ಸಿನಿಮೀಯ ರೀತಿಯ 400 ಕೋಟಿ ರುಪಾಯಿ ದರೋಡೆ ಬಗ್ಗೆ ಸ್ಫೋಟಕ ಮಾಹಿತಿ ಲಭ್ಯ: ರಕ್ಷಕರೇ ಭಕ್ಷಕರಾದ್ರಾ?
Robbery Case: ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 400 ಕೋಟಿ ರುಪಾಯಿಗೂ ಅಧಿಕ ಮೌಲ್ಯದ ನಿಷೇಧಿತ 2,000 ರೂ. ಮುಖಬೆಲೆಯ ನೋಟುಗಳಿದ್ದ 2 ಕಂಟೇನರ್ ಹೈಜಾಕ್‌ಗೆ ಸಂಬಂಧಿಸಿ ಮಹತ್ವದ ವಿಚಾರ ಬೆಳಕಿಗೆ ಬಂದಿದೆ. ಕರ್ನಾಟಕ ಪೊಲೀಸರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಆಡಿಯೊ ವೈರಲ್ ಆಗಿದೆ.
ಸಾಂದರ್ಭಿಕ ಚಿತ್ರ. -
ಬೆಳಗಾವಿ, ಜ. 25: ಗೋವಾದಿಂದ ಮಹಾರಾಷ್ಟ್ರಕ್ಕೆ (Maharashtra) ಸಾಗಿಸುತ್ತಿದ್ದ 400 ಕೋಟಿ ರುಪಾಯಿಗೂ ಅಧಿಕ ಮೌಲ್ಯದ ನಿಷೇಧಿತ 2,000 ರೂ. ಮುಖಬೆಲೆಯ (Robbery Case) ನೋಟುಗಳಿದ್ದ 2 ಕಂಟೇನರ್‌ಗಳನ್ನ ಬೆಳಗಾವಿಯ ಚೋರ್ಲಾ ಘಾಟ್‌ನಲ್ಲಿ ಹೈಜಾಕ್ ಮಾಡಲಾದ ಪ್ರಕರಣ ತಡವಾಗಿ ಬೆಳಕಿಗೆ ಬಂದು ಭಾರಿ ಸಂಚಲನ ಸೃಷಿಸಿದೆ. ದೇಶದಲ್ಲಿಯೇ ಅತ್ಯಂತ ದೊಡ್ಡ ದರೋಡೆ ಪ್ರಕರಣ ಇದು ಎನಿಸಿಕೊಂಡಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ವಿಚಾರ ಬಯಲಾಗಿದು, ಕರ್ನಾಟಕ ಪೊಲೀಸರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಆಡಿಯೊ ರಿಲೀಸ್ ಆಗಿ ವೈರಲ್ ಆಗಿದೆ.
ಆರೋಪಿಗಳಾದ ವಿರಾಟ್ ಮತ್ತು ಜಯೇಶ್ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಇದಾಗಿದೆ. ಇವರು ಗುಜರಾತ್‌ನ ಅಹಮದಾಬಾದ್‌ನ ಆಶ್ರಮವೊಂದರಲ್ಲಿ ಡೀಲ್ ಕುರಿತು ಮಾತನಾಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಆಡಿಯೊದಲ್ಲಿ ಏನಿದೆ?
ಉದ್ಯಮಿ ಕಿಶೋರ್ ಶೇಟ್ ಬಳಿ ಹಣ ಇರುವ ಬಗ್ಗೆ ಇವರು ಮಾತುಕತೆ ನಡೆಸಿದ್ದಾರೆ. ಹಣ ಸಾಗಾಟದ ಜವಾಬ್ದಾರಿಯನ್ನು ಆರೋಪಿ ವಿರಾಟ್ ಹೊತ್ತುಕೊಂಡಿದ್ದ. ಈಗ ವಿರಾಟ್ ಮತ್ತು ಆತನ ಗ್ಯಾಂಗ್‌ನ ಸದಸ್ಯರು ನಾಪತ್ತೆಯಾಗಿದ್ದಾರೆ. ಅಚ್ಚರಿಯ ವಿಚಾರ ಎಂದರೆ ಈ ಸಂಭಾಷಣೆಯ ವೇಳೆ ಕರ್ನಾಟಕ ಪೊಲೀಸರು ಹೆಸರೂ ಪ್ರಸ್ತಾಪವಾಗಿದೆ. ಕರ್ನಾಟಕ ಪೊಲೀಸರೂ ಈ ಕೃತ್ಯದಲ್ಲಿ ಭಾಗಿಯಾಗಿರುವ ಕುರಿತು ಅವರು ಮಾತನಾಡಿದ್ದಾರೆ. ಕರ್ನಟಕ ಪೊಲೀಸರು ಈ ಕೃತ್ಯದಲ್ಲಿ ಭಾಗಿಯಾಗಿದ್ದರೂ ಹಣ ಎಲ್ಲಿ ಹೋಯ್ತು ಎನ್ನುವುದು ಗೊತ್ತಾಗುತ್ತಿಲ್ಲ ಎಂಬ ಮಾತು ಕೇಳಿ ಬಂದಿದೆ. ಈ ಆಡಿಯೊದ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
10 ಆರೋಪಿಗಳು ಅರೆಸ್ಟ್
400 ಕೋಟಿ ರುಪಾಯಿ ದರೋಡೆ ಕೇಸ್ಗೆ ಸಂಬಂಧಿಸಿದಂತೆ ಶನಿವಾರ ಐವರನ್ನ ಬಂಧಿಸಿದ್ದ ಮಹಾರಾಷ್ಟ್ರ ಎಸ್ಐಟಿ ಅಧಿಕಾರಿಗಳು ಭಾನುವಾರ ಮತ್ತೋರ್ವನನ್ನು ವಶಕ್ಕೆ ಪಡೆದಿದ್ದಾರೆ. ಜನವರಿ 23ರಂದು ನಾಲ್ವರನ್ನ ಬಂಧಿಸಲಾಗಿತ್ತು. ಬಂಧಿತರ ಸಂಖ್ಯೆ ಈಗ 10ಕ್ಕೆ ಏರಿದೆ.
7 ಕೋಟಿ ರೂ. ಮುಖಬೆಲೆಯ ನಕಲಿ ಕರೆನ್ಸಿ ವಶ
ಘಟನೆ ವಿವರ
ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದ್ದ ಸುಮಾರು 400 ಕೋಟಿ ರುಪಾಯಿ ನಗದು ತುಂಬಿದ್ದ 2 ಕಂಟೇನರ್‌ಗಳು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ಪ್ರದೇಶದಲ್ಲಿ 2025ರ ಅಕ್ಟೋಬರ್ 16ರಂದು ಹೈಜಾಕ್ ಆಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಭಾರಿ ಮೊತ್ತದ ಹಣವು ಮಹಾರಾಷ್ಟ್ರದ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಅವರಿಗೆ ಸೇರಿದ್ದು. ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗುತ್ತಿದ್ದ 2 ಕಂಟೇನರ್‌ಗಳು ಖಾನಾಪುರ ತಾಲೂಕಿನ ಅರಣ್ಯ ಪ್ರದೇಶವಾದ ಚೋರ್ಲಾ ಘಾಟ್ ಮಾರ್ಗದಲ್ಲಿ ಏಕಾಏಕಿ ನಾಪತ್ತೆಯಾಗಿದ್ದು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ. ಇದು 3 ರಾಜ್ಯಗಳಿಗೆ ಸಂಬಂಧಿಸಿದ ಪ್ರಕರಣವಾಗಿರುವುದರಿಂದ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಪೊಲೀಸರು ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸುತ್ತಿದ್ದಾರೆ.
ʼʼಕರ್ನಾಟಕ–ಗೋವಾ ಗಡಿಭಾಗದ ಚೋರ್ಲಾ ಘಾಟ್‌ನಲ್ಲಿ 400 ಕೋಟಿ ರುಪಾಯಿ ಮೊತ್ತದ ರಾಬರಿ ನಡೆದಿದೆ ಎಂಬ ಮಾಹಿತಿ ನಾಸಿಕ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಜನವರಿ 6ರಂದು ಪತ್ರದ ಮೂಮೂಲಕ ಲಭಿಸಿದೆʼʼ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ದೃಢಪಡಿಸಿದ್ದಾರೆ.