MLA Pradeep Eshwar: ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಿದ ಮುಖಂಡರ ನಿಯೋಗ; ಪ್ರಚೋದನೆ, ಅಧಿಕಾರ ದುರ್ಬಳಕೆ ಆರೋಪ
ಜಯಂತಿ ಕಾರ್ಯಕ್ರಮದಲ್ಲಿ ಕೆಲವು ಯುವಕರನ್ನು ಒಳಗೆ ಪ್ರವೇಶಿಸದಂತೆ ಗೇಟಿಗೆ ಬೀಗ ಹಾಕಿಸಿ ದ್ದು, ಪ್ರತಿಭಟಿಸಿದವರ ಮೇಲೆ ಲಾಠಿಚಾರ್ಜ್ ನಡೆಸಲು ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸ ಲಾಗಿದೆ. ಬಳಿಕ ಕಾರ್ಯಕ್ರಮದ ವೇದಿಕೆಯಲ್ಲಿಯೂ ಹಾಗೂ ಕಾರ್ಯಕ್ರಮ ಮುಗಿದ ನಂತರ ಕಾರಿನ ಮೇಲೆ ನಿಂತು ಅಸಭ್ಯ ಸನ್ನೆಗಳು, ತೊಡೆತಟ್ಟುವುದು, ಮೀಸೆ ತಿರುಗಿಸುವುದು ಸೇರಿದಂತೆ ಯುವಕರನ್ನು ಮತ್ತಷ್ಟು ಕೆರಳಿಸುವ ರೀತಿಯ ವರ್ತನೆ ನಡೆಸಿದ್ದಾರೆ
-
ಚಿಕ್ಕಬಳ್ಳಾಪುರ: ಕೆಂಪೇಗೌಡ ಜಯಂತಿ(Kempegowda Jayanti) ವೇಳೆ ನಡೆದ ಶೂ ಎಸೆತ ಪ್ರಕರಣಕ್ಕೆ ಸಂಬಧಿಸಿದಂತೆ ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು, ಅವರನ್ನು ಎ-೧ ಆರೋಪಿಯನ್ನಾಗಿ ಪರಿಗಣಿಸಿ ಎಫ್‌ಐಆರ್ ದಾಖಲಿಸಿ ಬಂಧಿಸ ಬೇಕೆಂದು ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಅವರಿಗೆ ಲಿಖಿತ ದೂರು ಸಲ್ಲಿಸಿದರು.
ನಗರದ ಹೊರವಲಯದಲ್ಲಿರುವ ಎಸ್‌ಪಿ ಕಚೇರಿಗೆ ತೆರಳಿದ ಬಿಜೆಪಿ-ಜೆಡಿಎಸ್ ಮುಖಂಡರ ನಿಯೋಗ, ಶಾಸಕ ಪ್ರದೀಪ್ ಈಶ್ವರ್ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಸಮುದಾಯದ ಯುವಕರನ್ನು ಪ್ರಚೋದಿಸುವ ಮೂಲಕ ಕಾರ್ಯಕ್ರಮದಲ್ಲಿ ಗೊಂದಲ ಸೃಷ್ಟಿಸಲು ಕಾರಣ ರಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿತು.
ಜಯಂತಿ ಕಾರ್ಯಕ್ರಮದಲ್ಲಿ ಕೆಲವು ಯುವಕರನ್ನು ಒಳಗೆ ಪ್ರವೇಶಿಸದಂತೆ ಗೇಟಿಗೆ ಬೀಗ ಹಾಕಿಸಿ ದ್ದು, ಪ್ರತಿಭಟಿಸಿದವರ ಮೇಲೆ ಲಾಠಿಚಾರ್ಜ್ ನಡೆಸಲು ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ಕಾರ್ಯಕ್ರಮದ ವೇದಿಕೆಯಲ್ಲಿಯೂ ಹಾಗೂ ಕಾರ್ಯಕ್ರಮ ಮುಗಿದ ನಂತರ ಕಾರಿನ ಮೇಲೆ ನಿಂತು ಅಸಭ್ಯ ಸನ್ನೆಗಳು, ತೊಡೆತಟ್ಟುವುದು, ಮೀಸೆ ತಿರುಗಿಸುವುದು ಸೇರಿದಂತೆ ಯುವಕರನ್ನು ಮತ್ತಷ್ಟು ಕೆರಳಿಸುವ ರೀತಿಯ ವರ್ತನೆ ನಡೆಸಿದ್ದಾರೆ ಎಂದು ಮುಖಂಡರು ಆರೋಪಿಸಿದರು.
ಇದನ್ನೂ ಓದಿ: Pradeep Eshwar: ಸಿದ್ದರಾಮಯ್ಯ ಭೇಟಿಯಾಗಿ ನೋವು ಹಂಚಿಕೊಂಡ ಶಾಸಕ ಪ್ರದೀಪ್ ಈಶ್ವರ್; ಧೈರ್ಯ ತುಂಬಿದ ಮಾಜಿ ಸಿಎಂ
ಅಲ್ಲದೆ, ಯಾವುದೇ ಅನುಮತಿ ಇಲ್ಲದೆ ರೋಡ್ ಶೋ ನಡೆಸಿ ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನ ಗೊಳಿಸಿದ್ದು, ಶಾಸಕರ ಅನುಯಾಯಿಗಳು ಸಹ ಯುವಕರನ್ನು ನಿಂದಿಸಿ ಪ್ರಚೋದನಾತ್ಮಕವಾಗಿ ವರ್ತಿಸಿದ್ದಾರೆ. ಈ ಎಲ್ಲ ಘಟನೆಗಳ ವಿಡಿಯೋ ಸಾಕ್ಷ್ಯಗಳು ಇದ್ದರೂ ಪೊಲೀಸರು ಅವನ್ನು ಪರಿಗಣಿಸದೇ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಮುಖಂಡರು ದೂರಿದರು.
ಈ ಪ್ರಕರಣದಲ್ಲಿ ಈಗಾಗಲೇ ಎಂಟು ಮಂದಿಯನ್ನು ಬಂಧಿಸಲಾಗಿದ್ದು, ಸುಮಾರು 150 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲು ಸಿದ್ಧತೆ ನಡೆದಿದೆ. ಆದರೆ ಘಟನೆಗೆ ಮೂಲ ಕಾರಣರಾಗಿರುವ ಶಾಸಕರ ವಿರುದ್ಧವೂ ಸಮಾನವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದೂರನ್ನು ಸ್ವೀಕರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, "ಸಲ್ಲಿಕೆಯಾಗಿರುವ ದೂರಿನ ಬಗ್ಗೆ ಕಾನೂನಿನ ಪ್ರಕಾರ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ಭರವಸೆ ನೀಡಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಮುಖಂಡರು ಪೊಲೀಸರು ಸುಮೋಟೋ ಪ್ರಕರಣ ದಡಿ ಅಮಾಯಕರ ಬಂಧನಕ್ಕೆ ಮುಂದಾಗುವುದನ್ನು ಈಗಿಂದೀಗಲೇ ನಿಲ್ಲಿಸಬೇಕು. ಬಂಧನದಲ್ಲಿ ರುವ ಅಮಾಯಕರ ಬಿಡುಗಡೆಗೆ ಕ್ರಮವಹಿಸಬೇಕು. ರಾಜಕೀಯ ಪ್ರಭಾವಕ್ಕೆ ಮಣಿದೋ ಸರಕಾರದ ಒತ್ತಾಯಕ್ಕೆ ಮಣಿದೋ ಇದು ಮುಂದುವರೆದಿದ್ದೇ ಆದಲ್ಲಿ ವಿವಿಧ ಪಕ್ಷಗಳು ಸಂಘಸಂಸ್ಥೆಗಳ ಸಹಯೋಗದಲ್ಲಿ ಚಿಕ್ಕಬಳ್ಳಾಪುರ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಾಧ್ಯಕ್ಷ ಕೆ.ಆರ್. ರೆಡ್ಡಿ, ಜಿಲ್ಲಾಧ್ಯಕ್ಷ ಬಿ.ಎನ್. ಮುನಿಯಪ್ಪ, ಮುಖಂಡರಾದ ಆದಿನಾರಾಯಣಪ್ಪ, ಮುನಿಕೃಷ್ಣ, ಕೆ. ಕೃಷ್ಣಮೂರ್ತಿ, ಡಿ.ಎ. ಶ್ರೀನಿವಾಸ್, ಪಿ.ಎನ್. ಕೇಶವರೆಡ್ಡಿ, ಕೆ.ವಿ. ನಾಗರಾಜ್, ಹರಿಸ್ಥಳ ಗಿರೀಶ್, ಶ್ವೇತಾ ಮಂಜುನಾಥ್ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಬಿಜೆಪಿ-ಜೆಡಿಎಸ್ ಪ್ರಮುಖ ಆರೋಪಗಳು
ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಪ್ರಚೋದನೆ ಮತ್ತು ಅಧಿಕಾರ ದುರ್ಬಳಕೆ ಆರೋಪ.
ಗೇಟಿಗೆ ಬೀಗ ಹಾಕಿಸಿ ಯುವಕರನ್ನು ಒಳಗೆ ಬಿಡದಿರುವ ಆರೋಪ.
ಲಾಠಿಚಾರ್ಜ್ಗೆ ಪರೋಕ್ಷ ಕಾರಣರಾಗಿರುವುದಾಗಿ ದೂರು.
ರೋಡ್ ಶೋ ಹಾಗೂ ಅಸಭ್ಯ ಸನ್ನೆಗಳ ಮೂಲಕ ಯುವಕರನ್ನು ಕೆರಳಿಸಿದ ಆರೋಪ.
ಶಾಸಕರನ್ನು ಎ-1 ಆರೋಪಿಯನ್ನಾಗಿ ಮಾಡಿ ಎಫ್‌ಐಆರ್ ದಾಖಲಿಸುವಂತೆ ಒತ್ತಾಯ.