ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

House Lease Scam: ಬೆಂಗಳೂರಿನಲ್ಲಿ ಮನೆ ಲೀಸ್‌, ಬಾಡಿಗೆ ಹೆಸರಲ್ಲಿ 200 ಕೋಟಿ ವಂಚನೆ: ದೂರು ದಾಖಲು, ಕಂಪನಿ‌ ಮಾಲೀಕ ಎಸ್ಕೇಪ್‌

ಬೆಂಗಳೂರಿನಲ್ಲಿ ಮನೆ ಲೀಸ್‌ ಹಾಗೂ ಬಾಡಿಗೆಗೆ ಕೊಡಿಸುವುದಾಗಿ 300ಕ್ಕೂ ಹೆಚ್ಚು ಜನರಿಗೆ ಜಾನ್ಸ್ ಅಸೆಟ್ ಮ್ಯಾನೇಜ್‌ಮೆಂಟ್‌ ಕಂಪನಿ ವಂಚಿಸಿದೆ. ಈ ಬಗ್ಗೆ ಇಂದಿರಾನಗರ ಠಾಣೆಯಲ್ಲಿ ದೂರು ದಾಖಲಾಇದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಕಂಪನಿಯ ಮಾಲೀಕ ಸದ್ಯ ಪರಾರಿಯಾಗಿದ್ದಾನೆ.

ಬೆಂಗಳೂರಿನಲ್ಲಿ ಮನೆ ಲೀಸ್‌, ಬಾಡಿಗೆ ಹೆಸರಲ್ಲಿ 200 ಕೋಟಿ ವಂಚನೆ

ಹಣ ಕಳೆದುಕೊಂಡವರಿಂದ ಇಂದಿರಾನಗರ ಠಾಣೆಗೆ ದೂರು ಮತ್ತು ಆರೋಪಿ ಸ್ಟೀಫನ್ ಜಾನ್. -

Prabhakara R
Prabhakara R May 18, 2026 4:34 PM

ಬೆಂಗಳೂರು: ಮನೆ ಲೀಸ್ ಪಡೆಯುವವರು ಎಚ್ಚರವಾಗಿರಬೇಕಿದೆ. ಯಾಕೆಂದರೆ, ಮನೆಗಳನ್ನು ಲೀಸ್​ಗೆ ಪಡೆಯಲು ಬಯಸುವವರನ್ನೇ ಗುರಿಯಾಗಿಸಿಕೊಂಡು ಸುಮಾರು 200 ಕೋಟಿ ರೂ. ವಂಚಿಸಿರುವ ಪ್ರಕರಣವೊಂದು ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಜಾನ್ಸ್ ಅಸೆಟ್ ಮ್ಯಾನೇಜ್‌ಮೆಂಟ್‌ ಹೆಸರಿನ ಮಧ್ಯವರ್ತಿ ಕಂಪನಿಯ ವಿರುದ್ಧ 300ಕ್ಕೂ ಹೆಚ್ಚು ಜನರಿಗೆ ವಂಚಿಸಿರುವ ಆರೋಪ ಕೇಳಿಬಂದಿದೆ. ಅದರ ಮಾಲೀಕ ಸ್ಟೀಫನ್ ಜಾನ್ ಪರಾರಿಯಾಗಿದ್ದಾರೆ. ವಂಚನೆಗೊಳಗಾದವರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಇಂದಿರಾನಗರ ಠಾಣೆ ಪೊಲೀಸರು, ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಬೆಂಗಳೂರಿನಲ್ಲಿ ವಾಸಿಸಲು ಭೋಗ್ಯಕ್ಕೆ ಮನೆಗಳ ಕೊರತೆ ಇರುವುದನ್ನು ಬಂಡವಾಳ ಮಾಡಿಕೊಂಡ ಕಂಪನಿ, ಲೀಸ್ ಹಣವನ್ನು ತಮ್ಮಲ್ಲಿ ಹೂಡಿಕೆ ಮಾಡಿದರೆ ನಾವು ನಿಮಗಾಗಿ ಮನೆ ಹುಡುಕಿ ಅದರ ಮಾಸಿಕ ಬಾಡಿಗೆಯನ್ನು ತಾವೇ ಪಾವತಿ ಮಾಡುವುದಾಗಿ ನಂಬಿಸುತ್ತಿತ್ತು. ಸಾಕಷ್ಟು ಜನ ಭೋಗ್ಯಕ್ಕೆ ನೀಡುವ ಹಣವನ್ನು ಕಂಪನಿಯಲ್ಲಿ ಹೂಡಿಕೆ ಮಾಡಿದಂತಾಗುತ್ತದೆ ಎಂದು ನಂಬಿದ್ದರು. ಒಬ್ಬೊಬ್ಬರಿಂದ ತಲಾ 10 ರಿಂದ 75 ಲಕ್ಷದವರೆಗೂ ಈ ಕಂಪನಿ ಹಣ ಪಡೆದಿತ್ತು. ಆರಂಭದಲ್ಲಿ ಕೆಲವು ತಿಂಗಳುಗಳ ಕಾಲ ಬಾಡಿಗೆ ಪಾವತಿಸುತ್ತಿದ್ದ ಕಂಪನಿ ನಂತರ ಬಾಡಿಗೆ ಪಾವತಿಸದೆ ಕಳ್ಳಾಟವಾಡುತ್ತಿತ್ತು.

ತಾವು ಕಂಪನಿಗೆ 37 ಲಕ್ಷ ರೂ. ನೀಡಿದ್ದೇವೆ. ಆದರೆ ತಮ್ಮ ಮನೆ ಬಾಡಿಗೆ ಹಣ ಪಾವತಿಸಿರಲಿಲ್ಲ. ಮಾಲೀಕರು ಮನೆ ಖಾಲಿ ಮಾಡಲು ಹೇಳಿದಾಗ ತಮ್ಮ ಹಣ ವಾಪಸ್ ಕೇಳಲು ಕಂಪನಿಯ ಬಳಿ ಹೋಗಿದ್ದೆವು. ಈ ವೇಳೆ ಹಣ ನೀಡಲು ನಿರಾಕರಿಸಿದ್ದ ಕಂಪನಿಯವರು ಅದೇ ಮೊತ್ತಕ್ಕೆ ತಿಂಗಳಿಗೆ ಶೇ. 4ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿತ್ತು. ಅದನ್ನು ನಂಬಿ ತಮ್ಮ ಹಣವನ್ನ ಹೂಡಿಕೆ ಮಾಡಿದ್ದೆವು. ಬಳಿಕ ಕೇವಲ ಎರಡು ತಿಂಗಳು ಹಣ ನೀಡಿದ್ದ ಕಂಪನಿ ನಂತರ ವಂಚಿಸಿದೆ ಎಂದು ವಂಚನೆಗೊಳಗಾದ ಗಾಯತ್ರಿ ಅವರು ಆರೋಪಿಸಿದ್ದಾರೆ.

Dubare Elephant Camp: ಕೊಡಗಿನ ದುಬಾರೆಯಲ್ಲಿ ಘೋರ ಘಟನೆ; ಸಾಕಾನೆಗಳ ಕಾದಾಟದ ವೇಳೆ ಸಿಲುಕಿ ಮಹಿಳೆ ಸಾವು!, Video

ಸದ್ಯ ಕಂಪನಿಯನ್ನ ಮುಚ್ಚಿರುವ ಅದರ ಮಾಲೀಕ ಸ್ಟೀಫನ್ ಜಾನ್, ಕೋಟ್ಯಂತರ ರೂಪಾಯಿ ಹಣದೊಂದಿಗೆ ಪರಾರಿಯಾಗಿದ್ದಾನೆ. ಇದೇ ಆರೋಪಿ ಈ ಹಿಂದೆ ಕೂಡ ವಂಚನೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧಿತನಾಗಿದ್ದ. ಹೊಸ ಕಂಪನಿಯ ಗ್ರಾಹಕರಿಂದ ಬಂದ ಹಣವನ್ನು ಹಳೆಯ ಗ್ರಾಹಕರಿಗೆ ನೀಡುತ್ತಾ ಪೋಂಜಿ ಸ್ಕೀಮ್ ಮಾದರಿಯಲ್ಲಿ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ.