ʻಮೋದಿ ಇವೆಂಟ್ ಮ್ಯಾನೇಜ್‌ಮೆಂಟ್ ವೈಫಲ್ಯʼ ಎಂದು ಲೇವಡಿ ಮಾಡಿದ ಟಿಎಂಸಿ ನಾಯಕನಿಗೆ ನಟ ಅನಿಲ್ ಕುಮಾರ್ ಖಡಕ್ ಉತ್ತರ! ಅಷ್ಟಕ್ಕೂ ಆಗಿದ್ದೇನು?
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವಾಗ ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತಲಾಘವ ಗಮನಿಸದೆ ಮುಂದೆ ಸಾಗಿದ ವಿಡಿಯೋ ಬಳಸಿ ಟ್ರೋಲ್ ಮಾಡಿದ ಟಿಎಂಸಿ ವಕ್ತಾರ ಸಾಕೇತ್ ಗೋಖಲೆಗೆ ನಟ, ವಿಜ್ಞಾನಿ ಡಾ. ಅನಿಲ್ ಕುಮಾರ್ ರಸ್ತೋಗಿ ಖಡಕ್ ಉತ್ತರ ನೀಡಿದ್ದಾರೆ.
-
ಖ್ಯಾತ ನಟ, ವಿಜ್ಷಾನಿ ಡಾ. ಅನಿಲ್ ಕುಮಾರ್ ರಸ್ತೋಗಿ ಅವರು ಮಂಗಳವಾರ (ಜೂನ್ 24) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರತಿಷ್ಠಿತ 'ಪದ್ಮಶ್ರೀ' ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ಒಂದು ಮುಜುಗರದ ಗ್ರೀಟಿಂಗ್ ಕ್ಷಣವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆ ವಿಡಿಯೋವನ್ನು ಇಟ್ಟುಕೊಂಡು ಅನಿಲ್ ಅವರನ್ನು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಅಂಥವರಿಗೆ ಅನಿಲ್ ತಕ್ಕ ಉತ್ತರ ನೀಡಿದ್ದಾರೆ.
ಅಷ್ಟಕ್ಕೂ ಕಾರ್ಯಕ್ರಮದಲ್ಲಿ ಆಗಿದ್ದೇನು?
ಡಾ. ಅನಿಲ್ ರಸ್ತೋಗಿ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ವೇದಿಕೆಯತ್ತ ನಡೆದು ಬರುತ್ತಿದ್ದಾಗ, ಮಧ್ಯದಲ್ಲಿ ಪ್ರಧಾನಿ ಮೋದಿ ಅವರಿಗೆ ಕೈಮುಗಿದು ಗೌರವ ಸೂಚಿಸಿದ್ದರು. ಈ ವೇಳೆ ಪ್ರಧಾನಿಯವರು ಹಸ್ತಲಾಘವ ಮಾಡಲು ಕೈ ಚಾಚಿದಂತೆ ಕಂಡರೂ, ನಟ ಅನಿಲ್ ಕುಮಾರ್ ಅವರು ಅದನ್ನು ಗಮನಿಸದೆ ಮುಂದೆ ಸಾಗಿದ್ದರು. ತೃಣಮೂಲ ಕಾಂಗ್ರೆಸ್ (TMC) ವಕ್ತಾರ ಸಾಕೇತ್ ಗೋಖಲೆ ಅವರು ಈ ವಿಡಿಯೋವನ್ನು ಹಂಚಿಕೊಂಡು ಟೀಕಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ರೋಹಿತ್ ಶರ್ಮಾ!
"ಮೋದಿ ಅವರ ಇವೆಂಟ್ ಮ್ಯಾನೇಜ್‌ಮೆಂಟ್ ವೈಫಲ್ಯ" ಎಂದು ಲೇವಡಿ ಮಾಡಿ ಸಾಕೇತ್ ಗೋಖಲೆ ಹಂಚಿಕೊಂಡಿದ್ದ ಪೋಸ್ಟ್‌ಗೆ ನಟ ಅನಿಲ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. "ಇದನ್ನು ನೋಡಿ ಮಜಾ ಮಾಡುತ್ತಿರುವವರಿಗೆ ನಾನು ಹೇಳುವುದೇನೆಂದರೆ, ನನಗೆ 80ಕ್ಕೂ ಹೆಚ್ಚು ವರ್ಷ ವಯಸ್ಸಾಗಿದೆ. ನನ್ನ ವಯಸ್ಸಿನ ಕಾರಣದಿಂದಾಗಿ ಇದು ನನ್ನ ಕಡೆಯಿಂದಾದ ಅಚಾತುರ್ಯವಷ್ಟೇ" ಎಂದು ಹೇಳಿದ್ದಾರೆ.
"ನಮ್ಮ ಪ್ರಧಾನಿ ಎಂದರೆ ನನಗೆ ಅಪಾರ ಗೌರವವಿದೆ. ಪ್ರಸ್ತುತ ದೇಶವನ್ನು ಮುನ್ನಡೆಸಲು ಅವರೇ ಅತ್ಯುತ್ತಮ ಆಯ್ಕೆ ಎಂದು ನಾನು ಭಾವಿಸುತ್ತೇನೆ" ಎಂದು ಸಾಕೇತ್ ಗೋಖಲೆ ಅವರ ಪೋಸ್ಟ್‌ಗೆ ರಸ್ತೋಗಿ ಪ್ರತಿಕ್ರಿಯಿಸಿದ್ದಾರೆ. ಅನಿಲ್ ಕುಮಾರ್ ಅವರ ಈ ಉತ್ತರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಅನಿಲ್ ಕುಮಾರ್ ರಸ್ತೋಗಿ ಅವರ ಬಗ್ಗೆ..
ರಂಗಭೂಮಿ, ಸಿನಿಮಾ, ರೇಡಿಯೋ ಮತ್ತು ದೂರದರ್ಶನ ಕ್ಷೇತ್ರಗಳಿಗೆ ನೀಡಿದ ಅಪಾರ ಕೊಡುಗೆಗಾಗಿ ಡಾ. ಅನಿಲ್ ಕುಮಾರ್ ರಸ್ತೋಗಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅನಿಲ್ ಅವರು 100ಕ್ಕೂ ಹೆಚ್ಚು ನಾಟಕಗಳ ಸುಮಾರು ಸಾವಿರ ಪ್ರದರ್ಶನಗಳನ್ನು ನೀಡಿದ್ದಾರೆ. 75ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದಾರೆ. ಇದರೊಂದಿಗೆ ಅವರು ಒಬ್ಬ ಹೆಸರಾಂತ ವಿಜ್ಞಾನಿಯೂ ಆಗಿದ್ದು, 78 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಸಹ-ಬರೆದಿದ್ದಾರೆ.
ಇನ್ನು, ತಮ್ಮ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅನಿಲ್ ಕುಮಾರ್, "ನನ್ನ ಹೆಸರು ಅನಿಲ್ ಕುಮಾರ್ ರಸ್ತೋಗಿ. ನಾನು ಲಕ್ನೋದವನು. ನನ್ನ ಹುಟ್ಟು, ಬೆಳವಣಿಗೆ, ಶಿಕ್ಷಣ, ಮೊದಲ ಉದ್ಯೋಗ, ರಂಗಭೂಮಿ ಎಲ್ಲವೂ ಲಕ್ನೋದಲ್ಲೇ ಆಗಿದೆ" ಎಂದು ಹೇಳಿಕೊಂಡಿದ್ದಾರೆ. ಲಕ್ನೋದ ಸೆಂಟ್ರಲ್ ಡ್ರಗ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ (CDRI) ಮಾಜಿ ವಿಜ್ಞಾನಿಯಾಗಿರುವ ಅವರು 1962ರಲ್ಲಿ ಜೂನಿಯರ್ ರಿಸರ್ಚ್ ಫೆಲೋ ಆಗಿ ಸೇರಿ, 2003ರಲ್ಲಿ ಬಯೋಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥರಾಗಿ ಮತ್ತು ಡೈರೆಕ್ಟರ್ ಗ್ರೇಡ್ ವಿಜ್ಞಾನಿಯಾಗಿ ನಿವೃತ್ತರಾಗಿದ್ದರು.
ಪ್ರಧಾನಿ ಮೋದಿ ಹಸ್ತಲಾಘವ ವಿಡಿಯೋ ಟ್ರೋಲ್ ಮಾಡಿದ ಟಿಎಂಸಿ ನಾಯಕ
For all those making fun, I’m a man of 80+ years, this was an oversight on my part due to my age. I have huge respect for our PM and feel that he is the best choice we currently have for running the country!
— Anil Kumar Rastogi (@AKRastogi) June 24, 2026
ತಮ್ಮ ವೃತ್ತಿಜೀವನದ ಬಹುಪಾಲು ಸಮಯವನ್ನು ವೈಜ್ಞಾನಿಕ ಸಂಶೋಧನೆಯಲ್ಲಿ ಕಳೆದರೂ, ಕಲಾ ಕ್ಷೇತ್ರದಲ್ಲಿನ ಸೇವೆಗಾಗಿ ಭಾರತದ ಅತ್ಯುನ್ನತ ನಾಗರಿಕ ಗೌರವವನ್ನು ಪಡೆದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಅನಿಲ್ ರಸ್ತೋಗಿ, "ನಾನು ಒಬ್ಬ ವಿಜ್ಞಾನಿ. ಆದರೆ ನನಗೆ ಕಲಾ ಕ್ಷೇತ್ರದಲ್ಲಿ ಪ್ರಶಸ್ತಿ ನೀಡಲಾಗಿದೆ, ಇದೇ ಇದರ ಸೌಂದರ್ಯ. ವಿಜ್ಞಾನವನ್ನು ಮೂಲ ವೃತ್ತಿಯಾಗಿಸಿಕೊಂಡು ಕಲಾ ಕ್ಷೇತ್ರದಲ್ಲಿ ಈ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಬಹುಶಃ ನಾನೇ ಇರಬಹುದು" ಎಂದು ಅನಿಲ್ ತಿಳಿಸಿದ್ದಾರೆ.