ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗಣರಾಜ್ಯೋತ್ಸವಕ್ಕೆ ಮಾಣಿಕ್ ಷಾ ಮೈದಾನ ಸಜ್ಜು; ಹಲವೆಡೆ ಸಂಚಾರ ನಿಷೇಧ

77ನೇ ಗಣರಾಜ್ಯೋತ್ಸವಕ್ಕೆ ದೇಶಾದ್ಯಂತ ಭರದಿಂದ ಸಿದ್ದತೆ ನಡೆಸಲಾಗುತ್ತಿದೆ. ಐತಿಹಾಸಿಕ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕ ದೃಷ್ಟಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಗಣರಾಜ್ಯೋತ್ಸವಕ್ಕೆ ಮಾಣಿಕ್ ಷಾ ಮೈದಾನ ಸಜ್ಜು

ಸಂಗ್ರಹ ಚಿತ್ರ -

Vishakha Bhat
Vishakha Bhat Jan 25, 2026 8:02 AM

ಬೆಂಗಳೂರು: 77ನೇ ಗಣರಾಜ್ಯೋತ್ಸವಕ್ಕೆ (Republic Day) ದೇಶಾದ್ಯಂತ ಭರದಿಂದ ಸಿದ್ದತೆ ನಡೆಸಲಾಗುತ್ತಿದೆ. ಐತಿಹಾಸಿಕ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ (Manekshaw Parade ground) ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕ ದೃಷ್ಟಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಗಣರಾಜ್ಯೋತ್ಸವ ದಿನ ಬೆಳಗ್ಗೆ 9 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸಲಿದ್ದು, ಈ ಕುರಿತ ಪೂರ್ವಭಾವಿ ಪ್ರದರ್ಶನ ನಿನ್ನೆ ಆಯೋಜಿಸಲಾಗಿತ್ತು.

ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅಂತಿಮ ಹಂತದ ಸಿದ್ಧತೆಗಳನ್ನ ಪರಿಶೀಲನೆ ನಡೆಸಿದರು. ಗಣರಾಜ್ಯೋತ್ಸವದ ದಿನದಂದು ಆಫ್ ಲೈನ್ ಹಾಗೂ ಆನ್ ಲೈನ್​ನಲ್ಲಿ ಪಾಸ್ ನೀಡುವ ವ್ಯವಸ್ಥೆ ಮಾಡಲಾಗಿದೆ. ಪಾಸ್ ಇದ್ದವರಿಗೆ ಮಾತ್ರ ಪರೇಡ್ ಮೈದಾನದೊಳಗೆ ಪ್ರವೇಶ ನೀಡಲಾಗುವುದು. ಹಾಗೆಯೇ ಬೆಳಗ್ಗೆ 8.30 ರಿಂದ 10.30ರವರೆಗೂ ಮಾಣಿಕ್ ಷಾ ಪರೇಡ್ ಮೈದಾನದ ಸುತ್ತಮುತ್ತ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗುತ್ತಿದೆ.

ಬಂದೋಬಸ್ತ್​​ಗಾಗಿ 2000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಅಧಿಕಾರಿಗಳಿಗೆ 2000, ವಿವಿಐಪಿಗೆ 3000 ಪಾಸ್ ನೀಡಲಾಗಿದೆ. ಬೆಳಗ್ಗೆ 9 ಗಂಟೆಗೆ ರಾಜ್ಯಪಾಲರು ಧ್ವಜಾರೋಹಣ ಮಾಡಲಿದ್ದಾರೆ. 2000 ಇ–ಪಾಸ್ ವಿತರಣೆ ಮಾಡಲಾಗಿದೆ. ಹಾಗೆಯೇ ಭದ್ರತೆಗಾಗಿ 100 ಸಿಸಿಟಿವಿ, ಬ್ಯಾಗೇಜ್ ಸ್ಕ್ಯಾನರ್ 4 ಅಳವಡಿಕೆ ಮಾಡಲಾಗಿದೆ. ಅನಿಲ್‌ ಕುಂಬ್ಳೆ ವೃತ್ತದಿಂದ ಶಿವಾಜಿ ನಗರ ಬಸ್‌ ನಿಲ್ದಾಣದವರೆಗೂ ನೋ ಪಾರ್ಕಿಂಗ್ ಇರಲಿದೆ. ಪಥಸಂಚಲನದಲ್ಲಿ ಆರ್ಮಿ, ಏರ್‌ಫೋರ್ಸ್, ಸಿಆರ್​​ಪಿಎಫ್ ಮಹಿಳಾ, ತಮಿಳುನಾಡು ರಾಜ್ಯ ಪೊಲೀಸ್, ಸ್ಕೌಟ್ಸ್ - ಗೈಡ್ಸ್, ಎನ್‌ಸಿಸಿ, ಸೇವಾದಳ ಹಾಗೂ ವಿವಿಧ ಶಾಲೆಗಳ ಮಕ್ಕಳನ್ನೊಳಗೊಂಡಂತೆ ಒಟ್ಟು 37 ತುಕಡಿಗಳಲ್ಲಿ ಸುಮಾರು 1100 ಮಂದಿ ಭಾಗವಹಿಸಲಿದ್ದಾರೆ. ಶಾಲಾ ಮಕ್ಕಳ ಒಟ್ಟು 2 ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುಮಾರು 1400 ಮಕ್ಕಳು ಭಾಗವಹಿಸಲಿದ್ದಾರೆ.

ಎಲ್ಲೆಲ್ಲಿ ಸಂಚಾರ ನಿರ್ಬಂಧ?

ಸೋಮವಾರ ಬೆಳಗ್ಗೆ 8:30 ರಿಂದ 10:30ರವರೆಗೆ ಕಬ್ಬನ್ ರಸ್ತೆಯ ಬಿ.ಆರ್.ವಿ ಜಂಕ್ಷನ್‌ನಿಂದ ಕಾಮರಾಜರಸ್ತೆ ಜಂಕ್ಷನ್‌ವರೆಗೆ ಎರಡೂ ದಿಕ್ಕುಗಳಲ್ಲಿನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಪರ್ಯಾಯವಾಗಿ ಇನ್‌ಫೆಂಟ್ರಿ ರಸ್ತೆಯಲ್ಲಿ ಮಣಿಪಾಲ್ ಸೆಂಟರ್‌ ಕಡೆಗೆ ಸಂಚರಿಸುವ ವಾಹನಗಳು ನೇರವಾಗಿ ಸಫೀನಾ ಪ್ಲಾಜಾ - ಎಡತಿರುವು ಪಡೆದು ಮೈನ್‌ಗಾರ್ಡ್‌ ರಸ್ತೆ- ಆಲೀಸ್ ಸರ್ಕಲ್- ಡಿಸ್ಪೆನ್ಸರಿ ರಸ್ತೆ-ಕಾಮರಾಜರಸ್ತೆ ಮತ್ತು ಡಿಕನ್ಸನ್‌ರಸ್ತೆ ಜಂಕ್ಷನ್ ಬಲಕ್ಕೆ ತಿರುವು ಪಡೆದು, ಕಾಮರಾಜ ರಸ್ತೆ- ಕಬ್ಬನ್‌ರಸ್ತೆ ಮತ್ತು ಕಾಮರಾಜ ರಸ್ತೆ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆದು, ಕಬ್ಬನ್ ರಸ್ತೆ ಮುಖಾಂತರ ಮಣಿಪಾಲ್ ಸೆಂಟರ್‌ ಕಡೆಗೆ ಸಾಗಬಹುದಾಗಿದೆ.

ಕಬ್ಬನ್ ರಸ್ತೆಯಲ್ಲಿ ಮಣಿಪಾಲ್ ಸೆಂಟರ್ ಜಂಕ್ಷನ್‌ನಿಂದ ಬಿ. ಆರ್.ವಿ. ಜಂಕ್ಷನ್ ಕಡೆಗೆ ಬರುವ ವಾಹನಗಳ ಸಂಚಾರವನ್ನು ಮಣಿಪಾಲ್ ಸೆಂಟರ್ ಬಳಿ ನಿರ್ಬಂಧಿಸಿದ್ದು, ಸದರಿ ವಾಹನಗಳು ವೆಬ್ ಜಂಕ್ಷನ್ ಬಳಿ ಬಲ ತಿರುವು ಪಡೆದು ಎಂ.ಜಿ. ರಸ್ತೆಯ ಮೂಲಕ ಮೆಯೋ ಹಾಲ್, ಕಾವೇರಿ ಎಂಪೋರಿಯಂ, ಅನಿಲ್‌ ಕುಂಬ್ಳೆ ವೃತ್ತದಲ್ಲಿ ಬಲ ತಿರುವು ಪಡೆದು ಮುಂದೆ ಸಾಗಬಹುದು. ಅನಿಲ್‌ಕುಂಬ್ಳೆ ವೃತ್ತದಿಂದ ಕಬ್ಬನ್‌ ರಸ್ತೆ ಕಡೆಗೆ ಬರುವ ವಾಹನಗಳು ನೇರವಾಗಿ ಸೆಂಟ್ರಲ್ ಸ್ಟ್ರೀಟ್‌ನಲ್ಲಿ ಸಾಗಿ, ಬಲಕ್ಕೆ ತಿರುವು ಪಡೆದು-ಇನ್‌ಫೆಂಟ್ರಿರಸ್ತೆ- ಸಫೀನಾ ಪ್ಲಾಜಾಕ್ಕೆ ಸಾಗಿ ಎಡಕ್ಕೆ ತಿರುವು ಪಡೆದು ಮೈನ್‌ಗಾರ್ಡ್‌ರಸ್ತೆ-ಆಲಿ ಸರ್ಕಲ್‌- ಡಿಸ್ಪೆನ್ಸರಿರಸ್ತೆ- ಕಾಮರಾಜರಸ್ತೆ ಮತ್ತು ಡಿಕನ್ಸನ್‌ ರಸ್ತೆ ಜಂಕ್ಷನ್​ನಿಂದ ಬಲಕ್ಕೆ ತಿರುವು ಪಡೆದು ಕಾಮರಾಜ ರಸ್ತೆ- ಕಬ್ಬನ್‌ರಸ್ತೆ ಮತ್ತು ಕಾಮರಾಜ ರಸ್ತೆ ಜಂಕ್ಷನ್​ನಲ್ಲಿ ಎಡಕ್ಕೆ ತಿರುವು ಪಡೆದು, ಕಬ್ಬನ್‌ರಸ್ತೆ ಮುಖಾಂತರ ಮಣಿಪಾಲ್ ಸೆಂಟರ್‌ ಕಡೆಗೆ ಸಾಗಬಹುದಾಗಿದೆ.