ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ತಹಶೀಲ್ದಾರ್ ರಶ್ಮಿ ಅವರಿಂದ ಪೂಜೆ, ಬಿಲ್ಲಿಗೆ ಹೆದೆಯೇರಿಸಿ ಬಾಣ ಪ್ರಯೋಗ; ಬನ್ನಿ ಎಲೆಗಳಿಗಾಗಿ ಭಕ್ತರ ನೂಕುನುಗ್ಗಲು

ನಗರದ ಒಂದನೇ ವಾರ್ಡ್‌ನ ವಾಪಸಂದ್ರದಲ್ಲಿರುವ ಶ್ರೀರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ಬುಧವಾರ ಸಂಜೆ ಬನ್ನಿ ವೃಕ್ಷಕ್ಕೆ ವಿಶೇಷ ಪೂಜೆ ಸಲ್ಲಿಸಿ, ಬನ್ನಿ ಮಂಟಪದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವ ಮೂಲಕ ದಸರಾ ಮಹೋತ್ಸವಕ್ಕೆ ಸಂಭ್ರಮದ ತೆರೆ ಎಳೆಯಲಾಯಿತು.

ವಿಜಯದಶಮಿ ಸಂಭ್ರಮ: ವಾಪಸಂದ್ರದಲ್ಲಿ ಬನ್ನಿ ವೃಕ್ಷಕ್ಕೆ ವಿಶೇಷ ಪೂಜೆ

-

Profile
Ashok Nayak Oct 22, 2026 9:31 PM

ಚಿಕ್ಕಬಳ್ಳಾಪುರ: ತಾಲೂಕು ಆಡಳಿತದಿಂದ ವಿಜಯದಶಮಿ ಹಬ್ಬವನ್ನು ಚಿಕ್ಕಬಳ್ಳಾಪುರ ನಗರದಲ್ಲಿ ಸಾಂಪ್ರದಾಯಿಕವಾಗಿ ಹಾಗೂ ಸಡಗರ ಸಂಭ್ರಮದಿಂದ ಆಚರಿಸಲಾಯಿತು. 

ನಗರದ ಒಂದನೇ ವಾರ್ಡ್‌ನ ವಾಪಸಂದ್ರದಲ್ಲಿರುವ ಶ್ರೀರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ಬುಧವಾರ ಸಂಜೆ ಬನ್ನಿ ವೃಕ್ಷಕ್ಕೆ ವಿಶೇಷ ಪೂಜೆ ಸಲ್ಲಿಸಿ, ಬನ್ನಿ ಮಂಟಪದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವ ಮೂಲಕ ದಸರಾ ಮಹೋತ್ಸವಕ್ಕೆ ಸಂಭ್ರಮದ ತೆರೆ ಎಳೆಯಲಾಯಿತು.

ಮೈಸೂರು ಅರಸರ ಕಾಲದಿಂದಲೂ ಚಿಕ್ಕಬಳ್ಳಾಪುರದಲ್ಲಿ ದಸರಾ ಆಚರಣೆ ನಡೆದುಕೊಂಡು ಬರುತ್ತಿದ್ದು,  ಅದರಂತೆ ಈ ಬಾರಿಯೂ ಕೂಡ ನಗರದ ವಿವಿಧ ದೇವಾಲಯಗಳ 20ಕ್ಕೂ ಹೆಚ್ಚು ಉತ್ಸವ ಮೂರ್ತಿಗಳು ಮಹೋತ್ಸವದಲ್ಲಿ ಪಾಲ್ಗೊಂಡಿದ್ದವು. 

ನವರಾತ್ರಿಯ ಒಂಬತ್ತು ದಿನಗಳ ಕಾಲ ವಿಶೇಷ ಪೂಜೆಗಳೊಂದಿಗೆ ಪಟ್ಟದಲ್ಲಿ ಪ್ರತಿಷ್ಠಾಪಿಸಲಾಗಿದ್ದ ದೇವರ ಮೂರ್ತಿಗಳನ್ನು ವಿಜಯದಶಮಿಯಂದು ಮೆರವಣಿಗೆಯಲ್ಲಿ ಕರೆತಂದು ಬನ್ನಿ ಮಂಟಪದ ಬಳಿ ಪೂಜಿಸಲಾಯಿತು. ವಾಪಸಂದ್ರದ ಶ್ರೀರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ವಿಶೇಷವಾಗಿ ಚಪ್ಪರ ಹಾಕಿ ಬನ್ನಿ ಮಂಟಪ ನಿರ್ಮಿಸಲಾಗಿತ್ತು. 

ಇದನ್ನೂ ಓದಿ: Chikkaballapur News: ತಹಶೀಲ್ದಾರ್ ರಶ್ಮಿ ಅವರಿಂದ ಪೂಜೆ, ಬಿಲ್ಲಿಗೆ ಹೆದೆಯೇರಿಸಿ ಬಾಣ ಪ್ರಯೋಗ; ಬನ್ನಿ ಎಲೆಗಳಿಗಾಗಿ ಭಕ್ತರ ನೂಕುನುಗ್ಗಲು

ತಹಶೀಲ್ದಾರ್ ರಶ್ಮಿ ಅವರು ತಮ್ಮ ಪತಿಯೊಂದಿಗೆ ಸಾಂಪ್ರದಾಯಿಕ ಉಡುಗೆಯಲ್ಲಿ, ಮೈಸೂರು ಪೇಟ ಹಾಗೂ ಕೋಟು ಧರಿಸಿ ಆಗಮಿಸಿ ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿದರು. ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಿ, ಬರ ದೂರವಾಗಿ ಜನರು ಸುಖ-ಸಮೃದ್ಧಿಯಿಂದ ಬದುಕುವಂತಾಗಲಿ ಎಂದು ಪ್ರಾರ್ಥಿಸಿದರು. ಬಳಿಕ ಬಿಲ್ಲಿಗೆ ಹೆದೆಯೇರಿಸಿ ಬಾಣ ಪ್ರಯೋಗ ಮಾಡಿ, ಬನ್ನಿ ಕೊಂಬೆಗಳಿಂದ ಅಲಂಕರಿಸಿದ್ದ ಬಾಳೆಯ ದಿಂಡನ್ನು ಕಡಿಯುವ ಮೂಲಕ ಸಂಪ್ರದಾಯವನ್ನು ಶ್ರದ್ಧಾ ಭಕ್ತಿಯಿಂದ  ನೆರವೇರಿಸಿದರು.

ಬನ್ನಿ ಎಲೆಗಳಿಗಾಗಿ ಭಕ್ತರ ನೂಕುನುಗ್ಗಲು: ವಿಜಯದಶಮಿಯಂದು ಬನ್ನಿ ಮರದ ಎಲೆಗಳನ್ನು ಮನೆಗೆ ಕೊಂಡೊಯ್ದರೆ ವಿಜಯ ಹಾಗೂ ಸಮೃದ್ಧಿ ದೊರೆಯುತ್ತದೆ ಎಂಬ ನಂಬಿಕೆ ಜನರಲ್ಲಿದೆ. 

ಈ ಹಿನ್ನೆಲೆಯಲ್ಲಿ ಬನ್ನಿ ದಿಂಡನ್ನು ಕತ್ತರಿಸಿದ ಬಳಿಕ ಎಲೆಗಳನ್ನು ಸಂಗ್ರಹಿಸಲು ಭಕ್ತರು ಮುಗಿಬಿದ್ದರು. ಈ ವೇಳೆ ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

1405910 ok

ಅನಾದಿ ಕಾಲದಲ್ಲಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದ ಬಳಿಕ ಅದರ ಕೊಂಬೆಗಳನ್ನು ಕಡಿಯುವ ಸಂಪ್ರದಾಯವಿತ್ತು. ಪ್ರಸ್ತುತ ಬನ್ನಿ ಎಲೆಗಳಿಂದ ಅಲಂಕರಿಸಿದ ದಿಂಡನ್ನು ಕಡಿಯುವ ಮೂಲಕ ಆಚರಣೆ ನಡೆಸಲಾಗುತ್ತಿದೆ.

ಶಮಿ ಎಲೆ ಹಂಚಿಕೊಳ್ಳುವ ಸಂಪ್ರದಾಯ: ವಿಜಯದಶಮಿಯಂದು ಶಮಿ ವೃಕ್ಷ ಅಥವಾ ಬನ್ನಿ ಮರವನ್ನು ಪೂಜಿಸುವ ಸಂಪ್ರದಾಯಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ಶ್ರೀರಾಮನು ಲಂಕೆಯ ಮೇಲೆ ಯುದ್ಧಕ್ಕೆ ತೆರಳುವ ಮುನ್ನ ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ವಿಜಯಕ್ಕಾಗಿ ಪ್ರಾರ್ಥಿಸಿದನೆಂಬ ನಂಬಿಕೆ ಇದೆ. ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಮರಳಿದ ಬಳಿಕ ಜನರಿಗೆ ಚಿನ್ನವನ್ನು ಹಂಚಿದನೆಂಬ ಪ್ರತೀತಿಯ ಹಿನ್ನೆಲೆಯಲ್ಲಿ ಶಮಿ ಎಲೆಗಳನ್ನು ಚಿನ್ನದ ಸಂಕೇತವಾಗಿ ಪರಸ್ಪರ ಹಂಚಿಕೊಳ್ಳುವ ಪದ್ಧತಿ ರೂಢಿಯಲ್ಲಿದೆ ಎಂದು ಸ್ಥಳೀಯರಾದ ಮಂಜುನಾಥ್ ಹಾಗೂ ನರೇಂದ್ರ ವಿವರಿಸಿದರು.

ದಸರಾ ಹಬ್ಬದ ಅಂಗವಾಗಿ ನಡೆದ ಬನ್ನಿ ವೃಕ್ಷದ ಪೂಜೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಪರಸ್ಪರ ಬನ್ನಿ ಎಲೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ವಿಜಯ ದಶಮಿಯ ಶುಭಾಶಯಗಳನ್ನು ಹಂಚಿಕೊಂಡರು.