Chikkaballapur News: ರೈತರ ಸಾಲ ಮನ್ನಾ, ಹಾಲಿಗೆ ಲೀಟರ್‌ಗೆ 10 ಪ್ರೋತ್ಸಾಹಧನ ನೀಡುವಂತೆ ಒತ್ತಾಯ; ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ
ನಗರದ ಗ್ರಂಥಾಲಯದ ಮುಂಭಾಗದಿಂದ ತಾಲೂಕು ಕಛೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಮುಖಂಡರು ತಾಲ್ಲೂಕು ಕಛೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರೂ ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದ ಕೆರಳಿದ ಜೆಡಿಎಸ್ ಜಿಲ್ಲಾಧ್ಯಕ್ಷರು ಮುಖಂಡರು ಕಾರ್ಯಕರ್ತರು ತಾಲ್ಲೂಕ್ ಕಛೇರಿ ಹೊರಗೆ ಜಿಲ್ಲಾಡಳಿತದ ನಡೆ ಖಂಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
-
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮುಂಗಾರು ಮಳೆ ವೈಫಲ್ಯದಿಂದಿಾಗಿ ಕೃಷಿ ಚಟುವಟಿಕೆಗಳು ಸಂಕಷ್ಟಕ್ಕೆ ಸಿಲುಕಿದ್ದು ಹಿಂದೆಂದೂ ಕಾಣದ ತೀವ್ರತರವಾದ ಬರ ಆವರಿಸಿದೆ. ನದಿ ನಾಲೆಗಳ ಆಶ್ರಯವಿಲ್ಲದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಿದೆ. ಮೇವು ನೀರಿಲ್ಲದೆ ಜನ ಜಾನುವಾರಗಳು ಪರಿತಪಿಸುತ್ತಿವೆ. ಆದ್ದರಿಂದ ರಾಜ್ಯ ಸರ್ಕಾರ ತಕ್ಷಣವೇ ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಿ ಪ್ರತಿ ಜಿಲ್ಲೆಗೆ 50 ಕೋಟಿ ತುರ್ತು ಅನುದಾನ ಬಿಡುಗಡೆ ಮಾಡಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ಆಗ್ರಹಿಸಿದರು.
ನಗರದ ಗ್ರಂಥಾಲಯದ ಮುಂಭಾಗದಿಂದ ತಾಲೂಕು ಕಛೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಮುಖಂಡರು ತಾಲ್ಲೂಕು ಕಛೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರೂ ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದ ಕೆರಳಿದ ಜೆಡಿಎಸ್ ಜಿಲ್ಲಾಧ್ಯಕ್ಷರು ಮುಖಂಡರು ಕಾರ್ಯಕರ್ತರು ತಾಲ್ಲೂಕ್ ಕಛೇರಿ ಹೊರಗೆ ಜಿಲ್ಲಾಡಳಿತದ ನಡೆ ಖಂಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ತಹಶೀಲ್ದಾರ್,ಉಪ ವಿಭಾಗಾಧಿಕಾರಿ ಬರಬೇಕು ಎಂದು ಪಟ್ಟು ಹಿಡಿದರು. ಪ್ರತಿಭಟನಾ ಕಾರರ ಆಕ್ರೋಶ ಹೆಚ್ಚಾಗುವುದನ್ನು ಅರಿತು ಸ್ಥಳಕ್ಕೆ ತಹಶೀಲ್ದಾರ್ ಮತ್ತು ಜಿಲ್ಲಾ ಉಪ ವಿಭಾಗಾ ಧಿಕಾರಿ ಬಂದು ಮನವಿ ಸ್ವೀಕರಿಸಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: Chikkaballapur News: ಹಿರಿಯ ನಾಗರಿಕರ ಕುಂದುಕೊರತೆಗಳ ಆಲಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ಮಾತನಾಡಿ, ರಾಜ್ಯ ಸರ್ಕಾರ ಬರಗಾಲದ ಕಾಮಗಾರಿಗಳನ್ನು ಕೈಗೊಳ್ಳದ ಕಾರಣ ಬರಪಿಡಿತ ಗ್ರಾಮಗಳಲ್ಲಿ ಕೃಷಿ ಬೇಸಾಯ ಸಂಪೂರ್ಣವಾಗಿ ಹಾನಿಯಾಗಿದ್ದು ಜನ ಜಾನುವಾರಗಳಿಗೆ ಕುಡಿಯುವ ನೀರಿನ ಕೊರತೆ ರಾಸುಗಳಿಗೆ ಮೇವಿನ ಕೊರತೆ ಬಿತ್ತನೆ ವೈಫಲ್ಯ ಹಾಗೂ ಬೆಳೆ ಹಾನಿಯಾಗಿದೆ.ಇದರಿಂದಾಗಿ ಜಿಲ್ಲೆಯಲ್ಲಿ ರೈತರು ಸ್ವಂತ ಹಣ ಖರ್ಚು ಮಾಡಿ ಕೊಳವೆ ಬಾವಿಗಳನ್ನು ಕೊರೆಸಿದರೂ ನೀರು ಸಿಗದ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಮಳೆ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆಗಳು ಒಣಗಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಬೆಳೆಹಾನಿ ಸಮೀಕ್ಷೆಯನ್ನು ತಕ್ಷಣ ಪೂರ್ಣಗೊಳಿಸಿ, ಅರ್ಹ ರೈತರಿಗೆ ನೇರವಾಗಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ರೈತರ ಕೃಷಿ ಸಾಲ ಮನ್ನಾ ಮಾಡಬೇಕು, ಬರಪೀಡಿತ ತಾಲೂಕುಗಳಲ್ಲಿ ಭೂಕಂದಾಯ ರದ್ದುಪಡಿಸಬೇಕು ಹಾಗೂ ಸಹಕಾರ ಸಂಘಗಳು ಮತ್ತು ವಾಣಿಜ್ಯ ಬ್ಯಾಂಕ್‌ಗಳಿಂದ ಪಡೆದ ಕೃಷಿ ಸಾಲಕ್ಕೆ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಬೆಳೆ ವಿಮೆ ಯೋಜನೆಯಡಿ ಅರ್ಹ ರೈತರಿಗೆ ತ್ವರಿತವಾಗಿ ವಿಮಾ ಪರಿಹಾರ ದೊರೆಯುವಂತೆ ವಿಮಾ ಕಂಪನಿಗಳಿಗೆ ನಿರ್ದೇಶನ ನೀಡಬೇಕು ಎಂದರು.
ಕುಡಿಯುವ ನೀರಿಗೆ ತುರ್ತು ಕ್ರಮ
ಅಂತರ್ಜಲ ಮಟ್ಟ ಕುಸಿದಿರುವುದರಿಂದ ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಬರಪೀಡಿತ ಪ್ರದೇಶಗಳಲ್ಲಿ ಅಗತ್ಯವಿರುವ ಕಡೆ ಕೊಳವೆಬಾವಿ ಕೊರೆಸುವುದು, ನೀರು ಪೂರೈಕೆ ಯೋಜನೆಗಳನ್ನು ಬಲಪಡಿಸುವುದು ಹಾಗೂ ಆರ್‌ಒ ಘಟಕಗಳ ದುರಸ್ತಿ ಮತ್ತು ನಿರ್ವಹಣೆಯನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಜಾನುವಾರುಗಳ ಮೇಲೂ ಬರದ ಪರಿಣಾಮ ತೀವ್ರವಾಗಿದ್ದು, ಪ್ರತಿ ಪಂಚಾಯಿತಿ ಕೇಂದ್ರದಲ್ಲಿ ಗೋಶಾಲೆಗಳನ್ನು ಆರಂಭಿಸಿ ಮೇವು ಮತ್ತು ಪಶುವೈದ್ಯಕೀಯ ಸೇವೆ ಒದಗಿಸಬೇಕು. ಮೇವು ಬೆಳೆಸಲು ರೈತರಿಗೆ ಉಚಿತ ಬೀಜ ವಿತರಿಸಿ, ಅಗತ್ಯ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಗ್ರಾಮಗಳಲ್ಲಿ ಜಾನುವಾರುಗಳಿಗೆ ಸಾಮೂಹಿಕ ಕುಡಿಯುವ ನೀರಿನ ಸೌಲಭ್ಯ ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಹಾಲಿಗೆ 10 ಪ್ರೋತ್ಸಾಹಧನಕ್ಕೆ ಒತ್ತಾಯ
ಮಳೆ ಕೊರತೆಯಿಂದ ಕೃಷಿಯ ಜೊತೆಗೆ ಹೈನುಗಾರಿಕೆಯೂ ಸಂಕಷ್ಟದಲ್ಲಿರುವುದರಿಂದ ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿಗೆ 10 ಪ್ರೋತ್ಸಾಹಧನ ನೀಡಬೇಕು ಎಂದು ಮುಕ್ತ ಮುನಿಯಪ್ಪ ಒತ್ತಾಯಿಸಿದರು.
ಹಿಂಗಾರು ಮಳೆ ಬಂದಲ್ಲಿ ಅಲ್ಪಾವಧಿ ಬೆಳೆಗಳನ್ನು ಬೆಳೆಯಲು ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು.
ನಿಖಿಲ್ ವಿರುದ್ಧ ಹೇಳಿಕೆ ಖಂಡನೆ
ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕುರಿತು ಕಾಂಗ್ರೆಸ್ ಮುಖಂಡ ನಲಪಾಡ್ ನೀಡಿರುವ ಹೇಳಿಕೆಗಳನ್ನು ಮುಕ್ತ ಮುನಿಯಪ್ಪ ಖಂಡಿಸಿದರು. ನಿಖಿಲ್ ಕುಮಾರಸ್ವಾಮಿ ಅವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಸಹಿಸಲಾಗದು ಎಂದು ಹೇಳಿದ ಅವರು, ಅವರ ರಾಜಕೀಯ ಹಿನ್ನೆಲೆ ಮತ್ತು ವ್ಯಕ್ತಿತ್ವದ ಬಗ್ಗೆ ರಾಜ್ಯದ ಜನರಿಗೆ ಸ್ಪಷ್ಟ ಅರಿವಿದೆ ಎಂದರು.
ಮುಂಗಾರು ವೈಫಲ್ಯದಿಂದ ಸಂಕಷ್ಟಕ್ಕೊಳಗಾದ ಜಿಲ್ಲೆಯ ಎಲ್ಲ 8 ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕುಗಳೆಂದು ಘೋಷಿಸಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಬರ ಅಧ್ಯಯನ ತಂಡಗಳಿಂದ ಜಂಟಿ ಸಮೀಕ್ಷೆ ನಡೆಸಬೇಕು. ಕೇಂದ್ರದ ನೆರವಿಗಾಗಿ ಕಾಯದೆ ರಾಜ್ಯ ಸರ್ಕಾರ ತನ್ನ ಸಂಪನ್ಮೂಲಗಳಿಂದಲೇ ತಕ್ಷಣ ಪರಿಹಾರ ಕಾರ್ಯಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿ ದರು.
ಬರಪೀಡಿತ ಜಿಲ್ಲೆಯಲ್ಲಿ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡದೆ ಬೆಸ್ಕಾಂ ರೈತರ ಜೀವನ ದೊಂದಿಗೆ ಕಣ್ಣ ಮುಚ್ಚಾಲೆ ಆಡುತ್ತಿದೆ. ಜಿಲ್ಲಾಡಳಿತ ಕೂಡಲೇ ಕ್ರಮ ವಹಿಸಿ ರೈತರಿಗೆ ಏಳು ಗಂಟೆಗಳ ಕಾಲ ಥ್ರೀ ಫೇಸ್ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.
ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಿ ಬರ ಪರಿಹಾರ ಕಾಮಗಾರಿಗಳನ್ನು ತ್ವರಿತವಾಗಿ ಪರಿಣಾಮ ಕಾರಿಯಾಗಿ ಕೈಗೊಳ್ಳದಿದ್ದರೆ ಜೆಡಿಎಸ್ ವತಿಯಿಂದ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಇನ್ನಷ್ಟು ತೀವ್ರ ಹೋರಾಟ ನಡೆಸಲಾಗುವುದು ಎಂದು ಮುಕ್ತ ಮುನಿಯಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಶಾಂತ ಮೂರ್ತಿ,ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕೆ. ಪ್ರಭಾ, ಯುವ ಘಟಕದ ಮುಖಂಡ ಜೀಡಿಮಾಕಲ್ಲಹಳ್ಳಿ ಅಖಿಲ್ ರೆಡ್ಡಿ, ಭೈರಪ್ಪ, ದೇವಸ್ಥಾನ ಹೊಸಹಳ್ಳಿ ವೆಂಕಟೇಶ್, ಜಯರಾಮಪ್ಪ, ಎಂ. ನಾಗೇಂದ್ರ, ಸ್ಟುಡಿಯೋ ಎನ್. ಮಂಜುನಾಥ್, ಅಶೋಕ್ ಕುಮಾರ್, ಬಿ.ವಿ. ಆದಿನಾರಾಯಣಪ್ಪ, ಎಚ್.ಎಸ್. ಭರತ್ ಸೇರಿದಂತೆ ಜೆಡಿಎಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.