ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

29,000 ಸರ್ಕಾರಿ ಶಾಲೆಗಳಲ್ಲಿ ನಲಿ-ಕಲಿ ರದ್ದು; ರಾಜ್ಯ ಸರ್ಕಾರದ ತೀರ್ಮಾನ ಸ್ವಾಗತಿಸಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

ನಲಿ-ಕಲಿ ಪದ್ಧತಿಯನ್ನು ರದ್ದುಗೊಳಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಕಳೆದ ಹಲವಾರು ವರ್ಷಗಳಿಂದ ಸರ್ಕಾರದ ಮೇಲೆ ಒತ್ತಡವನ್ನು ಹೇರುತ್ತಾ ಬರುತ್ತಿದೆ. ಇದೀಗ ನಲಿ-ಕಲಿ ಕಾರ್ಯಕ್ರಮ ರದ್ದು ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಶಿಕ್ಷಣ ಇಲಾಖೆ ಮೇಲಧಿಕಾರಿಗಳಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಧನ್ಯವಾದ ತಿಳಿಸಿದೆ.

ಸರ್ಕಾರಿ ಶಾಲೆಗಳಲ್ಲಿ ನಲಿ-ಕಲಿ ಕಾರ್ಯಕ್ರಮ ರದ್ದು ಮಾಡಿದ ರಾಜ್ಯ ಸರ್ಕಾರ

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಲಿ -

Prabhakara R
Prabhakara R Feb 8, 2026 5:30 PM

ಬೆಂಗಳೂರು: ರಾಜ್ಯದ 29,000 ಸರ್ಕಾರಿ ಶಾಲೆಗಳಲ್ಲಿ ನಲಿ-ಕಲಿ ಕಾರ್ಯಕ್ರಮ (Nali Kali programme) ರದ್ದುಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಐತಿಹಾಸಿಕ ತೀರ್ಮಾನವನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತುಂಬು ಹೃದಯದಿಂದ ಸ್ವಾಗತಿಸುತ್ತದೆ ಎಂದು ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 1,2,3ನೇ ತರಗತಿಗಳನ್ನು ಒಟ್ಟುಗೂಡಿಸಿ ಬೋಧಿಸುವ ಪದ್ಧತಿ ನಲಿ-ಕಲಿ ಆಗಿದೆ. ಇದನ್ನು ಬಹುವರ್ಗ ಬೋಧನೆ ಎಂದು ಕೂಡ ಕರೆಯಬಹುದು. ಈ ನಲಿ-ಕಲಿ ಪದ್ಧತಿಯನ್ನು ರದ್ದುಗೊಳಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಕಳೆದ ಹಲವಾರು ವರ್ಷಗಳಿಂದ ಸರ್ಕಾರದ ಮೇಲೆ ಒತ್ತಡವನ್ನು ಹೇರುತ್ತಾ ಬರುತ್ತಿದೆ. ವಿಶೇಷವಾಗಿ ನಲಿ-ಕಲಿ ಪದ್ಧತಿಯಿಂದ ರಾಜ್ಯದಲ್ಲಿ ಸುಮಾರು 10 ವರ್ಷಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಮಕ್ಕಳ ಸಂಖ್ಯೆ ಸರ್ಕಾರಿ ಶಾಲೆಗಲ್ಲಿ ದಾಖಲಾತಿ ಕಡಿಮೆಯಾಗುತ್ತಿರುವುದಕ್ಕೆ ನೇರವಾಗಿ ನಲಿ-ಕಲಿ ಪದ್ಧತಿಯೇ ಕಾರಣವಾಗಿದೆ ಎಂಬ ಹಲವಾರು ಅಂಕಿ ಅಂಶಗಳ ಸಹಿತ ವರದಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಿಗೆ ಹಾಗೂ ಇಲಾಖೆಯ ಅಧಿಕಾರಿಗಳಿಗೂ ಕೂಡ ಸಲ್ಲಿಸಲಾಗಿದೆ.

ಈ ಎಲ್ಲಾ ಅಂಶಗಳನ್ನು ವಿಶೇಷವಾಗಿ ನಲಿ-ಕಲಿ ಪದ್ಧತಿ ಚೆನ್ನಾಗಿದೆ ಎಂದು ವಾದಿಸುವವರು ಈ ಪದ್ಧತಿಯನ್ನು ಖಾಸಗಿ ಶಾಲೆಗಳಲ್ಲಿ, ಇಂಟರ್‌ನ್ಯಾಷನಲ್ ಶಾಲೆಗಳಲ್ಲಿ ಯಾಕೆ ಜಾರಿಗೊಳಿಸುತ್ತಿಲ್ಲ ಎಂಬ ಪ್ರಶ್ನೆಯನ್ನು ಕೂಡ ಹಲವಾರು ಬಾರಿ ಸಂಘಟನೆಯಿಂದ ಪ್ರತಿರೋಧಿಸಿ ಸರ್ಕಾರದ ಗಮನಕ್ಕೆ ತರಲಾಗಿದೆ. ಈ ಕಾರಣಕ್ಕಾಗಿ ಸರ್ಕಾರ ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 29,000 ನಲಿ-ಕಲಿ ಪದ್ಧತಿಯನ್ನು ರದ್ದುಗೊಳಿಸಿ, ಸಾಮಾನ್ಯ ಪದ್ಧತಿಗೆ ಅನುವು ಮಾಡಿಕೊಡುತ್ತಿರುವುದು ಅತ್ಯಂತ ಉತ್ತಮ ಬೆಳವಣಿಗೆಯಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯನ್ನು ಹೆಚ್ಚಿಸಲು ಅನುಕೂಲ ಮಾಡಿಕೊಟ್ಟಿದ್ದು ಈ ಐತಿಹಾಸಿಕ ತೀರ್ಮಾನವನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಸ್ವಾಗತಿಸುತ್ತದೆ ಎಂದು ತಿಳಿಸಿದ್ದಾರೆ.

BOB Recruitment 2026: ಬ್ಯಾಂಕ್‌ ಆಫ್‌ ಬರೋಡದಲ್ಲಿದೆ 253 ಹುದ್ದೆ; ಅಪ್ಲೈ ಮಾಡುವ ವಿಧಾನ ಹೇಗೆ? ವಿದ್ಯಾರ್ಹತೆ ಏನು? ಇಲ್ಲಿದೆ ಸಂಪೂರ್ಣ ವಿವರ

ಜತೆಗೆ 2027-28ನೇ ಸಾಲಿನಲ್ಲಿ ಉಳಿದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕೂಡ ನಲಿ-ಕಲಿ ಪದ್ಧತಿಯನ್ನು ರದ್ದುಗೊಳಿಸಿ ಸಾಮಾನ್ಯ ಪದ್ಧತಿಯನ್ನೇ ಜಾರಿಗೊಳಿಸಬೇಕೆಂದು ಒತ್ತಾಯಿಸುತ್ತೇವೆ. ಈ ನಲಿ-ಕಲಿ ಪದ್ಧತಿಯನ್ನು ರದ್ದುಗೊಳಿಸಲು ಕಾರಣೀಭೂತರಾಗಿರುವಂತಹ ಮುಖ್ಯಮಂತ್ರಿ ಸಿದ್ದರಾಮಯ್ಯ , ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಶೇಷವಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪ, ಅಪರ ಮುಖ್ಯ ಕಾರ್ಯದರ್ಶಿಗಳಾದ ರಶ್ಮಿ.ವಿ.ಮಹೇಶ್, ಆಯಕ್ತರಾದ ವಿಕಾಸ್ ಸುರಳ್ಳರ್ ಹಾಗೂ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಅನಂತ ಅನಂತ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಹೇಳಿದ್ದಾರೆ.