ಬೇಡಿಕೆ ಈಡೇರದಿದ್ದರೆ 15 ದಿನದಲ್ಲಿ ಸಾಮೂಹಿಕ ರಾಜೀನಾಮೆ ನೀಡುವುದಾಗಿ ನೌಕರರ ಎಚ್ಚರಿಕೆ
2008ರಿಂದ 2017ರವರೆಗೆ ವಾರ್ಷಿಕ ಹೆಚ್ಚುವರಿ ವೇತನ ನೀಡಲಾಗುತ್ತಿತ್ತು. ಆದರೆ, 2017ರಿಂದ 2022ರ ವರೆಗೆ ಈ ಸೌಲಭ್ಯ ಸ್ಥಗಿತಗೊಳಿಸಲಾಗಿತ್ತು. ಇದನ್ನು ವಿರೋಧಿಸಿ ಸಿಬ್ಬಂದಿ ಮುಷ್ಕರ ನಡೆಸಿದ ಬಳಿಕ ಸರಕಾರ ಮಧ್ಯಪ್ರವೇಶಿಸಿ ವೇತನ ಪರಿಷ್ಕರಣೆಗೆ ಕ್ರಮ ಕೈಗೊಂಡಿತ್ತು. 2022ರ ಅಕ್ಟೋಬರ್‌ನಲ್ಲಿ ಕನಿಷ್ಠ ವೇತನ ನಿಗದಿಪಡಿಸುವ ಜತೆಗೆ, ಐದು ವರ್ಷಗಳ ಬದಲಿಗೆ ಮೂರು ವರ್ಷಗಳ ವಾರ್ಷಿಕ ಹೆಚ್ಚುವರಿ ವೇತನ ನೀಡಲು ತೀರ್ಮಾನಿಸಲಾಗಿತ್ತು
-
ಬೆಂಗಳೂರು: ಆರೋಗ್ಯ ಕವಚ 108 ಆಂಬುಲೆನ್ಸ್ ಸೇವೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ವೇತನ ಹಾಗೂ ಕರ್ತವ್ಯದ ಪಾಳಿ ವ್ಯವಸ್ಥೆಯಲ್ಲಿನ ಬದಲಾವಣೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ತಮ್ಮ ಬೇಡಿಕೆಗಳನ್ನು 15 ದಿನಗಳೊಳಗೆ ಈಡೇರಿಸದಿದ್ದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಸಿಬ್ಬಂದಿ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಆರೋಗ್ಯ ಕವಚ (108) ಆಂಬುಲೆನ್ಸ್ ನೌಕರರ ಸಂಘದ ವತಿಯಿಂದ ಸರಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಹಲವು ವರ್ಷಗಳಿಂದ ವಾರ್ಷಿಕ ಹೆಚ್ಚುವರಿ ವೇತನ ನೀಡದೆ ಸಿಬ್ಬಂದಿಗೆ ಅನ್ಯಾಯ ಮಾಡಲಾ ಗುತ್ತಿದೆ ಎಂದು ಆರೋಪಿಸಲಾಗಿದೆ. ರಾಜ್ಯದಲ್ಲಿ ಜಿವಿಕೆ (ಗ್ರೀನ್ ಹೆಲ್ತ್) ಇಎಂಆರ್‌ಐ ಸಂಸ್ಥೆಯ ಅಧೀನದಲ್ಲಿ ಸುಮಾರು 1700 ಚಾಲಕರು, 1700 ಸ್ಟಾಫ್ ನರ್ಸ್ ಸೇರಿದಂತೆ ಸುಮಾರು 3500 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: Air Ambulance: ರಾಂಚಿ ಏರ್ ಆಂಬ್ಯುಲೆನ್ಸ್ ಅಪಘಾತದಲ್ಲಿ ಎಲ್ಲ 7 ಪ್ರಯಾಣಿಕರು ಸಾವು, ಅಪಘಾತ ಸಂಭವಿಸಿದ್ದು ಹೇಗೆ?
2008ರಿಂದ 2017ರವರೆಗೆ ವಾರ್ಷಿಕ ಹೆಚ್ಚುವರಿ ವೇತನ ನೀಡಲಾಗುತ್ತಿತ್ತು. ಆದರೆ, 2017ರಿಂದ 2022ರವರೆಗೆ ಈ ಸೌಲಭ್ಯ ಸ್ಥಗಿತಗೊಳಿಸಲಾಗಿತ್ತು. ಇದನ್ನು ವಿರೋಧಿಸಿ ಸಿಬ್ಬಂದಿ ಮುಷ್ಕರ ನಡೆಸಿದ ಬಳಿಕ ಸರಕಾರ ಮಧ್ಯಪ್ರವೇಶಿಸಿ ವೇತನ ಪರಿಷ್ಕರಣೆಗೆ ಕ್ರಮ ಕೈಗೊಂಡಿತ್ತು. 2022ರ ಅಕ್ಟೋಬರ್‌ನಲ್ಲಿ ಕನಿಷ್ಠ ವೇತನ ನಿಗದಿಪಡಿಸುವ ಜತೆಗೆ, ಐದು ವರ್ಷಗಳ ಬದಲಿಗೆ ಮೂರು ವರ್ಷಗಳ ವಾರ್ಷಿಕ ಹೆಚ್ಚುವರಿ ವೇತನ ನೀಡಲು ತೀರ್ಮಾನಿಸಲಾಗಿತ್ತು. ಅದರಂತೆ ಪ್ರತಿ ವರ್ಷ ಶೇ.15ರಂತೆ ಒಟ್ಟು ಶೇ.45ರಷ್ಟು ಹೆಚ್ಚುವರಿ ವೇತನ ನೀಡಲಾಗಿತ್ತು. ಆದರೆ, ಈ ಪಾವತಿ ಕಾನೂನು ಬಾಹಿರವೆಂದು ಪರಿಗಣಿಸಿ 2022ರ ಆಗಸ್ಟ್‌ನಿಂದ 2023ರ ಫೆಬ್ರವರಿವರೆಗೆ ವೇತನದಲ್ಲಿ ಕಡಿತ ಮಾಡಲಾಗಿದೆ.
ನಂತರ ವಾರ್ಷಿಕ ಹೆಚ್ಚುವರಿ ವೇತನ ನೀಡಿಲ್ಲ ಎಂದು ಸಿಬ್ಬಂದಿ ದೂರಿದ್ದಾರೆ. ಇದೀಗ ಸಿಬ್ಬಂದಿಯ ವೇತನವನ್ನು ಬೆಂಗಳೂರು, ಜಿಲ್ಲೆ, ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ) ಹಂತಗಳಾಗಿ ವಿಂಗಡಿಸಿ, ವಲಯವಾರು ಮಾದರಿಯಲ್ಲಿ ನಿಗದಿಪಡಿಸಿರುವುದರಿಂದ ವೇತನದಲ್ಲಿ ಮತ್ತಷ್ಟು ವ್ಯತ್ಯಾಸ ಉಂಟಾಗಿದೆ. ಇದರಿಂದ ಹಲವು ಸಿಬ್ಬಂದಿಗೆ ಹಿಂದೆಗಿಂತ ಕಡಿಮೆ ವೇತನ ದೊರೆಯುವಂತಾಗಿದೆ ಎಂದು ಸಂಘ ಅಸಮಾಧಾನ ವ್ಯಕ್ತಪಡಿಸಿದೆ.
ಮೂರು ಪಾಳಿಯಿಂದ ಸಂಕಷ್ಟ ವೇತನದ ಜತೆಗೆ ಕರ್ತವ್ಯದ ಪಾಳಿ ವ್ಯವಸ್ಥೆಯ ಬದಲಾವಣೆಯೂ ಸಿಬ್ಬಂದಿಗೆ ತೀವ್ರ ಸಮಸ್ಯೆ ತಂದೊಡ್ಡಿದೆ. ಈ ಹಿಂದೆ ದಿನಕ್ಕೆ 2 ಪಾಳಿಯಲ್ಲಿ ತಲಾ 12 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಲಾಗುತ್ತಿತ್ತು. ಆದರೆ, ಕಳೆದ ವರ್ಷದ ಜನವರಿಯಿಂದ ಮೂರು ಪಾಳಿಯಲ್ಲಿ ತಲಾ ೮ ಗಂಟೆಗಳ ಕರ್ತವ್ಯಕ್ಕೆ ಬದಲಾಯಿಸಲಾಗಿದೆ.
ಬೆಳಗ್ಗೆ 6 ಗಂಟೆಗೆ ಹಾಗೂ ರಾತ್ರಿ 10 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದ್ದು, ಈ ಸಮಯದಲ್ಲಿ ಸಾರ್ವಜನಿಕ ಸಾರಿಗೆ ಸೇರಿದಂತೆ ಸೂಕ್ತ ವಾಹನ ವ್ಯವಸ್ಥೆ ಇಲ್ಲದಿರು ವುದು ಸಿಬ್ಬಂದಿಗೆ ತೊಂದರೆಯಾಗುತ್ತಿದೆ. ಅಲ್ಲದೇ ವಾರ್ಷಿಕ ಹೆಚ್ಚುವರಿ ವೇತನವನ್ನು ನಿಯಮಾ ನುಸಾರ ನೀಡುವುದು, ವೇತನದಲ್ಲಿನ ತಾರತಮ್ಯ ನಿವಾರಿಸುವುದು ಹಾಗೂ ಪಾಳಿ ವ್ಯವಸ್ಥೆಯಿಂದ ಎದುರಾಗಿರುವ ಸಮಸ್ಯೆಗಳನ್ನು ಬಗೆಹರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರಕಾರ ಕೂಡಲೇ ಈಡೇರಿಸಬೇಕು. ಇಲ್ಲದಿದ್ದರೆ 15 ದಿನಗಳ ಬಳಿಕ ಸಾಮೂಹಿಕ ರಾಜೀನಾಮೆಯಂತಹ ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಸಂಘ ಎಚ್ಚರಿಸಿದೆ.
![]()
108 ಸಿಬ್ಬಂದಿ ಮುಷ್ಕರ ಅಲ್ಲ ಏನೇ ಮಾಡಿದರೂ ನಾವು ಜವಾಬ್ದಾರಿಯಲ್ಲ. ಸಿಬ್ಬಂದಿಯನ್ನು ಸಮರ್ಪಕವಾಗಿ ನಿಭಾಯಿಸಲು ಸಾಧ್ಯವಾಗದಿದ್ದರೆ ಬೇರೆ ಕಂಪನಿಗೆ ಟೆಂಡರ್ ನೀಡುವ ಬಗ್ಗೆ ಸರಕಾರ ಚಿಂತಿಸಲಿದೆ. ಮುಷ್ಕರದಿಂದ ರೋಗಿಗಳಿಗೆ ತೊಂದರೆಯಾದರೆ ಯಾವುದೇ ಮುಲಾಜಿಲ್ಲದೆ ತಕ್ಷಣ ಕ್ರಮ ಕೈಗೊಳ್ಳಬೇಕಾಗುತ್ತದೆ.
-ಯು.ಟಿ.ಖಾದರ್, ಆರೋಗ್ಯ ಸಚಿವ