Voice of Uttara Kannada, 'Lokadhvani': ಉತ್ತರ ಕನ್ನಡದ ಧ್ವನಿ ʼಲೋಕಧ್ವನಿʼ
ಲೋಕಧ್ವನಿ ಪತ್ರಿಕೆಯ 42ನೇ ವರ್ಷದ ವಾರ್ಷಿಕೋತ್ಸವ ಹಾಗೂ ಲೋಕಧ್ವನಿ ನಮ್ಮ ಹೆಮ್ಮೆಯ ಸಾಧಕರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲೋಕ ಧ್ವನಿ ಪತ್ರಿಕೆಯು ಉತ್ತರ ಕನ್ನಡ ಜಿಲ್ಲೆಯ ಮೊದಲ ದೈನಿಕವಾಗಿದ್ದು, ಕಳೆದ ನಾಲ್ಕು ದಶಕಗಳಿಂದ ಜನಜೀವನದ ಅವಿಭಾಜ್ಯ ಅಂಗವಾಗಿ ಬೆಳೆದು ಬಂದಿದೆ.
-
ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಶೀಘ್ರದಲ್ಲಿಯೇ ಮೈಸೂರಿನಲ್ಲಿ ಲೋಕಧ್ವನಿ ಆವೃತ್ತಿ ಆರಂಭ
ಉತ್ತರ ಕನ್ನಡದ ಜನರೊಂದಿಗೆ ಲೋಕಧ್ವನಿಯ ಬಾಂಧವ್ಯ ವಿಭಿನ್ನ
ಕಳೆದ ನಾಲ್ಕು ದಶಕಗಳಿಂದ ಉತ್ತರ ಕನ್ನಡ ಜಿಲ್ಲೆಯ ಜನರ ಧ್ವನಿಯಾಗಿರುವ ಲೋಕಧ್ವನಿ ಶೀಘ್ರದಲ್ಲಿಯೇ ಶಿವವಗ್ಗ ಮತ್ತು ಮೈಸೂರಿನಲ್ಲಿ ಆವೃತ್ತಿ ಆರಂಭಿಸಲಿದೆ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ, ಜನಶಕ್ತಿ ವಿಶ್ವಸ್ಥ ಮಂಡಳಿ ಧರ್ಮದರ್ಶಿ ವಿಶ್ವೇಶ್ವರ ಭಟ್ ಪ್ರಕಟಿಸಿದರು.
ಲೋಕಧ್ವನಿ ಪತ್ರಿಕೆಯ 42ನೇ ವರ್ಷದ ವಾರ್ಷಿಕೋತ್ಸವ ಹಾಗೂ ಲೋಕಧ್ವನಿ ನಮ್ಮ ಹೆಮ್ಮೆಯ ಸಾಧಕರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲೋಕ ಧ್ವನಿ ಪತ್ರಿಕೆಯು ಉತ್ತರ ಕನ್ನಡ ಜಿಲ್ಲೆಯ ಮೊದಲ ದೈನಿಕವಾಗಿದ್ದು, ಕಳೆದ ನಾಲ್ಕು ದಶಕಗಳಿಂದ ಜನಜೀವನದ ಅವಿಭಾಜ್ಯ ಅಂಗವಾಗಿ ಬೆಳೆದು ಬಂದಿದೆ.
ಉತ್ತರ ಕನ್ನಡದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಯಾವುದೇ ಸುದ್ದಿಯಿದ್ದರೂ ಅದು ಲೋಕಧ್ವನಿಯಲ್ಲಿಯೇ ಪ್ರಕಟವಾಗುತ್ತದೆ ಎನ್ನುವಷ್ಟರ ಮಟ್ಟಿಗೆ ಜನರ ನಂಬಿಕೆಯನ್ನು ಈ ಪತ್ರಿಕೆ ಗಳಿಸಿದೆ ಎಂದು ಅಭಿಪ್ರಾಯಪಟ್ಟರು.
42 ವರ್ಷಗಳ ಇತಿಹಾಸ ಹೊಂದಿರುವ ಲೋಕಧ್ವನಿ ಪತ್ರಿಕೆ, ನಾನು ಓದುತ್ತಿದ್ದ ಕಾಲ ದಲ್ಲಿಯೇ ಶಿರಸಿಯಲ್ಲಿ ಆರಂಭವಾದದ್ದು. ಆ ದಿನಗಳಲ್ಲಿ ನನಗೆ ಪತ್ರಕರ್ತನಾಗಬೇಕು ಎಂಬ ಸ್ಪಷ್ಟ ಹಂಬಲವೂ ಇರಲಿಲ್ಲ. ಆದರೆ ಲೋಕಧ್ವನಿಯನ್ನು ಓದತೊಡಗಿದ ಕ್ಷಣ ದಿಂದಲೇ ಅದು ನನ್ನ ದಿನಚರಿಯ ಭಾಗವಾಗಿ, ಬೆಳಗಿನ ಓದಿನ ಅವಿಭಾಜ್ಯ ಅಂಗವಾಗಿ ನನ್ನ ಜೀವನವನ್ನು ಆವರಿಸಿಕೊಂಡಿದೆ.
ಆರು ವರ್ಷಗಳ ಹಿಂದೆ, ನನ್ನ ಸಹೋದರಿಯ ಪತಿ, ಶಾಸಕರಾಗಿದ್ದ ದಿ.ಉಮೇಶ್ ಭಟ್ ಅವರ ನಿಧನದ ನಂತರ, ಲೋಕಧ್ವನಿ ಪತ್ರಿಕೆಯ ನೇತೃತ್ವವನ್ನು ನಾನು ವಹಿಸಿಕೊಂಡೆ. ಆ ದಿನದಿಂದ ಇಂದಿನವರೆಗೂ ಈ ಪತ್ರಿಕೆಯನ್ನು ಜನಪರ ಧ್ಯೇಯದೊಂದಿಗೆ ಮುನ್ನಡೆಸಿ ಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದರು.
ಈಗಾಗಲೇ ವಿಶ್ವವಾಣಿ ಮುನ್ನಡೆಸುತ್ತಿದ್ದ ನಾನು ಲೋಕಧ್ವನಿಯ ನೇತೃತ್ವವನ್ನು ವಹಿಸಿದಾಗ ಅನೇಕರು, ‘ಲೋಕಧ್ವನಿ ಯಾಕೆ?’ ಎನ್ನುವ ಪ್ರಶ್ನೆಯನ್ನು ಕೇಳಿದ್ದರು. ಈಗಲೂ ಕೇಳುತ್ತಿದ್ದಾರೆ. ರಾಜ್ಯಮಟ್ಟದ ಪತ್ರಿಕೆ ಇರುವಾಗ, ಇನ್ನೊಂದು ಜಿಲ್ಲಾಮಟ್ಟದ ಪತ್ರಿಕೆ ಏಕೆ ಬೇಕು ಎಂಬ ಆಲೋಚನೆಗಳು ಎಲ್ಲರಲ್ಲೂ ಮೂಡಿರಬಹುದು. ಆದರೆ ‘ವಿಶ್ವ’ ಮತ್ತು ‘ಲೋಕ’ ಎರಡೂ ಪದಗಳ ಅರ್ಥ ಒಂದೇ ಆಗಿದ್ದು, ‘ವಾಣಿ’ ಮತ್ತು ‘ಧ್ವನಿ’ಯ ಅರ್ಥವೂ ಒಂದೇ ಆಗಿದೆ. ಅಂದರೆ ವಿಶ್ವವಾಣಿ ಎಂದರೆ ಲೋಕಧ್ವನಿ, ಲೋಕಧ್ವನಿ ಎಂದರೆ ವಿಶ್ವವಾಣಿ. ಹೆಸರುಗಳು ಬೇರೆ ಇದ್ದರೂ ಆತ್ಮ ಒಂದೇ, ಎರಡನ್ನೂ ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಎರಡು ಪತ್ರಿಕೆಗಳು ಒಂದೇ ನಾಣ್ಯದ ಎರಡು ಮುಖಗಳ ಇದ್ದಂತೆ ಎಂದರು.
ರಾಜ್ಯಮಟ್ಟದ ಹಲವು ಪ್ರತಿಷ್ಠಿತ ಪತ್ರಿಕೆಗಳು ಹಾಗೂ ಮಾಧ್ಯಮಗಳಲ್ಲಿ ನಾನು ಕಾರ್ಯ ನಿರ್ವಹಿಸಿದ್ದರೂ, ಲೋಕಧ್ವನಿಯಲ್ಲಿ ಸಿಗುವಂತಹ ವಿಶೇಷ ಚೈತನ್ಯ ಮತ್ತು ಆತ್ಮೀಯತೆ ಬೇರೆ ಯಾವ ಪತ್ರಿಕೆಯಲ್ಲೂ ಸಿಗುವುದಿಲ್ಲ. ಕರ್ನಾಟಕದಲ್ಲಿ ಇರುವ ಯಾವುದೇ ಮಾಧ್ಯಮ ಗಳಿಗಿಂತ ಲೋಕಧ್ವನಿಯ ಜತೆಗಿನ ಜನರ ಸಂಬಂಧ ವಿಭಿನ್ನವಾಗಿದೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಯಾವುದೇ ಸುದ್ದಿ ಮೊದಲು ಬ್ರೇಕ್ ಆಗುವುದಾದರೆ, ಅದು ಲೋಕ ಧ್ವನಿ ಯ ಎಂಬ ನಂಬಿಕೆ ಜನರಲ್ಲಿ ಗಟ್ಟಿಯಾಗಿ ಬೆಳೆದಿದೆ ಎಂದರು.
ಈ ವೇಳೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಲೋಕಧ್ವನಿ ಪತ್ರಿಕೆಯನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. 1983ನೇ ಇಸವಿಯಲ್ಲಿ ನಾನು ಕಾರವಾರದಿಂದ ಚುನಾವಣೆ ನಿಲ್ಲುವಾಗ ಆ ಪತ್ರಿಕೆಯನ್ನು ನೋಡಿದ್ದೆ. ಪತ್ರಿಕೆ ಬಹಳ ಉತ್ತಮವಾದ ರೀತಿಯಲ್ಲಿ ಪಾರಂಭವಾಯಿತು. ಕಾರಣಾಂತರಗಳಿಂದ ಅದು ಮಧ್ಯದ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಯಿತು.
ನಂತರ ವಿಶ್ವೇಶ್ವರ ಭಟ್ಟರ ಕೈಗೆ ಬಂದ ಬಳಿಕ ಅವರು ನೀರು ಹಾಕಿ ಬೆಳೆಸಿದಂತೆ ಪತ್ರಿಕೆಯನ್ನುಬೆಳೆಸಿದ ಕಾರಣದಿಂದಾಗಿ ಹೆಮ್ಮರವಾಗಿ ಬೆಳೆದಿದೆ. ಇಂದು ಅತ್ಯಂತ ಉತ್ತಮವಾದಂಥ ರೀತಿಯಿಂದ ಲೋಕಧ್ವನಿ ಪತ್ರಿಕೆ ಕಾರವಾರ ಮತ್ತು ಕೊಪ್ಪಳದಲ್ಲಿ ಜನರ ಸಂಕಷ್ಟಗಳಿಗೆ ಪರಿಹಾರ ನೀಡುವ ಪತ್ರಿಕೆಯಾಗಿ ಬೆಳದಿದೆ ಎಂದರು.
ವಿಶ್ವವಾಣಿ ರಾಜ್ಯಮಟ್ಟದಲ್ಲಿ ಜನಸಾಮಾನ್ಯರ ಧ್ವನಿಯಾಗಿದ್ದರೆ, ಲೋಕಧ್ವನಿ ಉತ್ತರ ಕನ್ನಡ ಜಿಲ್ಲೆಯ ಮೊದಲ ದೈನಿಕವಾಗಿ ಹಾಗೂ ಕಳೆದ ಒಂದು ವರ್ಷದಿಂದ ಕೊಪ್ಪಳ ಜಿಲ್ಲೆಯ ಜನರ ಬದುಕಿನ ಸಮಸ್ಯೆಗಳಿಗೆ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸ್ಥಳೀಯ ಜನರ ನೋವು, ನಿರೀಕ್ಷೆ, ಹೋರಾಟ ಮತ್ತು ಸಾಧನೆಗಳನ್ನು ಪ್ರತಿಬಿಂಬಿಸುವ ಮೂಲಕ ಲೋಕಧ್ವನಿ, ಜನಮನದ ನಿಜವಾದ ಧ್ವನಿಯಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ನಾಲ್ಕು ದಶಕಗಳಿಂದ ತನ್ನದೇ ಆದ ಸ್ಥಾನವನ್ನು ಉಳಿಸಿಕೊಂಡಿದೆ.
ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕರು, ವಿಶ್ವವಾಣಿ
ಪತ್ರಿಕಾರಂಗ, ಪ್ರವಾಸೋದ್ಯಮ, ಸಾಮಾಜಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವ ನೀಡಿರುವುದು ಆದರ್ಶ ಕಾರ್ಯ. ನ್ಯಾಯವಾದಿ, ವೈದ್ಯ, ಪತ್ರಕರ್ತ, ಉದ್ಯಮಿ, ಕೈಗಾರಿಕೋದ್ಯಮ, ಕ್ರೀಡಾಪಟು ಸೇರಿದಂತೆ ಇನ್ನಿತರ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಸಾಧನೆ ಮಾಡಿದವ ರನ್ನು ಸಮಾಜ ಗುರುತಿಸಬೇಕು. ಅಂತಹ ಸಾಧಕರನ್ನು ಗೌರವಿಸುವುದು ಸಮಾಜದ ಕರ್ತವ್ಯವಾಗಬೇಕು ಆ ಕೆಲಸವನ್ನು ವಿಶ್ವೇಶ್ವರ ಭಟ್, ವಿಶ್ವವಾಣಿ ಹಾಗೂ ಲೋಕಧ್ವನಿ ಪತ್ರಿಕೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ.
-ಆರ್.ವಿ.ದೇಶಪಾಂಡೆ, ಶಾಸಕರು
ದುಡಿಮೆಯೊಂದಿಗೆ ದಾನ-ಧರ್ಮವೂ ಇರಲಿ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ಶಾಸಕ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರು ಮಾತನಾಡಿ, ಪ್ರತಿಯೊಬ್ಬರು ತಮ್ಮ ತಮ್ಮ ಕ್ಷೇತ್ರ ದಲ್ಲಿ ಸಾಧನೆ ಮಾಡುವ ಜತೆಗೆ ಸಮಾಜಕ್ಕೂ ತಮ್ಮಿಂದಾದ ಕೊಡುಗೆ ನೀಡುವ ಕೆಲಸ ಮಾಡಬೇಕು. ಕೆಲವರು ಇಡೀ ಜೀವನ ದುಡ್ಡು ಮಾಡುವ ಕೆಲಸ ಮಾಡುತ್ತಾರೆ. ಆದರೆ ಕೇವಲ ದುಡ್ಡು ಮಾಡುವುದಷ್ಟೇ ಅಲ್ಲದೇ, ದುಡಿದ ಇಂತಿಷ್ಟು ಹಣವನ್ನು ದಾನ-ಧರ್ಮಕ್ಕೆ ಬಳಸಬೇಕು ಎಂದು ಅಭಿಪ್ರಾಯಪಟ್ಟರು.
ವಿಶ್ವೇಶ್ವರ ಭಟ್ಟರು ಕೇವಲ ಪತ್ರಿಕಾ ರಂಗಕ್ಕೆ ಸೀಮಿತವಾಗದೇ ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಭಟ್ಟರ ದೂರದೃಷ್ಟಿಯನ್ನು ನಾನು ಮೆಚ್ಚುತ್ತೇನೆ. ಲೋಕಧ್ವನಿ ಪತ್ರಿಕೆ ಉತ್ತರ ಕನ್ನಡ ಸೇರಿ ರಾಜ್ಯದ ವಿವಿಧ ಭಾಗದ ಸಾಧಕರನ್ನು ಗುರುತಿಸುವ ಕೆಲಸ ಮಾಡಿರುವುದು ಶ್ಲಾಘನೀಯ. ಯಾವುದೇ ಕ್ಷೇತ್ರದಲ್ಲಾದರೂ, ಪ್ರಾಮಾಣಿಕವಾಗಿ ನಿಷ್ಠೆಯಿಂದ ಸಾಧನೆ ಮಾಡುವ ಸಾಧಕರನ್ನು ಗೌರವಿಸುವುದು ಪವಿತ್ರ ಕೆಲಸ ಎಂದರು. ಕಳೆದ 5 ದಶಕಗಳಿಂದ ರಾಜಕೀಯದಲ್ಲಿದ್ದು, ಸತತ 9 ಬಾರಿ ಶಾಸಕನಾಗಿದ್ದೇನೆ. ಇದಕ್ಕೆ ದೇವರ ಹಾಗೂ ಜನರ ಪ್ರೀತಿ ಮುಖ್ಯ. ಸ್ಥಾನಮಾನ ಪಡೆಯುವುದಕ್ಕಿಂತ ಜನರ ಪ್ರೀತಿ ಗಳಿಸಬೇಕು ಎಂದರು.
ವಿಶ್ವೇಶ್ವರ ಭಟ್ಟರು ಲೋಕಧ್ವನಿ ದಿನಪತ್ರಿಕೆಯನ್ನು ಮಾತ್ರವಲ್ಲದೆ ಪಾಟೀಲ್ ಪುಟ್ಟಪ್ಪ ಅವರು ಆರಂಭಿಸಿದ್ದ ವಿಶ್ವವಾಣಿ ಪತ್ರಿಕೆಗೆ ಮರುಹುಟ್ಟು ನೀಡಿ, ಉತ್ತಮವಾಗಿ ಮುನ್ನಡೆಸು ತ್ತಿದ್ದಾರೆ. ಸ್ಥಗಿತಗೊಂಡಿದ್ದ ಎರಡು ಪತ್ರಿಕೆಗಳನ್ನು ಮತ್ತೆ ಜನರ ಬಳಿಗೆ ತರುವಲ್ಲಿ ವಿಶ್ವೇಶ್ವರ ಭಟ್ಟರ ಪಾತ್ರ ಮಹತ್ವದಾಗಿದೆ. ಇನ್ನು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕ ರನ್ನು ರಾಜ್ಯಕ್ಕೆ ತೋರಿಸುವ ನಿಟ್ಟಿನಲ್ಲಿ ಲೋಕಧ್ವನಿ ಹೆಮ್ಮೆಯ ಸಾಧಕ -2026 ಪ್ರಶಸ್ತಿ ನೀಡುತ್ತಿರುವುದು ಉತ್ತಮ ಸಂಗತಿ. ಈ ಪ್ರಶಸ್ತಿಗೆ ಭಾಜನರಾಗಿರುವ ಸಾಧಕರು ಮುಂದಿನ ದಿನಗಳಲ್ಲಿ ಇನ್ನೂ ಶ್ರೇಷ್ಠವಾದ ಕೆಲಸ ಮಾಡಲು ಸ್ಪೂರ್ತಿ ಸಿಗಲಿ.
ಬಸವರಾಜ ಹೊರಟ್ಟಿ, ಸಭಾಪತಿ, ವಿಧಾನ ಪರಿಷತ್