ 6 ರೂಪಾಯಿಯನ್ನು 10 ರೂಪಾಯಿಗೆ ಹೆಚ್ಚಿಸಲಾಗಿದೆ. ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಶೇಕಡಾವಾರು ಲೆಕ್ಕದಲ್ಲಿ ಹೆಚ್ಚಿಸದೆ, ಸ್ಟೇಜ್‌ಗಳ ಆಧಾರದ ಮೇಲೆ ಏರಿಕೆ ಮಾಡಲಾಗಿದೆ. ಇಂದು ಮಧ್ಯರಾತ್ರಿಯಿಂದ ಪರಿಷ್ಕೃತ ದರ ಜಾರಿಯಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸಚಿವ ಬೈರತಿ ಸುರೇಶ್ (Byrathi Suresh) ಪ್ರಕಟಿಸಿದರು.

ʼʼ10 ವರ್ಷಗಳ ಸುದೀರ್ಘ ಅವಧಿಯಲ್ಲಿ ರಾಜ್ಯದಲ್ಲಿ ಕೇವಲ ಒಂದು ಬಾರಿಯಷ್ಟೇ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ ಹಾಗೂ 2025ರಲ್ಲಿಯೂ ಪ್ರಯಾಣ ದರ ಏರಿಕೆ ಮಾಡಲಾಗಿತ್ತುʼʼ ಎಂದು ತಿಳಿಸಿದ್ದಾರೆ. ಇತ್ತೀಚೆಗಷ್ಟೆ ರಾಜ್ಯ ಸರ್ಕಾರ ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಹೆಚ್ಚಿಸಿ ಸಾರ್ವಜನಿಕರಿಗೆ ಶಾಕ್‌ ನೀಡಿತ್ತು.

ನಂದಿನಿ ಹಾಲು- ಮೊಸರಿನ ಬೆಲೆ ಏರಿಕೆ; ಹೊಸ ದರಪಟ್ಟಿ ಇಲ್ಲಿದೆ ನೋಡಿ

ಹೊಸ ದರಗಳ ವಿವರ

ಇನ್ನು ವಾಯುವಜ್ರ ಬಸ್‌ನಲ್ಲಿ ಕೊನೆಯ ಸ್ಟೇಜ್‌ಗೆ ಇದ್ದ 75 ರೂಪಾಯಿಯನ್ನು ಇದೀಗ 90 ರೂಪಾಯಿಗೆ ಏರಿಕೆ ಮಾಡಲಾಗಿದೆ. ''ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಪರಿಷ್ಕರಿಸಲಾಗಿದೆ. ಸಾಮಾನ್ಯ ಸಾರಿಗೆಯಲ್ಲಿ 9 ರೂಪಾಯಿ ಹಾಗೂ ವೇಗದೂತ ಬಸ್‌ಗಳಲ್ಲಿ 18 ರೂಪಾಯಿವರೆಗೆ ದರ ಹೆಚ್ಚಿಸಲಾಗಿದೆʼʼ ಎಂದು ಬೈರತಿ ಸುರೇಶ್ ತಿಳಿಸಿದರು.

ʼʼಹವಾನಿಯಂತ್ರಿತ ವಜ್ರ ಬಸ್‌ಗಳ ಗರಿಷ್ಠ ಪ್ರಯಾಣ ದರವನ್ನು 75 ರೂಪಾಯಿಯಿಂದ 90 ರೂಪಾಯಿಗೆ ಹೆಚ್ಚಿಸಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂಚರಿಸುವ ವಾಯುವಜ್ರ ಬಸ್‌ಗಳ ಗರಿಷ್ಠ ದರವನ್ನು 405 ರೂಪಾಯಿಯಿಂದ 425 ರೂಪಾಯಿಗೆ ಏರಿಸಲಾಗಿದೆʼʼ ಎಂದರು.

ʼʼಸಾಮಾನ್ಯ ಸಾರಿಗೆಯಲ್ಲಿ ಪರಿಷ್ಕೃತ ದರದ ಪ್ರಕಾರ ಬೆಂಗಳೂರಿನಿಂದ ನೆಲಮಂಗಲ, ಹೊಸಕೋಟೆಗೆ 44 ರೂಪಾಯಿ ಹಾಗೂ ಮಾಗಡಿಗೆ 57 ರೂಪಾಯಿ ಆಗಲಿದೆ. ಬೆಂಗಳೂರಿನಿಂದ ಮೈಸೂರಿಗೆ 197 ರೂಪಾಯಿ, ಮಂಡ್ಯಕ್ಕೆ 136 ರೂಪಾಯಿ, ತುಮಕೂರು, ಕೋಲಾರಕ್ಕೆ 100 ರೂಪಾಯಿ, ಹಾಸನಕ್ಕೆ 270 ರೂಪಾಯಿ, ಚಿಕ್ಕಮಗಳೂರಿಗೆ 363 ರೂಪಾಯಿಗೆ ಏರಿಕೆಯಾಗಲಿದೆʼʼ ಎಂದು ತಿಳಿಸಿದರು.

ನಂದಿನಿ ಹಾಲಿನ ದರ ಪ್ರತಿ ಲೀಟರ್‌ಗೆ 8 ರೂ. ಹೆಚ್ಚಳ

ಶಕ್ತಿ ಯೋಜನೆಯಿಂದ ಯಾವುದೇ ನಷ್ಟ ಉಂಟಾಗಿಲ್ಲ

ಇದೇ ವೇಳೆ ಶಕ್ತಿ ಯೋಜನೆಯನ್ನು ಸಮರ್ಥಿಸಿಕೊಂಡ ಸಚಿವರು, ʼʼಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ರಾಜ್ಯದಲ್ಲಿ 74.04 ಲಕ್ಷ ಪ್ರಯಾಣಿಕರು ಪ್ರತಿನಿತ್ಯ ಪ್ರಯಾಣ ಮಾಡುತ್ತಿದ್ದಾರೆ. ಸರ್ಕಾರ ನಾಲ್ಕು ನಿಗಮಗಳಿಗೆ ಹಣ ನೀಡುತ್ತಿದೆ. ಹೀಗಾಗಿ ಯೋಜನೆಯಿಂದ ಸಾರಿಗೆ ಇಲಾಖೆಗೆ ಯಾವುದೇ ನಷ್ಟ ಉಂಟಾಗಿಲ್ಲʼʼ ಎಂದು ಸ್ಪಷ್ಟಪಡಿಸಿದರು. ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ದರ ಪರಿಷ್ಕರಣೆ ಕುರಿತು ಚರ್ಚಿಸಲಾಗಿತ್ತು.

ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.