ನಕಲಿ ವೈದ್ಯನ ಮನೆ ಮೇಲೆ ತಾಲೂಕು ಆರೋಗ್ಯ ಅಧಿಕಾರಿಗಳ ತಂಡದಿಂದ ದಿಢೀರ್ ದಾಳಿ
ಅಧಿಕಾರಿಗಳ ತಂಡ ಬಟ್ಲಹಳ್ಳಿ ಗ್ರಾಮದಲ್ಲಿರುವ ನಾರಾಯಣ್ ರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ,ನಕಲಿ ವೈದ್ಯರೆಂದು ನಾಮಫಲಕ ಹಾಕಿಕೊಂಡಿದ್ದ ಬಿ. ನಾರಾಯಣ್ ರೆಡ್ಡಿ ಮನೆಯಲ್ಲಿ ಇರಲಿಲ್ಲ.ಆದರೆ ಅವರ ಪತ್ನಿ ವಿಜಯಲಕ್ಷ್ಮಿ ಅವರು ಮನೆಯಲ್ಲಿದ್ದರು.ಅವರ ಸಮ್ಮುಖದಲ್ಲೇ ಇಡೀ ಮನೆಯನ್ನು ತಪಾಸಣೆ ನಡೆಸಿದಾಗ,ರೋಗಿಗಳಿಗೆ ಬಳಸಲಾಗುತ್ತಿದ್ದ ಅನೇಕ ಸೂಜಿಗಳು ಸಿರಿಂಜ್ ವಿವಿಧ ಮಾತ್ರೆಗಳು ಹಾಗೂ ಗ್ಲುಕೋಸ್ ಬಾಟಲಿಗಳು ಪತ್ತೆಯಾಗಿವೆ.
-
ಚಿಂತಾಮಣಿ : ತಾಲೂಕಿನ ಮುಂಗಾನಹಳ್ಳಿ ಹೋಬಳಿಯ ಬಟ್ಲಹಳ್ಳಿ ಗ್ರಾಮದಲ್ಲಿ ಯಾವುದೇ ಕಾನೂನುಬದ್ಧ ವೈದ್ಯಕೀಯ ವಿದ್ಯಾರ್ಹತೆ ಇಲ್ಲದೆ ಸಾರ್ವಜನಿಕರಿಗೆ ಚಿಕಿತ್ಸೆ ನೀಡುತ್ತಿದ್ದ ಹಾಗೂ ಗರ್ಭಿಣಿಯರಿಗೆ ಕಾನೂನು ಬಾಹಿರವಾಗಿ ಅಬಾರ್ಷನ್ ಮಾತ್ರೆಗಳನ್ನು ವಿತರಿಸುತ್ತಿದ್ದ ಬಿ. ನಾರಾಯಣ್ ರೆಡ್ಡಿ(54)ಎಂಬ ನಕಲಿ ವೈದ್ಯನ ನಿವಾಸದ ಮೇಲೆ ಅಧಿಕಾರಿಗಳ ತಂಡ ಇಂದು ದಿಢೀರ್ ದಾಳಿ ನಡೆಸಿದೆ.
ಇತ್ತೀಚೆಗೆ ಮಹಿಳೆಯೊಬ್ಬರಿಗೆ ಅಬಾರ್ಷನ್ ಆಗಲು ಈ ನಾರಾಯಣ್‌ರೆಡ್ಡಿ ಮಾತ್ರೆಗಳನ್ನು ನೀಡಿದ್ದ ಎನ್ನಲಾಗಿದೆ. ಇದರಿಂದಾಗಿ ತೀವ್ರ ಅಸ್ವಸ್ಥಗೊಂಡ ಸದರಿ ಗರ್ಭಿಣಿ ಮಹಿಳೆಯು ಚಿಂತಾಮಣಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು.ಈ ಬಗ್ಗೆ ನಿಖರ ಮಾಹಿತಿ ಲಭ್ಯವಾದ ಹಿನ್ನೆಲೆ ಯಲ್ಲಿ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದಾರೆ.
ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಎಂ.ಎಸ್.ರಾಮಚಂದ್ರರೆಡ್ಡಿ ನೇತೃತ್ವದಲ್ಲಿ ಜಂಟಿ ದಾಳಿ ನಡೆಸಲಾಯಿತು.ಈ ತಂಡದಲ್ಲಿ ಬಟ್ಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ.ರಾಜೇಶ್ ಕುಮಾರ್,ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ರೀನಿವಾಸ ರೆಡ್ಡಿ,ತಾಲೂಕು ಎಪಿಡೆಮಿಯಾಲಜಿಸ್ಟ್ ಪ್ರಶಾಂತ್, ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯಾದ ಶೀಲಾಹಾಗೂ ಸಮುದಾಯ ಆರೋಗ್ಯ ಕೇಂದ್ರದ ಫಾರ್ಮಸಿ ಅಧಿಕಾರಿ ಶ್ರಾವಣಿ ಪಾಲ್ಗೊಂಡಿದ್ದರು.
ಅಧಿಕಾರಿಗಳ ತಂಡ ಬಟ್ಲಹಳ್ಳಿ ಗ್ರಾಮದಲ್ಲಿರುವ ನಾರಾಯಣ್ ರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ,ನಕಲಿ ವೈದ್ಯರೆಂದು ನಾಮಫಲಕ ಹಾಕಿಕೊಂಡಿದ್ದ ಬಿ. ನಾರಾಯಣ್ ರೆಡ್ಡಿ ಮನೆಯಲ್ಲಿ ಇರಲಿಲ್ಲ.ಆದರೆ ಅವರ ಪತ್ನಿ ವಿಜಯಲಕ್ಷ್ಮಿ ಅವರು ಮನೆಯಲ್ಲಿದ್ದರು.ಅವರ ಸಮ್ಮುಖದಲ್ಲೇ ಇಡೀ ಮನೆಯನ್ನು ತಪಾಸಣೆ ನಡೆಸಿದಾಗ,ರೋಗಿಗಳಿಗೆ ಬಳಸಲಾಗುತ್ತಿದ್ದ ಅನೇಕ ಸೂಜಿಗಳು ಸಿರಿಂಜ್ ವಿವಿಧ ಮಾತ್ರೆಗಳು ಹಾಗೂ ಗ್ಲುಕೋಸ್ ಬಾಟಲಿಗಳು ಪತ್ತೆಯಾಗಿವೆ.
ಅಧಿಕಾರಿಗಳು ಪತ್ತೆಯಾದ ಎಲ್ಲಾ ವೈದ್ಯಕೀಯ ಪರಿಕರಗಳು ಹಾಗೂ ಮಾತ್ರೆಗಳನ್ನು ವಶಪಡಿಸಿ ಕೊಂಡಿದ್ದಾರೆ. ಸದ್ಯ ಬಿ.ನಾರಾಯಣ್ ರೆಡ್ಡಿ ವಿರುದ್ಧ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಪ್ರಥಮ ಮಾಹಿತಿಯನ್ನು ದಾಖಲಿಸಲಾಗಿದ್ದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.