Republic Day 2026: ವಂದೇ ಮಾತರಂ ಗೀತೆಯ ಐತಿಹಾಸಿಕ ಮಹತ್ವ ಸ್ಮರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ದೇಶಾದ್ಯಂತ 77ನೇ ವರ್ಷದ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದು, “ಭಾರತ ಮಾತೆಯ ದೈವಿಕ ಸ್ವರೂಪವನ್ನು ವರ್ಣಿಸುವ ವಂದೇ ಮಾತರಂ ಗೀತೆ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ದೇಶಭಕ್ತಿಯ ಭಾವನೆ ತುಂಬುತ್ತದೆ” ಎಂದಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು -
ನವದೆಹಲಿ, ಜ. 25: ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) 77ನೇ ಗಣರಾಜ್ಯೋತ್ಸವದ (Republic Day) ಮುನ್ನಾ ದಿನದಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ “ಭಾರತ ಮಾತೆಯ ದೈವಿಕ ಸ್ವರೂಪವನ್ನು ವರ್ಣಿಸುವ 'ವಂದೇ ಮಾತರಂ' ಗೀತೆ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ದೇಶಭಕ್ತಿಯ ಭಾವನೆ ತುಂಬುತ್ತದೆ” ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. 'ವಂದೇ ಮಾತರಂ' ಕೇವಲ ಒಂದು ಗೀತೆ ಮಾತ್ರವಲ್ಲ, ಅದು ಭಾರತದ ಆತ್ಮವಾಗಿದ್ದು, ದೇಶದ ಭವಿಷ್ಯ ನಿರ್ಮಾಣದಲ್ಲೂ ಪ್ರಮುಖ ಪಾತ್ರ ವಹಿಸಲಿದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
2026ರ ಗಣರಾಜ್ಯೋತ್ಸವಕ್ಕೆ 'ವಂದೇ ಮಾತರಂ' ಥೀಮ್ ಆಯ್ಕೆ ಮಾಡಿರುವುದನ್ನೂ ಈ ಸಂದರ್ಭ ಅವರು ಸ್ಮರಿಸಿದರು. ತಮ್ಮ ಭಾಷಣದಲ್ಲಿ 'ವಂದೇ ಮಾತರಂ'ನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ರಾಷ್ಟ್ರಪತಿ ಒತ್ತಿ ಹೇಳಿದರು. “ರಾಷ್ಟ್ರೀಯ ಗೀತೆ ಭಾರತ ಮಾತೆಯ ದೈವಿಕ ರೂಪಕ್ಕೆ ಸಲ್ಲಿಸುವ ಪ್ರಾರ್ಥನೆಯಾಗಿದ್ದು, ದೇಶ ಪ್ರೇಮದ ಶಕ್ತಿಯನ್ನು ಜನರಲ್ಲಿ ಜಾಗೃತಗೊಳಿಸುತ್ತದೆ” ಎಂದು ತಿಳಿಸಿದರು. ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರು ರಚಿಸಿದ 'ವಂದೇ ಮಾತರಂ' ಗೀತೆಯು ವಿವಿಧ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಜನಸಾಮಾನ್ಯರಿಗೆ ಇನ್ನಷ್ಟು ಹತ್ತಿರವಾಗಿದೆ ಎಂದೂ ಅವರು ಉಲ್ಲೇಖಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ:
#WATCH | This is extremely commendable. Since 7 November last year, the nation has been celebrating the completion of 150 years of the composition of our national song, Vande Mataram. This song, which venerates the divine form of Bharat Mata, inspires deep patriotism in the… pic.twitter.com/IfXWzZ2NIh
— DD News (@DDNewslive) January 25, 2026
1950ರ ಜನವರಿ 26ರಿಂದ ಭಾರತ ತನ್ನ ಸಂವಿಧಾನಿಕ ಗುರಿಗಳತ್ತ ನಿರಂತರವಾಗಿ ಸಾಗುತ್ತಿದೆ ಎಂದು ರಾಷ್ಟ್ರಪತಿ ಹೇಳಿದರು. ಸಂವಿಧಾನ ಜಾರಿಗೆ ಬಂದ ದಿನವೇ ಭಾರತ ವಿಶ್ವದ ಅತಿದೊಡ್ಡ ಗಣತಂತ್ರ ರಾಷ್ಟ್ರವಾಗಿ ಹೊರಹೊಮ್ಮಿತು. ಸಂವಿಧಾನ ರಚಯಿತೃಗಳು ರಾಷ್ಟ್ರೀಯತೆ ಮತ್ತು ಏಕತೆಗೆ ದೃಢವಾದ ನೆಲೆ ನಿರ್ಮಿಸಿದ್ದಾರೆ ಎಂದು ಮುರ್ಮು ತಮ್ಮ ಭಾಷಣದಲ್ಲಿ ವಿವರಿಸಿದರು.
ಭಾರತದ ಮೊದಲ ಗಣರಾಜ್ಯ ದಿನ ಹೇಗೆ ಆಚರಿಸಲಾಗಿತ್ತು ಗೊತ್ತಾ?
150 ವರ್ಷಗಳ 'ವಂದೇ ಮಾತರಂ' ಗೀತೆಗೆ ಗೌರವ
'ವಂದೇ ಮಾತರಂ' ಗೀತೆ 150 ವರ್ಷಗಳನ್ನು ಪೂರೈಸಿರುವುದನ್ನು ಸ್ಮರಿಸಿದ ರಾಷ್ಟ್ರಪತಿ, ಇದು ದೇಶದ ಜನರ ಮನಸ್ಸಿನಲ್ಲಿ ದೇಶಭಕ್ತಿಯ ಕಿಡಿ ಹಚ್ಚುವ ಅಮರ ಗೀತೆ ಎಂದು ಬಣ್ಣಿಸಿದರು. ''ರಾಷ್ಟ್ರವಾದಿ ಕವಿ ಸುಬ್ರಹ್ಮಣ್ಯ ಭಾರತಿ ತಮಿಳಿನಲ್ಲಿ ರಚಿಸಿದ ‘ವಂದೇ ಮಾತರಂ ಎನ್ಬೋಮ್’ ಗೀತೆಯು ಜನರಲ್ಲಿ ಹೆಚ್ಚಿನ ಸ್ಪಂದನೆ ಮೂಡಿಸಿತು. ಇತರ ಭಾರತೀಯ ಭಾಷೆಗಳಲ್ಲಿ ರೂಪುಗೊಂಡ ವಂದೇ ಮಾತರಂ ಅವತರಣಿಕೆಗಳೂ ಜನಪ್ರಿಯತೆಯನ್ನು ಗಳಿಸಿವೆ'' ಎಂದರು.
ಈ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಜಿಎಸ್‌ಟಿ ಸುಧಾರಣೆ ಹಾಗೂ ಆಪರೇಷನ್ ಸಿಂದೂರ್ ಯಶಸ್ಸನ್ನು ಶ್ಲಾಘಿಸಿದರು. ಜತೆಗೆ ದೇಶಕ್ಕೆ ಆಹಾರ ಭದ್ರತೆ ಒದಗಿಸುತ್ತಿರುವ ರೈತರಿಗೂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಿಳೆಯರ ಸಬಲೀಕರಣಕ್ಕೆ ಮಹತ್ವ
ಜನವರಿ 25ರ ರಾಷ್ಟ್ರೀಯ ಮತದಾರರ ದಿನದ ಮಹತ್ವವನ್ನು ಪ್ರಸ್ತಾಪಿಸಿದ ರಾಷ್ಟ್ರಪತಿ, ʼʼಮತದಾನದ ಮೂಲಕ ರಾಜಕೀಯ ಜಾಗೃತಿ ಮೂಡಬೇಕು ಎಂಬುದು ಡಾ. ಬಿ.ಆರ್. ಅಂಬೇಡ್ಕರ್ ಅವರ ಕನಸಾಗಿತ್ತುʼʼ ಎಂದು ಹೇಳಿದರು. ʼʼಇಂದಿನ ದಿನಗಳಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚುತ್ತಿರುವುದು ಗಣತಂತ್ರಕ್ಕೆ ಇನ್ನಷ್ಟು ಬಲ ನೀಡುತ್ತಿದೆʼʼ ಎಂದು ಅವರು ಅಭಿಪ್ರಾಯಪಟ್ಟರು. ಸಬಲೀಕೃತ ಮಹಿಳೆಯೇ ರಾಷ್ಟ್ರದ ಪ್ರಗತಿಗೆ ಕೀಲುಕಲ್ಲು ಎಂದು ಹೇಳಿದ ಮುರ್ಮು, ಆರೋಗ್ಯ, ಶಿಕ್ಷಣ, ಭದ್ರತೆ ಹಾಗೂ ಆರ್ಥಿಕ ಸಬಲೀಕರಣದ ಕ್ರಮಗಳು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ನೆರವಾಗಿವೆ ಎಂದು ತಮ್ಮ ಭಾಷಣದಲ್ಲಿ ಹೇಳಿದರು.