Mass Marriage: ಧರ್ಮಸ್ಥಳದಲ್ಲಿ 53ನೇ ವರ್ಷದ ಉಚಿತ ಸಾಮೂಹಿಕ ವಿವಾಹ: ಗೃಹಸ್ಥಾಶ್ರಮಕ್ಕೆ ಕಾಲಿಟ್ಟ 75 ಜೋಡಿ
Dharmasthala: ಧರ್ಮಸ್ಥಳದ ಅಮೃತ ವರ್ಷಿಣಿ ಸಭಾ ಭವನದಲ್ಲಿ ಶನಿವಾರ (ಮೇ 3) ಸಂಜೆ ಗಂಟೆ 6.48ರ ಗೋಧೂಳಿ ಲಗ್ನ ಮುಹೂರ್ತದಲ್ಲಿ ಆಯೋಜಿಸಿದ 53ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 75 ಜತೆ ವಧು-ವರರು ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ ಮಾಡಿದರು. ವಧು-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಮದುವೆಯ ಭವ್ಯ ಮೆರವಣಿಗೆಯಲ್ಲಿ ಅಮೃತವರ್ಷಿಣಿ ಸಭಾಭವನಕ್ಕೆ ತೆರಳಿದರು.


ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ (Dharmasthala) ಅಮೃತ ವರ್ಷಿಣಿ ಸಭಾ ಭವನದಲ್ಲಿ ಶನಿವಾರ (ಮೇ 3) ಸಂಜೆ ಗಂಟೆ 6.48ರ ಗೋಧೂಳಿ ಲಗ್ನ ಮುಹೂರ್ತದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ 53ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ (Mass Marriage) 75 ಜತೆ ವಧು-ವರರು ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ ಮಾಡಿದರು. ವಧು-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಮದುವೆಯ ಭವ್ಯ ಮೆರವಣಿಗೆಯಲ್ಲಿ ಅಮೃತವರ್ಷಿಣಿ ಸಭಾಭವನಕ್ಕೆ ತೆರಳಿದರು.
ವೇದಘೋಷ, ಮಂಗಳವಾದ್ಯ, ಮಂತ್ರಾಕ್ಷತೆಯೊಂದಿಗೆ ಸಂಜೆ ಗಂಟೆ 6.48ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಹಾರ ವಿನಿಮಯ ಮತ್ತು ಮಾಂಗಲ್ಯಧಾರಣೆ ನಡೆಯಿತು. ಅವರವರ ಜಾತಿ ಸಂಪ್ರದಾಯದಂತೆ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಯಿತು. ಸುಶ್ರಾವ್ಯವಾದ ಶೋಭಾನೆ ಹಾಡುಗಳು, ವಧು-ವರರಿಗೆ ಆರತಿ ಮದುವೆಗೆ ವಿಶೇಷ ಸೊಗಡನ್ನು ನೀಡಿತು.
ನವದೆಹಲಿಯಲ್ಲಿನ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ನೂತನ ದಂಪತಿಗೆ ಶುಭ ಹಾರೈಸಿ, ಸರಳ ಸಾಮೂಹಿಕ ವಿವಾಹ ಅತ್ಯಂತ ಪುಣ್ಯದ ಸೇವೆ ಎಂದು ಹೇಳಿದರು. ʼʼನಾಡಿನೆಲ್ಲೆಡೆ ಬಹುಮುಖಿ ಸಮಾಜಸೇವಾ ಕಾರ್ಯಗಳ ಮೂಲಕ ಗ್ರಾಮೀಣ ಪ್ರದೇಶದ ಜನರಲ್ಲಿಯೂ ಹಣದ ಮಿತಬಳಕೆ, ಉಳಿತಾಯ ಹಾಗೂ ಸಮರ್ಪಕ ಹೂಡಿಕೆ ಬಗ್ಗೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಮಾಡುತ್ತಿರುವ ಸೇವೆ ಹಾಗೂ ಸಾಧನೆ ಶ್ಲಾಘನೀಯʼʼ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ʼʼಸರಳ ಸಾಮೂಹಿಕ ವಿವಾಹ ಅತ್ಯಂತ ಪುಣ್ಯದ ಕಾಯಕ. ಕಳೆದ 52 ವರ್ಷಗಳಲ್ಲಿ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹದಲ್ಲಿ 12,900 ಜತೆ ವಿವಾಹವಾಗಿದ್ದು, ಸುಖ-ಶಾಂತಿ, ನೆಮ್ಮದಿಯ ದಾಂಪತ್ಯ ಜೀವನ ನಡೆಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ತಾವು ಕಾನೂನು ಸಚಿವರಾಗಿದ್ದಾಗ ಸರಳ ಸಾಮೂಹಿಕ ವಿವಾಹ ಪದ್ಧತಿ ಜಾರಿಗೆ ತರಲು ಕಾನೂನು ರೂಪಿಸಿದ್ದೆ. ಆದರೆ ಸಚಿವಸಂಪುಟದಲ್ಲಿ ಹಾಗೂ ಇತರರು ಕೂಡಾ ಇದ್ದಕ್ಕೆ ವಿರೋಧ ವ್ಯಕ್ತಪಡಿಸಿರುವುದರಿಂದ ತಾನು ವಿಫಲನಾದೆ ಎಂದು ವಿಷಾದ ವ್ಯಕ್ತಪಡಿಸಿದರು.
ಹೆಗ್ಗಡೆಯವರ ಕಷ್ಟದ ಕಾಲದಲ್ಲಿ ಶ್ರೀ ಮಂಜುನಾಥ ಸ್ವಾಮಿ ಅವರಿಗೆ ಶಾಂತಿ, ನೆಮ್ಮದಿ ನೀಡಲಿ ಎಂದು ಪ್ರಾರ್ಥಿಸಿದರು. ಪೂಜ್ಯರ ಜತೆಗೆ ನಾವೆಲ್ಲ ಸದಾ ಸಿದ್ಧರೂ, ಬದ್ಧರೂ ಆಗಿದ್ದೇವೆ ಎಂದು ಅವರು ಭರವಸೆ ನೀಡಿದರು.
ಈ ಸುದ್ದಿಯನ್ನೂ ಓದಿ: DK Shivakumar: ಧರ್ಮಸ್ಥಳ ಕ್ಷೇತ್ರ ರಕ್ಷಣೆಗೆ ನಾವೆಲ್ಲ ಸಿದ್ಧ: ಡಿಕೆಶಿ
ಶುಭಾಶಂಸನೆ ಮಾಡಿದ ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ, ʼʼಸನಾತನ ಪರಂಪರೆಯಲ್ಲಿ ಷೋಢಶ ಸಂಸ್ಕಾರಗಳಲ್ಲಿ ಮದುವೆ ಎಂಬುದು ಭಾವನಾತ್ಮಕ ಸಂಬಂಧ ಹೊಂದಿದೆ. ಈ ಪವಿತ್ರ ಸಂಸ್ಕಾರ ಪಡೆದ ಪತಿ-ಪತ್ನಿ ಸಮಾನವಾಗಿ ಸುಖ-ಕಷ್ಟ, ನೋವು-ನಲಿವು ಎಲ್ಲವನ್ನೂ ಶಾಂತಿ ಮತ್ತು ತಾಳ್ಮೆಯಿಂದ ಅನುಭವಿಸಿ ಧನ್ಯತಾಭಾವ ಹೊಂದಿರಬೇಕು. ಸಾರ್ಥಕ ಜೀವನ ನಡೆಸಬೇಕುʼʼ ಎಂದು ಅವರು ಸಲಹೆ ನೀಡಿದರು.
ವಧು-ವರರ ಪ್ರಮಾಣ ವಚನ
ʼʼಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಂಗಲ ಮುಹೂರ್ತದಲ್ಲಿ ವಧು-ವರರಾಗಿ ಪವಿತ್ರ ಬಾಂಧವ್ಯವನ್ನು ಹೊಂದಿರುವ ನಾವು ಮುಂದೆ ಜೀವನದುದ್ದಕ್ಕೂ ಧರ್ಮ, ಅರ್ಥ ಮತ್ತು ಕಾಮಗಳಲ್ಲಿ ಸಹಚರರಾಗಿ, ಪರಸ್ಪರ ಪ್ರೀತಿ-ವಿಶ್ವಾಸದಿಂದ ಒಬ್ಬರಿಗೊಬ್ಬರು ವಂಚನೆ ಮಾಡದೆ ಯಾವುದೇ ದುರಭ್ಯಾಸಗಳಿಗೂ ತುತ್ತಾಗದೆ ಬದುಕುತ್ತೇವೆ ಎಂಬುದಾಗಿ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ದಿವ್ಯ ಸನ್ನಿಧಿಯಲ್ಲಿ ಮತ್ತು ಪೂಜ್ಯ ಹೆಗ್ಗಡೆಯವರ ಸಮಕ್ಷಮದಲ್ಲಿ ಪ್ರಮಾಣವಚನ ಬದ್ಧರಾಗುತ್ತಿದ್ದೇವೆʼʼ ಎಂದು ವಧು-ವರರು ಪ್ರಮಾಣ ಮಾಡಿದರು.
ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ʼʼಸಾಮೂಹಿಕ ವಿವಾಹದಲ್ಲಿ ಮದುವೆ ಆದವರು ದುಂದುವೆಚ್ಚ ಮಾಡಬಾರದು. ಸತ್ಕಾರಕೂಟ, ನಿಶ್ಚಿತಾರ್ಥ, ಅತಿಥಿ ಸತ್ಕಾರಕ್ಕೆಂದು ಅನಗತ್ಯ ವೆಚ್ಚ ಮಾಡಬಾರದುʼʼ ಎಂದು ಸಲಹೆ ನೀಡಿದರು.
ʼʼಅನೇಕ ಮಂದಿ ದಾನಿಗಳು ನಗದು ದೇಣಿಗೆ, ಮಂಗಳಸೂತ್ರ, ಮೂಗುತಿ, ಸೀರೆ ಮೊದಲಾದವುಗಳನ್ನು ಉಚಿತ ಸಾಮೂಹಿಕ ವಿವಾಹಕ್ಕೆ ಕೊಡುಗೆಯಾಗಿ ನೀಡಿ ಪುಣ್ಯ ಭಾಗಿಗಳಾಗಿದ್ದಾರೆʼʼ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಧರ್ಮಸ್ಥಳದ ವತಿಯಿಂದ ನೂತನ ದಂಪತಿಗೆ ವಿಶೇಷ ಉಡುಗೊರೆ ನೀಡಲಾಯಿತು. ಹೇಮಾವತಿ ವಿ. ಹೆಗ್ಗಡೆ, ಶ್ರದ್ಧಾಅಮಿತ್, ಅಮಿತ್ ಉಪಸ್ಥಿತರಿದ್ದರು. ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಅಖಿಲೇಶ್ ಶೆಟ್ಟಿ ಧರ್ಮಸ್ಥಳ ಧನ್ಯವಾದವಿತ್ತರು. ಎಸ್.ಡಿ.ಎಂ. ಸನಿವಾಸ ಕಾಲೇಜಿನ ಪ್ರಾಂಶುಪಾಲ ಡಾ. ಸುನಿಲ್ ಪಂಡಿತ್ ಕಾರ್ಯಕ್ರಮ ನಿರ್ವಹಿಸಿದರು.