ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Puttur News: ನಾಪತ್ತೆಯಾಗಿದ್ದ ಸಾಕು ನಾಯಿ ‘ಚಿನ್ನು’ ಹುಡುಕಿಕೊಟ್ಟ ವ್ಯಕ್ತಿಗೆ 50 ಸಾವಿರ ರೂ. ಬಹುಮಾನ ನೀಡಿದ ಮಾಲೀಕ!

ಮೂರು ವಾರಗಳ ಹಿಂದೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ನಾಯಿಯನ್ನು ಹುಡುಕಿಕೊಟ್ಟವರಿಗೆ ನಗದು ಬಹುಮಾನ ನೀಡಲಾಗುವುದು ಎಂದು ಪುತ್ತೂರಿನ ಶ್ವಾನಪ್ರೇಮಿ ಗಣೇಶ್ ಕೇರ ಅವರು ಜಾಹೀರಾತು ನೀಡಿದ್ದರು. ಇದಾದ ಬಳಿಕ ಪೋಳ್ಯ ಪರಿಸರದವರೇ ಆದ ಪುರಂದರ ಎಂಬುವವರು ಈ ನಾಯಿಯನ್ನು ಯಶಸ್ವಿಯಾಗಿ ಹುಡುಕಿಕೊಟ್ಟಿದ್ದಾರೆ. ಅವರಿಗೆ ನಾಯಿಯ ಮಾಲೀಕ 50 ಸಾವಿರ ನಗದು ಬಹುಮಾನ ನೀಡಿದ್ದಾರೆ.

ಸಾಕು ನಾಯಿ 'ಚಿನ್ನು' ಹುಡುಕಿಕೊಟ್ಟ ವ್ಯಕ್ತಿಗೆ 50 ಸಾವಿರ ಬಹುಮಾನ!

ಸಾಕು ನಾಯಿ ಹುಡುಕಿಕೊಟ್ಟ ಪುರಂದರ ಜತೆ ಶ್ವಾನಪ್ರೇಮಿ ಗಣೇಶ್‌ ಕೇರ. -

Prabhakara R
Prabhakara R Jun 24, 2026 6:17 PM

ಪುತ್ತೂರು: ನಾಪತ್ತೆಯಾಗಿದ್ದ ತಮ್ಮ ಪ್ರೀತಿಯ ಸಾಕು ನಾಯಿಯನ್ನು (Dog missing) ಹುಡುಕಿಕೊಟ್ಟ ವ್ಯಕ್ತಿಗೆ, ಮಾಲೀಕ 50 ಸಾವಿರ ನಗದು ಬಹುಮಾನ ನೀಡಿರುವುದು ಪುತ್ತೂರಿನಲ್ಲಿ (Puttur News) ಕಂಡುಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಸಮೀಪದ ಪೋಳ್ಯ ನಿವಾಸಿ, ಪ್ರಸಿದ್ಧ ಶ್ವಾನಪ್ರೇಮಿ ಗಣೇಶ್ ಕೇರ ಅವರ ಮನೆಯ ‘ಚಿನ್ನು’ ಹೆಸರಿನ ದೇಸಿ ತಳಿಯ ಸಾಕು ನಾಯಿ ನಾಪತ್ತೆಯಾಗಿತ್ತು. ಆ ನಾಯಿಯನ್ನು ಹುಡುಕಿಕೊಟ್ಟ ವ್ಯಕ್ತಿಗೆ ಮಾಲೀಕ ಗಣೇಶ್ ಕೇರ ಅವರು ಕೊಟ್ಟ ಮಾತಿನಂತೆ ನಗದು ಬಹುಮಾನದ ಚೆಕ್‌ ವಿತರಿಸಿದ್ದಾರೆ.

ಮೂರು ವಾರಗಳ ಹಿಂದೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ನಾಯಿಯನ್ನು ಹುಡುಕಿಕೊಟ್ಟವರಿಗೆ ನಗದು ಬಹುಮಾನ ನೀಡಲಾಗುವುದು ಎಂದು ಪತ್ರಿಕೆಗಳಲ್ಲಿ ಗಣೇಶ್ ಕೇರ ಅವರು ಜಾಹೀರಾತು ನೀಡಿದ್ದರು. ಇದಾದ ಬಳಿಕ ಇತ್ತೀಚೆಗೆ ಪೋಳ್ಯ ಪರಿಸರದವರೇ ಆದ ಪುರಂದರ ಎಂಬುವವರು ಈ ನಾಯಿಯನ್ನು ಯಶಸ್ವಿಯಾಗಿ ಹುಡುಕಿಕೊಟ್ಟಿದ್ದಾರೆ. ಹೀಗಾಗಿ ಪುರಂದರ ಅವರಿಗೆ ನಾಯಿಯ ಮಾಲೀಕ 50 ಸಾವಿರ ನಗದು ಬಹುಮಾನ ನೀಡಿ, ಕೃತಜ್ಞತೆ ಸಲ್ಲಿಸಿದ್ದಾರೆ.

ಶ್ವಾನಪ್ರೇಮಿ ಗಣೇಶ್ ಕೇರ ಅವರು ತಮ್ಮ ಮನೆಯಲ್ಲಿ ವಿವಿಧ ತಳಿಗಳ ಸುಮಾರು 30 ನಾಯಿಗಳನ್ನು ಸಾಕಿ ಸಲಹುತ್ತಿದ್ದಾರೆ. ಇವುಗಳಲ್ಲಿ ಬಹುತೇಕ ನಾಯಿಗಳು ರಸ್ತೆ ಬದಿಯಲ್ಲಿ ಅಪಘಾತಕ್ಕೀಡಾಗಿ ಅನಾಥವಾಗಿದ್ದವುಗಳಾಗಿವೆ. ಚಿನ್ನು’ ಕೂಡ ಹಿಂದೆ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾಗ ಗಣೇಶ್ ಅವರು ಅದನ್ನು ಮನೆಗೆ ತಂದು ಉಪಚರಿಸಿದ್ದರು. ಆದರೆ, ಮೂರ್ಛೆ ರೋಗ ಸಮಸ್ಯೆಯಿಂದಾಗಿ ಈ ನಾಯಿ ತನ್ನ ಕಾಲುಗಳ ಸ್ವಾಧೀನ ಕಳೆದುಕೊಂಡಿತ್ತು. ಇಂತಹ ವಿಶೇಷ ಚೇತನ ನಾಯಿ ಮೂರು ವಾರಗಳ ಹಿಂದೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು.

ತಮ್ಮ ಪ್ರೀತಿಯ ಶ್ವಾನ ಕಾಣೆಯಾದ್ದರಿಂದ ಕಂಗಾಲಾಗಿದ್ದ ಗಣೇಶ್ ಕೇರ ಅವರು, ನಗದು ಬಹುಮಾನದ ಭರವಸೆಯೊಂದಿಗೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಲ್ಲದೆ, ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾನರ್‌ಗಳನ್ನು ಅಳವಡಿಸಿದ್ದರು. ನಾಯಿಯನ್ನು ಹುಡುಕಿಕೊಟ್ಟವರಿಗೆ 50 ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದ್ದರು.

ನೂರಾರು ಕೋತಿಗಳ ಆರೈಕೆ ಮಾಡುತ್ತಿರುವ 77ರ ವೃದ್ಧ ತಾಯಿ; ನಿವೃತ್ತ ಪೊಲೀಸ್ ಅಧಿಕಾರಿಯ ಪ್ರಾಣಿ ಪ್ರೇಮಕ್ಕೆ ನೆಟ್ಟಿಗರು ಫಿದಾ

ನಾಪತ್ತೆಯಾಗಿದ್ದ ನಾಯಿ ಗಣೇಶ್ ಅವರ ಮನೆಯ 2 ಕಿಲೋಮೀಟರ್ ಸುತ್ತಮುತ್ತಲಲ್ಲೇ ತಿರುಗಾಡುತ್ತಿತ್ತು. ಪುರಂದರ ಅವರು ನಾಯಿಯನ್ನು ಹಿಡಿದು ಸುರಕ್ಷಿತವಾಗಿ ಮಾಲೀಕ ಗಣೇಶ್ ಅವರಿಗೆ ಒಪ್ಪಿಸಿದ್ದಾರೆ. ಕೊಟ್ಟ ಮಾತಿನಂತೆ ಗಣೇಶ್ ಕೇರ ಅವರು ಪುರಂದರ ಪೋಳ್ಯ ಅವರನ್ನು ತಮ್ಮ ಮನೆಗೆ ಗೌರವಪೂರ್ವಕವಾಗಿ ಆಹ್ವಾನಿಸಿ 50 ಸಾವಿರ ರೂ. ಚೆಕ್ ಹಸ್ತಾಂತರಿಸಿ, ಧನ್ಯವಾದ ಸಲ್ಲಿಸಿದ್ದಾರೆ.