ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅವಹೇಳನಕಾರಿ ವಿಡಿಯೊ; ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಯೂಟ್ಯೂಬರ್ ಸಂತೋಷ್ ಪೊಲೀಸ್ ವಶಕ್ಕೆ
ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಆರೋಪದ ಮೇಲೆ ‘ಸಂಚಾರಿ ಸ್ಟುಡಿಯೋ’ ಯೂಟ್ಯೂಬರ್ ಸಂತೋಷ್ ಕಡಬ ಅವರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅವಹೇಳನಕಾರಿ ವಿಡಿಯೊಗಳನ್ನು ಪ್ರಸಾರ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಲಯವು ಅವರಿಗೆ 30 ದಿನಗಳ ಜೈಲು ಶಿಕ್ಷೆ ವಿಧಿಸಿದೆ. ಫೆಬ್ರವರಿ 18ರಂದು ಅವರನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆದೊಯ್ಯಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಜೈಲಿಗೆ ಕಳುಹಿಸುವ ಕ್ರಮ ಕೈಗೊಳ್ಳಲಾಗಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಫೆ. 18: ನ್ಯಾಯಾಲಯದ ಆದೇಶವನ್ನು ಪದೇ ಪದೆ ಉಲ್ಲಂಘಿಸಿದ ಆರೋಪದ ಮೇಲೆ 'ಸಂಚಾರಿ ಸ್ಟುಡಿಯೋ' ಯೂಟ್ಯೂಬರ್ ಸಂತೋಷ್ ಕಡಬ ಅವರನ್ನು ಬೆಂಗಳೂರು ಪೊಲೀಸರು ಫೆಬ್ರವರಿ 18ರಂದು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಅವರಿಗೆ 30 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ತನ್ನ 'ಸಂಚಾರಿ ಸ್ಟುಡಿಯೋ' ಯೂಟ್ಯೂಬ್ ಚಾನೆಲ್ ಮೂಲಕ ಅವಹೇಳನಕಾರಿ ವಿಡಿಯೊಗಳನ್ನು ಪ್ರಸಾರ ಮಾಡುತ್ತಿದ್ದ ಆರೋಪ ಸಂತೋಷ್ ಮೇಲಿದೆ. ಈ ಹಿಂದೆ ಈ ಕುರಿತು ನ್ಯಾಯಾಲಯವು ಅವರಿಗೆ ನೋಟಿಸ್ ಜಾರಿ ಮಾಡಿ, ಇಂತಹ ವಿಡಿಯೊಗಳನ್ನು ಪ್ರಸಾರ ಮಾಡದಂತೆ ಆದೇಶಿಸಿತ್ತು. ಆದರೆ ನ್ಯಾಯಾಲಯದ ಸೂಚನೆಯನ್ನು ಲೆಕ್ಕಿಸದೆ ಅವರು ಮತ್ತೆ ಅವಹೇಳನಕಾರಿ ವಿಡಿಯೋಗಳನ್ನು ಅಪ್‌ಲೋಡ್ ಮಾಡುವುದನ್ನು ಮುಂದುವರಿಸಿದ್ದರು.
ಧರ್ಮಸ್ಥಳದ ಪಾರ್ಕ್‌ನಲ್ಲಿಯೇ ಬಿರಿಯಾನಿ ಕಬಾಬ್ ತಿಂದಿದ್ದೆ; ಡಾಗ್ ಸತೀಶ್ ಹೊಸ ವಿವಾದ
ನ್ಯಾಯಾಲಯದ ಆದೇಶ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್, 30 ದಿನಗಳ ಜೈಲು ಶಿಕ್ಷೆಯನ್ನು ಪ್ರಕಟಿಸಿತು. ಈ ಆದೇಶದ ಹಿನ್ನೆಲೆಯಲ್ಲಿ ಫೆಬ್ರವರಿ 18ರಂದು ಬೆಂಗಳೂರು ಪೊಲೀಸರು ಮತ್ತು ಕೋರ್ಟ್ ಸಿಬ್ಬಂದಿ ಕಡಬಕ್ಕೆ ಆಗಮಿಸಿದ್ದರು. ಅಂಗಡಿಯಿಂದಲೇ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆತನನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ.
ನ್ಯಾಯಾಲಯದ ಹೋರಾಟ
ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಹಿರಿಯ ವಕೀಲರಾದ ರಾಜಶೇಖರ್ ಹಿರಿಯಾರು ಸುದೀರ್ಘ ವಾದ ಮಂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಕೇಂದ್ರಗಳ ಬಗ್ಗೆ ಸುಳ್ಳು ಮಾಹಿತಿ ಅಥವಾ ಅವಹೇಳನಕಾರಿ ಅಂಶಗಳನ್ನು ಹಂಚಿಕೊಳ್ಳುವುದು ಕಾನೂನುಬಾಹಿರ ಎಂಬ ಅಂಶವನ್ನು ನ್ಯಾಯಾಲಯ ಈ ಮೂಲಕ ಎತ್ತಿ ಹಿಡಿದಿದೆ.