Gudibande News: ಗುಡಿಬಂಡೆ ಟಿಎಪಿಸಿಎಂಎಸ್ ಅಧಿಕಾರ ಹಿಡಿದ ಎನ್‌ಡಿಎ ಕೂಟ: ಗಂಗಿರೆಡ್ಡಿ ಅಧ್ಯಕ್ಷ, ಭಾಗ್ಯಮ್ಮ ಉಪಾಧ್ಯಕ್ಷರಾಗಿ ಆಯ್ಕೆ
ಚುನಾವಣೆಗೂ ಮುನ್ನ ಕಾಂಗ್ರೆಸ್ ಮತ್ತು ಎನ್‌ಡಿಎ ಮುಖಂಡರ ನಡುವೆ ಭಾರೀ ಪೈಪೋಟಿ ನಡೆದಿತ್ತು. ತಮ್ಮ ಬೆಂಬಲಿತ ಸದಸ್ಯರನ್ನು ಉಳಿಸಿಕೊಳ್ಳಲು ಉಭಯ ಪಕ್ಷಗಳ ನಾಯಕರು ಹರ ಸಾಹಸ ಪಟ್ಟಿದ್ದರು. ಈ ವೇಳೆ ಕೆಲಕಾಲ ರಾಜಕೀಯ ಹೈಡ್ರಾಮಾ ಕೂಡ ನಡೆಯಿತು. ಅಧಿಕಾರ ಹಿಡಿಯಲು ಕಾಂಗ್ರೆಸ್ ನಡೆಸಿದ ತಂತ್ರಗಾರಿಕೆಯನ್ನು ಮೆಟ್ಟಿ ನಿಲ್ಲುವಲ್ಲಿ ಎನ್‌ಡಿಎ ಯಶಸ್ವಿಯಾಗಿದೆ.
ಗುಡಿಬಂಡೆ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಎನ್‌ಡಿಎ ಕೂಟದ ಗಂಗಿರೆಡ್ಡಿ ಅಧ್ಯಕ್ಷ, ಭಾಗ್ಯಮ್ಮ ಉಪಾಧ್ಯಕ್ಷರಾಗಿ ಆಯ್ಕೆಯಾದರು. -
ಗುಡಿಬಂಡೆ: ತಾಲೂಕು ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಎನ್‌ಡಿಎ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ. ಕಡೇಹಳ್ಳಿ ಗಂಗಿರೆಡ್ಡಿ ಅಧ್ಯಕ್ಷರಾಗಿ ಹಾಗೂ ಬ್ರಾಹ್ಮಣರಹಳ್ಳಿ ಭಾಗ್ಯಮ್ಮ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿಕೂಟ ತನ್ನ ಹಿಡಿತವನ್ನು ಸಾಧಿಸಿದೆ.
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಗಂಗಿರೆಡ್ಡಿ ಹಾಗೂ ವೆಂಕಟನರಸಪ್ಪ ನಡುವೆ ಪೈಪೋಟಿ ಏರ್ಪಟ್ಟಿತ್ತು. ಹಾಗೆಯೇ ಉಪಾಧ್ಯಕ್ಷ ಸ್ಥಾನಕ್ಕೆ ಭಾಗ್ಯಮ್ಮ ಹಾಗೂ ಶ್ರೀರಾಮಪ್ಪ ಕಣದಲ್ಲಿದ್ದರು. ಒಟ್ಟು 15 ಮತಗಳ ಪೈಕಿ ಗಂಗಿರೆಡ್ಡಿ ಹಾಗೂ ಭಾಗ್ಯಮ್ಮ ತಲಾ 8 ಮತಗಳನ್ನು ಪಡೆಯುವ ಮೂಲಕ ವಿಜಯಶಾಲಿಯಾದರು ಎಂದು ಚುನಾವಣಾಧಿಕಾರಿಗಳು ಅಧಿಕೃತವಾಗಿ ಘೋಷಿಸಿದರು.
ಚುನಾವಣೆಗೂ ಮುನ್ನ ಕಾಂಗ್ರೆಸ್ ಮತ್ತು ಎನ್‌ಡಿಎ ಮುಖಂಡರ ನಡುವೆ ಭಾರೀ ಪೈಪೋಟಿ ನಡೆದಿತ್ತು. ತಮ್ಮ ಬೆಂಬಲಿತ ಸದಸ್ಯರನ್ನು ಉಳಿಸಿಕೊಳ್ಳಲು ಉಭಯ ಪಕ್ಷಗಳ ನಾಯಕರು ಹರ ಸಾಹಸ ಪಟ್ಟಿದ್ದರು. ಈ ವೇಳೆ ಕೆಲಕಾಲ ರಾಜಕೀಯ ಹೈಡ್ರಾಮಾ ಕೂಡ ನಡೆಯಿತು. ಅಧಿಕಾರ ಹಿಡಿಯಲು ಕಾಂಗ್ರೆಸ್ ನಡೆಸಿದ ತಂತ್ರಗಾರಿಕೆಯನ್ನು ಮೆಟ್ಟಿ ನಿಲ್ಲುವಲ್ಲಿ ಎನ್‌ಡಿಎ ಯಶಸ್ವಿ ಯಾಗಿದೆ.
ಇದನ್ನೂ ಓದಿ: Gudibande News: ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಸಿಪಿಎಂ ಪಕ್ಷದಿಂದ ಡಿ.21 ರಂದು ಬೃಹತ್ ಪ್ರತಿಭಟನೆ
ಗೆಲುವಿನ ನಂತರ ಮಾತನಾಡಿದ ನೂತನ ಅಧ್ಯಕ್ಷ ಗಂಗಿರೆಡ್ಡಿ, "ನನ್ನ ಆಯ್ಕೆಗೆ ಸಂಸದ ಡಾ.ಕೆ.ಸುಧಾಕರ್, ಮುಖಂಡ ಹರಿನಾಥರೆಡ್ಡಿ ಹಾಗೂ ಎನ್‌ಡಿಎ ಮೈತ್ರಿಕೂಟದ ಎಲ್ಲಾ ನಾಯಕರು ಸಂಪೂರ್ಣ ಸಹಕಾರ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಸಂಘವನ್ನು ಆರ್ಥಿಕವಾಗಿ ಸದೃಢ ಗೊಳಿಸಲು ಮತ್ತು ರೈತರಿಗೆ ಅನುಕೂಲ ಮಾಡಿಕೊಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ," ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥರೆಡ್ಡಿ ಮಾತನಾಡಿ, "ಕ್ಷೇತ್ರದಲ್ಲಿ ಎನ್‌ಡಿಎ ಹಂತ ಹಂತವಾಗಿ ಬಲಿಷ್ಠವಾಗುತ್ತಿದೆ. ಈಗಾಗಲೇ ಪಿ.ಎಲ್.ಡಿ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್‌ನಲ್ಲಿ ಗೆಲುವು ಸಾಧಿಸಿದ್ದೇವೆ, ಈಗ ಟಿ.ಎ.ಪಿ.ಸಿ.ಎಂ.ಎಸ್ ಕೂಡ ನಮ್ಮ ಪಾಲಾಗಿದೆ. ನಮ್ಮ ಮುಂದಿನ ಗುರಿ 'ಚಿಮುಲ್' ಚುನಾವಣೆ. ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಎನ್‌ಡಿಎ ಮೈತ್ರಿ ಕೂಟದ ಶಕ್ತಿಯನ್ನು ತೋರಿಸುತ್ತೇವೆ," ಎಂದು ಸವಾಲು ಹಾಕಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮದ್ದಿರೆಡ್ಡಿ, ಎಂ.ವಿ. ಶಿವಣ್ಣ, ಬಾಬು, ಮನೋಜ್, ವೇಣುಗೋಪಾಲ್, ವೆಂಕಟೇಶಪ್ಪ, ಚಲಪತಿ ಸೇರಿದಂತೆ ಮೈತ್ರಿಕೂಟದ ಹಲವು ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು.