Almatti Dam : ಕುಡಿಯುವ ನೀರಿಗೆ ಮಾತ್ರ ಆದ್ಯತೆ: ಜಲಾಶಯಗಳು ಆರ್.ಸಿ. ವ್ಯಾಪ್ತಿಗೆ
ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ಕುಡಿಯುವ ನೀರು ಕೃಷ್ಣಾ ನದಿಯನ್ನೇ ಅವಲಂಬಿಸಿದೆ. ಕಲಬುರಗಿ ನಗರದ ಸರಡಗಿ ಬ್ಯಾರೇಜ್ ಸೇರಿದಂತೆ ಇಂಡಿ, ಸಿಂದಗಿ, ತಾಳಿಕೋಟೆ ಭಾಗಗಳಿಗೆ ನಾರಾಯಣಪುರ ಜಲಾಶಯದಿಂದ ಸುಮಾರು 150 ಕಿ.ಮೀ. ದೂರದವರೆಗೆ ನೀರು ಹರಿಸ ಬೇಕಾಗುತ್ತದೆ.
-
ಆಲಮಟ್ಟಿ: ರಾಜ್ಯದ ಬರ ಪರಿಸ್ಥಿತಿ ಹಾಗೂ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆಯ ಕೊರತೆ ಯ ಹಿನ್ನೆಲೆಯಲ್ಲಿ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಂದ ಸದ್ಯಕ್ಕೆ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಕಾಲುವೆಗಳಿಗೆ ನೀರು ಹರಿಸಲು, ನೀರಾವರಿಗೆ ನೀರು ಬಳಸದೇ ಇರಲು ನಿರ್ಧರಿಸಲಾಗಿದೆ.
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತಾ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕೃಷ್ಣಾ ಜಲಾನಯನ ಪ್ರದೇಶದ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ನೀರಾವರಿ ನಿಗಮಗಳು, ವಿದ್ಯುತ್ ಪ್ರಸರಣ ನಿಗಮ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ತಿಳಿದು ಬಂದಿದೆ.
ಸಭೆಯಲ್ಲಿ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳ ನೀರಿನ ಲಭ್ಯತೆ, 2027ರ ಜೂನ್ ವರೆಗೆ ಕುಡಿಯುವ ನೀರಿನ ಅವಶ್ಯಕತೆ, ಕಾಲುವೆಗಳಿಗೆ ನೀರು ಹರಿಸುವಿಕೆ ಹಾಗೂ ನೀರಾವರಿಗೆ ನೀರು ಬಿಡುಗಡೆ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಇದನ್ನೂ ಓದಿ: Alamatti News: ಕೆ.ಪಿ.ಮೋಹನ ರಾಜ ಅವರಿಗೆ ಪುನರ್ವಸತಿ ಇಲಾಖೆಯ ಆಯುಕ್ತರ ಹೆಚ್ಚುವರಿ ಅಧಿಕಾರ
ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ಕುಡಿಯುವ ನೀರು ಕೃಷ್ಣಾ ನದಿಯನ್ನೇ ಅವಲಂಬಿಸಿದೆ. ಕಲಬುರಗಿ ನಗರದ ಸರಡಗಿ ಬ್ಯಾರೇಜ್ ಸೇರಿದಂತೆ ಇಂಡಿ, ಸಿಂದಗಿ, ತಾಳಿಕೋಟೆ ಭಾಗಗಳಿಗೆ ನಾರಾಯಣಪುರ ಜಲಾಶಯದಿಂದ ಸುಮಾರು 150 ಕಿ.ಮೀ. ದೂರದವರೆಗೆ ನೀರು ಹರಿಸ ಬೇಕಾಗುತ್ತದೆ.
ವರ್ಷಪೂರ್ತಿ ಕುಡಿಯುವ ನೀರಿಗೆ ಸುಮಾರು 2 ಟಿಎಂಸಿ ಅಡಿ ನೀರು ಅಗತ್ಯವಿದ್ದರೂ, ನೀರಾವರಿ ನೀರು ಬಿಡದ ಪರಿಸ್ಥಿತಿಯಲ್ಲಿ ಆ ಭಾಗಗಳಿಗೆ ನೀರು ತಲುಪಿಸಲು ಕನಿಷ್ಠ 5 ಟಿಎಂಸಿ ಅಡಿ ನೀರು ಬೇಕಾಗುತ್ತದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಕೆರೆಗಳ ಭರ್ತಿಗೂ ಬೇಡಿಕೆಗೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು ನೀರು ಅಗತ್ಯವಾಗುತ್ತದೆ ಎಂಬ ವಿಷಯ ಚರ್ಚೆಯಾಯಿತು ಎನ್ನಲಾಗಿದೆ.
ಸಭೆಯಲ್ಲಿ ಮೊದಲ ಆದ್ಯತೆ ಕುಡಿಯುವ ನೀರು, ನಂತರ ರಾಯಚೂರು, ಕೂಡಗಿ, ಯರಮರಸ್ ಸೇರಿದಂತೆ ಉಷ್ಣ ವಿದ್ಯುತ್ ಸ್ಥಾವರಗಳಿಗೆ ನೀರು ಹಾಗೂ ಕುಡಿಯುವ ನೀರು ಪೂರೈಕೆಯಾಗುವ ಕೆರೆಗಳ ಭರ್ತಿಗೆ ಆದ್ಯತೆ ನೀಡಲು ಗೌರವ ಗುಪ್ತಾ ಸೂಚನೆ ನೀಡಿದರು.
ಒಳಹರಿವು ಬಹುತೇಕ ಸ್ಥಗಿತ; ಆಲಮಟ್ಟಿ ಜಲಾಶಯಕ್ಕೆ ಮಂಗಳವಾರ ಸಂಜೆ ವೇಳೆಗೆ ಕೇವಲ 423 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಐದು ದಿನಗಳ ಹಿಂದೆ ಇದ್ದ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ಒಳಹರಿವು ಈಗ ಬಹುತೇಕ ಸ್ಥಗಿತಗೊಂಡಿದೆ. ಜಲಾಶಯದಲ್ಲಿ 517.37 ಮೀಟರ್ ಎತ್ತರ ದಲ್ಲಿ 89 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳ ಸ್ಥಿತಿ ಸುಧಾರಿಸಿದ ನಂತರ ಮಾತ್ರ ಒಂದು ಬೆಳೆಗೆ ನೀರಾವರಿ ನೀರು ಬಿಡುವ ಕುರಿತು ಮರುಪರಿಶೀಲನೆ ನಡೆಸಲಾಗುವುದು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಪ್ರಾದೇಶಿಕ ಆಯುಕ್ತರ ಅಧೀನದಲ್ಲೇ ಜಲಾಶಯಗಳು: 2014ರ ಸರ್ಕಾರದ ಆದೇಶದಂತೆ ಬೇಸಿಗೆ ಹಾಗೂ ಮಳೆಯ ಕೊರತೆಯ ಸಂದರ್ಭದಲ್ಲಿ ಜಲಾಶಯಗಳ ನೀರಿನ ನಿರ್ವಹಣೆಯನ್ನು ಸಂಬಂಧಿ ಸಿದ ಪ್ರಾದೇಶಿಕ ಆಯುಕ್ತರ ಸುಪರ್ದಿಗೆ ವಹಿಸಲಾಗುತ್ತದೆ. ಅದರಂತೆ ಏಪ್ರಿಲ್‌ನಿಂದ ಆಲಮಟ್ಟಿ ಹಾಗೂ ಹಿಪ್ಪರಗಿ ಜಲಾಶಯಗಳು ಬೆಳಗಾವಿ ಪ್ರಾದೇಶಿಕ ಆಯುಕ್ತರ ಮತ್ತು ನಾರಾಯಣಪುರ ಜಲಾಶಯ ಕಲಬುರಗಿ ಪ್ರಾದೇಶಿಕ ಆಯುಕ್ತರ ಅಧೀನದಲ್ಲಿದ್ದು, ಇದೇ ವ್ಯವಸ್ಥೆ ಮುಂದುವರಿಯ ಲಿದೆ.
ಕುಡಿಯುವ ನೀರಿನ ಅಗತ್ಯ ಕುರಿತು ಜಿಲ್ಲಾಧಿಕಾರಿಗಳು ಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದ ಬಳಿಕ, ಅವರ ಅನುಮತಿ ಮೇರೆಗೆ ಮಾತ್ರ ಸಂಬಂಧಿತ ನೀರಾವರಿ ಇಲಾಖೆಯ ಅಧಿಕಾರಿಗಳು ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಗೌರವ ಗುಪ್ತಾ ಸ್ಪಷ್ಟ ನಿರ್ದೇಶನ ನೀಡಿದರು.
ಜುಲೈ 3ರಂದು ರಾಜ್ಯ ಸಚಿವ ಸಂಪುಟ ಕೈಗೊಂಡ ತೀರ್ಮಾನದಂತೆ, ಈ ವರ್ಷ ಮೊದಲ ಆದ್ಯತೆ ಕುಡಿಯುವ ನೀರಿಗೆ ನೀಡಲಾಗಿದ್ದು, ಎಲ್-ನಿನೋ ಪರಿಣಾಮದಿಂದ ಮಳೆ ದುರ್ಬಲವಾಗಿರುವ ಕಾರಣ ನೀರಾವರಿಗೆ ನೀರು ಬಳಸಲು ಅವಕಾಶವಿಲ್ಲ. ಪ್ರತಿ ವರ್ಷ ಕಾಲುವೆಗಳಿಗೆ ನೀರು ಹರಿಸ ಲಾಗುತ್ತಿದ್ದು, ಈ ಒಂದು ವರ್ಷ ರೈತರು ಸಹಕರಿಸಬೇಕು ಎಂದು ಅಧಿಕಾರಿಗಳು ಸಭೆಯಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಕೆಬಿಜೆಎನ್‌ಎಲ್, ಕೆಎನ್ ಎನ್ ಎಲ್, ವಿವಿಧ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತೀತರರು ಇದ್ದರು.