Gauribidanur News: ಜಾನುವಾರುಗಳ ಆರೋಗ್ಯ, ಹಾಲಿನ ಉತ್ಪಾದನೆ ಹೆಚ್ಚಿಸಲು ಗುಣಮಟ್ಟದ ಮೇವು ಅಗತ್ಯ: ತಹಸೀಲ್ದಾರ್
ನಗರದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ವತಿಯಿಂದ ರೈತರಿಗೆ ಮೇವಿನ ಬೀಜದ ಮಿನಿ ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಹೈನುಗಾರಿಕೆ ಗ್ರಾಮೀಣ ರೈತರ ಪ್ರಮುಖ ಆದಾಯದ ಮೂಲವಾಗಿದ್ದು, ಮೇವಿನ ಕೊರತೆಯಾಗದಂತೆ ತಮ್ಮ ಜಮೀನುಗಳಲ್ಲಿ ಮೇವು ಬೆಳೆಗಳನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.
-
ಗೌರಿಬಿದನೂರು: ಜಾನುವಾರುಗಳ ಆರೋಗ್ಯ ಕಾಪಾಡಿ ಹಾಲಿನ ಉತ್ಪಾದಕತೆ ಹೆಚ್ಚಿಸಲು ಗುಣಮಟ್ಟದ ಹಸಿರು ಮೇವು ಹಾಗೂ ಪೌಷ್ಟಿಕ ಆಹಾರ ಒದಗಿಸಬೇಕು. ಈ ನಿಟ್ಟಿನಲ್ಲಿ ಪಶು ಸಂಗೋಪನಾ ಇಲಾಖೆಯ ಸೌಲಭ್ಯಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಹಸೀಲ್ದಾರ್ ಕೆ.ಎಂ.ಅರವಿಂದ್ ಹೇಳಿದರು.
ನಗರದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ವತಿಯಿಂದ ರೈತರಿಗೆ ಮೇವಿನ ಬೀಜದ ಮಿನಿ ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಹೈನುಗಾರಿಕೆ ಗ್ರಾಮೀಣ ರೈತರ ಪ್ರಮುಖ ಆದಾಯದ ಮೂಲವಾಗಿದ್ದು, ಮೇವಿನ ಕೊರತೆಯಾಗದಂತೆ ತಮ್ಮ ಜಮೀನುಗಳಲ್ಲಿ ಮೇವು ಬೆಳೆಗಳನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ: Gauribidanur News: ಸ್ವಚ್ಛ ಭಾರತ ಜಾಗೃತಿಗೆ ಎನ್‌ಸಿಸಿ ಕೆಡೆಟ್‌ಗಳ ರ್ಯಾಲಿ
ಇಲಾಖೆಯ ಸಹಾಯಕ ನಿರ್ದೇಶಕ ಡಾ. ಮಾರುತಿ ರೆಡ್ಡಿ ಮಾತನಾಡಿ, ಎಫ್‌ಆರ್‌ಯುಟಿಎಸ್ (FRUITS) ನೋಂದಣಿ ಹೊಂದಿರುವ ನೀರಾವರಿ ಸೌಲಭ್ಯವಿರುವ ರೈತರಿಗೆ ಉಚಿತವಾಗಿ ಮೇವಿನ ಬೀಜದ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ರೈತರು ಇವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಜಾನುವಾರುಗಳಿಗೆ ನಿರಂತರವಾಗಿ ಮೇವು ಒದಗಿಸಬೇಕು ಎಂದರು.
ಜಾನುವಾರುಗಳ ಆರೋಗ್ಯ, ಲಸಿಕೆ, ಆಹಾರ ನಿರ್ವಹಣೆ ಹಾಗೂ ರೋಗ ನಿಯಂತ್ರಣ ಕುರಿತು ಇಲಾಖೆ ವತಿಯಿಂದ ಮಾರ್ಗದರ್ಶನ ನೀಡಲಾಗುತ್ತಿದ್ದು, ಪಶುಪಾಲಕರು ಅಗತ್ಯವಿದ್ದಾಗ ಪಶುವೈದ್ಯಕೀಯ ಕೇಂದ್ರಗಳನ್ನು ಸಂಪರ್ಕಿಸಿ ಸಲಹೆ ಪಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಫಲಾನುಭವಿ ರೈತರು ಉಪಸ್ಥಿತರಿದ್ದರು.