ಒಡೆದ ಮನೆಯಂತಾದ ಕಾಂಗ್ರೆಸ್ : ಸಂಚಲನಕ್ಕೆ ಕಾರಣವಾದ ಕೆಪಿಸಿಸಿ ನೋಟೀಸು
ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ನಡೆಯ ವಿರುದ್ದ ಬಹಿರಂಗವಾಗಿ ಟೀಕೆ ಟಿಪ್ಪಣಿ ಮಾಡಿದ್ದ ಚಿಮುಲ್ ನಿರ್ದೇಶಕರಾದ ಭರಣಿ ವೆಂಕಟೇಶ್, ಕಾಕಲಚಿಂತೆ ರಾಜಣ್ಣ, ಮಿಲ್ಟನ್ ವೆಂಕಟೇಶ್ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಕಾರಣ ಕೇಳಿ ನೀಡಿರುವ ನೋಟೋಸು ಭಾರೀ ಸಂಚಲವನ್ನು ಉಂಟು ಮಾಡಿದೆ.
ಕೆ.ಪಿ.ಸಿ.ಸಿ ನೋಟೀಸು ಪತ್ರ.. -
ಮುನಿರಾಜು ಎಂ ಅರಿಕೆರೆ
ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ನಡೆಯ ವಿರುದ್ದ ಬಹಿರಂಗವಾಗಿ ಟೀಕೆ ಟಿಪ್ಪಣಿ ಮಾಡಿದ್ದ ಚಿಮುಲ್ ನಿರ್ದೇಶಕರಾದ ಭರಣಿ ವೆಂಕಟೇಶ್, ಕಾಕಲಚಿಂತೆ ರಾಜಣ್ಣ, ಮಿಲ್ಟನ್ ವೆಂಕಟೇಶ್ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಕಾರಣ ಕೇಳಿ ನೀಡಿರುವ ನೋಟೋಸು ಭಾರೀ ಸಂಚಲವನ್ನು ಉಂಟು ಮಾಡಿದೆ.
ನೋಟೀಸು ಬರಲು ಕಾರಣ ?
ಏ.21ರಂದು ಶಾಸಕ ಪ್ರದೀಪ್ ಈಶ್ವರ್ ಮತ್ತು ಅವರ ಬೆಂಬಲಿಗರು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದ ಎಸ್‌ಸಿ,ಎಸ್ಟಿ ಅಭಿವೃದ್ದಿಗೆ ಬಂದಿದ್ದ 3ಕೋಟಿಯನ್ನು ಉಸ್ತುವಾರಿ ಸಚಿವರು ಚಿಂತಾಮಣಿಗೆ ತೆಗೆದುಕೊಂಡು ಹೋಗಿದ್ದಾರೆ.ಅವರು ದಲಿತ ವಿರೋಧಿ ಎಂದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಇದಕ್ಕೆ ಶಾಸಕರ ಕುಮ್ಮಕ್ಕಿದೆ.ನೀವು ಶಾಸಕರಾಗಲು ಕಾರಣವಾದವರ ಮೇಲೆ ಹೀಗೆ ಗೂಬೆ ಕೂರಿಸು ವುದು ಸರಿಯಲ್ಲ. ಪ್ರದೀಪ್ ಈಶ್ವರ್ ಶಾಸಕರಾದ ಮೇಲೆ ಕ್ಷೇತ್ರದಲ್ಲಿ ಹಿರಿಯರನ್ನು ಕಡೆಗಣಿಸಿ ಕಿರಿಯರಿಗೆ ಅವಕಾಶ ನೀಡಲಾಗಿದೆ.ಪಕ್ಷದ ಸಂಘಟನೆ ಸೊರಗಿದೆ.ಜಾತಿ ಜಾತಿಗಳ ನಡುವೆ ವೈಮನಸ್ಸು ಉಂಟಾಗಿದೆ. ಒಂದೇ ಒಂದು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆದ್ದಿಲ್ಲ.ಚಿಮುಲ್ ಚುನಾವಣೆಯಲ್ಲಿ ಸ್ವಪಕ್ಷದವರ ಪರವಾಗಿ ಕೆಲಸ ಮಾಡಿಲ್ಲ, ವಿರೋಧಿಗಳಿಗೆ ಸಹಾಯ ಮಾಡಿದ್ದಾರೆ ಎಂದೆಲ್ಲಾ ದೂರಿದ್ದರು.
ಇದಕ್ಕೆ ಪ್ರತಿಯಾಗಿ ಏ.22ರಂದು ಪ್ರದೀಪ್ ಈಶ್ವರ್ ಬೆಂಬಲಿಗರು ಸುದ್ದಿಗೋಷ್ಟಿ ನಡೆಸಿ ತೀವ್ರ ವಾಗ್ದಾಳಿ ನಡೆಸಿದ್ದರಲ್ಲದೆ, ಶಾಸಕರ ವಿರುದ್ದ ವ್ಯವಸ್ಥಿತ ದಾಳಿ ನಡೆಸುತ್ತಿರುವವರ ವಿರುದ್ದ, ಆಮೂಲಕ ಪಕ್ಷದ ಸಂಘಟನೆಗೆ ತೊಂದರೆ ಉಂಟು ಮಾಡುವವರ ವಿರುದ್ದ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಪಕ್ಷದ ಮುಖಂಡರಿಗೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ನೋಟೀಸು ಜಾರಿಯಾಗಿರುವುದು ಕಾಂಗ್ರೆಸ್ ಮುಖಂಡರಲ್ಲಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ: MLA Pradeep Eshwar: ಶಾಸಕರಾಗಿ ನೀಡಿರುವ ಭರವಸೆಗಳನ್ನು ಈಡೇರಿಸಿ, ಇಲ್ಲವೇ ಪ್ರತಿಭಟನೆ ಎದುರಿಸಿ : ಸುಷ್ಮಾ ಶ್ರೀನಿವಾಸ್ ಆಗ್ರಹ
ನೋಟೀಸಲ್ಲೇನಿದೆ?
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಕ್ಕಬಳ್ಳಾಪುರ ನಗರದ ಮಾಜಿ ನಗರಸಭಾ ಸದಸ್ಯರಾದ ಮಿಲ್ಟನ್ ವೆಂಕಟೇಶ್, ಚಿಮುಲ್ ನಿರ್ದೇಶಕರಾದ ಭರಣಿ ವೆಂಕಟೇಶ್, ಚಿಮುಲ್ ನಾಮನಿರ್ದೇಶಿತ ಸದಸ್ಯರಾದ ಕೆ.ಆರ್.ರಾಜಣ್ಣ ಮೊದಲಾದ ಮುಖಂಡರು ಶಾಸಕರಾದ ಪ್ರದೀಪ್ ಈಶ್ವರ್ ಅವರ ಬಗ್ಗೆ ಹಾಗೂ ಅವರು ಮಾಡುತ್ತಿರುವ ಕ್ಷೇತ್ರಾಭಿವೃದ್ದಿ ಕೆಲಸಗಳ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವುದು, ಟೀಕೆ ಟಿಪ್ಪಣಿ ಮಾಡುವುದು ಹಾಗೂ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಆಗುತ್ತಿರುವ ಅಭಿವೃದ್ದಿ ಕೆಲಸಗಳ ಬಗ್ಗೆ ಬಹಿರಂಗವಾಗಿ ವ್ಯತಿರಿಕ್ತವಾಗಿ ಹೇಳಿಕೆ ನೀಡುತ್ತಿರುವುದಾಗಿ ಸ್ಥಳೀಯ ಚಿಕ್ಕಬಳ್ಳಾಪುರ ಶಾಸಕರು, ಬ್ಲಾಕ್ ಕಾಂಗ್ರೆಸ್ ಸಮಿತಿ, ಹಾಗೂ ಮಂಡಿಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳು ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪಕ್ಷ ವಿರೋಧಿ ಚಟವಟಿಕೆಗಳ ಆರೋಪದ ಮೇಲೆ ತಮಗೆ ನೋಟೀಸು ನೀಡಲಾ ಗಿದೆ. ತಾವುಗಳು ಈ ಬಗ್ಗೆ ಸಮಜಾಯಿಷಿ/ಸ್ಪಷ್ಟೀಕರಣವನ್ನು ಈ ನೋಟೀಸು ತಲುಪಿದ ಒಂದು ವಾರದೊಳಗಾಗಿ ಕೆಪಿಸಿಸಿಗೆ ಲಿಖಿತ ರೂಪದಲ್ಲಿ ಸಲ್ಲಿಸತಕ್ಕದ್ದು.ನಿಗದಿತ ಸಮಯದೊಳಗೆ ತಾವುಗಳು ಸಮಂಜಸವಾದ ಸ್ಪಷ್ಟೀಕರಣ ನೀಡಲು ವಿಫಲರಾದಲ್ಲಿ ತಮ್ಮ ಮೇಲೆ ಮುಂದಿನ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಬರೆದು ಸಂಬAಧಪಟ್ಟವರಿಗೆ ನೋಟಿಸು ನೀಡಿದ ಹಾಗೆ ಪ್ರತಿಗಳನ್ನು ಕೇಶವರೆಡ್ಡಿ ಕೆಪಿಸಿಸಿ ಜಿಲ್ಲಾಧ್ಯಕ್ಷರು ಚಿಕ್ಕಬಳ್ಳಾಪುರ, ಶಾಸಕರು ಪ್ರದೀಪ್ ಈಶ್ವರ್, ಅಧ್ಯಕ್ಷರು ಬಿಬಿಸಿ ಚಿಕ್ಕಬಳ್ಳಾಪುರ, ಮಂಡಿಕಲ್ ಬಿಸಿಸಿ ಅಧ್ಯಕ್ಷರಿಗೆ ನೀಡಲಾಗಿದೆ.
ಒಟ್ಟಾರೆ ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ಜಿಲ್ಲಾ ಕೇಂದ್ರದ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ, ಶಾಸಕರು ಉತ್ತರ ಧೃವವಾದರೆ, ನೋಟೀಸು ಪಡೆಸುವವರು ದಕ್ಷಿಣ ಧೃವದಂತಾಗಿ ದ್ದಾರೆ. ವೈಮನಸ್ಸು ಕಡಿಮೆ ಮಾಡಿ ಪಕ್ಷಸಂಘಟನೆಗೆ ಮುಂದಾಗುವ ಬಗ್ಗೆ ಯಾರಿಗೂ ಒಲವಿದ್ದಂತೆ ಕಾಣುತ್ತಿಲ್ಲ.ಕಾಂಗ್ರೆಸ್ ಪಕ್ಷದ ನಾಯಕರ ಸದ್ಯದ ನಡೆ ನೋಡಿದರೆ ಕೋಣ ಈದಿದೆ ಎಂದರೆ ಕೊಟ್ಟಿಗೆಯಲ್ಲಿ ಕಟ್ಟು ಎಂಬಂತಿದೆ. ಈ ಎಲ್ಲಾ ಕೋಪತಾಪಗಳು ಸವಾಲು ಪ್ರತಿ ಸವಾಲುಗಳು ಮುಂದೆ ಎಲ್ಲಿ ಹೋಗಿ ನಿಲ್ಲುತ್ತವೋ ಕಾದು ನೋಡಬೇಕಿದೆ.
![]()
6 ತಿಂಗಳ ಹಿಂದೆ ಚಂದ್ರಶೇಖರ್ ಅವರಿಗೆ 150ಕ್ಕೂ ಹೆಚ್ಚು ಚುನಾಯಿತ ಜನಪ್ರತಿನಿಧಿಗಳು, ಮಾಜಿ ಶಾಸಕರು ಸೇರಿ ಸಹಿ ಮಾಡಿ ಶಾಸಕರ ನಡುವಳಿಕೆ ಸರಿಹೋಗುತ್ತಿಲ್ಲ,ಪಕ್ಷ ಕಟ್ಟುವ ಕೆಲಸ ಮಾಡು ತ್ತಿಲ್ಲ, ಇದನ್ನು ಸರಿಪಡಿಸುವ ಕೆಲಸ ಮಾಡಿ, ಇಲ್ಲವಾದಲ್ಲಿ ಚಿಕ್ಕಬಳ್ಳಾಪುರದಲ್ಲಿ ಪಕ್ಷ ಸರ್ವ ನಾಶವಾಗಲಿದೆ ಎಂದು ದೂರು ನೀಡಲಾಗಿತ್ತು.ಇದುವರೆಗೂ ಅವರು ಯಾವುದೇ ಕ್ರಮವಹಿಸಿರ ಲಿಲ್ಲ. ಆದರೆ ನಾವು ಮಂತ್ರಿಗಳ ಬಗ್ಗೆ ಹೀನಾಯವಾಗಿ ಸಚಿವರು 3 ಕೋಟಿ ಕದ್ದುಕೊಂಡು ಹೋಗಿ ದ್ದಾರೆಂದು ಎಲ್ಲಾ ಮಾಧ್ಯಮಗಳಲ್ಲಿ ಶಾಸಕ ಪ್ರದೀಪ್ ಈಶ್ವರ್ ಸುರ್ಜೇವಾಲರಿಗೆ, ಮಹದೇವಪ್ಪರಿಗೆ ಕಂಪ್ಲೇಟ್ ಕೊಟ್ಟಿದ್ದಾರೆ ಎಂದಿದ್ದಕ್ಕೆ ನಾವು ಸಮಜಾಯಿಸಿ ನೀಡಿದ್ದೇವೆ. ಇದಕ್ಕೆ ನೋಟೀಸು ಕೊಡುವುದಾದರೆ ಏನನ್ನಬೇಕು.ನಮಗೆ ಈವರೆಗೆ ನೋಟೀಸು ತಲುಪಿಲ್ಲ, ಕೈಗೆ ಬಂದ ಮೇಲೆ ಉತ್ತರ ಕೊಡುತ್ತೇವೆ.
--ಭರಣಿ ವೆಂಕಟೇಶ್ ನಿರ್ದೇಶಕರು ಚಿಕ್ಕಬಳ್ಳಾಪುರ ಹಾಲು ಒಕ್ಕೂಟ