ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಯೋಗ ಲೋಕಹಿತಾರ್ಥಾಯ

ನಾವು ಇಂದು ವಿಶ್ವ ಯೋಗ ದಿನಾಚರಣೆಯ ಸಂಭ್ರಮದಲ್ಲಿದ್ದೇವೆ. ಈ ಸಂದರ್ಭದಲ್ಲಿ ಯೋಗ ದಿನದ ಮಹತ್ವ ಮತ್ತು ಯೋಗ ನಮ್ಮ ಜೀವನದಲ್ಲಿ ನಿರ್ವಹಿಸುತ್ತಿರುವ ಮಹತ್ವದ ಪಾತ್ರವನ್ನು ಕುರಿತು ಚಿಂತಿಸುವುದಕ್ಕೆ ಸಕಾಲ. ಭಾರತ ದೇಶವು ಪ್ರಾಚೀನ ಕಾಲಗಳಿಂದಲೂ ಜ್ಞಾನ ವಿಜ್ಞಾನ ಗಳ ತವರೂರು. ಪ್ರಪಂಚದ ಬೇರೆ ಬೇರೆ ಭಾಗಗಳಿಂದ ಇಲ್ಲಿಗೆ ಬಂದು ಜ್ಞಾನ ಸಂಪಾದನೆಯನ್ನು ಮಾಡಿ ತೆರಳುತ್ತಿದ್ದ ಐತಿಹಾಸಿಕ ಘಟನೆಗಳನ್ನು ನಾವು ಕೇಳಿದ್ದೇವೆ.

ಯೋಗ ಲೋಕಹಿತಾರ್ಥಾಯ

-

Profile
Ashok Nayak Jun 21, 2026 11:24 AM

ಡಾ.ಡಿ.ವೀರೇಂದ್ರ ಹೆಗ್ಗಡೆ

ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ

ಉಜಿರೆಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ, ಪ್ರಿನ್ಸಿಪಲ್ಸ್ ಆಫ್ ಯೋಗ ಥೆರಪಿ, ಯೋಗ ಫೀಲಾಸಫಿ, ಪ್ರಾಕ್ಟೀಸಸ್ ಆಫ್ ಯೋಗ ಅಂಡ್ ಡ್ರಗ್ ಲೆಸ್ ಥೆರಪಿ ಇತ್ಯಾದಿಗಳನ್ನು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿವಿಯಿಂದ ಸರಕಾರದ ನಿಯಮ ದಂತೆ ಮಾನ್ಯತೆ ಪಡೆದು ನೀಡಲಾಗುತ್ತಿದೆ. ಇಲ್ಲಿ ವಿಶೇಷವಾಗಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಬಗ್ಗೆ ಇರುವ ಪಾರಂಪರಿಕ ಜ್ಞಾನವನ್ನು ವೈಜ್ಞಾನಿಕ ಅಧ್ಯಯನ ಹಾಗೂ ಸಂಶೋಧನೆ ಮೂಲಕ ಸಾಬೀತು ಪಡಿಸುವ ಕಾರ್ಯಗಳು ನಡೆಯುತ್ತಿವೆ. ಕೌಶಲಯುತ ತಜ್ಞವೈದ್ಯರನ್ನು ನಿರೂಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯ ದೇಶದಲ್ಲೇ ಪ್ರಥಮವಾಗಿ ಉಜಿರೆಯಲ್ಲಿರುವ ಎಸ್ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿಗೆ ಉತ್ಕೃಷ್ಟ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಸಂಶೋಧನ ಕೇಂದ್ರವನ್ನು ಮಂಜೂರು ಮಾಡಿದೆ.

ನಾವು ಇಂದು ವಿಶ್ವ ಯೋಗ ದಿನಾಚರಣೆಯ ಸಂಭ್ರಮದಲ್ಲಿದ್ದೇವೆ. ಈ ಸಂದರ್ಭದಲ್ಲಿ ಯೋಗ ದಿನದ ಮಹತ್ವ ಮತ್ತು ಯೋಗ ನಮ್ಮ ಜೀವನದಲ್ಲಿ ನಿರ್ವಹಿಸುತ್ತಿರುವ ಮಹತ್ವದ ಪಾತ್ರವನ್ನು ಕುರಿತು ಚಿಂತಿಸುವುದಕ್ಕೆ ಸಕಾಲ. ಭಾರತ ದೇಶವು ಪ್ರಾಚೀನ ಕಾಲಗಳಿಂದಲೂ ಜ್ಞಾನ ವಿಜ್ಞಾನ ಗಳ ತವರೂರು. ಪ್ರಪಂಚದ ಬೇರೆ ಬೇರೆ ಭಾಗಗಳಿಂದ ಇಲ್ಲಿಗೆ ಬಂದು ಜ್ಞಾನ ಸಂಪಾದನೆಯನ್ನು ಮಾಡಿ ತೆರಳುತ್ತಿದ್ದ ಐತಿಹಾಸಿಕ ಘಟನೆಗಳನ್ನು ನಾವು ಕೇಳಿದ್ದೇವೆ. ಅಂದರೆ ಇಡೀ ಪ್ರಪಂಚಕ್ಕೆ ಮಾರ್ಗ ದರ್ಶನವನ್ನು ನೀಡಬಹುದಾದ ಜ್ಞಾನ ಸಾಮ್ರಾಜ್ಯ ದೇಶ ಭಾರತ ದೇಶವಾಗಿತ್ತು.

ಇದನ್ನೂ ಓದಿ: SDM Hospital: ಉಜಿರೆಯ SDM ಆಸ್ಪತ್ರೆಯಲ್ಲಿ ಎಂಡೋಸ್ಕೋಪಿಕ್ ಸರ್ಜರಿ ಮೂಲಕ ವಿಶ್ವದ ಮೊದಲ ಸಂಪೂರ್ಣ ಬೆನ್ನುಮೂಳೆಯ ಗೆಡ್ಡೆ ನಿರ್ಮೂಲನೆ

ನೂರಾರು ವೈಜ್ಞಾನಿಕ ವಿದ್ಯಾವೈವಿಧ್ಯಗಳಲ್ಲಿ ಇಂದು ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯ ವಾದ ಮತ್ತು ಪ್ರತಿಯೊಬ್ಬ ಮನುಷ್ಯನ ತುರ್ತು ಅವಶ್ಯಕತೆಯಾದ ಯೋಗ ವಿದ್ಯೆಯು ಒಂದು. ವೇದಕಾಲದಿಂದ ಈ ಯೋಗದ ಅಧ್ಯಯನ-ಅಧ್ಯಾಪನ ಇಲ್ಲಿ ನಡೆಯುತ್ತಿರುವುದನ್ನು ನಾವು ಗ್ರಂಥಗಳಲ್ಲಿ ನೋಡುತ್ತೇವೆ. ಪತಂಜಲಿ ಮೊದಲಾದ ಮಹರ್ಷಿಗಳು ಯೋಗವನ್ನು ಕುರಿತು ಪ್ರೌಢವಾದ ಯೋಗ ಸೂತ್ರವನ್ನು ರಚಿಸಬೇಕಾದರೆ, ತತ್‌ಪೂರ್ವದಲ್ಲಿ ಯೋಗಶಾಸ್ತ್ರ ಪ್ರಾಶಸ್ತ್ಯ ವನ್ನು ಪಡೆದು ಪ್ರವರ್ಧಮಾನಕ್ಕೆ ಬಂದಿತ್ತು ಎಂಬುದನ್ನು ನಾವು ತಿಳಿಯಬಹುದು. ಇಂತಹ ಯೋಗ ವಿಷಯದ ಉಲ್ಲೇಖಗಳನ್ನು ಅನೇಕ ಗ್ರಂಥಗಳಲ್ಲಿ ಕಾಣುತ್ತೇವೆ.

SDM Yoga ok

ಅಂತಾರಾಷ್ಟ್ರೀಯ ಯೋಗ ದಿನ

ಯೋಗಃ ಕರ್ಮಸು ಕೌಶಲಮ್ ಎಂಬುದು ಭಗವದ್ಗೀತೆಯಲ್ಲಿ ಬಂದ ಮಾತು. ಯೋಗಃ ಚಿತ್ತ ವೃತ್ತಿ ನಿರೋಧಃ ಇದು ಪತಂಜಲ ಯೋಗಸೂತ್ರ. ವಿಶೇಷವಾಗಿ ನಮ್ಮ ದೇಶದಲ್ಲಿ ಶಾಸ್ತ್ರ ಪರಂಪರೆ ಯಲ್ಲಿ ಮಾತ್ರ ಅಧ್ಯಯನ ಅಧ್ಯಾಪನ ಮಾರ್ಗದಲ್ಲಿ ಪ್ರಚಲಿತವಿದ್ದ ಈ ಯೋಗಕ್ಕೆ, ಇನ್ನಷ್ಟು ಯೋಗ ಬಂದಿದ್ದು 2014ರಲ್ಲಿ. ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದೀಜಿ ಯವರು ವಿಶ್ವಸಂಸ್ಥೆಯಲ್ಲಿ ಯೋಗದ ಕುರಿತು ಆಡಿದ ಮಾತು ಯೋಗವನ್ನು ಇಡೀ ಜಗತ್ತಿಗೆ ಪರಿಚಯಿಸುವ ಕೆಲಸವನ್ನು ಮಾಡಿತು. ಈ ಪ್ರಾಯೋಗಿಕ ಶಾಸ್ತ್ರ ಪ್ರತಿಯೊಬ್ಬ ಮನುಷ್ಯನಿಗೂ ಬೇಕಾದುದರಿಂದಲೇ ಇದು ವಿಶ್ವಮಾನ್ಯವಾಯಿತು.

ಯೋಗ ಎಂದರೆ ಕೇವಲ ವ್ಯಾಯಾಮವಲ್ಲ. ಯೋಗ ಎಂದರೆ ಕೇವಲ ಉಸಿರಾಟವಲ್ಲ. ಯೋಗ ಎಂದರೆ ಕೇವಲ ಅಂಗಾಂಗ ಚಲನೆ ಅಲ್ಲ. ದೇಹ ಮತ್ತು ಮನಸ್ಸುಗಳನ್ನು ನಿಯಂತ್ರಿಸುವುದಕ್ಕೆ ಒಂದು ಸಾಧನ ಯೋಗ. ಮನುಷ್ಯನಿಗೆ ಬರುವ ರೋಗ ದೈಹಿಕ ಮತ್ತು ಮಾನಸಿಕ ಎಂದು ಎರಡು ವಿಧ. ಯೋಗವು ದೈಹಿಕ ವಾದ ರೋಗಗಳಿಗೂ ಉತ್ತಮ ಉಪಾಯ ಮತ್ತು ಮಾನಸಿಕ ರೋಗಗಳ ನಿಯಂತ್ರಣಕ್ಕೆ ಅತ್ಯಂತ ಪರಿಣಾಮಕಾರಿ. ನಮ್ಮ ಹೆಚ್ಚಿನ ರೋಗಗಳು ಮನೋಮೂಲದ ರೋಗ ಗಳೇ ಆಗಿವೆ. ಇದರ ಉಪಶಮನ ಎಂಬುದು ಮನೋ ನಿಯಂತ್ರಣದಿಂದಲೇ ಸಾಧ್ಯ.

SDM Yoga0 ok

ಯೋಗವು ಮನೋ ನಿಯಂತ್ರಣ, ಮನಸ್ಸಿನ ಉಪಶಮನ ಮಾಡುವುದ ರಿಂದ ಇವತ್ತು ನಮಗೆಲ್ಲಾ ಅನಿವಾರ್ಯವಾಗಿ ಬಳಕೆಯಲ್ಲಿದೆ. ಇಂತಹ ಒಂದು ಅದ್ಭುತವಾದ ವಿದ್ಯೆಯನ್ನು ನೀಡಿದ ದೇಶದಲ್ಲಿ ನಾವೆಲ್ಲರೂ ಇದ್ದೇವೆ ಎಂಬುದೇ ಒಂದು ಹೆಮ್ಮೆಯ ಸಂಗತಿ.

1986ರಲ್ಲಿ ಅಮೇರಿಕಾದಲ್ಲಿ ಯೋಗದ ಬಗ್ಗೆ ಆಸಕ್ತಿ ಮೂಡಿರುವುದನ್ನು ಕಂಡು ನಾನು ಬೆರಗಾದೆ. ಅವರು ವಿಶೇಷವಾಗಿ ಯೋಗವು ಬೊಜ್ಜು ಕರಗಿಸುವುದಕ್ಕಾಗಿ ಮಾತ್ರ ಎಂದು ಬಗೆದಿದ್ದರು. ಅವರು ಯೋಗವೆಂದರೆ ಕೇವಲ ವ್ಯಾಯಾಮವೆಂದೂ ತಿಳಿದು ಕೊಂಡಿದ್ದರು.

ಉಜಿರೆಯಲ್ಲಿ ಯೋಗ ಕಾಲೇಜು

ಯೋಗ ಧ್ಯಾನ ಎಂಬುದು ನಮ್ಮ ಮನಸ್ಸಿಗೆ ನೆಮ್ಮದಿಯನ್ನು, ದೈಹಿಕವಾಗಿ ಚುರುಕು ತನವನ್ನು ನೀಡುತ್ತಿರುವುದನ್ನು ಗಮನಿಸಿ 1989ರಲ್ಲಿ ಉಜಿರೆಯಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜನ್ನು ಪ್ರಾರಂಭ ಮಾಡಲಾಯಿತು.

SDM Yoga 4 ok

ಈ ವಿಷಯ ಹೆಚ್ಚು ಪ್ರಚಲಿತದಲ್ಲಿ ಇಲ್ಲದಿರುವುದರಿಂದ ಆರಂಭದಲ್ಲಿ ಕೇವಲ 15 ವಿದ್ಯಾರ್ಥಿಗಳು ದಾಖಲಾದರು. ಆದರೆ ಇಂದು 120 ಪದವಿ ವಿದ್ಯಾರ್ಥಿಗಳು ಹಾಗೂ 20 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಸೇರ್ಪಡೆಗೆ ಇಲ್ಲಿ ಅವಕಾಶವಿದೆ. ಇಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗದಲ್ಲಿ ತರಬೇತುಗೊಂಡ ವೈದ್ಯರು ತಮ್ಮ ವೃತ್ತಿಯಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿ ಪ್ರಿನ್ಸಿಪಲ್ಸ್ ಆಫ್ ಯೋಗ ಥೆರಪಿ ಯೋಗ ಫೀಲಾಸಫಿ, ಪ್ರಾಕ್ಟೀಸಸ್ ಆಫ್ ಯೋಗ ಅಂಡ್ ಡ್ರಗ್ ಲೆಸ್ ಥೆರಪಿ ಇತ್ಯಾದಿಗಳನ್ನು ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿವಿಯಿಂದ ಸರಕಾರದ ನಿಯಮದಂತೆ ಮಾನ್ಯತೆ ಪಡೆದು ನೀಡಲಾಗುತ್ತಿದೆ. ಇಲ್ಲಿ ವಿಶೇಷವಾಗಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಬಗ್ಗೆ ಇರುವ ಪಾರಂಪರಿಕ ಜ್ಞಾನವನ್ನು ವೈಜ್ಞಾನಿಕ ಅಧ್ಯಯನ ಹಾಗೂ ಸಂಶೋಧನೆ ಮೂಲಕ ಸಾಬೀತು ಪಡಿಸುವ ಕಾರ್ಯಗಳು ನಡೆಯುತ್ತಿವೆ.

ಸಂಶೋಧನಾ ಕೇಂದ್ರ

ಕೌಶಲಯುತ ತಜ್ಞವೈದ್ಯರನ್ನು ನಿರೂಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯ ದೇಶದಲ್ಲೇ ಪ್ರಥಮವಾಗಿ ಉಜಿರೆಯಲ್ಲಿರುವ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನ ಕಾಲೇಜಿಗೆ ಉತ್ಕೃಷ್ಟ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಸಂಶೋಧನ ಕೇಂದ್ರವನ್ನು ಮಂಜೂರು ಮಾಡಿದೆ. ಇಲ್ಲಿನ ವಿದ್ಯಾರ್ಥಿಗಳು ಯೋಗದ ರಾಯಭಾರಿಗಳಾಗಿ ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ.

ಪ್ರಾಣಾಯಾಮದ ಮಹತ್ವ

ಶರೀರಂ ಆದ್ಯಂ ಖಲು ಧರ್ಮ ಸಾಧನಮ್‌ಎಂಬ ಮಾತಿನಂತೆ ಶರೀರವನ್ನು ಉತ್ತಮವಾಗಿ ಇಟ್ಟು ಕೊಂಡಾಗ ಮಾತ್ರ ಈ ಶರೀರದಿಂದ ಉನ್ನತ ಸಾಧನೆಯನ್ನು ಮಾಡಲು ಸಾಧ್ಯ. ಶರೀರವನ್ನು ಸರಿಯಾಗಿ ಕಾಪಾಡಿಕೊಳ್ಳಬೇಕಾದರೆ ಆಸನ ಪ್ರಾಣಾಯಾಮಗಳನ್ನು ಮಾಡಬೇಕು.

ರೋಗರುಜಿನಗಳು ಬರದಂತೆ ತಡೆಯಲು ಸಾತ್ವಿಕ ಆಹಾರವನ್ನು ಸೇವಿಸಬೇಕು. ಮನೋವಿಕಾರ ಗಳನ್ನು ತಡೆಯುವುವುದಕ್ಕೆ ಇಂದ್ರಿಯಗಳ ಮೇಲೆ ಹತೋಟಿಯನ್ನು ಸಾಧಿಸಬೇಕು. ಮನಸ್ಸಿನ ಸ್ವಭಾವ ಚಾಂಚಲ್ಯ. ಮನಸ್ಸಿನ ಚಂಚಲತೆಯನ್ನು ನಿಯಂತ್ರಿಸದಿದ್ದರೆ ನಮ್ಮ ಆಲೋಚನೆಗಳು ವಿಕೃತವಾಗುತ್ತವೆ. ದೇಹವು ರೋಗಕ್ಕೆ ಕಾರಣವಾಗಿ ಬಿಡುತ್ತದೆ. ಆದ್ದರಿಂದ ನಾವು ಪ್ರತಿನಿತ್ಯ ಯೋಗವನ್ನು ಅನುಷ್ಠಾನ ಮಾಡಬೇಕು. ನಿಯಮಿತವಾದ ವ್ಯಾಯಾಮ, ಸಾತ್ವಿಕವಾದ ದಿನಚರ್ಯೆ ಮತ್ತು ಉತ್ತಮ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು. ನಮ್ಮ ಪ್ರಾಚೀನ ಋಷಿ- ಮುನಿಗಳು ಇಂತಹ ಜೀವನ ಕ್ರಮವನ್ನು ಅನುಸರಿಸಿರುವುದರಿಂದಲೇ ಉತ್ತಮವಾದ ವಿಚಾರಧಾರೆಯನ್ನು ನಮಗೆ ನೀಡಿದ್ದಾರೆ.

ಇಂದು ವಿಶ್ವ ಯೋಗ ದಿನ. ವರ್ಷದಲ್ಲಿ ಒಂದು ದಿನ ಈ ಸಂಭ್ರಮಾಚರಣೆಯನ್ನು ಮಾಡುತ್ತೇವೆ. ಆದರೆ ಯೋಗ ಎಂಬುದು ನಮ್ಮ ದಿನಚರಿಯಾಗಬೇಕು. ಬಾಲ್ಯದಲ್ಲಿ ನಾವು ಹೇಳಿದಂತೆ ದೇಹ ಬಗ್ಗುತ್ತದೆ. ಆದ್ದರಿಂದ ಎಳೆಯ ಮಕ್ಕಳಿರುವಾಗಲೇ ವ್ಯಾಯಾಮಗಳನ್ನ, ಆಸನಗಳನ್ನು ಕಲಿಸಬೇಕು.

ಆನಂತರ ಪ್ರಮುಖವಾದ ಉಸಿರಾಟದ ನಿಯಂತ್ರಣ ರೂಪವಾದ ಧ್ಯಾನವನ್ನು ಅಳವಡಿಸಿ ಕೊಳ್ಳಬೇಕು. ಅದಕ್ಕೆ ಅನುಗುಣವಾಗಿ ಆಹಾರ ಕ್ರಮವನ್ನು ಬಾಲ್ಯದಿಂದಲೇ ರೂಢಿ ಮಾಡಿಕೊಳ್ಳ ಬೇಕು. ನಮ್ಮ ಭಾರತೀಯ ಜ್ಞಾನಪರಂಪರೆಯನ್ನು ಸರಿಯಾಗಿ ಅರಿತು ಅಳವಡಿಸಿಕೊಂಡಾಗ, ನಮಗೂ ನಮ್ಮ ಸಮಾಜಕ್ಕೂ ಮತ್ತು ಸಮಗ್ರ ಮನುಕುಲಕ್ಕೂ ಒಳಿತಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಎಲ್ಲರಿಗೂ ಯೋಗದಿನದ ಶುಭಾಶಯಗಳು.