ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತಪ್ಪಿದ ಭಾರಿ ದುರಂತ; ಟೇಕಾಫ್ ವೇಳೆ ಇಂಡಿಗೋ ವಿಮಾನದಲ್ಲಿ ಕಾಣಿಸಿಕೊಂಡ ಹೊಗೆ
IndiGo Flight: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ (ಮೇ 26) ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಚೆನ್ನೈಗೆ ಹಾರಲು ಸಿದ್ಧವಾಗುತ್ತಿದ್ದ ಇಂಡಿಗೋ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡಿದ್ದು, ತಕ್ಷಣ ಪ್ರಯಾಣಿಕರು, ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಘಟನೆಗೆ ಕಾರಣ ತಿಳಿದು ಬಂದಿಲ್ಲ.
ಇಂಡಿಗೋ ವಿಮಾನದಲ್ಲಿ ಕಾಣಿಸಿಕೊಂಡ ಹೊಗೆ -
ಬೆಂಗಳೂರು, ಮೇ 26: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ (ಮೇ 26) ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಚೆನ್ನೈಗೆ ಹಾರಲು ಸಿದ್ಧವಾಗುತ್ತಿದ್ದ ಇಂಡಿಗೋ ವಿಮಾನದಲ್ಲಿ (IndiGo Flight) ಹೊಗೆ ಕಾಣಿಸಿಕೊಂಡಿದ್ದು, ತಕ್ಷಣ ಪ್ರಯಾಣಿಕರು, ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಇದರಿಂದ ಬಹುದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ಇಂಡಿಗೋ ಪ್ರಕಟಣೆಯಲ್ಲಿ ತಿಳಿಸಿದೆ.
''ವಿಮಾನವು ಹೊರಡಲು ರನ್‌ವೇಗೆ ಟ್ಯಾಕ್ಸಿ ಮಾಡುತ್ತಿದ್ದಾಗ ಹೊಗೆ ಪತ್ತೆಯಾದ ನಂತರ ಸುರಕ್ಷತಾ ಕ್ರಮವಾಗಿ ತುರ್ತು ಸ್ಥಳಾಂತರಿಸಲು ಆದೇಶ ಹೊರಡಿಸಲಾಯಿತು. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ'' ಎಂದು ಇಂಡಿಗೋ ಹೇಳಿದೆ. "ಎಲ್ಲ ಗ್ರಾಹಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಮತ್ತು ಅವರನ್ನು ಟರ್ಮಿನಲ್‌ಗೆ ಸ್ಥಳಾಂತರಿಸಲಾಗಿದೆ. ಅಲ್ಲಿ ಅವರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ" ಎಂದು ಏರ್‌ಲೈನ್‌ನ ವಕ್ತಾರರು ವಿವರಿಸಿದ್ದಾರೆ.
ಇಂಡಿಗೋ ವಿಮಾನದಲ್ಲಿ ಕಾಣಿಸಿಕೊಂಡ ಹೊಗೆ:
Smoke scare on an IndiGo flight at Bengaluru Airport
— Nabila Jamal (@nabilajamal_) May 26, 2026
IndiGo flight 6E 6017 from Bengaluru to Chennai was taxiing for departure on May 26.. smoke was noticed inside the aircraft
Airline said immediate evacuation was carried out as a precautionary safety measure
All passengers… pic.twitter.com/seaCs3RWVv
ಆಗಿದ್ದೇನು?
ಬೆಂಗಳೂರಿನಿಂದ ಚೆನ್ನೈಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಟೇಕಾಫ್‌ಗಾಗಿ ರನ್‌ವೇಗೆ ಚಲಿಸುತ್ತಿದ್ದ ವೇಳೆ ಇಂಜಿನ್ ಬಳಿ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತ ಪೈಲಟ್ ವಿಮಾನವನ್ನು ರನ್‌ವೇಯಲ್ಲೇ ನಿಲ್ಲಿಸಿದರು. ಸ್ಥಳಕ್ಕೆ ಕೆಐಎಬಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಹಿರಿಯ ತಾಂತ್ರಿಕ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದರು. ಕೂಡಲೇ ವಿಮಾನದಲ್ಲಿದ್ದ ಪ್ರಯಾಣಿಕರನ್ನು ತುರ್ತು ನಿರ್ಗಮನ ದ್ವಾರದ ಮೂಲಕ ಸುರಕ್ಷಿತವಾಗಿ ಇಳಿಸಿ ಬೇರೆಡೆಗೆ ಶಿಫ್ಟ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ʼʼಶೀಘ್ರದಲ್ಲೇ ಪ್ರಯಾಣಿಕರಿಗೆ ಪರ್ಯಾಯ ವಿಮಾನವನ್ನು ವ್ಯವಸ್ಥೆ ಮಾಡಲಾಗುವುದು. ವಸತಿ, ಆಹಾರ ಒದಗಿಸಲಾಗುತ್ತಿದೆ" ಎಂದು ಇಂಡಿಗೋ ಹೇಳಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯದ (DGCA) ಮೂಲಗಳು, ಬೆಂಗಳೂರು-ಚೆನ್ನೈ ಇಂಡಿಗೋ ವಿಮಾನ 6E-6017ರ ಪುಶ್ ಬ್ಯಾಕ್ ಸಮಯದಲ್ಲಿ ಕ್ಯಾಬಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ ಎನ್ನುವುದನ್ನು ದೃಢಪಡಿಸಿವೆ. ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದೆ.
ಕೆಲವೇ ದಿನಗಳಲ್ಲಿ ಮತ್ತೊಂದು ಘಟನೆ
ಇದೇ ರೀತಿಯ ಸಮಸ್ಯೆ ಕೆಲವು ದಿನಗಳ ಹಿಂದೆಯೂ ಇಂಡಿಗೋ ವಿಮಾನದಲ್ಲಿ ಕಾಣಿಸಿಕೊಂಡಿತ್ತು. ಈ ತಿಂಗಳ ಆರಂಭದಲ್ಲಿ ಚಂಡೀಗಢದಿಂದ ಹೈದರಾಬಾದ್‌ಗೆ ತೆರಳಲು ಸಿದ್ಧವಾದ ವಿಮಾನದ ಕ್ಯಾಬಿನ್‌ನಲ್ಲಿ ಹೊಗೆ ಕಂಡು ಬಂದಿತ್ತು. ಕೂಡಲೇ ವಿಮಾನದಿಂದ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಕರೆ ತರಲಾಯಿತು. ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಪ್ರಯಾಣಿಕರೊಬ್ಬರಿಗೆ ಸಣ್ಣ ಪುಟ್ಟ ಗಾಯವಾಗಿತ್ತು.
ದೆಹಲಿ ಏರ್‌ಪೋರ್ಟ್‌ನಲ್ಲಿ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ
ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ಸಂಸ್ಥೆಯ ವಿಮಾನವೊಂದು ಗುರುವಾರ (21) ರಾತ್ರಿ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತ್ಯಂತ ತುರ್ತು ಪರಿಸ್ಥಿತಿಯಲ್ಲಿ ಭೂಸ್ಪರ್ಶ ಮಾಡಿತ್ತು. ಈ ವಿಮಾನವು ರನ್‌ವೇಯಲ್ಲಿ ಇಳಿಯುವ ಅಂತಿಮ ಹಂತದಲ್ಲಿದ್ದಾಗ, ಅದರ ಕಾಕ್‌ಪಿಟ್‌ನಲ್ಲಿದ್ದ ಪೈಲಟ್ ಹಾಗೂ ಸಿಬ್ಬಂದಿಗೆ ವಿಮಾನದ ಇಂಜಿನ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ತಾಂತ್ರಿಕ ಎಚ್ಚರಿಕೆಯ ಸಂದೇಶವೊಂದು ಬಂದಿತ್ತು. ಈ ಗಂಭೀರ ಮುನ್ಸೂಚನೆ ಸಿಕ್ಕ ತಕ್ಷಣವೇ ವಿಮಾನ ನಿಲ್ದಾಣದಲ್ಲಿ 'ಪೂರ್ಣ ತುರ್ತು ಪರಿಸ್ಥಿತಿ'ಯನ್ನು ಘೋಷಿಸಲಾಗಿತ್ತು. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.