Bagepally News: ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವುದು ಅತ್ಯಗತ್ಯ: ಶಿಕ್ಷಕ ವೆಂಕಟೇಶ್ವರಲು
ಅರಣ್ಯ, ವನ್ಯಜೀವಿ ಸಂಕುಲ ಸಂರಕ್ಷಣೆ, ಮಾಲಿನ್ಯ ಮುಕ್ತ ಪರಿಸರ, ಭವಿಷ್ಯಕ್ಕೆ ಅರಣ್ಯಗಳ ಉಳಿವು ಅತ್ಯವಶ್ಯ ಎಂಬ ಅರಿವನ್ನು ವಿದ್ಯಾರ್ಥಿಗಳಿಗೆ ಮೂಡಿಸುವುದು, ಪ್ರತಿಯೊಬ್ಬರನ್ನು ಭವಿಷ್ಯದ ಪರಿಸರ ಸ್ನೇಹಿ ನಾಗರಿಕರನ್ನಾಗಿ ರೂಪಿಸುವ ದೃಷ್ಟಿಯಿಂದ ಶಾಲಾ ಮಕ್ಕಳಿಗೆ ಅರಿವು ಮೂಡಿಸುವುದು ನಿಸರ್ಗ ಇಕೋ ಕ್ಲಬ್ ನ ಉದ್ದೇಶವಾಗಿದೆ
-
ಬಾಗೇಪಲ್ಲಿ: ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವುದು ಅತ್ಯಗತ್ಯ ಎಂದು ಬಾಗೇಪಲ್ಲಿ ಕಸಬಾ ಹೋಬಳಿ ಪುಟ್ಟಪರ್ತಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ವೆಂಕಟೇಶ್ವರಲು ಹೇಳಿದರು.
ನಿಸರ್ಗ ಇಕೋ ಕ್ಲಬ್ ವತಿಯಿಂದ ಪರಿಸರ ಪ್ರಜ್ಞೆ ಮೂಡಿಸುವ ಸಲುವಾಗಿ ಪರಗೋಡು ಸಮೀಪದ ಸಾಲ ಮರದ ತಿಮ್ಮಕ್ಕ ವನಕ್ಕೆ ಭೇಟಿ ನೀಡಿ ಮಾತನಾಡಿದರು.
ಮಾನವನ ಸ್ವಾರ್ಥಕ್ಕಾಗಿ ಅರಣ್ಯ ನಾಶವಾಗುತ್ತಿರುವುದನ್ನು ತಪ್ಪಿಸಲು ಮತ್ತು ಮಕ್ಕಳನ್ನು ಭವಿಷ್ಯ ದಲ್ಲಿ ಪರಿಸರ ಸ್ನೇಹಿ ನಾಗರಿಕರನ್ನಾಗಿ ರೂಪಿಸಲು ನಿಸರ್ಗ ಇಕೋ ಕ್ಲಬ್ ವತಿಯಿಂದ ‘ಚಿಣ್ಣರ ವನದರ್ಶನ’ ಕಾರ್ಯಕ್ರಮ ಸಹಕಾರಿ ಎಂದು ತಿಳಿಸಿದರು.
ಅರಣ್ಯ, ವನ್ಯಜೀವಿ ಸಂಕುಲ ಸಂರಕ್ಷಣೆ, ಮಾಲಿನ್ಯ ಮುಕ್ತ ಪರಿಸರ, ಭವಿಷ್ಯಕ್ಕೆ ಅರಣ್ಯಗಳ ಉಳಿವು ಅತ್ಯವಶ್ಯ ಎಂಬ ಅರಿವನ್ನು ವಿದ್ಯಾರ್ಥಿಗಳಿಗೆ ಮೂಡಿಸುವುದು, ಪ್ರತಿಯೊಬ್ಬರನ್ನು ಭವಿಷ್ಯದ ಪರಿಸರಸ್ನೇಹಿ ನಾಗರಿಕರನ್ನಾಗಿ ರೂಪಿಸುವ ದೃಷ್ಟಿಯಿಂದ ಶಾಲಾ ಮಕ್ಕಳಿಗೆ ಅರಿವು ಮೂಡಿಸುವುದು ನಿಸರ್ಗ ಇಕೋ ಕ್ಲಬ್ ನ ಉದ್ದೇಶವಾಗಿದೆ.
ಇದನ್ನೂ ಓದಿ: Bagepally News: ಹಿಂದೂಗಳು ಸಂಘಟಿತರಾದಾಗ ಅಖಂಡ ಭಾರತ ನಿರ್ಮಾಣ ಸಾಧ್ಯ: ಎಂ.ಅರ್.ಜಯರಾಂ
ಮಕ್ಕಳಲ್ಲಿ ಪ್ರಕೃತಿ ಸಂರಕ್ಷಣೆಯ ಪ್ರಜ್ಞೆ ಬೆಳೆಸುವುದು ಇಂದಿನ ಪರಿಸ್ಥಿತಿಯಲ್ಲಿ ಅತ್ಯವಶ್ಯಕವಾಗಿದೆ. ಪ್ರಕೃತಿ ಬಹಳಷ್ಟು ಮಲೀನಗೊಂಡಿದೆ. ಈ ಮಲೀನತೆ ಕಡಿಮೆ ಆಗಬೇಕಾದರೆ ಅರಣ್ಯ ಸಂಪತ್ತು ಹೇರಳವಾಗಿರಬೇಕು. ಇಂತಹ ಅರಣ್ಯ ಸಂಪತ್ತು ಬೆಳೆಸುವ ಮತ್ತು ಉಳಿಸುವ ಮನೋಭಾವ ಮಕ್ಕಳಲ್ಲಿ ಮೂಡಿಬರಬೇಕು. ಈ ನಿಟ್ಟಿನಲ್ಲಿ ಮಕ್ಕಳು ಈ ಕಾರ್ಯಕ್ರಮವನ್ನು ಸದ್ಬಳಕೆ ಮಾಡಿ ಕೊಳ್ಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಪರಿಸರ ಸಂರಕ್ಷಣೆ ಕುರಿತು ಭಿತ್ತಿ ಚಿತ್ರಗಳನ್ನು ಹಿಡಿದು ಅರಣ್ಯ ರಕ್ಷಣೆ , ವನ್ಯ ಜೀವಿಗಳ ಸಂರಕ್ಷಣೆ,ಕಾಡು ಉಳಿಸಿ ನಾಡು ಬೆಳೆಸಿ,ಅಂತರ್ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ,ನೀರನ್ನು ಮಿತವಾಗಿ ಬಳಸಿ,ಪರಿಸರ ಸ್ನೇಹಿ ಬೈಸಿಕಲ್ ಬಳಸಿ ಇಂದನ ಉಳಿಸಿ,ಕಾಡು ರಾಷ್ಟ್ರ ಸಂಪತ್ತು, ಜೀವಸಂಕುಲ ಸಂರಕ್ಷಣೆ ನಮ್ಮೆಲ್ಲರ ಹೊಣೆ ಭಿತ್ತಿಚಿತ್ರಗಳು ಪ್ರದರ್ಶನ ಮಾಡಿ ಪರಿಸರ ಪ್ರಜ್ಞೆ ಮೂಡಿಸಿದರು.
ಅರಣ್ಯ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾಡಿನ ಪ್ರದೇಶಗಳಿಗೆ ಮಕ್ಕಳನ್ನು ಕರೆದೊಯ್ದು ಅಲ್ಲಿನ ಗಿಡ, ಮರಗಳ, ಸಸ್ಯ ಪ್ರಭೇದಗಳ ವೈಜ್ಞಾನಿಕ ಹೆಸರು, ಉಪಯೋಗ ಹಾಗೂ ಕಾಡಿನ ಸಂರಕ್ಷಣೆ, ವನ್ಯ ಪ್ರಾಣಿಗಳ ಸಂರಕ್ಷಣೆಯ ಕುರಿತು ತಜ್ಞರಿಂದ ಮಾಹಿತಿ, ಮಾರ್ಗದರ್ಶನ ನೀಡುವುದರಿಂದ ಮಕ್ಕಳಲ್ಲಿ ಪ್ರಕೃತಿಯ ಬಗ್ಗೆ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕರು ಹಾಗೂ ಮಕ್ಕಳು ಹಾಜರಿದ್ದರು.