Chikkaballapur News: ಕಾವ್ಯಕ್ಕೆ ಸ್ವರವೇ ಜೀವ, ಸಾಹಿತ್ಯಕ್ಕೆ ಅದು ಬದುಕಿನ ದಾರಿ: ಚಿಕ್ಕಬಳ್ಳಾಪುರವನ್ನು ಸಾಂಸ್ಕೃತಿಕ ಜಿಲ್ಲೆ ಎಂದು ಘೋಷಿಸಿ ನಾಗೇಂದ್ರಬಾಬು ಆಗ್ರಹ
ಮನುಷ್ಯನಿಗೆ ಮಾತು ಬರುವುದಕ್ಕೂ ಮುನ್ನ ಭಾವನೆ ಇತ್ತು. ಆ ಭಾವನೆಗೆ ಮಾತು ಸಿಕ್ಕಾಗ ಭಾಷೆ ಹುಟ್ಟಿತು. ಆ ಭಾಷೆಗೆ ಲಯ ಸಿಕ್ಕಾಗ ಕಾವ್ಯ ಹುಟ್ಟಿತು. ಕಾವ್ಯ ನಮ್ಮ ಬದುಕಿನ ಕನ್ನಡಿಯಷ್ಟೇ ಅಲ್ಲ, ಕೆಲವೊಮ್ಮೆ ಬದುಕಿಗೆ ದಾರಿದೀಪವೂ ಆಗುತ್ತದೆ ಎಂದು ಟಿ.ಎಸ್. ನಾಗೇಂದ್ರ ಬಾಬು ಹೇಳಿದರು.
ಮನುಷ್ಯನಿಗೆ ಮಾತು ಬರುವುದಕ್ಕೂ ಮುನ್ನ ಭಾವನೆ ಇತ್ತು. ಆ ಭಾವನೆಗೆ ಮಾತು ಸಿಕ್ಕಾಗ ಭಾಷೆ ಹುಟ್ಟಿತು. ಆ ಭಾಷೆಗೆ ಲಯ ಸಿಕ್ಕಾಗ ಕಾವ್ಯ ಹುಟ್ಟಿತು. ಕಾವ್ಯ ನಮ್ಮ ಬದುಕಿನ ಕನ್ನಡಿಯಷ್ಟೇ ಅಲ್ಲ, ಕೆಲವೊಮ್ಮೆ ಬದುಕಿಗೆ ದಾರಿದೀಪವೂ ಆಗುತ್ತದೆ ಎಂದು ಟಿ.ಎಸ್. ನಾಗೇಂದ್ರ ಬಾಬು ಹೇಳಿದರು. -
ಚಿಕ್ಕಬಳ್ಳಾಪುರ: ಮನುಷ್ಯನಿಗೆ ಮಾತು ಬರುವುದಕ್ಕೂ ಮುನ್ನ ಭಾವನೆ ಇತ್ತು. ಆ ಭಾವನೆಗೆ ಮಾತು ಸಿಕ್ಕಾಗ ಭಾಷೆ ಹುಟ್ಟಿತು. ಆ ಭಾಷೆಗೆ ಲಯ ಸಿಕ್ಕಾಗ ಕಾವ್ಯ ಹುಟ್ಟಿತು. ಕಾವ್ಯ ನಮ್ಮ ಬದುಕಿನ ಕನ್ನಡಿಯಷ್ಟೇ ಅಲ್ಲ, ಕೆಲವೊಮ್ಮೆ ಬದುಕಿಗೆ ದಾರಿದೀಪವೂ ಆಗುತ್ತದೆ ಎಂದು ಟಿ.ಎಸ್. ನಾಗೇಂದ್ರ ಬಾಬು ಹೇಳಿದರು.
ನಗರ ಹೊರವಲಯ ಸರಕಾರಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅನನ್ಯ ಕಲಾರಂಗ ರಾಜಗೃಹ ಚಿಕ್ಕಬಳ್ಳಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರಿನ ಸಹಯೋಗದಲ್ಲಿ ಆಯೋಜಿಸಿದ್ದ ಕಾವ್ಯ ಗಾಯನ ಕಾರ್ಯಕ್ರಮಕ್ಕೆ ತಬಲ ನುಡಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಚಿಕ್ಕಬಳ್ಳಾಪುರ ಜಿಲ್ಲೆ ಲಲಿತಕಲೆಗಳನ್ನು ಉದಾರ ಮನಸ್ಸಿನಿಂದ ಪೋಷಿಸುತ್ತಿರುವ ಅಪೂರ್ವ ಸಂಗಮ ಸ್ಥಾನವಾಗಿದ್ದು, ಕಲೆ,ಜನಪದ, ತತ್ವಪದ, ಸಾಹಿತ್ಯ, ಸಂಸ್ಕೃತಿ ಹಾಗೂ ಸೃಜನಶೀಲತೆಯ ಶ್ರೀಮಂತ ಪರಂಪರೆಯನ್ನು ಹೊಂದಿರುವ ಜಿಲ್ಲಯಾಗಿದೆ ಎಂದರು.
ಇದನ್ನೂ ಓದಿ: Chikkaballapur News: ಹೋರಾಟದಿಂದ ಉಳಿದ ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ; ವಿದ್ಯಾರ್ಥಿಗಳಿಂದ ಪ್ರತಿಜ್ಞೆ
ಚಿಕ್ಕಬಳ್ಳಾಪುರವನ್ನು ಕೇವಲ ಮಣ್ಣು, ಇಟ್ಟಿಗೆ ಮತ್ತು ಸಿಮೆಂಟ್‌ಗಳ ಸಮ್ಮಿಶ್ರಣದಿಂದ ಕಟ್ಟಿರುವ ಕಟ್ಟಡಗಳನ್ನು ಹೊಂದಿರುವ ಜಿಲ್ಲೆಯಾಗಿ ನೋಡಬಾರದು. ಈ ನೆಲದ ನಿಜವಾದ ಜ್ಞಾನ, ವಿಜ್ಞಾನ, ಸಾಹಿತ್ಯ ಜಾನಪದ ಇತ್ಯಾದಿ ಸಾಂಸ್ಕೃತಿಕ ವೈಭವದ ಗಣಿಯೇ ಇಲ್ಲಿದೆ. ಕವಿಗಳು, ಸಾಹಿತಿಗಳು, ಕಲಾವಿದರು, ಸಂಗೀತಗಾರರು,ವೀರಗಾಸೆ, ಡೊಳ್ಳು, ತೊಗಲು ಗೊಂಬೆಯಾಟ, ಮುಖವೀಣೆ,ತಮಟೆ ಹಾಗೂ ಭಜನಾತಂಡಗಳು ಹೀಗೆ ವಿವಿಧ ಕಲಾ ಪ್ರಕಾರಗಳನ್ನು ಪೋಷಿಸುತ್ತಿರುವ ಈ ಜಿಲ್ಲೆಗೆ ವಿಶಿಷ್ಟ ಸಾಂಸ್ಕೃತಿಕ ಗುರುತಿದೆ ಎಂದು ಹೇಳಿದರು.
ಕಲೆ ಮತ್ತು ಸಾಹಿತ್ಯಕ್ಕೆ ಬೇಕಾಗಿರುವುದು ಕೇವಲ ವೇದಿಕೆಯಲ್ಲ; ಅದನ್ನು ಗೌರವಿಸುವ ಸಮಾಜ ಮತ್ತು ಬೆಳೆಸುವ ವಾತಾವರಣ. ಚಿಕ್ಕಬಳ್ಳಾಪುರದಲ್ಲಿ ಇಂತಹ ಸಾಂಸ್ಕೃತಿಕ ವಾತಾವರಣ ನಿರ್ಮಾಣವಾಗಿದ್ದು, ಜಿಲ್ಲೆಯ ಪ್ರತಿಭೆಗಳಿಗೆ ಮತ್ತಷ್ಟು ಅವಕಾಶಗಳನ್ನು ಕಲ್ಪಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರವನ್ನು ‘ಸಾಂಸ್ಕೃತಿಕ ಜಿಲ್ಲೆ’ ಎಂದು ಅಧಿಕೃತವಾಗಿ ಘೋಷಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.
ಕನ್ನಡ ಉಪನ್ಯಾಸಕ ಮುನಿರಾಜು ಎಂ ಅರಿಕೆರೆ ಮಾತನಾಡಿ, ಕಾವ್ಯ ಮತ್ತು ಗಾಯನ ಒಂದೇ ನಾಣ್ಯದ ಎರಡು ಮುಖಗಳು. ನಗುವಾಗ ನಮ್ಮೊಂದಿಗೆ ಹಾಡು ನಕ್ಕರೆ, ಅಳುವಾಗ ನಮ್ಮ ಕಣ್ಣೀರ ನ್ನು ಒರೆಸುವುದು ಕಾವ್ಯ, ಒಂಟಿತನದಲ್ಲಿ ನಮ್ಮೊಂದಿಗೆ ಮಾತನಾಡುವುದು ಸಾಹಿತ್ಯ. ಅಂತಹ ಸಾಹಿತ್ಯವನ್ನು ಸ್ವರಗಳ ಮೂಲಕ ಹೃದಯಕ್ಕೆ ತಲುಪಿಸುವುದು ಕಾವ್ಯ ಗಾಯನದ ವಿಶೇಷತೆ ಎಂದರು.
ವಿದ್ಯಾರ್ಥಿಗಳ ಕಂಠದಲ್ಲಿ ಕಾವ್ಯದ ಕಂಪು
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಗೀತಗಾಯನ ಸ್ಪರ್ಧೆಯಲ್ಲಿ ಸುಮಾರು 25 ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಭಾವಗೀತೆ, ಭಕ್ತಿಗೀತೆ,ಜಾನಪದ, ತತ್ವಪದ, ಚಲನಚಿತ್ರಗೀತೆ ಹೀಗೆ ವಿವಿಧ ಗೀತೆಗಳನ್ನು ಭಾವಪೂರ್ಣವಾಗಿ ಪ್ರಸ್ತುತ ಪಡಿಸಿದ ವಿದ್ಯಾರ್ಥಿಗಳ ಪೈಕಿ ಉತ್ತಮವಾಗಿ ಹಾಡಿದ 10 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಪುಸ್ತಕ ಸಹಿತ ಅಭಿನಂದನಾ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.
ಅನನ್ಯ ಕಲಾರಂಗ ರಾಜಗೃಹ ಚಿಕ್ಕಬಳ್ಳಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಇಂತಹ ವೇದಿಕೆಯಲ್ಲಿ ಗೌರವಿಸುವ ಮೂಲಕ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದತ್ತ ಯುವಜನರಲ್ಲಿ ಆಸಕ್ತಿ ಮೂಡಿಸುವ ಪ್ರಯತ್ನ ನಡೆಸಿದ್ದು ಪ್ರಶಂಸೆಗೆ ಪಾತ್ರವಾಯಿತು. ಪುಸ್ತಕಗಳಲ್ಲಿ ಓದುವ ಕಾವ್ಯವನ್ನು ಕೇವಲ ಪಠ್ಯವಾಗಿ ಉಳಿಸದೆ, ಅದಕ್ಕೆ ಸ್ವರ ನೀಡಿ ಜನರ ಹೃದಯಕ್ಕೆ ತಲುಪಿಸುವ ಪ್ರಯತ್ನವೇ ಕಾರ್ಯಕ್ರಮದ ಹೆಗ್ಗಳಿಕೆಯಾಗಿತ್ತು.
ಕಾರ್ಯಕ್ರಮದಲ್ಲಿ ಕೇವಲ ವಿದ್ಯಾರ್ಥಿಗಳು ಮಾತ್ರ ಭಾಗಿಯಾಗಿರಲಿಲ್ಲ. ಅಲ್ಲಿ ಅವರ ಉಪಸ್ಥಿತಿ ಮಾತ್ರ ಇರಲಿಲ್ಲ. ಪದಗಳು ಭಾವವಾದವು, ಭಾವಗಳು ಸ್ವರವಾದವು, ಸ್ವರಗಳು ಗಾಯನವಾಗಿ ಮೊಳಗಿದವು. ವಿದ್ಯಾರ್ಥಿಗಳ ಗಾಯನಕ್ಕೆ ಪ್ರೇಕ್ಷಕರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಜಿ.ಡಿ ಚಂದ್ರಯ್ಯ ಅಧ್ಯಕ್ಷತೆ ವಹಿಸಿದ್ದು, ಅನನ್ಯ ಕಲಾರಂಗ ಸಂಸ್ಥೆಯ ಅಧ್ಯಕ್ಷ ಗಾನ ಅಶ್ವಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್, ವಾಣಿಜ್ಯಶಾಸ್ತ್ರ ವಿಭಾಗದ ಡಾ. ನರೇಂದ್ರ , ಅರ್ಥಶಾಸ್ತ್ರ ವಿಭಾಗದ ಹರೀಶ್,ಇಂಗ್ಲೀಷ್ ವಿಭಾಗದ ಪ್ರೇಮ್‌ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕಿ ಡಾ.ಶಾರದಾ, ಕನ್ನಡ ಉಪನ್ಯಾಸಕ ಮುನಿರಾಜು ಎಂ. ಅರಿಕೆರೆ, ಎನ್.ನರಸಿಂಹಮೂರ್ತಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.