Chikkaballapur News: ಚಿತ್ತ ಚಾಪಲ್ಯಕ್ಕೆ ಆಸೆಯೇ ಕಾರಣ : ಚಿಂತೆಯಿಲ್ಲದ ಸ್ಥಿರ ಮನಸ್ಸುಳ್ಳವರಾಗಬೇಕು
ಆತ್ಮಚಿಂತನೆಯಿಂದ ಮಾನವನು ಮುಕ್ತಿಯೆಡೆಗೆ ತಲುಪಲು ಸಾಧ್ಯವಿದೆ. ಹಿಂದಿನ ಜನ್ಮಗಳಲ್ಲಿ ಮಾಡಿರುವ ಕರ್ಮಗಳೂ ಸಹ ಗುರುಕೃಪೆಯಿಂದ ನಾಶವಾಗುತ್ತದೆ. ಪ್ರತಿನಿತ್ಯ ವೂ ಬಿಡದೆ ನಿರಂತರವಾಗಿ ಗುರುಗಳ ಸ್ಮರಣೆಯನ್ನು ಮಾಡಬೇಕು.ಪ್ರಾಪಂಚಿಕ ವ್ಯವಹಾರಗಳಲ್ಲಿ ಅತಿಯಾದ ಮಮತೆಯನ್ನು ಇಟ್ಟುಕೊಳ್ಳಬಾರದು. ದುಡಿಮೆ ಮಾಡಿ ಕಾಯಕಷ್ಟದಿಂದ ಗಳಿಸಿದ ಸಂಪಾದನೆಯಲ್ಲಿ ಸಂತೃಪ್ತನಾಗಿರಬೇಕು
ಚಿತ್ತಚಾಪಲ್ಯಕ್ಕೆ ಆಸೆಯೇ ಕಾರಣವಾದುದರಿಂದ ಅತ್ಯಾಸೆ ಬಿಟ್ಟು ಚಿಂತೆಯಿಲ್ಲದ ಸ್ಥಿರ ಮನಸ್ಸುಳ್ಳವರಾಗಿರಬೇಕು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ತಿಳಿಸಿದರು. -
Ashok Nayak
Nov 5, 2025 11:46 PM
ಚಿಕ್ಕಬಳ್ಳಾಪುರ : ಪ್ರಾಪಂಚಿಕವಾದ ಮಾಯೆಗೆ ಅಂಟಿಕೊಂಡವರು ಆಧ್ಯಾತ್ಮಿಕ ಸಾಧನೆ ಮಾಡಲು ಸಾಧ್ಯವಿಲ್ಲ. ಈ ಮಾಯೆಯಿಂದ ಮನಸ್ಸನ್ನು ಬೇರ್ಪಡಿಸಬೇಕಾದರೆ ಗುರು ಉಪದೇಶವನ್ನು ಪಡೆಯಬೇಕು. ಚಿತ್ತಚಾಪಲ್ಯಕ್ಕೆ ಆಸೆಯೇ ಕಾರಣವಾದುದರಿಂದ ಅತ್ಯಾಸೆ ಬಿಟ್ಟು ಚಿಂತೆಯಿಲ್ಲದ ಸ್ಥಿರ ಮನಸ್ಸುಳ್ಳವರಾಗಿರಬೇಕು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ತಿಳಿಸಿದರು.
ಶ್ರೀಕ್ಷೇತ್ರ ಕೈವಾರದ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರ ಮಠದಲ್ಲಿ ಹುಣ್ಣಿಮೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ವಿಶೇಷ ಆತ್ಮಬೋಧಾಮೃತ ಪ್ರವಚನವನ್ನು ನೀಡುತ್ತಾ ಮಾತನಾಡಿದರು.
ಗುರು ಉಪದೇಶದಿಂದ ಆತ್ಮಪ್ರಕಾಶವೆಂದು ಸಾರಿರುವ ಕೈವಾರದ ತಾತಯ್ಯನವರು ಅಂತರಂಗದ ಸಾಧಕ ಋಷಿಮುನಿಗಳು. ತಾತಯ್ಯನವರು ಪ್ರತಿಯೊಬ್ಬ ಮಾನವರಿಗೂ ಅನುಕೂಲವಾಗುವಂತೆ ಸರಳವಾದ ಭಾಷೆಯಲ್ಲಿ ಆತ್ಮಬೋಧನೆಯನ್ನು ಮಾಡಿದ್ದಾರೆ. ಆತ್ಮವಿಚಾರದ ಚಿಂತನೆಯನ್ನು ಮಾಡಿ ಜ್ಞಾನವನ್ನು ಗಳಿಸಿಕೊಳ್ಳಬೇಕು.
ಆತ್ಮಚಿಂತನೆಯಿಂದ ಮಾನವನು ಮುಕ್ತಿಯೆಡೆಗೆ ತಲುಪಲು ಸಾಧ್ಯವಿದೆ. ಹಿಂದಿನ ಜನ್ಮಗಳಲ್ಲಿ ಮಾಡಿರುವ ಕರ್ಮಗಳೂ ಸಹ ಗುರುಕೃಪೆಯಿಂದ ನಾಶವಾಗುತ್ತದೆ. ಪ್ರತಿನಿತ್ಯ ವೂ ಬಿಡದೆ ನಿರಂತರವಾಗಿ ಗುರುಗಳ ಸ್ಮರಣೆಯನ್ನು ಮಾಡಬೇಕು.ಪ್ರಾಪಂಚಿಕ ವ್ಯವಹಾರಗಳಲ್ಲಿ ಅತಿಯಾದ ಮಮತೆಯನ್ನು ಇಟ್ಟುಕೊಳ್ಳಬಾರದು. ದುಡಿಮೆ ಮಾಡಿ ಕಾಯಕಷ್ಟದಿಂದ ಗಳಿಸಿದ ಸಂಪಾದನೆಯಲ್ಲಿ ಸಂತೃಪ್ತನಾಗಿರಬೇಕು ಎಂದರು.
ಗುರು ಹೇಳಿದ ಮಾರ್ಗದಲ್ಲಿ ಮನಸ್ಸನ್ನು ಕೇಂದ್ರಿಕರಿಸಬೇಕು. ತತ್ವಜ್ಞಾನಿಯಾದ ಗುರು ವನ್ನು ಆಶ್ರಯಿಸಬೇಕು. ಆಸೆಗಳ ತ್ಯಾಗದಿಂದ ಮನಸ್ಸು ನಿರ್ಮಲವಾಗುತ್ತದೆ. ಭಕ್ತಿಯು ಸಿದ್ಧಿಯಾಗಬೇಕಾದರೆ ಮನಸ್ಸು ಶುದ್ಧಿಯಾಗಿರಬೇಕು. ಮೊದಲು ಮನಸ್ಸನ್ನು ಜಯಿಸ ಬೇಕು. ಗುರುವಿನ ಸ್ಮರಣೆ ನಿರಂತರವಾಗಿ ಮಾಡಿದರೆ ಪರಮ ಪದವಿಯು ಸಿಗುತ್ತದೆ ಎಂದರು.
ಸದ್ಗುರು ಶ್ರೀ ಯೋಗಿ ನಾರೇಯಣ ಮಠದಲ್ಲಿ ಕಾರ್ತೀಕಮಾಸದ ಹುಣ್ಣಿಮೆಯ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಹುಣ್ಣಿಮೆ ವಿಶೇಷ ಕೈಂಕರ್ಯದಲ್ಲಿ ಶ್ರೀದೇವಿ, ಭೂದೇವಿ ಸಮೇತ ಶ್ರೀಅಮರನಾರೇಯಣಸ್ವಾಮಿ ಹಾಗೂ ಸದ್ಗುರು ತಾತಯ್ಯನವರ ಉತ್ಸವ ಮೂರ್ತಿಗೆ ವಿಶೇಷ ಅಭಿಷೇಕ, ಮತ್ತು ಅಷ್ಟಾವಧಾನ ಸೇವೆಯನ್ನು ನೇರವೇರಿಸಿ, ಮಹಾಮಂಗಳಾರತಿಯನ್ನು ಬೆಳಗಲಾಯಿತು. ರಥೋತ್ಸವವನ್ನು ನಡೆಸಲಾಯಿತು. ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದ್ದರು. ಹುಣ್ಣಿಮೆ ಪ್ರಯುಕ್ತ ನಾದಸುಧಾರಸ ವೇದಿಕೆಯಲ್ಲಿ ಅಖಂಡ ಸಂಕೀರ್ತನೆಯನ್ನು ಏರ್ಪಡಿಸ ಲಾಗಿತ್ತು. ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ದಂಪತಿಗಳು ಪೂಜೆಯಲ್ಲಿ ಭಾಗವಹಿಸಿದ್ದರು. ಭಕ್ತರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಆಲಂಬಗಿರಿಯಲ್ಲಿ ಗಿರಿಪ್ರದಕ್ಷಿಣೆ :
ಆಲಂಬಗಿರಿ ದೇವಾಲಯದಿಂದ ಸುಮಾರು ೧ ಕಿ.ಮೀ ದೂರದಲ್ಲಿರುವ ಆಲಂಬಗಿರಿ ಬೆಟ್ಟದ ಪ್ರಕೃತಿಯ ತೊಪ್ಪಲಿನಲ್ಲಿ ಹುಣ್ಣಿಮೆ ಪ್ರಯುಕ್ತ ಸಂಕೀರ್ತನಾ ಗಿರಿಪ್ರದಕ್ಷಿಣೆ ಕಾರ್ಯಕ್ರಮ ನಡೆಯಿತು. ಹುಣ್ಣಿಮೆ ಗಿರಿಪ್ರದಕ್ಷಿಣೆಯಲ್ಲಿ ಕೈವಾರ ಕ್ಷೇತ್ರದ ಧರ್ಮಾಧಿ ಕಾರಿಗಳಾದ ಡಾ|| ಎಂ.ಆರ್.ಜಯರಾಮ್ ರವರು ಭಾಗವಹಿಸಿದ್ದರು. ಅವರೊಂದಿಗೆ ಹಲವಾರು ಭಕ್ತರು ಗಿರಿಪ್ರದಕ್ಷಿಣೆ ಮಾಡಿದರು.