ಸಾರಿಗೆ ನೌಕರರಿಗೆ ಗುಡ್ ನ್ಯೂಸ್; ವೇತನ ಪರಿಷ್ಕರಣೆ, 26 ತಿಂಗಳ ಹಿಂಬಾಕಿ ಬಿಡುಗಡೆಗೆ ರಾಜ್ಯ ಸರ್ಕಾರ ಒಪ್ಪಿಗೆ
Karnataka Transport workers strike: ಸಾರಿಗೆ ನೌಕರರ ಸಂಘಟನೆಗಳೊಂದಿಗೆ ಚರ್ಚಿಸಿರುವ ರಾಜ್ಯ ಸರ್ಕಾರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದೆ. 2025ರ ಏಪ್ರಿಲ್‌ನಿಂದ ವೇತನ ಪರಿಷ್ಕರಣೆ ಮಾಡಲು ಹಾಗೂ 38 ತಿಂಗಳ ಪೈಕಿ 26 ತಿಂಗಳ ಹಿಂಬಾಕಿ 1239.47 ಕೋಟಿ ರೂ. ಬಿಡುಗಡೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.
-
ಬೆಂಗಳೂರು: ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ನೌಕರರ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು, ವೇತನ ಪರಿಷ್ಕರಣೆಗೆ ಒಪ್ಪಿಗೆ ನೀಡಿದೆ. ಇದೇ ವೇಳೆ 26 ತಿಂಗಳ ಹಿಂಬಾಕಿ ಬಿಡುಗಡೆ ಮಾಡುವುದಾಗಿಯೂ ತಿಳಿಸಿದೆ. 2025ರ ಏಪ್ರಿಲ್‌ನಿಂದ ವೇತನ ಪರಿಷ್ಕರಣೆ ಮಾಡಲು ಹಾಗೂ 38 ತಿಂಗಳ ಪೈಕಿ 26 ತಿಂಗಳ ಹಿಂಬಾಕಿ 1271.92 ಕೋಟಿ ರೂ. ಬಿಡುಗಡೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ (ಫೆ.19) ಕರ್ನಾಟಕ ರಾಜ್ಯ ಸಾರಿಗೆ ನೌಕರರು ‘ಬೆಂಗಳೂರು ಚಲೋ’ಕ್ಕೆ ಕರೆ ನೀಡಿದ್ದರು. ಕರ್ತವ್ಯಕ್ಕೆ ಗೈರಾಗುವ ಮೂಲಕ ಮುಷ್ಕರ ನಡೆಸಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಸಾರಿಗೆ ನೌಕರರ ಸಂಘಟನೆಗಳ ಪದಾಧಿಕಾರಿಗಳ ಜತೆ ರಾಜ್ಯ ಸರ್ಕಾರ ಸಭೆ ನಡೆಸಿ, ಕೆಲ ಬೇಡಿಕೆಗಳ ಈಡೇರಿಕೆಗೆ ಒಪ್ಪಿಗೆ ನೀಡಿದೆ.
ಸಾರಿಗೆ ಸಚಿವರು, ನೌಕರರ ಸಂಘಟನೆಗಳೊಂದಿಗೆ ಸಭೆ ನಡೆಸಿ, ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ನಂತರ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಮಾತನಾಡಿ, 2025ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಸಾರಿಗೆ ನೌಕರರ ವೇತನವನ್ನು ಪರಿಷ್ಕರಣೆ ಮಾಡಲು ತೀರ್ಮಾನಿಸಲಾಗಿದೆ. ವೇತನದಲ್ಲಿ ಎಷ್ಟು ಪ್ರಮಾಣದ ಏರಿಕೆ ಮಾಡಬೇಕು ಎಂಬ ಬಗ್ಗೆ ಸಾರಿಗೆ ಸಂಘಟನೆಗಳ ಮುಖಂಡರೊಂದಿಗೆ ಮತ್ತೊಮ್ಮೆ ಮಾತುಕತೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಮತದಾರ ಪಟ್ಟಿಯಲ್ಲಿ ಅಕ್ರಮ ಎಸಗಿರುವ ಬಿಎಒಗಳ ಅಮಾನತುಗೊಳಿಸಿ: ಚುನಾವಣಾ ಆಯೋಗಕ್ಕೆ ಡಿಕೆಶಿ ಮನವಿ ಪತ್ರ
ನಿಗದಿಯಂತೆ ನಾಳೆ ನಡೆಯಲಿದೆ ಸಾರಿಗೆ ಮುಷ್ಕರ
ವೇತನ ಪರಿಷ್ಕರಣೆಗೆ ಸರ್ಕಾರದ ಒಪ್ಪಿಗೆ ನಡುವೆಯೂ ನಾಳೆ (ಫೆ.19) ನಿಗದಿಯಾಗಿರುವ ಬೆಂಗಳೂರು ಚಲೋ ನಡೆಸಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ. ಸರ್ಕಾರ ನಿರ್ಧಾರದಿಂದ ನಮಗೆ ತೃಪ್ತಿಯಾಗಿಲ್ಲ, ಈಗಾಗಲೇ ಕರೆ ಕೊಟ್ಟಿರುವ ಬೆಂಗಳೂರು ಚಲೋ ನಡೆಯಲಿದೆ ಎಂದು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ತಿಳಿಸಿದೆ.
ಈ ಬಗ್ಗೆ ಸಾರಿಗೆ ನೌಕರರ ಮುಖಂಡ ಜಗದೀಶ್ ಮಾತನಾಡಿ, ನಮಗೆ ಇನ್ನೂ ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ನಾಳೆ 5ರಿಂದ 10 ಸಾವಿರ ನೌಕರರು ಫ್ರೀಡಂ ಪಾರ್ಕ್ ನಲ್ಲಿ ಸೇರಲಿದ್ದಾರೆ. ರಾಜ್ಯ ಸರ್ಕಾರವು 38 ತಿಂಗಳ ಹಿಂಬಾಕಿ ಕೊಡಲೇಬೇಕು ಎಂದು ಆಗ್ರಹಿಸಿದ್ದಾರೆ.
2024ರಿಂದ ವೇತನ ಪರಿಷ್ಕರಣೆ ಆಗಬೇಕೆನ್ನುವುದು ನಮ್ಮ ಕನಸಾಗಿತ್ತು. ಕಾರ್ಮಿಕ ಮುಖಂಡ ದಿವಂಗತ ಅನಂತ ಸುಬ್ಬರಾವ್ ಅವರ ಕನಸು ಕೂಡ ಇದೇ ಆಗಿತ್ತು. ಸರ್ಕಾರದ ನಿರ್ಧಾರದಿಂದ ಸಿಬ್ಬಂದಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಲಿದೆ. ಮುಷ್ಕರದ ಬಗ್ಗೆ ನಾಳೆ ಸಂಜೆ 4 ಗಂಟೆಗೆ ಫ್ರೀಡಂ ಪಾರ್ಕ್‌ನಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.